ದಿಲ್ಲಿಯ ದಿಲ್ ಗೆದ್ದ ಮಫ್ಲರ್ ಮ್ಯಾನ್ ; ಆಮ್ ಆದ್ಮಿ ಪಕ್ಷಕ್ಕೆ ಹ್ಯಾಟ್ರಿಕ್ ಗೆಲುವು
ಅಭಿವೃದ್ಧಿ ಕಾರ್ಯಗಳಿಗೆ ಜೈ ಎಂದ ಮತದಾರರು
Team Udayavani, Feb 12, 2020, 1:44 AM IST
ಹೊಸದಿಲ್ಲಿ: ಸರಿಯಾಗಿ 9 ವರ್ಷಗಳ ಹಿಂದೆ ಗಾಂಧೀವಾದಿ ಅಣ್ಣಾ ಹಜಾರೆ ಅವರ ಲೋಕಪಾಲ ಚಳವಳಿಯ ಮೆಟ್ಟಿಲೇರಿ, ರಾಜಕೀಯವೆಂಬ ವಿಶಾಲ ಸಾಗರಕ್ಕೆ ಇಳಿದಿದ್ದ ಅರವಿಂದ ಕೇಜ್ರಿವಾಲ್, ಜನಬೆಂಬಲದಿಂದಲೇ ಯಶಸ್ಸು ಸಾಧಿಸಿ ಸತತ 3ನೇ ಬಾರಿಗೆ ರಾಷ್ಟ್ರ ರಾಜಧಾನಿಯ ಅಧಿಕಾರದ ಗದ್ದುಗೆ ಯಲ್ಲಿ ವಿರಾಜಮಾನರಾಗಿದ್ದಾರೆ.
ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ ಈ ಬಾರಿಯದ್ದು ‘ಮಾಡು ಇಲ್ಲವೇ ಮಡಿ’ ಚುನಾವಣೆಯಾಗಿತ್ತು. ಈ ಚುನಾವಣೆಯಲ್ಲೇನಾದರೂ ಸೋಲು ಅನುಭವಿಸಿದ್ದರೆ, ಅನಂತರ ಪಕ್ಷವು ಚೇತರಿಸಿಕೊಳ್ಳುವುದು ಸುಲಭವಾಗುತ್ತಿರಲಿಲ್ಲ. ಇದನ್ನು ಅರಿತುಕೊಂಡು ಎಚ್ಚರಿಕೆಯ ಹೆಜ್ಜೆಯಿಟ್ಟ ಮಫ್ಲರ್ ಮ್ಯಾನ್, ಕೊನೆಗೂ ದಿಲ್ಲಿ ಜನತೆಯ ಹೃದಯ ಗೆದ್ದಿದ್ದಾರೆ.
ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರ ವರ್ಚಸ್ಸು, ಬಿಜೆಪಿಯ ಇಡೀ ಸಂಪುಟವೇ ದಿಲ್ಲಿಗೆ ಧಾವಿಸಿ ನಡೆಸಿದ ಪ್ರಚಾರ, ಕಾಂಗ್ರೆಸ್‌ನಿಂದ ಮತ ವಿಭಜನೆಯಾಗುವ ಭೀತಿ… ಹೀಗೆ ಎಲ್ಲ ಸವಾಲುಗಳನ್ನೂ ಸಮರ್ಥವಾಗಿ ಎದುರಿಸಿ, ಅತ್ಯಂತ ಜಾಣ್ಮೆಯ ಕಾರ್ಯತಂತ್ರ ಪ್ರಯೋಗಿಸಿ ಕೇಜ್ರಿವಾಲ್ ಮತ್ತೂಮ್ಮೆ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದಾರೆ.
ಒಂದೆಡೆ, ತಮ್ಮ ಹಿಂದೂ ಅಸ್ಮಿತೆಯನ್ನು ಬಳಸಿಕೊಂಡು, ಜತೆ ಜತೆಗೇ ಜಾತ್ಯತೀತ ನಿಲುವನ್ನೂ ಪ್ರದರ್ಶಿಸುತ್ತಾ ಸಮತೋಲನ ಕಾಯ್ದುಕೊಂಡ ಕೇಜ್ರಿವಾಲ್ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಅದರಲ್ಲೂ, ಪಕ್ಷ ಅಧಿಕಾರದಲ್ಲಿದ್ದಾಗ ನುಡಿದಂತೆ ನಡೆದಿದ್ದ ಅವರು, ಸರಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನೇ ನೆಚ್ಚಿಕೊಂಡು ಚುನಾವಣೆ ಎದುರಿಸಿದ್ದಾರೆ.
ಆರೋಗ್ಯ, ಶಿಕ್ಷಣ, ಮಹಿಳೆಯರ ಸುರಕ್ಷತೆ ಸಹಿತ ಸರಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಆಪ್‌ನ ಕೈಹಿಡಿದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಟ್ಟಿನಲ್ಲಿ ದಿಲ್ಲಿಯಲ್ಲಿ ಆಪ್‌ನಂತಹ ಸಣ್ಣ ಪಕ್ಷದ ಗೆಲುವನ್ನು, ಅಭಿವೃದ್ಧಿ ಆಧಾರಿತ ರಾಜಕೀಯದ ಗೆಲುವು ಎಂದೇ ವಿಶ್ಲೇಷಕರು ಬಣ್ಣಿಸಿದ್ದಾರೆ.
ಬಿಜೆಪಿ-ಕಾಂಗ್ರೆಸ್‌ಗೆ ಪಾಠ
ಇನ್ನು ಈ ಚುನಾವಣೆಯು ಪ್ರಬಲ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಹಲವು ಪಾಠಗಳನ್ನು ಕಲಿಸಿದೆ. ವೈಯಕ್ತಿಕ ಟೀಕೆಗಳು, ನಕಾರಾತ್ಮಕ ಪ್ರಚಾರ, ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಿಸದೆ ಚುನಾವಣೆ ಎದುರಿಸಿದ್ದು, ನಾಯಕರ ಲೂಸ್‌ಟಾಕ್‌ಗಳು, ಆಂತರಿಕ ಭಿನ್ನಮತ ಗಳು, ಅಭಿವೃದ್ಧಿಯ ಕಡೆಗಣನೆ ಮತ್ತಿತರ ಅಂಶಗಳು ಈ ಪಕ್ಷಗಳಿಗೇ ತಿರುಗುಬಾಣವಾದವು.
ನಿಶ್ಶಬ್ದವಾಗಿದ್ದ ಶಹೀನ್‌ಬಾಘ್
ದಿಲ್ಲಿಯ ವಿಧಾನಸಭಾ ಚುನಾವಣೆಯ ಫಲಿತಾಶ ಹೊರಬೀಳುತ್ತಿದ್ದಂತೆ, ಆಮ್ ಆದ್ಮಿ ಪಾರ್ಟಿಯ ನಾಯಕರು, ಕಾರ್ಯಕರ್ತರು ಸಂಭ್ರಮ, ಸಡಗರದಲ್ಲಿ ಮುಳುಗಿದ್ದರೆ, ಮತ್ತೂಂದೆಡೆ ಸೋತ ಮಂದಿ ಮಾಧ್ಯಮಗಳ ಮುಂದೆ ತಮ್ಮದೇ ಆದ ವಿಶ್ಲೇಷಣೆ ಹೇಳಿಕೆಗಳನ್ನು ನೀಡುತ್ತಿದ್ದರು. ಯಾವುದೇ ಮೊಹಲ್ಲಾ ಆಗಲೀ, ಪ್ರಾಂತ್ಯವಾಗಲೀ ಫಲಿತಾಂಶದ ಒಂದಿಲ್ಲೊಂದು ಪರಿಣಾಮದಿಂದ ದೂರ ಉಳಿದಿರಲಿಲ್ಲ.
ಆದರೆ, ಓಕ್ಲಾದ ಜಾಮಿಯಾ ನಗರದಲ್ಲಿರುವ, ದಿಲ್ಲಿಯ ತಿಂಗಳುಗಳಿಂದ ಪೌರತ್ವ ಕಾಯ್ದೆ ತಿದ್ದುಪಡಿ (ಸಿಎಎ) ವಿರುದ್ಧದ ಪ್ರತಿಭಟನೆಗೆ ಸಾಕ್ಷಿಯಾಗಿರುವ ಶಹೀನ್‌ಬಾಘ್ ಮೈದಾನದಲ್ಲಿ ಪ್ರತಿಭಟನನಿರತರು ಶಾಂತವಾಗಿದ್ದರು.
ಹೆಚ್ಚುಕಡಿಮೆ ಬಿಜೆಪಿ ವಿರುದ್ಧವೇ ಸಿಡಿದೆದ್ದು ನಿಂತಿರುವ ಅವರು, ದಿಲ್ಲಿ ಚುನಾವಣೆಯಲ್ಲಿ ಆಪ್ ಗೆಲುವನ್ನು ಸಂಭ್ರಮಿಸಲಾಗಲೀ, ಅವರನ್ನು ಬೆಂಬಲಿಸಲಾಗಲೀ ಹೋಗಲಿಲ್ಲ. ಮಾಧ್ಯಮ ಗಳಿಗೆ ಹೇಳಿಕೆಗಳನ್ನೂ ನೀಡಲಿಲ್ಲ. ಪ್ರತಿಭಟನಕಾರರೆಲ್ಲರೂ ಕೈಗಳಲ್ಲಿ ಪ್ಲಕಾರ್ಡ್‌ಗಳನ್ನು ಹಿಡಿದಿದ್ದರು. ಅದರಲ್ಲಿ “ನಾವು ಯಾವ ಪಕ್ಷವನ್ನೂ ಬೆಂಬಲಿಸುವುದಿಲ್ಲ. ನಮ್ಮ ಗುರಿ ಈ ಚುನಾವಣೆಯನ್ನೂ ಮೀರಿದ್ದು’ ಎಂಬ ಒಕ್ಕಣೆಯೂ ಇತ್ತು. ಅಲ್ಲಿಗೆ, ಅವರ ಧ್ಯೇಯ, ಗುರಿಗಳ ಸ್ಪಷ್ಟತೆ ಎದ್ದುಕಾಣುತ್ತಿತ್ತು.
ಮನಸೆಳೆದ ಪುಟಾಣಿ ಕೇಜ್ರಿ!
ಈ ಬಾರಿಯ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾ ರೂಢ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರುತ್ತಲೇ ಎಲ್ಲೆಡೆ ಅವರ ಬೆಂಬಲಿಗರು, ಅಭಿಮಾನಿಗಳು ಬೀದಿಗಿಳಿದು ಸಂಭ್ರಮಾಚರಣೆ ಯಲ್ಲಿ ಮುಳುಗೇಳತೊಡಗಿದರು. ಆ ದೊಡ್ಡ ದೊಡ್ಡ ಗುಂಪುಗಳಲ್ಲಿ ಎದ್ದ ಸಾವಿರಾರು ಅಭಿಮಾನಿಗಳ ನಡುವೆ ಕೇಜ್ರಿವಾಲರಂತೆ ಮಫ್ಲರ್, ಕನ್ನಡಕ ತೊಟ್ಟು, ಪುಟ್ಟದಾಗಿ ಮೀಸೆ ಬಳಿದುಕೊಂಡು, ಆಮ್ ಆದ್ಮಿ ಚಿಹ್ನೆಯುಳ್ಳ ಟೋಪಿ ಧರಿಸಿ ಕಂಗೊಳಿಸಿದ ಪುಟಾಣಿಯೊಬ್ಬ ಮಂಗಳವಾರ ಟ್ವಿಟರ್‌ನಲ್ಲಿ ಹೊಸ ಸೆನ್ಸೇಷನ್ ಆಗಿ ಹೊರ ಹೊಮ್ಮಿದ್ದಾನೆ.
ಆಮ್ ಆದ್ಮಿ ಪಾರ್ಟಿಯೇ ಖುದ್ದಾಗಿ ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ಈ ಬಾಲಕನ ಫೋಟೋವನ್ನು ಹಂಚಿ ಕೊಂಡಿದೆ. ಹೀಗೆ, ಫೋಟೋ ಟ್ವೀಟ್ ಆದ ಕೆಲವೇ ನಿಮಿಷಗಳಲ್ಲಿ ಅದು 16,000 ಲೈಕ್‌ಗಳು ಹಾಗೂ 2,300 ರೀಟ್ವೀಟ್‌ಗಳನ್ನು ಕಂಡಿದೆ. ಹಲವಾರು ಟ್ವೀಟರಿಗರು ಈ ಪುಟಾಣಿಯ ವೇಷಭೂಷಣ ವನ್ನು ಕೊಂಡಾಡಿದ್ದಾರೆ.
ಖಾನ್‌ಗೆ ಭಾರೀ ಅಂತರದ ಜಯ
ಓಖ್ಲಾ ಕ್ಷೇತ್ರದಿಂದ ಆಪ್‌ನಿಂದ ಸ್ಪರ್ಧಿಸಿದ್ದ ಅಮಾನತುಲ್ಲಾ ಖಾನ್ ಅವರು ಬಿಜೆಪಿ ಅಭ್ಯರ್ಥಿ ಬ್ರಹಾಮ್ ಸಿಂಗ್ ವಿರುದ್ಧ ಬರೋಬ್ಬರಿ 80 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಅಂತರ ಹಾಲಿ ಚುನಾವಣೆಯಲ್ಲಿ ಅತ್ಯಂತ ದೊಡ್ಡ ಅಂತರ ಎಂದು ಹೇಳಲಾಗುತ್ತಿದೆ. ಆರಂಭಿಕ ಸುತ್ತಿನ ಮತ ಎಣಿಕೆ ವೇಳೆ ಸಿಂಗ್, ಖಾನ್‌ಗಿಂತ 194 ಮತಗಳ ಅಂತರದಿಂದ ಮುಂದಿದ್ದರು. ಅಂತಿಮವಾಗಿ ಖಾನ್ ಅವರಿಗೆ 1,09,017 ಮತಗಳು ಪ್ರಾಪ್ತವಾ ದರೆ, ಬಿಜೆಪಿ ಅಭ್ಯರ್ಥಿಗೆ 20,520 ಮತಗಳು ಸಿಕ್ಕಿದವು.
ಪಟಾಕಿ ಸಿಡಿಸದ ಬೆಂಬಲಿಗರು
ಆಪ್ ಗೆಲುವಿನ ಸಮೀಪಕ್ಕೆ ಬರುತ್ತಿದ್ದಂತೆ ಪಕ್ಷದ ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಆಣತಿಯಂತೆ ಕಾರ್ಯಕರ್ತರು ಪಟಾಕಿ ಹೊಡೆ ಯದೆ, ಪಕ್ಷದ ಪ್ರಚಾರ ಗೀತೆಯಾದ “ಲಗೇ ರಹೋ ಕೇಜ್ರಿವಾಲ್’ ಗೀತೆಯನ್ನು ಹಾಡಿ, ಪರಸ್ಪರ ಆಲಿಂಗನ ಮಾಡಿಕೊಂಡು ಸಂಭ್ರಮಿಸಿದರು.
ದಿಲ್ಲಿಯಲ್ಲಿ ವಾಯು ಮಾಲಿನ್ಯ ಮಟ್ಟ ಹೆಚ್ಚಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಯಾರೂ ಪಟಾಕಿ ಸಿಡಿಸಬಾರದು ಎಂದು ಕೇಜ್ರಿವಾಲ್ ಮಂಗಳವಾರ ಬೆಳಗ್ಗೆಯೇ ಆದೇಶಿಸಿದ್ದರು. ಬೆಂಬಲಿಗರು ಅದರಂತೆಯೇ ನಡೆದುಕೊಂಡರು. ವಾಯು ಮಾಲಿನ್ಯ ನಿಯಂತ್ರಣವು ಆಪ್ ಚುನಾವಣಾ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಗಳಲ್ಲಿ ಒಂದು.
63 ಕ್ಷೇತ್ರಗಳಲ್ಲಿ ಠೇವಣಿ ಠುಸ್!
ಶತಮಾನಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ, ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ 63 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡು ಭಾರೀ ಮುಜುಗರಕ್ಕೀಡಾಗಿದೆ. ಮೂರು ಸ್ಥಾನಗಳಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ದಿಲ್ಲಿಯನ್ನು 15 ವರ್ಷಗಳ ಕಾಲ ನಿರಂತರವಾಗಿ ಆಳಿದ್ದ ಆ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಒಂದೂ ಸ್ಥಾನ ಗೆದ್ದಿಲ್ಲ ಎನ್ನುವ ಅಪಮಾನದ ಜತೆಗೆ ಠೇವಣಿ ಕಳೆದುಕೊಂಡ ವಿಚಾರ ಆ ಪಕ್ಷಕ್ಕೆ ಮತ್ತಷ್ಟು ಮುಖಭಂಗ ತಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.