ಇಂದಿನ ಬಂದ್‌ಗೆ 600 ಸಂಘಟನೆಗಳ ಬೆಂಬಲ
Team Udayavani, Feb 13, 2020, 3:10 AM IST
ಬೆಂಗಳೂರು: ಸರೋಜಿನಿ ಮಹಿಷಿ ವರದಿಯ ಅನುಷ್ಠಾನಕ್ಕೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿರುವ ರಾಜ್ಯ ಬಂದ್‌ಗೆ 600ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ಒಕ್ಕೂಟದ ಅಧ್ಯಕ್ಷ ಎಚ್.ಬಿ.ನಾಗೇಶ್ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಅವರು ಮಾತ ನಾಡಿದರು. ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವಂತೆ ಶಿಫಾರಸು ಮಾಡುವ ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟವು ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಕಳೆದ 100 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಾ ಬಂದಿದೆ.
ಪ್ರತಿಭಟನೆ ಶತದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಗುರುವಾರ ರಾಜ್ಯಾದ್ಯಂತ ಬಂದ್‌ಗೆ ಮುಂದಾಗಿದ್ದೇವೆ. ಬಂದ್‌ಗೆ 600ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಒಕ್ಕೂಟದ ವತಿಯಿಂದ ಜಿಲ್ಲಾ ಮಟ್ಟದಲ್ಲೂ ಬಂದ್‌ಗೆ ಅಗತ್ಯ ವ್ಯವಸ್ಥೆ ಮಾಡಿದ್ದು, ರಾಜ್ಯಾದ್ಯಂತ ಬಂದ್ ಯಶಸ್ವಿಯಾಗಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.
ಗುರುವಾರ ಬೆಂಗಳೂರಿನ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಬೃಹತ್ ರ್ಯಾಲಿ ನಡೆಸಲಾಗುತ್ತದೆ. ರ್ಯಾಲಿಯಲ್ಲಿ 40ಕ್ಕೂ ಹೆಚ್ಚು ಮಠಗಳ ಮಠಾಧೀಶರು, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಮತ್ತು ಕನ್ನಡ ಪರ ಸಂಘ ಟನೆಗಳ 5 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಹೋರಾಟಕ್ಕೆ ಬೆಂಬಲವಿದೆ; ಬಂದ್‌ಗೆ ಇಲ್ಲ: ಅನಗತ್ಯ ನಷ್ಟ, ಸಾರ್ವಜನಿಕರಿಗೆ ತೊಂದರೆ ಎಂದು ಈ ಬಂದ್‌ಗೆ ಕೆಲ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. “ಸರೋಜಿನಿ ಮಹಿಷಿ’ ವರದಿ ಜಾರಿ ಹೋರಾಟಕ್ಕೆ ನಮ್ಮ ಬೆಂಬಲವಿದ್ದು, ಬಂದ್‌ಗೆ ಯಾವುದೇ ಬೆಂಬಲವಿಲ್ಲ. ಕರವೇ ಸೇರಿದಂತೆ ಕನ್ನಡ ಒಕ್ಕೂಟದ 30ಕ್ಕೂ ಹೆಚ್ಚು ಒಕ್ಕೂಟಗಳು ಬಂದ್‌ನಲ್ಲಿ ಭಾಗವಹಿಸುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಕೂಡಾ ಬಂದ್‌ಗೆ ಬೆಂಬಲ ನೀಡಿಲ್ಲ. ಜತೆಗೆ, ಕರ್ನಾಟಕ ಸರ್ವ ಸಂಘಟನೆ ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದು, ಸಾರ್ವಜನಿಕರಿಗೆ ಗುಲಾಬಿ ಹೂ ಕೊಡುವ ಮೂಲಕ ಸರೋಜಿನಿ ಮಹಿಷಿ ವರದಿ ಅನಿವಾರ್ಯತೆ ಕುರಿತು ಜಾಗೃತಿ ಮೂಡಿಸಲು ಮುಂದಾಗಿದೆ. ಇನ್ನು, ಬಂದ್‌ಗೆ ಎಲ್ಲಾ ಕನ್ನಡಪರ ಸಂಘಟನೆಗಳು ಬೆಂಬಲ ನೀಡದಿರಲು ಸಮನ್ವಯತೆಯ ಕೊರತೆ ಕಾರಣ ಎನ್ನಲಾಗುತ್ತಿದೆ.
ಮೇಯರ್ ಬೆಂಬಲ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಡಾ.ಸರೋಜಿನಿ ಮಹಿಷಿ ವರದಿಯನ್ನು ಕೂಡಲೇ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಫೆ.13ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಎಂ.ಗೌತಮ್ ಕುಮಾರ್ ಬೆಂಬಲ ಸೂಚಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯದವರೇ ಕೆಲಸ ಮಾಡುತ್ತಿದ್ದು, ಕನ್ನಡಿಗರು ನಿರುದ್ಯೋಗಿಗಳಾಗುತ್ತಿದ್ದಾರೆ. ಆದ್ದರಿಂದ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಡಾ.ಸರೋಜಿನಿ ಮಹಿಷಿ ವರದಿ ಆಶಾದಾಯಕವಾಗಿದ್ದು, ಅದನ್ನು ಜಾರಿಗೊಳಿಸುವಂತೆ ಒತ್ತಾಯಿಸುವ ಸಂಘಟನೆಗಳಿಗೆ ಬೆಂಬಲ ನೀಡುವುದು ಅಗತ್ಯವಾಗಿದೆ.
ನನ್ನ ಮಕ್ಕಳು ಕೂಡ ಕರ್ನಾಟಕದಲ್ಲಿ ಹುಟ್ಟಿ ಬೆಳೆದಿದ್ದಾರೆ. ಅವರು ಬೇರೆ ಕಡೆಗೆ ಉದ್ಯೋಗ ಮಾಡಲು ಹೋಗುವುದನ್ನು ನಾನು ಒಪ್ಪುವುದಿಲ್ಲ. ಇಲ್ಲಿಯೇ ಉದ್ಯೋಗ ಪಡೆಯಲು ಕನ್ನಡಿಗರಿಗೆ ಮೀಸಲಾತಿ ಪಡೆಯುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮಸಾಕ್ಷಿಯಾಗಿ ಬಂದ್‌ಗೆ ಬೆಂಬಲ ನೀಡುತ್ತೇನೆ ಎಂದರು. ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಗೊತ್ತಿಲ್ಲ. ಕನ್ನಡಿಗರಿಗೆ ಉದ್ಯೋಗ ಸಿಗುವ ನಿಟ್ಟಿನಲ್ಲಿ ಕೈಗೊಂಡಿರುವ ಬಂದ್ ಯಶಸ್ವಿಯಾಗಲಿ. ಕನ್ನಡಿಗರ ಪರ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದರು.
ಯಾರ್ಯಾರು ಬೆಂಬಲ?: ಬಂದ್‌ಗೆ ಜಯ ಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ), ದಲಿತ ಸಂಘಟನೆಗಳ ಒಕ್ಕೂಟ (ರಂಗಸ್ವಾಮಿ ಬಣ), ಅಂಬೇಡ್ಕರ್ ಸೇನೆ, ಚಾಲಕರ ಸಂಘಟನೆ ಒಕ್ಕೂಟ, ಆಟೋ ಯೂನಿಯನ್ ಸಂಘಟನೆಗಳು, ಓಲಾ, ಉಬರ್ ಚಾಲಕ ಸಂಘಗಳು, ಲಾರಿ ಮಾಲೀಕರ ಸಂಘ, ಸಿಐಟಿಯು ಕಾರ್ಮಿಕ ಸಂಘಟನೆಗಳು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಚಲನಚಿತ್ರ ವಾಣಿಜ್ಯ ಮಂಡಳಿ, ದಲಿತ ನಾಯಕ ಮಾವಳ್ಳಿ ಶಂಕರ್, ಎಸ್‌ಡಿಪಿಐ, ಅಂಬೇಡ್ಕರ್ ದಲಿತ ಸೇನೆ ಸೇರಿದಂತೆ 600ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.