ಆಪ್ ಗೆಲುವು: ಬಿಜೆಪಿಯೇ ವೀಳ್ಯವಿಟ್ಟು ಕೊಟ್ಟ ಕೊಡುಗೆಯೇ?
Team Udayavani, Feb 13, 2020, 6:30 AM IST
ಅರವಿಂದ ಕೇಜ್ರಿವಾಲ್ ಮೂರನೇ ಬಾರಿಗೆ ದೆಹಲಿ ಗದ್ದುಗೆ ಹಿಡಿ ಯಲು ಸರ್ವಸನ್ನದ್ಧರಾಗಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿವೆ. ದೆಹಲಿ ಭಾರತದ ರಾಜಧಾನಿ, ಭಾರತದ ರಾಜತಾಂತ್ರಿಕ ಆಡಳಿತ ಕೇಂದ್ರ, ರಾಜಕೀಯದ ಶಕ್ತಿ ಕೇಂದ್ರ. ಭಾರತದ ಮಿಡಿತವನ್ನು ಬಿಂಬಿಸುವ ಹೃದಯವೂ ಹೌದು. ಅಂತಹ ದೆಹಲಿಯಲ್ಲಿ ಎಪಿಪಿಯಂತಹ ಪುಟ್ಟ ಪಕ್ಷ ಎರಡು ರಾಷ್ಟ್ರೀಯ ಪಕ್ಷಗಳನ್ನು ಧೂಳಿಪಟ ಮಾಡುತ್ತದೆಂದರೆ ಅದು ನಿಜಕ್ಕೂ ಅಚ್ಚರಿಯ, ಪ್ರಜಾಪ್ರಭುತ್ವದ ಅಂತಃಶಕ್ತಿಯ ಅನಾವರಣಗೊಳಿಸುವ ವಿದ್ಯಮಾನ. ಅದು ಚಾರಿತ್ರಿಕವೂ ಹೌದು!
ಕೇಜ್ರಿವಾಲ್ ಅವರ ಉಚಿತ ಕೊಡುಗೆಗಳೇ ಅವರ ಪಕ್ಷದ ಗೆಲುವಿಗೆ ಕಾರಣ ಎಂದು ಈಗ ಸೋತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡೂ ಹೇಳುತ್ತಿವೆ. ಹೌದು, ಕೇಜ್ರಿವಾಲ್ ದೆಹಲಿಯ ಪ್ರಜೆಗಳಿಗೆ ಬೊಗಸೆಗಟ್ಟಲೆ ಉಚಿತ ಕೊಡುಗೆಗಳನ್ನು ನೀಡಿದ್ದಾರೆ. 200 ಯುನಿಟ್‌ವರೆಗಿನ ವಿದ್ಯುತ್ ಬಳಕೆ ಉಚಿತ, ಅದರ ಮೇಲಿನ ಬಳಕೆಗೆ ಶೇ.50 ರಿಯಾಯಿತಿ, ತಿಂಗಳಿಗೆ 700 ಲೀಟರ್‌ವರೆಗಿನ ನೀರಿನ ಬಳಕೆ ಉಚಿತ, ನೀರಿನ ಸಂಪರ್ಕದ ಶುಲ್ಕದಲ್ಲಿ ರಿಯಾಯಿತಿ ಹೀಗೆ ಕೇಜ್ರಿವಾಲ್ ಬಜೆಟ್‌ನ ಶೇ.40 ರಷ್ಟು ಹಣವನ್ನು ದೆಹಲಿಯ ನಾಗರಿಕರಿಗೆ ಕೊಡುಗೆ ಯಾಗಿ ನೀಡಿದ್ದಾರೆ. 2 ದಶಲಕ್ಷಕ್ಕೂ ಹೆಚ್ಚು ಮಹಿಳೆಯರು ದೆಹಲಿಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಸೌಲಭ್ಯ ಪಡೆದಿದ್ದಾರೆ. 75 ಲಕ್ಷ ಮತದಾರರು ಉಚಿತ ವಿದ್ಯುತ್ ಸೌಲಭ್ಯ ಪಡೆದಿದ್ದಾರೆ.
ಹಲವು ಬಡ ಹಾಗೂ ಮಧ್ಯಮವರ್ಗದವರ ಹಳೆಯ ಬಾಕಿ ವಿದ್ಯುತ್ ಶುಲ್ಕಗಳನ್ನು ಮನ್ನಾ ಮಾಡಲಾಗಿದೆ. ಮಹಿಳಾ ಸಬಲೀಕರಣ, ಆರ್ಥಿಕ ಸಮಾನತೆ ಹಾಗೂ ಜನರಲ್ಲಿ ಕೊಳ್ಳುವ ಸಾಮರ್ಥ್ಯ ಹೆಚ್ಚಿಸುವುದು, ಗುಣಮಟ್ಟದ ಬದುಕು ಖಾತರಿಪಡಿಸಲು ಇಂಥ ಕೊಡುಗೆಗಳು
ಅವಶ್ಯ ಎಂದು ಕೇಜ್ರಿವಾಲ್ ಈ ಕೊಡುಗೆಗಳನ್ನು ಸಮರ್ಥಿಸಿ ಕೊಂಡಿದ್ದಾರೆ.
ಕೇಜ್ರಿವಾಲ್ ಕೇವಲ ಕೊಡುಗೆಗಳಿಂದಲೇ ಭರ್ಜರಿ ಜಯ ಸಾಧಿಸಿ ದ್ದಾರೆ ಎಂದಾದರೆ ಬೇರೆ ರಾಜ್ಯಗಳ, ಇತರೆ ಪಕ್ಷಗಳ ಮುಖ್ಯ ಮಂತ್ರಿಗಳೂ ಈ ಮಾದರಿಯಲ್ಲೇ ಗೆಲ್ಲಬೇಕಿತ್ತಲ್ಲ. ಉದಾಹರಣೆಗೆ ಕರ್ನಾಟಕವನ್ನೇ ತೆಗೆದುಕೊಳ್ಳಿ. ಸಿದ್ದರಾಮಯ್ಯನವರೇನು ಕಡಿಮೆ ಕೊಡುಗೆಗಳನ್ನು ನೀಡಿದರೇ? ಅನ್ನಭಾಗ್ಯ, ಕ್ಷೀರಭಾಗ್ಯ, ಶಾದೀಭಾಗ್ಯ, ನಮ್ಮ ಕ್ಯಾಂಟೀನ್, ಸಾಲ ಮನ್ನಾ, ಮಠಗಳಿಗೆ ನಿವೇಶನ, ಅನುದಾನ, ಹೀಗೆ ಭಾಗ್ಯದ ಸುರಿ ಮಳೆಯನ್ನೇ ಹರಿಸಿದರೂ ತಮ್ಮ ಪಕ್ಷವನ್ನು ಗೆಲ್ಲಿಸಲಾಗಲಿಲ್ಲ. ಇದಕ್ಕಿಂತ ಹೆಚ್ಚು ಕೊಡುಗೆಗಳನ್ನು ನೀಡಿದ ಜಯ ಲಲಿತಾ ಸಹ ಹೀಗೇ ಸೋತಿದ್ದರು. ಆದರೆ ಕೇಜ್ರಿವಾಲ್ ಹೇಳಿರುವ ಒಂದು ವಿಷಯವನ್ನು ಗಮನಿಸಬೇಕು.
ಭ್ರಷ್ಟಾಚಾರ ತಡೆ, ಪ್ರಾಮಾಣಿಕ ಆಡಳಿತದ ಮೂಲಕ ಜನರ ತೆರಿಗೆ ಯಿಂದ ಪಡೆದ ಹಣವನ್ನು ಜನರಿಗೇ ವಾಪಸ್ ಕೊಡುವುದರಲ್ಲಿ ತಪ್ಪೇ ನಿದೆ ಎಂದು ಅವರು ಪ್ರಶ್ನಿಸುತ್ತಾರೆ. ಇದು ನಿಜವೂ ಇರಬಹುದು.
ಏಕೆಂದರೆ ಇಂದಿಗೂ ದೆಹಲಿಯಲ್ಲಿ 5 ಸಾವಿರ ಬಸ್‌ಗಳು ಇವೆ.
ಆಸ್ತಿ ತೆರಿಗೆ ಮತ್ಯಾವುದೇ ತೆರಿಗೆಯನ್ನು ಹೆಚ್ಚಿಸಿಲ್ಲ. ಸಾರ್ವಜನಿಕರನ್ನು ಸುಲಿಗೆ ಮಾಡುವ ರೆಡ್ ಟೇಪಿಸಂ ನಿಯಂತ್ರಣದಲ್ಲಿದೆ. ಇದನ್ನು ಪ್ರಮುಖ ರಾಜಕೀಯ ಪಕ್ಷಗಳು ಗಮನಿಸಬೇಕು. ನೂರಾರು ಭಾಗ್ಯಗಳಿಂದ ತುಂಬಿ ತುಳುಕುತ್ತಿದ್ದ ಕಾಲದಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ದೇಶಕ್ಕೇ ನಂಬರ್ ಒನ್ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು. ಸಂಪನ್ಮೂಲಗಳ ಉಪಯುಕ್ತ ಬಳಕೆ ಮುಖ್ಯ ಹೊರತು ಆಕರ್ಷಕ ಬಳಕೆ ಅಲ್ಲ.
ಪ್ರಧಾನಿ ನರೇಂದ್ರ ಮೋದಿಯವರೂ ದೇಶದ ಜನತೆಗೆ ಹಲವಾರು ಕೊಡುಗೆಗಳನ್ನು ಕೊಟ್ಟಿದ್ದಾರೆ. ಉಚಿತ ಶೌಚಾಲಯಗಳು, ಉಚಿತ ಔಷಧಿಗಳು, ಆರೋಗ್ಯ ವಿಮೆ, ರೈತರಿಗೆ ಕೊಡುಗೆಗಳು, ಉಚಿತ ಅನಿಲ ಸಂಪರ್ಕ ಇತ್ಯಾದಿ ಒಂದು ದೀರ್ಘ ಪಟ್ಟಿಯೇ ಇದೆ. ಈ ಕೊಡುಗೆಗಳೇ ಮೋದಿ ಎರಡನೇ ಬಾರಿ ಗೆಲ್ಲಲು ಸಾಧ್ಯವಾಗಿದ್ದು ಎಂದು ಹೇಳಲಾಗು ತ್ತದೆಯೇ? ಕೇಜ್ರಿವಾಲ್ ತಮ್ಮ ಕೊಡುಗೆಗಳ ಭಾರೀ ಪ್ರಚಾರ ಮಾಡಿಕೊಳ್ಳಲು ಮಾಧ್ಯಮಗಳನ್ನು ದುರುಪಯೋಗಪಡಿಸಿ ಕೊಂಡರು ಎಂಬ ಆರೋಪ ಇದೆ. ಇಂತಹದೇ ಆರೋಪ ಪ್ರಧಾನಿ ಮೋದಿಯ ಮೇಲೂ ಬಂದಿತ್ತಲ್ಲ? ಹಾಗೆ ನೋಡಿದರೆ ಬಿಜೆಪಿ ಸಿಎಂ ಶಿವರಾಜ್ ಚವ್ಹಾಣ್ ಮಾದರಿಯನ್ನೇ ಕೇಜ್ರಿವಾಲ್ ಅನುಸರಿಸಿ ದ್ದಾರಲ್ಲ!
ಹಾಗಿದ್ದ ಮೇಲೆ ಈ ಉಚಿತ ಭಾಗ್ಯಗಳ ಹೊರತಾಗಿಯೂ ಕೇಜ್ರಿ ವಾಲ್ ಗೆಲುವಿನ ಹಿಂದೆ ಹಲವು ಕಾಣದ ಅಂಶಗಳು ಪ್ರಭಾವ ಬೀರಿವೆ ಎಂಬುದು ಸ್ಪಷ್ಟವಾಗುತ್ತದೆ. ಮುಖ್ಯವಾಗಿ ದೆಹಲಿ ವಿಧಾನಸಭೆಯಲ್ಲಿ ಪ್ರತಿಪಕ್ಷವಾಗಿದ್ದ ಬಿಜೆಪಿ 59 ತಿಂಗಳು ಸುಮ್ಮನಿದ್ದು ಕೊನೇ ತಿಂಗಳಲ್ಲಿ ಆಕಳಿಸುತ್ತಾ ಮೇಲೆದ್ದು ಹೂಂಕರಿಸಿತು. ದೆಹಲಿಯ ಅಭಿವೃದ್ಧಿಗಿಂತ ಹೆಚ್ಚಾಗಿ ಅದು ದೆಹಲಿ ಚುನಾವಣೆಯ ಮೇಲೇ ತನ್ನೆಲ್ಲಾ ಬಲವನ್ನು ಕೇಂದ್ರೀ ಕರಿಸಿತು. ಇದರ ಜೊತೆಗೆ ಕಳೆದ 20 ವರ್ಷಗಳಿಂದ ಇದ್ದ ಹಳೆಯ ಮುಖಗಳನ್ನೇ ಬಿಜೆಪಿ ನೆಚ್ಚಿಕೊಂಡಿತ್ತು. ಕೇಜ್ರಿವಾಲ್‌ಗೆ ಹೋಗಲಿ, ಆ ಪಕ್ಷದ ಒಬ್ಬ ಯುವ ಮುಖಂಡನಿಗೆ ಎದುರಾಗಿ ತೊಡೆ ತಟ್ಟಿ ನಿಲ್ಲುವಂತಹ ಒಂದು ಯುವ ಪೀಳಿಗೆಯನ್ನು ಬಿಜೆಪಿ ಬೆಳೆಸಲೇ ಇಲ್ಲ. ಹಲವಾರು ವರ್ಷಗಳಿಂದ ಬಿಜೆಪಿ ದೆಹಲಿ ಘಟಕದಲ್ಲಿದ್ದ ಭಿನ್ನ ಮತ, ಒಳಜಗಳಗಳು ಉಪಶಮನವಾಗಲೇ ಇಲ್ಲ.
ಹೀಗಾಗಿ ಬಿಜೆಪಿ ಕೇಜ್ರಿವಾಲ್‌ಗೆ ಎದುರಾಳಿಯಾಗಿ ನಿಲ್ಲುವಂತಹ ಒಬ್ಬ ಸಮರ್ಥ ನಾಯಕ ನನ್ನು ಮುಖ್ಯಮಂತ್ರಿ ಎಂದು ಜನರ ಮುಂದೆ ಬಿಂಬಿಸ ಲಾಗಲಿಲ್ಲ. ಹಾಗಾಗಿ ಮೋದಿ ಮತ್ತು ಅಮಿತ್ ಶಾ ನೇರವಾಗಿ ಕಣಕ್ಕಿಳಿಯಬೇಕಾಯಿತು.
240ಕ್ಕೂ ಹೆಚ್ಚು ಸಂಸದರು, 10ಕ್ಕೂ ಹೆಚ್ಚು ಮುಖ್ಯಮಂತ್ರಿಗಳು, 8ಕ್ಕೂ ಹೆಚ್ಚು ಕೇಂದ್ರ ಸಚಿವರು ದೆಹಲಿಯ ರಸ್ತೆ ರಸ್ತೆಗಳಲ್ಲಿ ದಿಲ್ಲಿ ಕಾ ಸ್ವಾಭಿಮಾನ್ ಘೋಷಣೆಯಡಿ ಅಬ್ಬರದ ಪ್ರಚಾರ ನಡೆಸಿದರು. ಕೆಲವು ಬಿಜೆಪಿ ಮುಖಂಡರು ಕೇಜ್ರಿವಾಲರನ್ನು ಭಯೋತ್ಪಾದಕ ಎಂದು ಜರೆದರು. ದಿಲ್ಲಿ ಬಿಕಾ ನಹೀ ಹೈ(ದೆಹಲಿ ಮಾರಾಟವಾಗಿಲ್ಲ) ಎಂದರು. ಇದರಿಂದ ಜನರ ಅನುಕಂಪ ಅನಾಯಾಸವಾಗಿ ಕೇಜ್ರಿ ವಾಲ್‌ಗೆ ದಕ್ಕಿತು. ಬಿಜೆಪಿ ಮುಖಂಡರೂ ಈಗಿರುವ ಐದು ಪಟ್ಟು ಉಚಿತ ಕೊಡುಗೆಗಳನ್ನು ನೀಡುವುದಾಗಿ ಆಶ್ವಾಸನೆಯಿತ್ತರು.
ಆದರೆ ಪೊದೆಯಲ್ಲಿರುವ ಎರಡು ಹಕ್ಕಿಗಿಂತ ಕೈಲಿರುವ ಒಂದೇ
ಹಕ್ಕಿ ಉತ್ತಮ ಎಂದು ಮತದಾರರು ಕೇಜ್ರಿವಾಲರನ್ನೇ ಬೆಂಬಲಿಸಿದರು. ಅದಕ್ಕಿಂತ ಹೆಚ್ಚಾಗಿ ದೆಹಲಿ ಮತದಾರರಿಗೆ ಬಿಜೆಪಿಯ
ನೇಮಕಗೊಂಡ ಸಿಎಂ ಬೇಕಿ ರಲಿಲ್ಲ, ಅವರಿಗೆ ತಮ್ಮಿಂದ ಆಯ್ಕೆಗೊಂಡ ಸಿಎಂ ಬೇಕಿತ್ತು. ಬಿಜೆಪಿ ಜಾರ್ಖಂಡ್ ಮತ್ತು ಮಹಾರಾಷ್ಟ್ರದಲ್ಲಿನ ಹಿನ್ನಡೆಯಿಂದ ಕಂಗೆಟ್ಟು ದೆಹಲಿಯ ಚುನಾವಣೆಗೆ ಸಾಕಷ್ಟು ಮಹತ್ವ ಕೊಡಲಿಲ್ಲ. 60 ಅಭ್ಯರ್ಥಿ ಗಳನ್ನು ಹೊರಗಿನಿಂದ ತಂದು ನಿಲ್ಲಿಸ ಲಾಯಿತು. ಶೇ.40 ರಷ್ಟು ಅಭ್ಯರ್ಥಿಗಳು ಸ್ಥಳೀಯವಾಗಿ ತೀವ್ರ ಸ್ಪರ್ಧೆ ಎದುರಿಸಬೇಕಾದ ಗ್ರೇಡ್ ಸಿ ಕ್ಷೇತ್ರದಲ್ಲಿದ್ದರು.
ಎರಡನೆಯದಾಗಿ ಬಿಜೆಪಿಯ ಉಗ್ರ ಹಿಂದುತ್ವವಾದವೂ ಅದಕ್ಕೆ ಮುಳ್ಳಾಗಿರಬಹುದೇನೋ? ದೆಹಲಿಗರು ಉಗ್ರ ಹಿಂದುತ್ವವನ್ನು ಅಷ್ಟಾಗಿ ಬೆಂಬಲಿಸುವುದಿಲ್ಲ. ಬಿಜೆಪಿಯ ರಾಷ್ಟ್ರೀಯವಾದವೂ ಅದನ್ನು ಗೆಲುವಿನ ಕುದುರೆ ಹತ್ತಿಸಲಿಲ್ಲ, ಅದಕ್ಕೆ ಕಾರಣ ಮುಸ್ಲಿಂ ಮತಗಳು ಬಿಜೆಪಿಯಿಂದ ದೂರವಾದದ್ದು. ಧ್ರುವೀಕರಣಗೊಂಡ ಮುಸ್ಲಿಮರ, ಬಡವರ ಹಾಗೂ ಉದಾರವಾದಿಗಳ ದೊಡ್ಡ ಗುಂಪಿನ ಜೊತೆ ರಾಷ್ಟ್ರೀಯವಾದ ನಿರೀಕ್ಷಿತ ಮಟ್ಟಕ್ಕೆ ಸಂಘಟಿತವಾಗಲಿಲ್ಲ. ಇದಕ್ಕೆ ಕೇಜ್ರಿವಾಲ್ ಸಿಎಎ ವಿವಾದವನ್ನು ಅತ್ಯಂತ ಜಾಣ್ಮೆಯಿಂದ ಬಳಸಿಕೊಂಡರು. ತಾವು ತುಟಿಬಿಚ್ಚದೆ ತಮ್ಮ ಭ್ರಷ್ಟಾಚಾರ ವಿರೋಧಿ ಆಂದೋಲನದಂತೆ ಶಹೀನ್ ಭಾಗ್ ಪ್ರತಿಭಟನೆಯನ್ನು ಮಾಧ್ಯಮಗಳ ಮೂಲಕ ರಾಷ್ಟ್ರಮಟ್ಟದ ಗಮನಸೆಳೆಯುವಂತೆ ಮಾಡಿದರು. ಇದು ಬಿಜೆಪಿಯನ್ನು ಕೆಡವಲು ಕೇಜ್ರಿ ವಾಲ್ ಬೋನಿಗೆ ಕಟ್ಟಿದ ಬಿಸಿ ಬೊಂಡದಂತಿತ್ತು. ಬಿಜೆಪಿ ಈ ಸುಳಿವು ಅರಿಯದೆ ಅದರಲ್ಲಿ ಹೋಗಿ ಸಿಕ್ಕಿಕೊಂಡಿತು. ಕೇಜ್ರಿವಾಲ್ ಮಾತ್ರ ಹಿಂದೂಗಳ ದ್ವೇಷವನ್ನೂ ಕಟ್ಟಿಕೊಳ್ಳದೆ ಟಿವಿ ಚಾನಲ್‌ನಲ್ಲಿ ಹನು ಮಾನ್ ಚಾಲೀಸ ಪಠಿಸುತ್ತಿದ್ದರು.
ಹಿರಿಯ ನಾಗರಿಕರಿಗಾಗಿ ಮುಖ್ಯ ಮಂತ್ರಿಗಳ ತೀರ್ಥಯಾತ್ರಾ ಯೋಜನೆ ರೂಪಿಸಿ ಮಥುರಾ, ಬೃಂದಾವನ, ಹೃಷಿಕೇಷ, ಹರಿದ್ವಾರ್, ಆನಂದ್‌ಪುರ್ ಸಾಹಿಬ್,ಅಜ್ಮಿàರ್ ಷರೀಫ್ ಮೊದಲಾದ ಕಡೆಗಳಿಗೆ ತೀರ್ಥಯಾತ್ರೆಗೆ ರಿಯಾಯಿತಿ ಘೋಷಿಸಿ ಸೆಕ್ಯುಲರ್‌ವಾದ (?) ಮೆರೆದರು. ಶಾರ್ಜಿಲ್ ಇಮಾಮ್ ಮತ್ತು ಅಮಾನುತುಲ್ಲಾ ಪ್ರಕರಣಗಳಿಂದ ಪಕ್ಷಕ್ಕೆ ಆಗಬಹುದಾದ ಹಾನಿ ಊಹಿಸಿ ಕೂಡಲೇ ತಾವು ಹಿಂದೂ ವಿರೋಧಿ ಅಲ್ಲ ಎಂಬುದನ್ನು ಕೇಜ್ರಿವಾಲ್ ಅತ್ಯಂತ ಜಾಣ್ಮೆಯಿಂದ ನಿರೂಪಿಸಿದರು. ಬಿಜೆಪಿ ಸೋಲಿಗೆ ಮುಖ್ಯ ಕಾರಣ ಕಾಂಗ್ರೆಸ್ ನಿಷ್ಕ್ರಿಯತೆ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮುಸ್ಲಿಂ, ಉದಾರವಾದಿ ಓಟುಗಳು ಎಪಿಪಿಗೆ ದಕ್ಕಿದ್ದು! ಶೀಲಾ ದೀಕ್ಷಿತ್ ಕಾಲದಲ್ಲಿ 3 ಬಾರಿ ರಾಜ್ಯಭಾರ ಮಾಡಿದ್ದ ಕಾಂಗ್ರೆಸ್ ಬಿಜೆಪಿ ಯನ್ನು ಮಣಿಸುವ ಭರದಲ್ಲಿ ದೆಹಲಿಯಲ್ಲಿ ಅಸ್ತಿತ್ವವನ್ನೇ ಕಳೆದು ಕೊಂಡಿದೆ. ಇದಕ್ಕೆ ಕಾಂಗ್ರೆಸ್ ಮುಂದೆ ಭಾರಿ ಬೆಲೆ ತೆರಬೇಕಾ ಗಬಹುದು.
ಇದರೆ ಜೊತೆಗೆ ಕೇಜ್ರಿವಾಲ್ ಸಹ ರಾಜಕೀಯವಾಗಿ ಪ್ರಬುದ್ಧತೆ ಮೆರೆದಿದ್ದಾರೆ. ತಮ್ಮ ತಿಕ್ಕಲುತನಗಳಿಂದ ಈಚೆ ಬಂದಿದ್ದಾರೆ. ತಮ್ಮ ನಿರ್ಧಾರ ಮತ್ತು ಭಾವನೆಗಳ ಮೇಲೆ ಹಿಡಿತ ಹೊಂದಿದ್ದಾರೆ. ಯುವ ಕರು ನಾಗರಿಕ ಸವಲತ್ತುಗಳಿಗಿಂತ ಉದಾರವಾದಕ್ಕೆ ಹೆಚ್ಚು ಮನಸೋಲು ತ್ತಾರೆ ಎಂಬುದನ್ನು ಮನಗಂಡಿದ್ದಾರೆ. ಇದೆಲ್ಲಾ ಬಿಜೆಪಿಗೆ ಸಾಂಪ್ರದಾ ಯಿಕ ಓಟುಗಳನ್ನು ತಂದು ಕೊಟ್ಟರೂ ಗೆಲುವಿಗೆ ಬೇಕಾದ ಹೆಚ್ಚುವರಿ ಮತ ಬಾರದಂತೆ ತಡೆದವು. ಆದರೂ ಕೇಜ್ರಿವಾಲ್ ಎಪಿಪಿಯಲ್ಲಿ ಏಕಮೇವಾದ್ವಿತೀಯ ಸಾರ್ವಭೌಮನಾಗಿ ಬೆಳೆಯುತ್ತಿದ್ದಾರೆ. ಅದನ್ನು ದೂರುವುದಾದರೂ ಹೇಗೆ? ಬಿಜೆಪಿಯಲ್ಲಿ ಮೋದಿ-ಅಮಿತ್ ಶಾ ಇರುವುದೂ ಹಾಗೇ ತಾನೆ?
– ತುರುವೇಕೆರೆ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.