ಸಾಲಮನ್ನಾ ಗೊಂದಲ ಸಹಿತ ಹಲವು ಬೇಡಿಕೆಗಳ ಈಡೇರಿಕೆಗೆ ಸಿಎಂಗೆ ಆಗ್ರಹ
ಮುಖ್ಯಮಂತ್ರಿ ಬಳಿಗೆ ಕರಾವಳಿಯ ಮೀನುಗಾರರ ನಿಯೋಗ
Team Udayavani, Feb 13, 2020, 5:24 AM IST
ಉಡುಪಿ: ಕರಾವಳಿಯ ಮಹಿಳಾ ಮೀನುಗಾರರ ಸಾಲಮನ್ನಾ ಯೋಜನೆಯ ಗೊಂದಲವನ್ನು ಸರಿಪಡಿಸಿ ಬ್ಯಾಂಕ್‌ಗಳಲ್ಲಿ ಸುಸ್ಥಿದಾರ ರಾಗಿರುವ 27 ಸಾವಿರ ಮಹಿಳಾ ಮೀನುಗಾರರಿಗೆ ನ್ಯಾಯ ಒದಗಿಸು ವುದೇ ಮೊದಲಾದ ವಿವಿಧ ಬೇಡಿಕೆ ಗಳನ್ನು ಬಜೆಟ್‌ನಲ್ಲಿ ಈಡೇರಿಸು ವಂತೆ ಆಗ್ರಹಿಸಿ ಕರಾವಳಿಯ ಮೀನುಗಾರರ ನಿಯೋಗವು ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ದ.ಕ. ಮೊಗವೀರ ಮಹಾಜನ ಸಂಘ, ಮಲ್ಪೆ ಮೀನುಗಾರರ ಸಂಘ, ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಸೇರಿದಂತೆ ವಿವಿಧ ಮೀನುಗಾರರ ಸಂಘಟನೆಗಳು ಕರಾವಳಿ ಕರ್ನಾಟಕ ಮೀನುಗಾರರ ಮುಖಂಡ ಡಾ| ಜಿ. ಶಂಕರ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಬುಧವಾರ ನಗರದ ರೇಸ್‌ಕೋರ್ಸ್ ರಸ್ತೆಯ ಶಕ್ತಿಭವನದಲ್ಲಿ ಮನವಿ ಸಲ್ಲಿಸಿದವು.
ಮಹಿಳಾ ಮೀನುಗಾರರಿಗೆ ಸಾಲ ಮಂಜೂರಾತಿ ಮಾಡುವಾಗ ಕೈಗೊಂಡ ಮಾನದಂಡವನ್ನೇ ಅನುಸರಿಸಿ ಸಾಲ ಮನ್ನಾ ಯೋಜನೆಗಳನ್ನು ಕೈಗೊಳ್ಳಬೇಕು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಘೋಷಣೆಯಾದ ಸಾಲಮನ್ನಾವನ್ನು ಸಹಕಾರಿ ಬ್ಯಾಂಕ್‌ಗೂ ವಿಸ್ತರಿಸಬೇಕು. ಕಳೆದ ಐದು ತಿಂಗಳಿಂದ ಮೀನುಗಾರಿಕೆಗೆ ಬಳಸುವ ಡೀಸೆಲ್ ಸಬ್ಸಿಡಿ ಮೊತ್ತ ಮೀನುಗಾರರ ಬ್ಯಾಂಕ್ ಖಾತೆಗೆ ಜಮಾ ಆಗದೆ ಇರುವುದರಿಂದ ಮೀನುಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿ ತಿಂಗಳ 5ನೇ ತಾರೀಕಿಗೂ ಮುಂಚಿತವಾಗಿ ಮೀನುಗಾರರ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ಜಮೆ ಮಾಡುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ತಜ್ಞರ ಸಮಿತಿ ರಚಿಸಿ ಕರಾವಳಿ ಮತ್ತು ಒಳನಾಡು ಮೀನುಗಾರಿಕೆಗೆ ಸಂಬಂಧಪಟ್ಟ ಕಟ್ಟುನಿಟ್ಟಾದ ಸಮಗ್ರ ಹೊಸ ನೀತಿ ರೂಪಿಸಬೇಕು. ವಸತಿ ರಹಿತಾಗಿರುವ ಮೀನುಗಾರರಿಗೆ ಕೂಡಲೇ ಮತ್ಸಾéಶ್ರಯ ಮನೆಗಳನ್ನು ಮಂಜೂರು ಮಾಡಬೇಕು. ಹಣ ಬಿಡುಗಡೆಯಾಗದ ಕಾಮಗಾರಿ ಅರ್ಧಕ್ಕೆ ನಿಂತಿರುವ ಕೇಂದ್ರ ಪುರಸ್ಕೃತ ಯೋಜನೆಗಳ ಮರು ಚಾಲನೆಗೆ ಕ್ರಮ ಕೈಗೊಳ್ಳಬೇಕು. ಗಂಗಾಮತಸ್ಥ ಹಾಗೂ 39 ಉಪಜಾತಿಗಳನ್ನು ಪರಿಶಿಷ್ಟಪಂಗಡಕ್ಕೆ ಸೇರಿಬೇಕು ಎಂಬ ಪ್ರಸ್ತಾವನೆ ಸಂಬಂಧ ಕೇಂದ್ರಕ್ಕೆ ಒತ್ತಡ ಹೇರಬೇಕು. ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ಕನಿಷ್ಠ 10 ಜನರಿಗೆ ಮೀನುಗಾರಿಕೆ ವಿಷಯದಲ್ಲಿ ಪದವಿಗೆ ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಕೃಷ್ಣ ಸುವರ್ಣ ಉಪಸ್ಥಿತರಿದ್ದರು.
ಮುಖ್ಯಾಂಶಗಳು
– ಮೀನುಗಾರರ ಸಹಕಾರಿ ಸಂಘಗಳ ಪುನಶ್ಚೇತನಕ್ಕೆ ವಿಶೇಷ ಅನುದಾನ ಘೋಷಣೆ ಮಾಡಬೇಕು.
– ಒಣಮೀನು ವ್ಯಾಪಾರಸ್ಥರಿಗೆ ಕೇಂದ್ರ ಪುರಸ್ಕೃತ ಯೋಜನೆಗಳಂತೆ ಸೋಲಾರ್ ಡ್ರೈಯರ್ ಖರೀದಿಸಲು ವಿಶೇಷ ಸಹಾಯಧನ ನೀಡಬೇಕು.
– ಡೀಸೆಲ್‌ನ ರಸ್ತೆ ಕರ ಮನ್ನಾ ಮಾಡಬೇಕು, ನಾಡದೋಣಿ ಮೀಗಾರರಿಗೆ ಎಂಜಿನ್ ಸಬ್ಸಿಡಿ ನೀಡಿ, ಪ್ರತಿ ಪರ್ಮಿಟ್‌ಗೆ 400 ಲೀ. ಸೀಮೆಣ್ಣೆ ನೀಡಬೇಕು.
– ಯಾಂತ್ರಿಕೃತ ಮೀನುಗಾರಿಕೆ ದೋಣಿಗೆ ಉಪಯೋಗಿಸುವ ಕರ ರಹಿತ ಡೀಸೆಲ್ ಮಿತಿಯಿಂದ ದಿನಕ್ಕೆ 300 ಲೀ.ನಿಂದ 500 ಲೀ.ಗೆ ಹೆಚ್ಚಿಸಬೇಕು.
ತಲಾ 25 ಲಕ್ಷ ರೂ. ಪರಿಹಾರಕ್ಕೆ ಮನವಿ
ಮಲ್ಪೆಯ ಸುವರ್ಣ ತ್ರಿಭುಜ ಬೋಟು ಆಳಸಮುದ್ರದಲ್ಲಿ ಕಣ್ಮರೆಯಾಗಿರುವ ಪ್ರಕರಣದಲ್ಲಿ ಅದರಲ್ಲಿ ಮೀನುಗಾರರ ಕುಟುಂಬಕ್ಕೆ ಸರಕಾರದಿಂದ ತಲಾ 25 ಲಕ್ಷ ರೂ. ಪರಿಹಾರವನ್ನು ಬಜೆಟ್‌ನಲ್ಲಿ ಘೋಷಿಸಬೇಕು. ಬೋಟಿನ ವಿಮಾ ಮೊತ್ತಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮೀನುಗಾರರ ಮುಖಂಡರ ನಿಯೋಗ ಮನವಿ ಮಾಡಿತು.
ಕೃಷಿ, ವೈದ್ಯ ಕಾಲೇಜು ಮಂಜೂರಾತಿಗೆ ಮನವಿ
ಉಡುಪಿ: ಬಜೆಟ್‌ನಲ್ಲಿ ಉಡುಪಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು, ಬ್ರಹ್ಮಾವರದಲ್ಲಿ ಸರಕಾರಿ ಕೃಷಿ ಕಾಲೇಜು ಮಂಜೂರು ಮಾಡುವ ಜತೆಗೆ ಮೀನುಗಾರಿಕೆಗೆ ವಿಶೇಷ ಅನುದಾನ ಘೋಷಣೆ ಮಾಡ ಬೇಕು ಎಂದು ಮುಖ್ಯಮಂತ್ರಿಗಳಿಗೆ ಉಡುಪಿ ಹಾಗೂ ಚಿಕ್ಕಮಗಳೂರು ಸಂಸದ ಶೋಭಾ ಕರಂದ್ಲಾಜೆ ನೇತೃ ತ್ವದ ನಿಯೋಗ ಮನವಿ ಮಾಡಿದೆ.
ಬ್ರಹ್ಮಾವರ ಪುರಸಭೆಗೆ ಪ್ರಸ್ತಾವನೆ
ಬ್ರಹ್ಮಾವರ ವ್ಯಾಪ್ತಿಯ ಚಾಂತಾರು, ವಾರಂಬಳ್ಳಿ, ಹಂದಾಡಿ, ಹಾರಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 8 ಗ್ರಾಮಗಳಿದ್ದು, 27,713 ಹೆಕ್ಟೇರ್ ಭೂಪ್ರದೇಶ ವಿದೆ. 2010ರ ಜನಗಣತಿ ಪ್ರಕಾರ 30 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಹೀಗಾಗಿ ಈ 4 ಗ್ರಾ.ಪಂ.ಗಳನ್ನು ಸೇರಿಸಿ ಬ್ರಹ್ಮಾವರ ಪುರಸಭೆ ಮಾಡ ಬೇಕು ಎಂದು ಮನವಿ ಮಾಡಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.