ಕರಕುಶಲ ಜ್ಞಾನನಾಶಕ್ಕೆ ಯಾರು ಕಾರಣ?
ಚಿಂತನೆ
Team Udayavani, Feb 14, 2020, 11:13 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಗಂಡು ಆನೆಗಳ ಸಂತತಿ ನಾಶದಿಂದ ಆದ ದುಷ್ಪರಿಣಾಮಗಳನ್ನು ವನ್ಯ ಜೀವಿ ತಜ್ಞರಾದ ಕೃಪಾಕರ ಮತ್ತು ಸೇನಾನಿಯವರು ಹೇಳುತ್ತಿರುತ್ತಾರೆ. ಗಂಡು ಮತ್ತು ಹೆಣ್ಣುಗಳ ಪ್ರವೃತ್ತಿಗಳು ಬೇರೆಯಾಗಿ ಕಂಡುಬರುವುದು ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲೂ ಇವೆ. ಗಂಡು ಆನೆ ಮರಿಗಳು ಬಾಲ್ಯದಲ್ಲಿಯೇ ಪುಂಡಾಟಿಕೆ ಶುರು ಮಾಡಿದರೆ, ಹೆಣ್ಣು ಆನೆ ಮರಿಗಳು ತಾಯಿ, ಸಂಸಾರಕ್ಕೆ ನೆರವಾಗುವುದರಲ್ಲಿರುತ್ತವೆ. ಗಂಡು ಆನೆ ಮರಿಗಳು ಬಾಲ್ಯದಲ್ಲಿಯೇ ತಾಯಿಯಿಂದ ಬೇರೆಯಾಗಿ ದೊಡ್ಡ ಗಂಡು ಆನೆಗಳ ಸಂಸರ್ಗಕ್ಕೆ ಹೋಗಲು ಪ್ರಯತ್ನಿಸುತ್ತವೆ.
ಪುಂಡಾಟಿಕೆ ಮಾಡಿಕೊಂಡ ಗಂಡು ಆನೆ ಮರಿ ದೊಡ್ಡ ಗಂಡು ಆನೆಯತ್ತ ಹೋಗುವಾಗ ಅದು ಸ್ವೀಕರಿಸುವುದಿಲ್ಲ. ಅಲ್ಲಿ ಚಮಚಾಗಿರಿ ಮಾಡಿ ಹತ್ತಿರ ಆಗುತ್ತದೆ. ಅನಂತರ ಜತೆ ಸೇರಿ ಜೀವನಕ್ರಮಗಳನ್ನು ಕಲಿತು ಕೊಳ್ಳುತ್ತದೆ. ವರ್ಷದ ಸಂಚಾರದಲ್ಲಿ ಎಲ್ಲಿ ಆಹಾರ ಸಿಗುತ್ತದೆ, ಎಲ್ಲಿ ಯಾವಾಗ ನದಿ ದಾಟಲು ಕಷ್ಟವಾಗುತ್ತದೆ, ಎಲ್ಲಿ ಅಪಾಯಗಳಿರುತ್ತದೆ ಎಂಬಿತ್ಯಾದಿ ಜ್ಞಾನಗಳು ಸಂತತಿಯಿಂದ ಸಂತತಿಗೆ ದೊಡ್ಡ ಆನೆಗಳಿಂದ ಸಣ್ಣ ಆನೆಗಳಿಗೆ ವರ್ಗಾವಣೆಯಾಗಿರುತ್ತದೆ.
1985ರಿಂದ 95ರವರೆಗೆ ದಂತದ ಆಸೆಗಾಗಿ ದೊಡ್ಡ ಪ್ರಮಾಣದಲ್ಲಿ ಗಂಡು ಆನೆಗಳನ್ನು ಕೊಲ್ಲಲಾಯಿತು. ಇದರಿಂದಾಗಿ 10 ವರ್ಷಗಳ ಗಂಡು ಆನೆಗಳ ಅನುಭವ ನಷ್ಟವಾಯಿತು. ಚಿಕ್ಕ ಆನೆಗಳಿಗೆ, ಎಲ್ಲಿ ಹೋಗಬೇಕು? ಎಲ್ಲಿ ಆಹಾರ ಸಿಗುತ್ತದೆ? ಎಲ್ಲಿ ಹೋದರೆ ಅಪಾಯವಿರುತ್ತದೆ ಎಂಬ ಜ್ಞಾನ ಸಿಗದೆ ಪರದಾಡುವಂತಾಯಿತು. ಈ ತೆರನಾಗಿ ಒಂದೆರಡು ಪೀಳಿಗೆ ಮುಂದಿನ ಪೀಳಿಗೆಗೆ ಜ್ಞಾನವನ್ನು ಹಂಚದೆ ಹೋದರೆ ಎಂತಹ ಘನಘೋರ ಸ್ಥಿತಿ ಎದುರಾಗುತ್ತದೆ
ಎಂಬುದಕ್ಕೆ ದಿಕ್ಕುತಪ್ಪಿದ ಗಂಡಾನೆಗಳ ಸಮೂಹ ನಮ್ಮೆದುರು ನಿಲ್ಲುತ್ತದೆ. ನಾವು ಆಗಾಗ್ಗೆ ಓದುವ ಆನೆಗಳ ದಾಳಿ, ಆನೆಗಳ ಸಾವು, ಆನೆಗಳ ಪುಂಡಾಟ ಎಂಬಿತ್ಯಾದಿ ತಲೆಬರಹಗಳ ಸುದ್ದಿ ಹಿಂದೆ ಆನೆಗಳ್ಳರು/ ದಂತಕಳ್ಳರ ಕೈವಾಡವಿರುವುದು ಸ್ಮರಣೆಗೂ ಬರುವುದಿಲ್ಲ.
***
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಆಲೂರು ಗ್ರಾಮದಲ್ಲಿ ಮಡಕೆ ತಯಾರಿಸುವ ಕುಂಬಾರ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿದ್ದರು/ ಈಗಲೂ ಇದ್ದಾರೆ. 1990ರಲ್ಲಿ 20 ಮನೆಗಳಿದ್ದರೆ ಅಷ್ಟೂ ಮನೆಯವರು ಕುಂಬಾರಿಕೆ ವೃತ್ತಿಯಲ್ಲಿದ್ದರು. ಈಗ 90 ಮನೆಗಳಾಗಿವೆ. ಇವುಗಳಲ್ಲಿ ಐದಾರು ಮನೆಯವರಲ್ಲಿ ಮಾತ್ರ 65 ವಯಸ್ಸು ಆದವರು ಈ ಕೆಲಸವನ್ನು ಮಾಡುತ್ತಿದ್ದಾರೆ. ಈಗ ರಘು ಕುಲಾಲರಿಗೆ 43 ವರ್ಷ. ಇವರಿಗೆ ಆಧುನಿಕ ಯಂತ್ರೋಪಕರಣಗಳನ್ನು ನಿರ್ವಹಿಸುವ ಶಕ್ತಿ ಇದೆ. ಹೀಗಾಗಿ ತಮಿಳುನಾಡು, ಮಧ್ಯಪ್ರದೇಶ ಮೊದಲಾದೆಡೆ ಹೋಗಿ ಯಾಂತ್ರಿಕ ಕ್ರಮಗಳ ತರಬೇತಿ ಕೊಡುತ್ತಿದ್ದಾರೆ. ಉಳಿದವರೆಲ್ಲರೂ ಬೇರೆ ಬೇರೆ ವೃತ್ತಿಗಳನ್ನು ಹಿಡಿದು ಹೋಗಿದ್ದಾರೆ. ಜೀವನ ನಿರ್ವಹಣೆಗೆ ಆದಾಯ ಬೇಕಲ್ಲವೆ? ಆದಾಯ ಎಲ್ಲಿ ಸಿಗುತ್ತದೋ ಆ ವೃತ್ತಿಗೆ ಹೋಗುವುದು ಸಾಮಾನ್ಯ ನಿಯಮ.
ರಘು ಕುಲಾಲರು ಹೇಳುವಂತೆ ಎರಡು ಪೀಳಿಗೆಯವರಿಗೆ ಹೆಚ್ಚಾ ಕಡಿಮೆ ಸಂಪೂರ್ಣವಾಗಿ ಈ ವೃತ್ತಿಯ ಕೌಶಲ ನಷ್ಟವಾಗಿದೆ. ಮಣ್ಣಿನ ಅನೇಕಾ ನೇಕ ಸಾಮಗ್ರಿಗಳು ಈಗ ಜನಪ್ರಿಯಗೊಳ್ಳುತ್ತಿವೆ. ಮಣ್ಣಿನ ಮಡಕೆಯಲ್ಲಿ ಅಡುಗೆ ತಯಾರಿಸಿದರೆ ಆರೋಗ್ಯಕ್ಕೆ ಉತ್ತಮವೆಂದು ತಿಳಿದವರು ಬಲ್ಲವರಾಗಿದ್ದಾರೆ. ಹೀಗಾಗಿ ಬೇಡಿಕೆಗೇನೂ ಕೊರತೆ ಇಲ್ಲ. ಆದರೆ ಯುವಕರು ಯಾರಾದರೂ ಆಸಕ್ತಿ ವಹಿಸಿ ಮುಂದೆ ಬಂದರೆ ಇವರಿಗೆ ಬೇಸಿಕ್ ವಿಚಾರಗಳನ್ನು ಹೇಳಿಕೊಡಬೇಕಾಗಿದೆ. “ನಾನು ದುಡಿಯಲು ಕುಳಿತಿದ್ದೇನೆ. ನಾನು ನಾಲ್ಕಾರು ಜನರನ್ನು ಇಟ್ಟುಕೊಂಡು ನಿರ್ವಹಿಸಬಹುದೆ ವಿನಾ ತರಬೇತಿ ಕೊಡಲು ಆಗುತ್ತಿಲ್ಲ. ಇದು ನನ್ನ ಸಮಸ್ಯೆ’ ಎನ್ನುತ್ತಾರೆ ರಘು ಕುಲಾಲರು.
ಯಂತ್ರೋಪಕರಣಗಳು, ಸ್ಥಳಾವಕಾಶದಂತಹ ಮೂಲಭೂತ ಸೌಕ ರ್ಯಗಳ ಕೊರತೆ ಪ್ರಧಾನವಾಗಿದೆ. ಕುಂದಾಪುರ ತಾಲೂಕಿನ ಕಾಲ್ತೋಡಿನಲ್ಲಿ ಕುಂಬಾರಿಕೆ ಕಲೆಯ ತರಬೇತಿಗೆ 5 ಲ.ರೂ. ಬಂದಿತ್ತು. ಜಾಗ ಖರೀದಿ ಪ್ರಸ್ತಾವವಾಯಿತು. ರಾಜಕೀಯ ಪ್ರವೇಶದಿಂದ ನನೆಗುದಿಗೆ ಬಿದ್ದಿದೆ. ಸರಕಾರದಿಂದ ಸವಲತ್ತುಗಳಿವೆ. ಇವುಗಳನ್ನು ಹೇಗೆ ಪಡೆದುಕೊಳ್ಳಬೇಕೆಂದು ಗೊತ್ತಿಲ್ಲವೆಂಬ ಅಸಹಾಯಕತೆಯನ್ನು ರಘು ಮುಂದಿಡುತ್ತಾರೆ.
ಕೊರಗ ಸಮುದಾಯದವರು ಮಾಡುವ ನಾನಾ ಬಗೆಯ ಬುಟ್ಟಿಗಳು ಪರಿಸರ ಸಹ್ಯವಾದವು. ಇವುಗಳಿಗೆ ಆಧುನಿಕ ಲೇಪ ಕೊಟ್ಟಲ್ಲಿ ಇವು ಪಂಚತಾರಾ ಹೊಟೇಲುಗಳಲ್ಲೂ ವಿರಾಜಿಸಬಹುದು/ ಕೆಲವು ಕಡೆ ವಿರಾಜಿಸುತ್ತವೆ ಕೂಡ. ಆದರೆ…ಇದಕ್ಕೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ತರೋಣವೆಂದರೆ ಸರಕಾರಿ ಅರಣ್ಯ ಪ್ರದೇಶಕ್ಕೆ ಹೋಗಲು ಅರಣ್ಯ ಇಲಾಖೆ ಬಿಡುವುದಿಲ್ಲ. ಬೇಲಿಗಳಲ್ಲಿದ್ದ ಎಲ್ಲ ಗಿಡಮರಗಳನ್ನು ಖಾಸಗಿಯವರು ಕೈಯಿಂದ ಕಡಿದರೆ ಚಿಗುರಬಹುದೆಂದೋ ಏನೋ ಜೆಸಿಬಿ ತಂದು ಬೇರು ಸಹಿತ ಕಿತ್ತೆಸೆದು ಅಟ್ಟಹಾಸದಲ್ಲಿದ್ದಾರೆ. ಅತ್ತ ಸಾಮಗ್ರಿಗಳೂ ಇಲ್ಲ, ಇತ್ತ ಕೆಲಸವೂ ಇಲ್ಲ, ಮತ್ತೊಂದತ್ತ ಕಷ್ಟಪಟ್ಟು ಮಾಡಿಕೊಟ್ಟರೆ ಸಾಮಾಜಿಕ ಮರ್ಯಾದೆಯೂ ಇಲ್ಲ. “ಮುಖ್ಯವಾಗಿ ಕಚ್ಚಾ ಸಾಮಗ್ರಿ, ಬದುಕಿನ ಪ್ರಶ್ನೆ ನಡುವೆ ಯುವ ವೃಂದ ಬೇರೆ ಕೆಲಸಕ್ಕೆ ಹೋಗುತ್ತಿದೆ. ಹೀಗಾಗಿ ಯುವ ವೃಂದಕ್ಕೆ ಈ ವೃತ್ತಿಯ ಕೌಶಲ ಜ್ಞಾನದ ಕೊರತೆ ಇದೆ’ ಎನ್ನುತ್ತಾರೆ ಕೊರಗ ಸಮುದಾಯದ ಮುಖಂಡ ಗಣೇಶ ಕೊರಗ.
ಇತ್ತೀಚಿಗೆ ಸಾವಯವ ವಸ್ತುಗಳನ್ನು ಮಾರುವ ಅಂಗಡಿಗಳಲ್ಲಿ ಗಾಣದಿಂದ ತೆಗೆದ ತೆಂಗಿನೆಣ್ಣೆ ಬಂದಿದೆ. ಇದಕ್ಕೂ ಆಧುನಿಕ ಎಣ್ಣೆ ಗಿರಣಿಗಳಿಂದ ಬರುವ ತೆಂಗಿನೆಣ್ಣೆಗೂ ಗುಣಮಟ್ಟದಲ್ಲಿ ಅಜಗಜಾಂತರ ವ್ಯತ್ಯಾಸವಿದೆಯಂತೆ. ಯಾರ್ಯಾರ ಮನೆಗಳಲ್ಲಿ ಸಾಂಪ್ರದಾಯಿಕ ಎಣ್ಣೆ ಗಾಣಗಳಿದ್ದವೋ ಅವುಗಳೆಲ್ಲ ಮೂಲೆಗೆ ಸೇರುವಂತೆ ಆಗಿದೆ. ಒಂದು ವೇಳೆ ಸಾಂಪ್ರದಾಯಿಕ ಗಾಣದಿಂದ ಹೊರಬಂದ ಎಣ್ಣೆಗೆ ಬೇಡಿಕೆ ಹೆಚ್ಚಿಗೆ ಬಂದರೆ ಇದನ್ನು ಪೂರೈಸುವ ಸ್ಥಿತಿ ಇದೆಯೆ? 40-50 ವರ್ಷಗಳ ಅಂತರದಲ್ಲಿ ಈ ವಿದ್ಯೆ ಯಾರಿಗೂ ಗೊತ್ತಿಲ್ಲವಾಗಿದೆ.
ಈಗ ಎಲ್ಲರೂ ಜಪಿಸುವ ಕೃಷಿಯ ಕಥೆಯೂ ಹೀಗೆ. ಯಾಂತ್ರಿಕ ಕೃಷಿಯ ಉತ್ಪನ್ನದ ಗುಣಮಟ್ಟಕ್ಕಿಂತ ಮಾನವ, ಜಾನುವಾರು ಸಹಿತ ಕೃಷಿಯ ಉತ್ಪನ್ನದ ಗುಣಮಟ್ಟ ಉತ್ತಮವೆಂಬುದು ಶತಃಸಿದ್ಧವಾದರೂ ಇದುವರೆಗೆ ದೊಡ್ಡ ದನಿಯಲ್ಲಿ ಯಾರೂ ಹೇಳಿಲ್ಲ. ಯಾಂತ್ರಿಕ ಕೃಷಿಯೇ ಸಾಧನೆ ಎಂದು ಹೇಳಿದವರು ಅದೇ ಬಾಯಲ್ಲಿ ಇದನ್ನು ಹೇಗೆ ಹೇಳುವುದು ಎಂಬ ಮುಜುಗರ ಇರಬಹುದು.
ಮಿಶ್ರತಳಿ ದನಗಳನ್ನು ಜಾರಿಗೆ ತಂದ ಪಶು ಸಂಗೋಪನ ವಿಜ್ಞಾನಿಗಳು ಈಗ ದೇಸೀ ತಳಿಯ ಉತ್ಪನ್ನಗಳು ಉತ್ತಮವೆಂದೂ, ರಾಸಾಯನಿಕ ಗೊಬ್ಬರವನ್ನು ಚಾಲ್ತಿಗೆ ತಂದವರೇ ಈಗ ಸಾವಯವ ಕೃಷಿ ಉತ್ಪನ್ನ ಉತ್ತಮವೆಂದೂ ಅದೇ ಬಾಯಲ್ಲಿ ಹೇಳಿದಂತೆ ಮುಂದೆ ಯಾಂತ್ರಿಕ ಕೃಷಿ ಉತ್ತಮವಲ್ಲ, ಸಾಂಪ್ರದಾಯಿಕ ಕೃಷಿಯೇ ಉತ್ತಮ ಎಂದು ಹೇಳಲೂಬಹುದು. ಹಾಗೆ ಹೇಳುವಾಗ ಕೋಣಗಳ ಉತ್ಪಾದನೆಗೆ ಪಶುಸಂಗೋಪನ ಇಲಾಖೆಗೂ, ಕೋಣಗಳನ್ನು ಉಳುವವ ತರಬೇತಿ ಪಡೆಯಲು ಕೃಷಿ ವಿ.ವಿ.ಗೂ ಶರಣು ಹೋಗಬೇಕಾಗುತ್ತದೆ. ಅದಕ್ಕಾಗಿ ವಿವಿಧ ಸ್ಕೀಮ್‌ಗಳೂ ಹುಟ್ಟಿಕೊಳ್ಳುತ್ತವೆ, ರೈತರ- ಕೃಷಿ ಉದ್ಧಾರದ ಹೆಸರಿನಲ್ಲಿ. ಇವರೆಲ್ಲ ಕೋಟು, ಟೈ ಧರಿಸಿ ಕನ್ನಡ ಮಿಶ್ರಿತ ಇಂಗ್ಲೀಷ್‌ನಲ್ಲಿ ಹೇಳಿದುದನ್ನು ಹಳ್ಳಿಹೈದನ ಮಗ ಕಲಿತು ಕೃಷಿಯನ್ನು ಉದ್ಧರಿಸಬೇಕೆಂಬ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಾರೆ.
ಆನೆಗಳಿಗೆ ಜ್ಞಾನದ ಕೊರತೆಯಾಗಲು ದಂತಚೋರ ವೀರಪ್ಪನ್ ಕಾರಣ. ಆತನಿಗಾದರೋ ಶಿಕ್ಷೆ ವಿಧಿಸುವ ಕಾನೂನು ಈ ನೆಲದಲ್ಲಿದೆ. ನಾಗರಿಕ ಸಮಾಜದಲ್ಲಿ ಗುಡಿಕೈಗಾರಿಕೆ, ಕೃಷಿ ನಶಿಸಲು ಕಾರಣರಾದ ವೀರಪ್ಪನ್ ಯಾರಿರಬಹುದು? ಅಲ್ಲಿ ಒಬ್ಬ ವೀರಪ್ಪನ್‌ಗೆ ಸಾಥ್ ಕೊಡುವ ಕೆಲವು ಮಿನಿ ವೀರಪ್ಪನ್ ಇದ್ದಿರಬಹುದು. ಇಲ್ಲಿ ಎಷ್ಟು ಮಂದಿ ವೀರಪ್ಪನ್ ಆಳಿ ಹೋಗಿದ್ದಾರೆ. ಇವರ ಪರಿಚಾರಕ ಯಾನೆ ಬಹುಪರಾಕ್ ಸಮೂಹ ಎಷ್ಟು ದೊಡ್ಡದಿರಬಹುದು? ಇವರಿಗೆ ಶಿಕ್ಷೆ ವಿಧಿಸುವ ಕಾನೂನು ಎಲ್ಲಿದೆ?
ಆಳುವ ವರ್ಗ ಎಷ್ಟೇ ತಪ್ಪು ಮಾಡಿದರೂ ‘ಬಾಸ್ ಈಸ್ ಆಲ್ವೇಸ್ ರೈಟ್’ ಎಂಬ ಕೃತಕ ಗಾದೆಯಂತೆ ಜಗತ್ತು ನಡೆಯುವಂತೆ ಮಾಡಿಡಲಾಗಿದೆ. ಆಳುವ ವರ್ಗಕ್ಕೆ ಕ್ಷಮೆ ಕೊಡುವ, ಆಧ್ಯಾತ್ಮಿಕವಾಗಿ ಬಹಳ ಉನ್ನತ ಮಟ್ಟದ ‘ಕ್ಷಮಾಗುಣ’ ದುಡಿಯುವ ವರ್ಗಕ್ಕೆ ಇರುತ್ತದೆ ಎಂದು ಹೇಳುವುದು ಕ್ಷೀಷೆ (ಸತ್ವರಹಿತ) ಎನಿಸಬಹುದು.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.