ಮನ ತಣಿಸಿದ “ತಿಂಥಣಿ’
ಸಾಮರಸ್ಯದ ಓಕುಳಿ ಚೆಲ್ಲಿದ ಜಾತ್ರೆ
Team Udayavani, Feb 15, 2020, 6:12 AM IST
“ಮನುಷ್ಯ ಚಿಂತೆ ಬಿಟ್ಟು, ನೆಮ್ಮದಿ ಕಾಣಲು ತಿಂಥಣಿಗೆ ಬರಬೇಕು’ ಎಂಬ ಮಾತಿದೆ. ತಿಂಥಣಿ ಮೌನೇಶ್ವರನಿಗೆ ಜಾತಿ, ಧರ್ಮ ಮೀರಿದ ಭಕ್ತರಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಎಂಬ ಪುಟ್ಟ ಗ್ರಾಮದಲ್ಲಿ, ಕೃಷ್ಣೆಯ ಬಲಭಾಗದಲ್ಲಿ ಈ ಮೌನೇಶ್ವರ ನೆಲೆನಿಂತಿದ್ದಾನೆ. ಸುರಪುರ ತಾಲೂಕಿನ ದೇವರಗೋನಾಳದ ಮೌನೇಶ್ವರ ಸ್ವಾಮಿಗಳು ಸ್ಥಿರವಾಗಿ ನೆಲೆಸಿದ್ದು ತಿಂಥಣಿಯಲ್ಲಿ. ಪ್ರತಿವರ್ಷ ಭಾರತ ಹುಣ್ಣಿಮೆಗೆ ನಡೆಯುವ ತಿಂಥಣಿ ಜಾತ್ರೆ, ಭಕ್ತಿಭಾವದ ಮೇಳವೊಂದೇ ಅಲ್ಲ, ಅಲ್ಲೊಂದು ಬಹುದೊಡ್ಡ ಪಾಠವೂ ಇದೆ. ಫೋಟೊಗ್ರಾಫರ್ ಕಣ್ಣಾಳದಲ್ಲಿ ಆ ಜಾತ್ರೆ ಸೆರೆಯಾದ ಬಗೆ ಇಲ್ಲಿದೆ…
ನಾನು ವೃತ್ತಿ ಜೀವನದಲ್ಲಿ ಹಲವಾರು ಜಾತ್ರೆ ನೋಡಿದ್ದೇನೆ. ಒಂದೊಂದು ಜಾತ್ರೆಯೂ ಒಂದೊಂದು ಅನುಭವ ಕೊಡುತ್ತವೆ. ಆದರೆ, ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತಿಂಥಣಿ ಮೌನೇಶ್ವರ ಜಾತ್ರೆ ನೀಡಿದ ಅನುಭವ ನಿಜಕ್ಕೂ ಅಪೂರ್ವ. ದಕ್ಷಿಣ ಭಾರತದಲ್ಲೇ ಇಂಥದ್ದೊಂದು ಭಾವೈಕ್ಯತೆಯ, ಹಿಮಾಲಯದ ಸಾಧು- ಸಂತರನ್ನೂ ಕೈಬೀಸಿ ಕರೆಯುವ ಈ ಜಾತ್ರೆ ಕಂಡು ಪುಳಕಿತನಾದೆ. ಪ್ರತಿವರ್ಷ ಭಾರತ ಹುಣ್ಣಿಮೆಗೆ ಈ ಜಾತ್ರೆ ಅರಳಿಕೊಂಡು, ಸಹಸ್ರ ನೆನಪುಗಳನ್ನು ಬಿತ್ತಿ, ಒಂದೇ ವಾರದಲ್ಲಿ ಸಂಭ್ರಮ ಮುಗಿಸುತ್ತದೆ.
ಜಾತ್ರೆಗಾಗಿಯೇ 20 ಸಾವಿರಕ್ಕೂ ಹೆಚ್ಚು ಪುರವಂತರು ಇಲ್ಲಿ ಸೇರುತ್ತಾರೆ. ವಚನ- ಒಡಪುಗಳ ಮೂಲಕ ಶ್ರೀ ಮೌನೇಶನ ಧ್ಯಾನ ಮಾಡುತ್ತ ಪುರವಂತರ ಸೇವೆ ನೋಡುವುದೇ ಕಣ್ಣಿಗೆ ಹಬ್ಬ. ಪುರವಂತರು ಶಸ್ತ್ರ ಹಾಕಿಕೊಳುತ್ತಾ, ಪಲ್ಲಕ್ಕಿಯೊಂದಿಗೆ ದೇಗುಲಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದರೆ, ನೆರೆದ ಲಕ್ಷಾಂತರ ಭಕ್ತರು, ಕೈಮುಗಿದು ಧನ್ಯತಾ ಭಾವ ತೋರುತ್ತಾರೆ. ಇಲ್ಲಿ ಮೇಲು- ಕೀಳು, ಬಡವ-ಶ್ರೀಮಂತ ಎಂಬ ಭಾವನೆ ಯಾರಿಗೂ ಇರುವುದಿಲ್ಲ. ಶ್ರೀಮಂತರು ಬೇಗ ದೇವರ ದರ್ಶನ ಮಾಡಿ ಹೋಗುವಂತೆ ಪ್ರತ್ಯೇಕ ದರ್ಶನದ ಸಾಲೂ ಇಲ್ಲಿರಲ್ಲ. ಎಷ್ಟೇ ಅಹಂಕಾರದ ವ್ಯಕ್ತಿ ಇದ್ದರೂ, ಅವನಿಗೆ ತಾಳ್ಮೆ ಕಲಿಸುವ ಜಾತ್ರೆಯಿದು.
ಎಲ್ಲ ಜಾತಿಯವರ ಸೇವೆ: ಚಿನ್ನ, ವಜ್ರದ ಸಾಮಗ್ರಿಗಳಿಂದ ಅಲಂಕೃತವಾದ ಮೌನೇಶ್ವರ ಪಲ್ಲಕ್ಕಿಯನ್ನು ಸುರಪುರದಿಂದ ಅಂಬಿಗರು ಹೊತ್ತು ತರುತ್ತಾರೆ. ತಲಾ 8 ಜನರನ್ನು ಒಳಗೊಂಡ 16 ಜನರ ಎರಡು ತಂಡ, ಈ ಸೇವೆಗಾಗಿಯೇ ಇದೆ. ಸುರಪುರದಿಂದ ಅಂಬಿಗರು ಈ ಪಲ್ಲಕ್ಕಿ ಹೊತ್ತು, ತಿಂಥಣಿಯ ಕೃಷ್ಣೆಯ ದಡದಲ್ಲಿ ದೇವಸ್ಥಾನದ ಬಾಬ್ತುದಾರರಿಗೆ ಒಪ್ಪಿಸುತ್ತಾರೆ. ಹವಾಲ್ದಾರರು ದೇವಸ್ಥಾನಕ್ಕೆ ಸುಣ್ಣ- ಬಣ್ಣ ಬಳಿಯುವುದು, ಕುರುಬರು ದಳಪತಿ ಸೇವೆ, ಮುಸ್ಲಿಮರು ದೀವಟಿಗೆ ಸೇವೆ (ಕಟ್ಟಿಗೆಗೆ ಬಟ್ಟೆ ಕಟ್ಟಿ, ಎಣ್ಣೆ ಹಾಕಿ ಬೆಳಕು ಹಿಡಿಯುವುದು), ಪತ್ತಾರರು ಪಂಚಪುತ್ರರಾಗಿ ದೇಗುಲದ ಸ್ವತ್ಛಗೊಳಿಸುವುದು, ಲಿಂಗಾಯತರು ಧವಸ- ಧಾನ್ಯ ನೀಡುವುದು, ದೇವರು ಹೊರಬರುವಾಗ ನಗಾರಿ ಬಾರಿಸುವ ಜವಾಬ್ದಾರಿ ಎಸ್.ಸಿ. ಸಮುದಾಯಕ್ಕೆ, ಕುಂಬಾರರ ಮಡಿಕೆ ನೀಡುವುದು- ಹೀಗೆ ಆಯಾ ಸಮಾಜಗಳಿಗೆ ಪಾರಂಪರಿಕವಾಗಿ ಬಾಬ್ತು ಇವೆ. ಆ ಸೇವೆಯನ್ನು ಅದೇ ಸಮಾಜದವರು ಮಾಡುತ್ತಾರೆ.
ಹಠಯೋಗಿಗಳ ಸ್ವರ್ಗ ಕೈಲಾಸಕಟ್ಟಿ: ತಿಂಥಣಿ ಕ್ಷೇತ್ರದಲ್ಲಿ “ಕೈಲಾಸಕಟ್ಟಿ’ ಎಂಬ ತಾಣವಿದೆ. ಇಲ್ಲಿಗೆ ಕರ್ನಾಟಕ, ಮಹಾರಾಷ್ಟ್ರದ ಆರೂಢ ಸಂಪ್ರದಾಯದ ಸಂತರು, ಹರಿದ್ವಾರದ ನವನಾತ ಸಂಪ್ರದಾಯದ ಸಂತರು, ಸಿದ್ಧರು, ಹಠಯೋಗಿಗಳು ಇಲ್ಲಿಗೆ ಬರುತ್ತಾರೆ. ಅವರಿಗಾಗಿ ತಿಂಥಣಿಯ ಗ್ರಾಮಸ್ಥರು ವಿಶೇಷ ಸೇವೆ ಸಲ್ಲಿಸುತ್ತಾರೆ. ಅವರಿಗೆ ಚಿಲಮಿ, ತಂಬಾಕು ಮುಂತಾದ ವಸ್ತುಗಳನ್ನು ನೀಡಿ, ಅವರನ್ನು ಖುಷಿಪಡಿಸುತ್ತಾರೆ. ಹೀಗೆ ಖುಷಿ ಪಡಿಸುವುದೇ ಭಕ್ತರು ದೊಡ್ಡ ಸೇವೆಯೆಂದು ಪರಿಗಣಿಸಿ, ನಿಸ್ವಾರ್ಥದಿಂದ ಮಾಡುತ್ತಾರೆ. ಈ ಹಠಯೋಗಿ, ಮಹಾಯೋಗಿಗಳು, ಭಕ್ತರ ಸೇವೆ ಕಂಡು, ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿ ಹೋಗುತ್ತಾರೆ.
ಮುಸ್ಲಿಮರಿಂದಲೂ ಆರಾಧನೆ: ಈ ಜಾತ್ರೆಗೆ ಜಾತಿಯ ಗಡಿ ಇಲ್ಲ. ಮೌನೇಶ್ವರರ ಒಂದು ಜಯಕಾರವೇ ಹೀಗಿದೆ- “ಓಂ ಏಕ್‌ಲಾಕ್ ಐಸಿಹಜಾರ್, ಪಾಂಚೋಪೀರ್ ಪೈಗಂಬರ್ ಮೋದ್ದಿನ್, ಜಿತಾಪೀರ ಮೋದ್ದಿನ್, ಕಾಶಿಪತಿ ಗಂಗಾಧರ ಹರ ಹರ ಮಾಹಾದೇವ, ಶ್ರೀ ಜಗದ್ಗುರು ಮೌನೇಶ್ವರ ಮಹಾರಾಜಕಿ ಜೈ’. ಹಿಂದೂ- ಮುಸ್ಲಿಮರು ಭಾವೈಕ್ಯತೆಯಿಂದ ಇರುವುದೇ ಇಲ್ಲಿನ ಸಂಪ್ರದಾಯ. ಈ ಜಾತ್ರೆಗೆ ಬರುವ ಮುಸ್ಲಿಮರೂ, ಹಣೆಗೆ ಕುಂಕುಮ ಹಚ್ಚಿ ದೇವರ ದರ್ಶನ ಪಡೆಯುತ್ತಾರೆ. ಹಿಂದೂಗಳು, ತಮ್ಮ ಮಕ್ಕಳ ಜವಳ ತೆಗೆಯುವ ಕಾರ್ಯಕ್ಕಾಗಿಯೇ ವರ್ಷಗಟ್ಟಲೇ ಕಾಯುತ್ತಾರೆ. ಈ ಜಾತ್ರೆಗಾಗಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರದಿಂದ ಸುಮಾರು 20 ಸಾವಿರಕ್ಕೂ ಹೆಚ್ಚು ಪುರವಂತರು ಇಲ್ಲಿಗೆ ಬಂದಿರುತ್ತಾರೆ.
ತಾಳ್ಮೆ ಪರೀಕ್ಷಿಸುವ ಪ್ರಸಾದ ಸೇವೆ: ಈ ಜಾತ್ರೆಗೆ ಬರುವ ಸುಮಾರು 4ರಿಂದ 5 ಲಕ್ಷ ಭಕ್ತಾದಿಗಳಿಗೂ ಏಕಕಾಲಕ್ಕೆ ಪ್ರಸಾದ ಸೇವೆ ನಡೆಯುತ್ತದೆ. ಭಕ್ತರು ಯಾವ ಸ್ಥಳದಲ್ಲಿ ಕುಳಿತಿರುತ್ತಾರೋ ಅದೇ ಸ್ಥಳಕ್ಕೆ ಹೋಗಿ ಪ್ರಸಾದ ನೀಡಲಾಗುತ್ತದೆ. ಲಕ್ಷಾಂತರ ಭಕ್ತರಿಗೆ ಪ್ರಸಾದ ತಲುಪುವವರೆಗೂ ಯಾರೂ ಪ್ರಸಾದ ಸೇವಿಸುವುದಿಲ್ಲ. ಎಲ್ಲ ಭಕ್ತರಿಗೆ ಪ್ರಸಾದ ತಲುಪಿದ ಬಳಿಕವೂ 2ರಿಂದ 3 ಗಂಟೆ ಎಲ್ಲರೂ ಕಾಯುತ್ತಾರೆ. ಕಾರಣ, ಗಿಣಿ, ಹಾವು, ಇರುವೆ, ಗೋವು- ಹೀಗೆ ಯಾವುದೇ ರೂಪದಲ್ಲಿ ಮೌನೇಶ್ವರ ಪ್ರತ್ಯಕ್ಷನಾಗುತ್ತಾನೆ ಎಂಬುದು ಭಕ್ತರ ಪಾರಂಪರಿಕ ನಂಬಿಕೆ. ಈ ಬಾರಿ ಗಿಣಿಯೊಂದಿಗೆ ಭಕ್ತರು ಪ್ರಸಾದ ಸೇವನೆಗೆ ಕುಳಿತ ಸ್ಥಳಕ್ಕೆ ಬಂದ ಬಳಿಕವೇ, ಎಲ್ಲಾ ಭಕ್ತರು ಪ್ರಸಾದ ಸೇವಿಸಲು ಆರಂಭಿಸಿದರು.
ಇಲ್ಲಿ ಎಲ್ಲವೂ ಉಂಟು!: ಈ ಜಾತ್ರೆಗೆ ಬರುವವರು ಮೂರರಿಂದ ನಾಲ್ಕು ದಿನ ಮನೆ, ಮಠ ಎಲ್ಲವನ್ನೂ ಬಿಟ್ಟು ಬರುತ್ತಾರೆ. ಯಾರೂ ಮನೆಯ ಕಡೆ ಚಿಂತೆ ಮಾಡುವುದಿಲ್ಲ. ಬಟ್ಟೆ ವ್ಯಾಪಾರ, ಇಸ್ತ್ರಿ ಅಂಗಡಿಗಳು, ಬಳೆ, ಕುಂಕುಮ ಮಾರಾಟ- ಹೀಗೆ ಎಲ್ಲ ತರಹದ ವಸ್ತುಗಳ ವ್ಯಾಪಾರವೂ ಇಲ್ಲಿರುತ್ತದೆ. ಕುಟುಂಬ ಸಮೇತರಾಗಿ ಬರುವ ಭಕ್ತಾದಿಗಳೇ ಇಲ್ಲಿ ಹೆಚ್ಚು.
ಚಿತ್ರ- ಲೇಖನ: ಸಂಗಮೇಶ ಬಡಿಗೇರ, ಛಾಯಾಚಿತ್ರಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.