ಕೃಷಿ ಮೇಳದಲ್ಲಿ ಮೇಳೈಸಿದ ಸಿರಿಧಾನ್ಯಗಳ ಸಿರಿ
Team Udayavani, Feb 16, 2020, 3:00 AM IST
ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕೃಷಿ ಮೇಳದ ಭಾಗವಾಗಿ ಆಯೋಜಿಸಿರುವ ಸಿರಿಧಾನ್ಯಗಳ ಹಬ್ಬ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಶನಿವಾರ ವಿದ್ಯುಕ್ತ ಚಾಲನೆ ಸಿಕ್ಕಿತು. ಜಿಲ್ಲೆಯ ಸಹಸ್ರಾರು ರೈತರ ಸಂಗಮವಾಗಿದ್ದ ಕೃಷಿಮೇಳದಲ್ಲಿ ಸಿರಿಧಾನ್ಯಗಳ ಸಿರಿ ಮೇಳೈಸಿತು. ರೈತರಿಗೆ ಆಧುನಿಕ ಕೃಷಿ ಪದ್ಧತಿ, ತಾಂತ್ರಿಕತೆಯ ಅರಿವು ಮೂಡಿಸುವ ದಿಸೆಯಲ್ಲಿ ಕೃಷಿ ಮೇಳ ಕೇಂದ್ರೀಕೃತವಾಗಿತ್ತು.
70ಕ್ಕೂ ಹೆಚ್ಚು ಮಳಿಗೆಗಳು ತೆರೆದು ರೈತರಿಗೆ ಸಮಗ್ರ ಕೃಷಿ ಬೇಸಾಯ ಬಗ್ಗೆ ಉಪಯುಕ್ತ ಮಾಹಿತಿ ಒದಗಿಸಿದವು. ಈ ವರ್ಷ ವಿಶೇಷವಾಗಿ ನರೇಗಾ ಮಾದರಿ ಗ್ರಾಮ, ಹೂವಿನಲ್ಲಿ ಸಿದ್ಧಪಡಿಸಿದ್ದ ಹಂಪಿ ಕಲ್ಲಿನ ರಥ, ಸುಭಾಷ್ ಚಂದ್ರಬೋಸ್‌ರ ಮರಳು ಕಲಾಕೃತಿ, ತರಕಾರಿಯಲ್ಲಿ ಅನಾವರಣಗೊಂಡಿದ್ದ ಮೇರು ವ್ಯಕ್ತಿಗಳ ಭಾವಚಿತ್ರಗಳು ಮೇಳದ ಪ್ರಮುಖ ಆಕರ್ಷಣೀಯವಾಗಿದೆ.
ಚಿಕ್ಕಬಳ್ಳಾಪುರ: ಅಲ್ಲಿ ಎತ್ತ ಕಣ್ಣಾಯಿಸಿದರೂ ಅನ್ನದಾತರದ್ದೇ ಕಲರವ. ಕೃಷಿ ಮೇಳಕ್ಕೆ ಮೆರಗು ತಂದು ಕೊಟ್ಟ ರಾಶಿಪೂಜೆ. ರಾಗಿ ಮುದ್ದೆ ತಿನ್ನಲು ಪೈಪೋಟಿ, ಮೇಳಕ್ಕೆ ಬಂದವರಿಗೆ ಸಿರಿಧಾನ್ಯಗಳ ಘಮಲು. ಫಲಪುಷ್ಪ, ಶ್ವಾನ ಪ್ರದರ್ಶನ ವೀಕ್ಷಣೆಗೆ ನೂಕುನುಗ್ಗಲು. ಹೂವಿನಲ್ಲಿ ಸಿದ್ಧಗೊಂಡು ಗಮನ ಸೆಳೆದ ವಿಶ್ವ ಪಾರಂಪರಿಕ ಹಂಪಿ ಕಲ್ಲಿನ ರಥ. ಕೃಷಿ ಮೇಳಕ್ಕೆ ಬಂದವರಿಗೆ ವಿರಾಜಮಾನವಾಗಿ ದರ್ಶನ ಕೊಟ್ಟ ರಂಗಸ್ಥಳದ ಶ್ರೀ ರಂಗನಾಥಸ್ವಾಮಿ.
ಹೌದು, ಮಳೆ ಬೆಳೆ ಇಲ್ಲದೇ ಬರಪೀಡಿತ ಜಿಲ್ಲೆಯೆಂಬ ಹಣೆ ಪಟ್ಟಿ ಕಟ್ಟಿಕೊಂಡಿಕೊಂಡಿರುವ ಚಿಕ್ಕಬಳ್ಳಾಪುರ ನಗರದಲ್ಲಿ ಕೃಷಿ, ತೋಟಗಾರಿಕೆ ಮತ್ತಿತರ ಕೃಷಿ ಸಂಬಂಧಿತ ಇಲಾಖೆಗಳು ಏರ್ಪಡಿಸಿರುವ ಎರಡು ದಿನಗಳ ಜಿಲ್ಲಾ ಮಟ್ಟದ ಸಿರಿಧಾನ್ಯಗಳ ಹಬ್ಬ ಹಾಗೂ ಫಲಫುಪ್ಪ ಪ್ರದರ್ಶನದಲ್ಲಿ ಕಂಡು ಬಂದ ಹಲವು ದೃಶ್ಯಗಳು ಜಿಲ್ಲೆಯ ಅನ್ನದಾತರನ್ನು ಸಾವಯುವ ಹಾಗೂ ಸಿರಿಧಾನ್ಯಗಳನ್ನು ಬೆಳೆಯುವತ್ತ ಆಕರ್ಷಿಸಿ ಪ್ರೇರೆಪಿಸಿದವು.
ಜನಾಕರ್ಷಣೆ: ವಿಶಾಲವಾದ ಕ್ರೀಡಾಂಗಣದಲ್ಲಿ ಮೇಳೈಸಿದ್ದ ಕೃಷಿ ಮೇಳದ ಬಲ ಭಾಗದಲ್ಲಿ ತೋಟಗಾರಿಕೆ ಇಲಾಖೆಯಿಂದ ತಲೆ ಎತ್ತಿದ್ದ ಸ್ವಾತಂತ್ರ್ಯಸೇನಾನಿ ಸುಭಾಷ ಚಂದ್ರ ಬೋಸ್‌ರ ಮರಳು ಕಲಾಕೃತಿ, ಸ್ವಾಮಿ ವಿವೇಕಾನಂದ ಕಂಚಿನ ಪ್ರತಿಮೆ ವಿದ್ಯಾರ್ಥಿ, ಯುವ ಜನರಲ್ಲಿ ದೇಶಪ್ರೇಮ ಕಿಚ್ಚು ಮೂಡಿಸಿದರೆ, ಜಿಲ್ಲೆಯ ಗುಲಾಬಿ ಹೂವುಗಳಿಂದ ಸಿದ್ಧವಾಗಿದ್ದ ಹಂಪಿಯ ಕಲ್ಲಿನ ರಥ ಮೇಳಕ್ಕೆ ಬಂದವರನ್ನು ಆಕರ್ಷಿಸಿದವು.
ಇನ್ನೂ ಕಲ್ಲಂಗಡಿ, ದ್ರಾಕ್ಷಿ, ಕಿತ್ತಾಳೆ, ಹೂವುಕೋಸ್, ಪಪ್ಪಾಯಿ, ಕುಂಬಳಕಾಯಿ ಬಳಸಿ ಕೆತ್ತನೆ ಮಾಡಲಾಗಿದ್ದ ಅಂಬೇಡ್ಕರ್, ಗಾಂಧಿ, ಪೇಜಾವರ ಶ್ರೀ, ವಿರಾಟ್ ಕೊಹ್ಲಿ, ಸರ್ ಎಂ.ವಿಶ್ವರಯ್ಯ, ಭಗತ್‌ಸಿಂಗ್, ಸಿದ್ಧಗಂಗಾಶ್ರೀ, ಮೀನು, ವಿವಿಧ ಪಕ್ಷಿಗಳ ಕಲರವಕ್ಕೆ ರೈತರು, ಮಹಿಳೆಯರು, ವಿದ್ಯಾರ್ಥಿ ಯುವ ಜನತೆ ಹೆಚ್ಚು ಆಕರ್ಷಿತರಾಗಿ ಕಂಡು ಬಂದರು.
ಎಡ ಭಾಗದಲ್ಲಿ ತರಹೇವಾರಿ ಮೀನು, ಅಕ್ಟೇರಿಯಂ, ಹಿಂದೆ ಬಳಸಲಾಗುತ್ತಿದ್ದ ಹಳೆಯ ಕೃಷಿ ಪರಿಕರಗಳು, ಉದ್ಯೋಗ ಖಾತ್ರಿ ಯೋಜನೆ ಉತ್ತೇಜಿಸುವ ಮಾದರಿ ನರೇಗಾ ಗ್ರಾಮ ಹಾಗೂ ಜಮನಾಪಾರಿ ಮೇಕೆ ಕೃಷಿ ಮೇಳದಲ್ಲಿ ಗಮನ ಸೆಳೆದರೆ, ಸಿರಿಧಾನ್ಯ ಆಹಾರ ಪದಾರ್ಥಗಳು, ಕೃಷಿ ಪರಿಕರಗಳು, ಸಮಗ್ರ ಕೃಷಿ ಬೇಸಾಯ ಪದ್ಧತಿಗಳ ಪ್ರಾತ್ಯಕ್ಷಿಕೆಯ ಅನಾವರಣ ರೈತರನ್ನು ಚಕಿತಗೊಳಿಸಿದವು. ರಾಸು, ಎಮ್ಮೆ, ಎತ್ತುಗಳ ಹಾಗೂ ಶ್ವಾನಗಳ ಪ್ರದರ್ಶನ ಮೊದಲ ದಿನದ ಕೃಷಿ ಮೇಳಕ್ಕೆ ವಿಶೇಷ ಮೆರಗು ತಂದುಕೊಟ್ಟವು.
75ಕ್ಕೂ ಹೆಚ್ಚು ಮಳಿಗೆ: ಸಾವಯವ ಸಿರಿಧಾನ್ಯಗಳ ಮೇಳದಲ್ಲಿ ಕೃಷಿ, ರೇಷ್ಮೆ, ತೋಟಗಾರಿಕೆ, ಹೈನುಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಸೇರಿದಂತೆ ರೈತರ ಉಪ ಕಸಬುಗಳ ಮಹತ್ವದ ಕುರಿತು ರೈತರಲ್ಲಿ ಅರಿವು ಮೂಡಿಸಲು 75 ಕ್ಕೂ ಹೆಚ್ಚು ಮಳಿಗಳನ್ನು ತೆರೆಯಲಾಗಿದ್ದು, ವಿಶೇಷವಾಗಿ ಸಿರಿಧಾನ್ಯಗಳ ಪುನಶ್ಚೇತನ ಬಗ್ಗೆ ರೈತರಲ್ಲಿ ಆಸಕ್ತಿ ಮೂಡಿಸುವ ಪ್ರಾತ್ಯಾಕ್ಷಿಕೆಗಳಿಗೆ ಒತ್ತು ಕೊಡಲಾಗಿದೆ.
ಉಳಿದಂತೆ ರೈತರು ಹಿಂದೆ ಕೃಷಿಗೆ ಬಳಸುತ್ತಿದ್ದ ಹಳೆಯ ಪರಿಕರಗಳು, ಅತ್ಯಾಧುನಿಕವಾದ ಕೃಷಿ ಬಳಕೆಯ ಯಂತ್ರೋಪಕರಣಗಳು, ರೇಷ್ಮೆ, ಹೈನುಗಾರಿಕೆ ಹಾಗೂ ತೋಟಗಾರಿಕೆ ಕೃಷಿಗೆ ಸಂಬಂಧಿಸಿದ ಹೊಸ ಆವಿಷ್ಕಾರದ ಕೃಷಿ ಪದ್ಧತಿಗಳ ಬಗ್ಗೆ ಮೇಳದಲ್ಲಿ ರೈತರಿಗೆ ಅರಿವು ಮೂಡಿಸಲಾಗುತ್ತಿದೆ.
ರೇಷ್ಮೆ ಇಲಾಖೆ ರೆಷ್ಮೆಗೂಡಿನ ಕಚ್ಚಾ ಪದಾರ್ಥಗಳಿಂದ ಮಾಡಬಹುದಾದ ಕರಕುಶಲ ವಸ್ತುಗಳು, ಮೀನುಗಾರಿಕೆ ಇಲಾಖೆ ಆಯೋಜಿಸಿದ್ದ ಮೀನು ತಳಿಗಳ ಪ್ರದರ್ಶನ, ಉಳಿದಂತೆ ಜಲ ಮೂಲಗಳ ಸಂರಕ್ಷಣೆ, ಅರಣ್ಯ ಸಂರಕ್ಷಣೆ, ಜೇನು ಕೃಷಿ, ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಬಗೆಗೆ ಹಲವು ಪ್ರಾತ್ಯಾಕ್ಷಿಕೆಗಳು ಗಮನ ಸೆಳೆದರೆ, ವಿಶೇಷವಾಗಿ ಎತ್ತಿನಹೊಳೆ ಯೋಜನೆ ಪ್ರಗತಿ, ಅದರ ಅನುಷ್ಠಾನದ ಕುರಿತು ಕೂಡ ಮೇಳದಲ್ಲಿ ರೈತರಿಗೆ ಅರಿವು ಮೂಡಿಸಿದ್ದು ಗಮನ ಸೆಳೆಯಿತು.
ಮೇಳಕ್ಕೆ ಕಳೆ ತಂದ ಸಿರಿಧಾನ್ಯಗಳ ರಾಶಿ ಪೂಜೆ: ಕೃಷಿ ಮೇಳದ ಭಾಗವಾಗಿ ಕೃಷಿ ಇಲಾಖೆ ಮೇಳದ ಉದ್ಘಾಟನೆಗೂ ಮೊದಲು ಆಯೋಜಿಸಿದ್ದ ರಾಶಿ ಪೂಜೆ ಸಂಕ್ರಾಂತಿ ಸುಗ್ಗಿ ಹಬ್ಬವನ್ನು ನೆನಪಿಸುವಂತಿತ್ತು. ಬೃಹದಾಕಾರವಾಗಿ ರಾಗಿಯನ್ನು ರಾಶಿ ಹಾಕಿ ಅದರ ಸುತ್ತಲೂ ಅವರೆ, ತೊಗರಿ, ಹುರುಳಿ, ಜೋಳ, ನವಣೆ, ಆರ್ಕಾ, ಸಾಮೆ, ಉದುಲು, ಸಜ್ಜೆ ಮತ್ತಿತರ ನವಧಾನ್ಯಗಳಿಂದ ರಾಶಿಯನ್ನು ಸಿಂಗರಿಸಲಾಗಿತ್ತು.
ಮೇಳದ ಉದ್ಘಾಟನೆಗೂ ಮೊದಲು ಸಿರಿಧಾನ್ಯಗಳು ತುಂಬಿದ್ದ ಮಡಿಕೆಗಳನ್ನು ಉದ್ಘಾಟಿಸಲಾಯಿತು. ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸಂಸದ ಬಿ.ಎನ್.ಬಚ್ಚೇಗೌಡ, ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ ರಾಶಿ ಪೂಜೆಯನ್ನು ನೆರವೇರಿಸಿದರು. ಇಡೀ ವೇದಿಕೆ ಸುತ್ತಮುತ್ತ ನವಧ್ಯಾನಗಳ ಮಹತ್ವ ಸಾರುವ ಭಿತ್ತಿಪತ್ರಗಳ ಪ್ರದರ್ಶನ ಎಲ್ಲರ ಕಣ್ಣಿಗೆ ರಾಚುವಂತೆ ಪ್ರದರ್ಶನಗೊಂಡವು.
ಮೇಳಕ್ಕೆ 3000 ಕ್ಕೂ ಹೆಚ್ಚು ರೈತರು: ಎರಡು ದಿನಗಳ ಕೃಷಿ ಮೇಳಕ್ಕೆ ಮೊದಲ ದಿನ ಶನಿವಾರ ರೈತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ಕೃಷಿ ಇಲಾಖೆ ಜಿಲ್ಲೆಯ ಪ್ರತಿ ತಾಲೂಕಿನಿಂದ ರೈತರನ್ನು ಕೆರೆ ತರಲು ವಿಶೇಷವಾಗಿ ಬಸ್ ಸೌಕರ್ಯ ಕಲ್ಪಿಸಲಾಗಿತ್ತು. ಸುಮಾರು 3000 ಕ್ಕೂ ಅಧಿಕ ರೈತರು ಮೇಳದಲ್ಲಿ ಭಾಗವಹಿಸಿ ಸಿರಿಧಾನ್ಯಗಳ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳಿಂದ ಸ್ತ್ರೀಶಕ್ತಿ ಸಂಘಗಳ ಮಹಿಳಾ ಸದಸ್ಯರು ಸಿದ್ಧಪಡಿಸಿ ತಂದಿದ್ದ ಆಹಾರ ಪದಾರ್ಥಗಳನ್ನು ಖುದ್ದು ವೀಕ್ಷಿಸಿದರು.
ರೈತರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃಷಿ ತಜ್ಞರು ನೀಡಿದ ಸಲಹೆ, ಸೂಚನೆಗಳನ್ನು ಆಲಿಸುತ್ತಾ ತಮ್ಮ ಸಂದೇಶಗಳನ್ನು ಪ್ರಶ್ನೆಗಳ ಮೂಲಕ ಕೇಳಿ ರೈತರು ಬಗೆಹರಿಸಿಕೊಂಡರು. ಜಿಲ್ಲೆಯ ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರ, ಗೌರಿಬಿದನೂರು ಗುಡಿಬಂಡೆ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು. ಮೇಳದಲ್ಲಿ ಶಾಲಾ ಮಕ್ಕಳಿಗೆ ಪರಿಸರ, ಜಲ, ಸಂಸ್ಕೃತಿ, ಪ್ರವಾಸಿ ತಾಣಗಳ ಬಗ್ಗೆ ವಿಶೇಷವಾಗಿ ಸ್ಥಳದಲ್ಲಿಯೇ ಚಿತ್ರಕಲಾ ಸ್ಪರ್ಧೆ ಆಯೋಜಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕೃಷಿ ಮೇಳದ ಪ್ರಮುಖ ಆಕರ್ಷಣೆ
* ಫಲಪುಷ್ಪ ಪ್ರದರ್ಶನಲ್ಲಿ ಹಂಪಿ ಕಲ್ಲಿನ ರಥದ ವೈಭವ
* ಮರಳು ಕಲಾಕೃತಿಯಲ್ಲಿ ಅರಳಿದ ಸುಭಾಷ್ ಚಂದ್ರ ಬೋಸ್
* ಮೇಳದಲ್ಲಿ 75 ಕ್ಕೂ ಹೆಚ್ಚು ಮಳಿಗೆಗಳ ಸ್ಥಾಪನೆ
* ಜಿಲ್ಲೆಯ ಪ್ರಗತಿಪರ ರೈತರಿಗೆ ಕೃಷಿ ಇಲಾಖೆಯಿಂದ ಸನ್ಮಾನ
* ಮೇಳದಲ್ಲಿ ಗಮನ ಸೆಳೆದ ರಾಸು, ಶ್ವಾನಗಳ ಪ್ರದರ್ಶನ
* ಘಮಘಮಿಸಿದ ಸಿರಿಧಾನ್ಯ ತರಹೇವಾರಿ ಪದಾರ್ಥಗಳು
* ಕೃಷಿ ಮೇಳಕ್ಕೆ ಬಣ್ಣ ಬಣ್ಣದ ರಂಗೋಲಿ ಮೆರಗು
* ಸಿರಿಧಾನ್ಯಗಳ ಮಹತ್ವ ಸಾರಿದ ಕೃಷಿ ಮೇಳ
ಅಪಸ್ವರ, ಪ್ರತಿಭಟನೆ, ಪರದಾಟ, ಶಿಷ್ಟಾಚಾರ ಉಲ್ಲಂಘನೆ: ಕಳೆದ ಬಾರಿ ಸುಸೂತ್ರವಾಗಿ ನಡೆದ ಕೃಷಿ ಮೇಳ ಈ ಬಾರಿ ಅವ್ಯವಸ್ಥೆಗಳಿಂದ ಕೂಡಿತ್ತು. ವೇದಿಕೆ ಮೇಲೆ ಆಹ್ವಾನಿಸದಿದ್ದಕ್ಕೆ ವೇದಿಕೆ ಎಡಭಾಗದಲ್ಲಿ ಹಲವು ರೈತಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆ 11:30ಕ್ಕೆ ಉದ್ಘಾಟನೆ ಆಗಬೇಕಿದ್ದ ಮೇಳ 1:50ಕ್ಕೆ ಉದ್ಘಾಟನೆಗೊಂಡು ಎರಡೂವರೆ ಗಂಟೆ ವಿಳಂಬಗೊಂಡಿತು.
ಮೇಳಕ್ಕೆ ಆಗಮಿಸಿದ್ದ ರೈತರಿಗೆ ಸಮರ್ಪಕವಾಗಿ ಊಟ, ತಿಂಡಿ ಬಡಿಸದಿದ್ದರಿಂದ ರೈತರು ಪರದಾಡಬೇಕಾಯಿತು. ಮೇಳದಲ್ಲಿ ಅರ್ಹ ರೈತರನ್ನು ಸನ್ಮಾನಿಸದಿದ್ದಕ್ಕೆ ಹಲವು ರೈತರು ಸಂಸದ, ಸಚಿವರ ಎದುರೇ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಮೇಳದ ಕಡೆ ತಲೆ ಹಾಕದ ಜಿಲ್ಲೆಯ ಶಾಸಕರ ವಿರುದ್ಧ ಸಚಿವ ಸುಧಾಕರ್ ಕಿಡಿಕಾರಿದರು.
ಜಿಲ್ಲಾಡಳಿತ ಆಯೊಜಿಸಿದ್ದ ಕೃಷಿ ಮೇಳದಲ್ಲಿ ಜಿಪಂನ ಮಹಿಳಾ ಸದಸ್ಯರ ಬದಲು ವೇದಿಕೆ ಮೇಲೆ ಅವರ ಪತಿಯರು ಕಾರುಬಾರು ಎದ್ದು ಕಾಣುತ್ತಾ ಶಿಷ್ಟಾಚಾರ ಉಲ್ಲಂಘನೆಗೆ ಸಾಕ್ಷಿಯಾದರೆ, ಮೇಳಕ್ಕೆ ತಡವಾಗಿ ಆಗಮಿಸಿ ಸಚಿವರು, ಶಾಸಕರು ಬಹಿರಂಗವಾಗಿ ಕ್ಷಮೆ ಕೋರಿದರು.
* ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.