ಸೋಲು ಪ್ರಯತ್ನಕ್ಕಿರುವ ಇನ್ನೊಂದು ಅವಕಾಶ
Team Udayavani, Feb 17, 2020, 5:04 AM IST
Every day is not Sunday- ಹೌದು ಎಲ್ಲ ದಿನವೂ ಒಂದೇ ರೀತಿ ಇರಬೇಕು ಎಂದೇನಿಲ್ಲ. ಕೆಲವೊಮ್ಮೆ ಸೋಲು, ದುಃಖ ಕಾಡಬಹುದು. ಹಾಗಂತ ಅದೇ ಶಾಶ್ವತ ಅಂತಲ್ಲ. ಅದು ಕಳೆದು ಒಳ್ಳೆಯ ದಿನಗಳು ಬಂದೇ ಬರುತ್ತವೆ. ಎಲ್ಲವನ್ನೂ ಸ್ವೀಕರಿಸುವ ಮನಸ್ಥಿತಿ ನಮ್ಮದಾಗಬೇಕು. ಸೋಲಿಗೆ ಕುಸಿದು ಬೀಳುವುದು ಎಂದರೆ ಪರಿಸ್ಥಿತಿ ಎದುರಿಸುವಲ್ಲಿ ವಿಫಲರಾಗಿದ್ದೇವೆ ಎಂದರ್ಥ
ನಿದ್ದೆ ಬಾರದೆ ಅವನು ಇನ್ನೊಮ್ಮೆ ಮಗ್ಗುಲು ಬದಲಾಯಿಸಿದ. ಅಸಹನೆಯಿಂದ ಕೈ ಚಾಚಿ ಮೊಬೈಲ್ ತೆಗೆದ. ಇನ್ನೂ ಬೆಳಗ್ಗಿನ ಜಾವ 3 ಗಂಟೆ ತೋರಿಸಿತು. “2.30ಕ್ಕೆ ಮಲಗಿದ್ದು, ಇನ್ನೂ ಅರ್ಧ ಗಂಟೆ ಆಯಿತಷ್ಟೆಯಾ?ಸಮಯವೂ ನನ್ನ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ’ ಮನಸ್ಸಿನಲ್ಲೇ ಹೇಳಿಕೊಂಡ. ಇನ್ನು ನಿದ್ದೆ ಹತ್ತಿರ ಸುಳಿಯದು ಎಂದು ಎದ್ದು ಬಾಲ್ಕನಿಯಲ್ಲಿ ಶತಪಥ ಹಾಕತೊಡಗಿದ.
ಅವನ ಜೀವನ ಚೆನ್ನಾಗೇ ಇತ್ತು. ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡಿದ್ದ. ಕಷ್ಟಪಟ್ಟು ಓದಿ ಉತ್ತಮ ಉದ್ಯೋಗ ಪಡೆದಿದ್ದ. ಅನಂತರ ಉದ್ಯೋಗ ಬಿಟ್ಟು ಸ್ವಂತ ಉದ್ಯಮ ಸ್ಥಾಪಿಸಿ ಅನೇಕ ಮಂದಿಗೆ ಉದ್ಯೋಗವನ್ನೂ ನೀಡಿದ್ದ. ಇತ್ತೀಚೆಗೆ ಪರಿಚಿತನೊಬ್ಬ ಕಷ್ಟದಲ್ಲಿದ್ದೇನೆಂದು ಅಂಗಲಾಚಿ ಬೇಡಿದ್ದರಿಂದ ಇವನ ಹೆಸರಿನಲ್ಲಿ ಬ್ಯಾಂಕ್ ಸಾಲ ತೆಗೆದು ಕೊಟ್ಟಿದ್ದ. ಆದರೆ ಕೆಲವೇ ದಿನದಲ್ಲಿ ಪರಿಚಿತ ಹೇಳದೆ ಕೇಳದೇ ಊರು ಬಿಟ್ಟಿದ್ದ. ಸಾಲ ತೀರಿಸುವ ಹೊರೆ ಇವನ ಮೇಲೆ ಬಿತ್ತು.
ಇತ್ತ ಮ್ಯಾನೇಜರ್ ಮೋಸದಿಂದ ಕಂಪೆನಿಯೂ ನಷ್ಟದಲ್ಲಿತ್ತು. ಅದರ ಸಾಲವೂ ಸೇರಿತ್ತು. ದಿನ ಸಾಲಗಾರರು ಮನೆ ಬಾಗಿಲಿಗೆ ಬಂದು ಇವನ ಮರ್ಯಾದೆ ಹರಾಜಾಗುತ್ತಿತ್ತು.ಸಾಲ, ನಂಬಿಕೆ ದ್ರೋಹ ಇವನನ್ನು ಹೈರಾಣಾಗಿಸಿತ್ತು. ಊಟ, ನಿದ್ದೆ ಇಲ್ಲದೆ ಕಂಗಾಲಾಗಿದ್ದ. ಕೆಲವೊಮ್ಮೆ ಶೂನ್ಯವನ್ನೇ ನೋಡುತ್ತಾ ಕಳೆದು ಹೋಗಿ ಬಿಡುತ್ತಿದ್ದ. ಗೆಳೆಯರ ಗುಂಪೆಲ್ಲಾ ಸೇರಿ ಹರಟೆ ಹೊಡೆಯುತ್ತಿದ್ದರೆ ಇವನು ಯಾವುದೋ ಆಲೋಚನೆಯಲ್ಲೇ ಇರುತ್ತಿದ್ದ. ಅವನನ್ನು ಕೆಲವು ದಿನಗಳಿಂದ ಗಮನಿಸುತ್ತಿದ್ದ ಗೆಳೆಯ ಚಿಂತೆಗೆ ಬಿದ್ದ. ಮೊದಲೆಲ್ಲ ಅವನು ಬಹು ಚುರುಕಿನ ಯುವಕ. ಪಾದರಸದಂತೆ ಓಡಾಡಿಕೊಂಡಿದ್ದ. ಸಿಕ್ಕಾಪಟ್ಟೆ ಮಾತನಾಡುತ್ತಿದ್ದ, ಜೋಕ್ ಮಾಡುತ್ತಿದ್ದ. ಹಾಗಿದ್ದವ ಈಗ ಮೌನಕ್ಕೆ ಜಾರಿದ್ದ. ಯಾವುದರಲ್ಲೂ ಆಸಕ್ತಿ ಇರಲಿಲ್ಲ.
ಹೀಗಾದರೆ ಅವನು ಮಾನಸಿಕ ಕ್ಷೋಭೆಗೆ ಒಳಗಾಗಬಹುದು ಎಂದು ತಿರ್ಮಾನಿಸಿದ ಗೆಳೆಯ ಮನ ಪರಿವರ್ತನೆಗೆ ನಿರ್ಧರಿಸಿದ. ಒಂದು ದಿನ ರಜೆಯಲ್ಲಿ ಅವನ ಮನೆಗೆ ತೆರಳಿದ. ಹೊರಗಡೆ ಹೋಗೋಣ ಎಂದ. ಇವನು ಅನ್ಯ ಮನಸ್ಕತೆಯಿಂದ ಹೂಂ ಎಂದು ಪ್ರತಿಕ್ರಿಸಿದ. ಇವನು ಬೈಕ್ ಕೀ ಕೊಟ್ಟು ಹಿಂದಿನ ಸೀಟ್‌ನಲ್ಲಿ ಕುಳಿತ. ಗೆಳೆಯ ಮಾತನಾಡಿಕೊಂಡು ಹೋಗುತ್ತಿದ್ದರೆ ಇವನು ಹೂಂ, ಊಹುಂ ಎಂದಷ್ಟೇ ಪ್ರತಿಕ್ರಿಯಿಸುತ್ತಿದ್ದ. ಕೆಲವೊಮ್ಮೆ ಅದೂ ಇಲ್ಲ.
ಗೆಳೆಯ ಅವನನ್ನು ಕರೆದುಕೊಂಡು ಕಾಡಂಚಿಗೆ ಬಂದಿದ್ದ. ಅದು ಶಿಶಿರ ಋತು. ಗಿಡ ಮರಗಳೆಲ್ಲ ಎಲೆ ಉದುರಿಸಿ ಬೋಳಾಗಿದ್ದವು. ಬಂಡೆಯೊಂದರಲ್ಲಿ ಕುಳಿತ ಮೇಲೆ ಗೆಳೆಯ ಮಾತನಾಡತೊಡಗಿದ, ಹಸುರಿನಿಂದ ನಳನಳಿಸುತ್ತಿದ್ದ ಗಿಡ, ಮರಗಳೆಲ್ಲ ಈಗ ಸೊರಗಿವೆ. ಹಾಗಂತ ಇದು ಅವುಗಳ ಕೊನೆ ಅಲ್ಲ. ಈ ಕಷ್ಟದ ದಿನಗಳನ್ನು ಕಳೆದರೆ ಮತ್ತೆ ಸಮೃದ್ಧಿಯ ದಿನಗಳು ಬರುತ್ತವೆ. ವಸಂತ ಬಂದಾಗ ಚಿಗುರೊಡೆಯುತ್ತವೆ. ನಮ್ಮ ಜೀವನವೂ ಅದೇ ರೀತಿ. ಕಷ್ಟದ ದಿನಗಳು ಬರುತ್ತವೆ. ಹಾಗಂತ ಅದೇ ಕೊನೆಯಲ್ಲ. ಹಿಂದೆ ಹಿರಿಯರು ಹೇಳುತ್ತಿದ್ದಂತೆ ದುಃಖ, ಕಷ್ಟ ಮನುಷ್ಯರಿಗಲ್ಲದೆ ಬಂಡೆ, ಮರಗಳಿಗೆ ಬರುತ್ತವೆಯೇ? ನಿಧಾನವಾಗಿ ಗೆಳೆಯನ ಮಾತುಗಳು ಇವನ ಮನಸ್ಸಿನಾಳಕ್ಕೆ ಇಳಿಯತೊಡಗಿದವು. ಗೆಳೆಯ ಮಾತು ಮುಂದುವರಿಸಿದ, ನೋಡು ಬ್ರೋ. ನೀನು ಎಡವಿ ಬಿದ್ದಿದ್ದಿಯಾ. ಹಾಗಂತ ಇದೇ ಕೊನೆ ಅಂತಲ್ಲ. ಅದನ್ನು ಮೀರಿ ಎದ್ದು ಬರಬೇಕು. ಹಿಂದೆ ಫೀನಿಕ್ಸ್ ಹಕ್ಕಿಯ ಕಥೆ ಕೇಳಿದ್ದಿಯಲ್ಲ? ಅದರಂತೆ ಕಷ್ಟಗಳನ್ನು ಮೆಟ್ಟಿ ಎದ್ದು ಬರಬೇಕು. ನಾವು ಚೆಂಡನ್ನು ನೆಲಕ್ಕೆ ಬಡಿದರೆ ಏನಾಗುತ್ತದೆ ಹೇಳು. ಪುಟಿದೇಳುತ್ತದೆ ತಾನೆ? ಅದರಂತೆ ಇದು. ಈ ಕಷ್ಟಗಳೆಲ್ಲ ನಿನ್ನ ಸಾಮರ್ಥ್ಯಕ್ಕೆ ಒಡ್ಡಿದ ಪರೀಕ್ಷೆ ಅಂದುಕೋ. ಇಷ್ಟಕ್ಕೂ ನೀನು ಯಾವುದೇ ತಪ್ಪು ಮಾಡಿಲ್ಲವಲ್ಲಾ? ಮತ್ಯಾಕೆ ಕೊರಗುತ್ತೀಯಾ? ಇವನು ಆಲೋಚಿಸತೊಡಗಿದ. ಕ್ರಮೇಣ ಮುಖದಲ್ಲಿನ ಚಿಂತೆಯ ಗೆರೆಗಳು ಮರೆಯಾಗತೊಡಗಿತು. ಬಾ ಹೋಗೋಣ ಹೊಸ ಉತ್ಸಾಹದಿಂದ ಎದ್ದುನಿಂತು ಬೈಕ್ ಕೀ ತಗೊಂಡ. ಗೆಳೆಯನ ಮುಖದಲ್ಲಿ ನಗು ಮೂಡಿತು.
ಸೋಲು ಕೊನೆಯಲ್ಲ
ಪ್ರತಿ ಬಾರಿ ಗೆಲುವು, ಯಶಸ್ಸು ನಮ್ಮದಾಗುತ್ತದೆ ಎಂದು ನಿರೀಕ್ಷಿಸುವುದು ಸರಿಯಲ್ಲ. ಆದರೆ ಪ್ರತಿ ಬಾರಿಯೂ ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಭಗವದ್ಗೀತೆಯಲ್ಲಿ ಹೇಳಿದಂತೆ ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಸುಮ್ಮನಿದ್ದು ಬಿಡಬೇಕು. ಅದರ ಫಲಾಫಲದ ನಿರೀಕ್ಷೆಯಲ್ಲಿ ಇರಬಾರದು. ಅತಿಯಾದ ನಿರೀಕ್ಷೆ, ಇತರರೊಂದಿಗಿನ ಹೋಲಿಕೆ ನೋವು ತರುತ್ತದೆ ಎನ್ನುವುದು ನೆನಪಿರಲಿ.
ಸಂಕೀರ್ಣಗೊಳಿಸಬೇಡಿ
ಜೀವನ ಮತ್ತು ಬಂಡಿ ಮಧ್ಯೆ ಬಹಳಷ್ಟು ಸಾಮ್ಯತೆ ಇದೆ. ಚಕ್ರದ ಒಂದು ಭಾಗ ಒಮ್ಮೆ ಮೇಲಿದ್ದರೆ ಇನ್ನೊಮ್ಮೆ ಕೆಳಗೆ ಬರಲೇ ಬೇಕು. ಹಾಗಂತ ಚಕ್ರ ನಿಶ್ಚಲವಾಗಿದ್ದರೆ ಬಂಡಿ ಮುಂದೆ ಸಾಗದು. ಅದೇ ರೀತಿ ಜೀವನವೂ. ಸಿಹಿ, ಕಹಿ ಅನುಭವಗಳ ಮಿಶ್ರಣಗಳಿಂದ ಕೂಡಿರುವುದೇ ಜೀವನ. ಇಲ್ಲಿ ಯಾವ ಭಾವವೂ ಶಾಶ್ವತವಲ್ಲ. ಬಂದದ್ದನ್ನು ಸಮಚಿತ್ತದಿಂದ ಸ್ವೀಕರಿಸುವ ಮನಸ್ಸು ನಮ್ಮದಾದರೆ ಜೀವನ ಸುಲಭ. ಇಲ್ಲದ ಯೋಚನೆ, ಋಣಾತ್ಮಕ ಚಿಂತನೆಗಳಿಂದ ಸರಳ ಜೀವನವನ್ನು ನಾವೇ ಸಂಕೀರ್ಣಗೊಳಿಸುತ್ತೇವಷ್ಟೆ.
-ರಮೇಶ್ ಬಳ್ಳಮೂಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.