ಯುಗಾದಿಗೆ “ಸಲಗ’ ರಿಲೀಸ್
ನಿರೀಕ್ಷೆ ಹುಟ್ಟಿಸಿದ ವಿಜಯ್ ಚಿತ್ರ
Team Udayavani, Feb 18, 2020, 7:06 AM IST
ವಾರದಿಂದ ವಾರಕ್ಕೆ ಸಾಕಷ್ಟು ಹೊಸಬರ ಸಿನಿಮಾಗಳು ಬಿಡುಗಡೆಯಾಗುತ್ತಲೇ ಇದೆ. ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೂ ಇವೆ. ಆದರೆ, ಸ್ಟಾರ್‌ಗಳ ಸಿನಿಮಾಗಳು ಯಾವಾಗ ಬರುತ್ತದೆ ಎಂಬ ಪ್ರಶ್ನೆಯೂ ಅಭಿಮಾನಿಗಳಲ್ಲಿದೆ. ಈಗ ಅದಕ್ಕೆ ಉತ್ತರ ಸಿಗುವ ಸಮಯ ಬಂದಿದೆ. ಮಾರ್ಚ್‌ನಿಂದಲೇ ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯಾಗಲಿವೆ. ಅದು “ಸಲಗ’ ಮೂಲಕ ಎನ್ನಬಹುದು.
ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ “ಸಲಗ’ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಅನೇಕರಿಗಿದೆ. ಅದಕ್ಕೆ ಕಾರಣ ಚಿತ್ರದ ಹಾಡು, ಟೀಸರ್, ಮೇಕಿಂಗ್ ವಿಡಿಯೋ ಹಿಟ್ ಆಗಿರುವುದು. ಈಗ “ಸಲಗ’ ಚಿತ್ರದ ಬಿಡುಗಡೆ ಬಹುತೇಕ ಪಕ್ಕಾ ಆಗಿದೆ. ಗಾಂಧಿನಗರದ ಮೂಲಗಳ ಪ್ರಕಾರ, ಯುಗಾದಿಗೆ ಚಿತ್ರ ಬಿಡುಗಡೆಯಾಗುತ್ತಿದೆ.
ಈ ಮೂಲಕ ಹೊಸ ವರ್ಷದಲ್ಲಿ ಸ್ಟಾರ್ ಸಿನಿಮಾಗಳ ಅಕೌಂಟ್ ಓಪನ್ ಆಗುತ್ತಿದೆ ಎನ್ನಬಹುದು. “ಸಲಗ’ ಚಿತ್ರದ ಮೂಲಕ ವಿಜಯ್ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದು, ಮಾಸ್ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಂಡರ್‌ವರ್ಲ್ಡ್ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾ ಮಾಸ್ ಪ್ರಿಯರ ಮನಗೆಲ್ಲುವ ವಿಶ್ವಾಸ ಚಿತ್ರತಂಡಕ್ಕಿದೆ.
ಚಿತ್ರದಲ್ಲಿ ಧನಂಜಯ್ ಕೂಡಾ ಪ್ರಮುಖ ಪಾತ್ರ ಮಾಡಿದ್ದು, ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ರಗಡ್ ಲೊಕೇಶನ್‌ನಿಂದ ಹಿಡಿದು ಮಂಗಳೂರಿನಲ್ಲೂ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕಾಗಿ ಸೆಟ್‌ಗಳನ್ನು ಕೂಡಾ ಹಾಕಲಾಗಿದ್ದು, ಚಿತ್ರೀಕರಣ ಮಾಡಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿವೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತವಿದೆ. ಚಿತ್ರವನ್ನು ಕೆ.ಪಿ.ಶ್ರೀಕಾಂತ್ ನಿರ್ಮಿಸಿದ್ದಾರೆ.