ಸಂಗಮ-ಯುನೆಸ್ಕೋ ತಾಣ ಮುಳುಗಡೆ
Team Udayavani, Feb 18, 2020, 2:43 PM IST
ಸಾಂದರ್ಭಿಕ ಚಿತ್ರ
ಬಾಗಲಕೋಟೆ: ನದಿಗಳ ನಿರ್ವಹಣೆ ವಿಷಯದಲ್ಲಿ ನಿರ್ಲಕ್ಷ್ಯ ಮುಂದುವರಿದರೆ ವಿಶ್ವ ಪಾರಂಪರಿಕ ಪ್ರವಾಸಿ ತಾಣ ಪಟ್ಟದಕಲ್ಲ, ರಾಷ್ಟ್ರೀಯ ಸ್ಮಾರಕಗಳಾದ ಐಹೊಳೆ ಹಾಗೂ ಕೂಡಲಸಂಗಮ ಸಂಪೂರ್ಣ ನೀರಿನಲ್ಲಿ ಮುಳುಗಲಿವೆ.
ಹೌದು, ಇಂತಹ ಆತಂಕಕಾರಿ ಹಾಗೂ ನದಿಗಳ ನಿರ್ವಹಣೆ ಕುರಿತು ಕೃಷ್ಣಾ ಭಾಗ್ಯ ಜಲ ನಿಗಮದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರೊಬ್ಬರು, ಸುಮಾರು 14 ದಿನಗಳ ಕಾಲ ನಿರಂತರ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಏನಿದು ವರದಿ: ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಕಚೇರಿಯ ತಾಂತ್ರಿಕ ಸಹಾಯಕರಾಗಿರುವ ವಿಜಯಪುರದ ಸುಧೀರ ಸಜ್ಜನ (ಹಿಂದೆ ಡೋಣಿ ನದಿ ಪ್ರವಾಹ ಕುರಿತು ಸಂಶೋಧನಾ ಅಧ್ಯಯನ ವರದಿ ಸಲ್ಲಿಸಿದ್ದರು), ಕಳೆದ ಆಗಸ್ಟ್ 5ರಿಂದ 22ರವರೆಗೆ ಉಂಟಾದ ಭೀಕರ ಪ್ರವಾಹ ಕುರಿತು ವಿಸ್ತೃತ ಅಧ್ಯಯನ ವರದಿಯನ್ನು ಡಿಸೆಂಬರ್ 11ರಂದು (ಆಂಗ್ಲ ಭಾಷೆಯಲ್ಲಿ) ಕೆಬಿಜೆಎನ್‌ಎಲ್‌ಗೆ ಸಲ್ಲಿಸಿದ್ದಾರೆ. ಒಟ್ಟು 10 ವಿಭಾಗ ಒಳಗೊಂಡ ಈ ವರದಿಯಲ್ಲಿ ಕೂಡಲಸಂಗಮ, ಐಹೊಳೆ ಹಾಗೂ ಪಟ್ಟದಕಲ್ಲ ಪ್ರವಾಸಿ ತಾಣಗಳಲ್ಲಿ ಪ್ರವಾಹ ಉಂಟಾಗಲು ಏನು ಕಾರಣ, ಇದಕ್ಕೆ ಪರಿಹಾರವೇನು ಎಂಬ ಅಧ್ಯಯನ ವರದಿಯಲ್ಲಿದೆ.
ಎಚ್ಚರಿಕೆ ಅಗತ್ಯ: ಜಿಲ್ಲೆಯ ಕೂಡಲಸಂಗಮ, ಐಹೊಳೆ ಹಾಗೂ ಪಟ್ಟದಕಲ್ಲ ಪ್ರವಾಸಿ ತಾಣಗಳು, ಪ್ರವಾಹದಿಂದ ಅಕ್ಷರಶಃ ನಲುಗಿದ್ದವು. ಮೂರು ತಾಣಗಳು, ಸುಮಾರು ತಿಂಗಳ ಕಾಲ ನೀರಿನಲ್ಲಿ ನಿಂತಿದ್ದವು. ಅದರಲ್ಲೂ ಪಟ್ಟದಕಲ್ಲನಲ್ಲಿ ಸುಮಾರು 287 ಜನ ಪ್ರವಾಹದಿಂದ ನಡು ನೀರಿನಲ್ಲಿ ಸಿಲುಕಿ, ಅಂತಾರಾಷ್ಟ್ರೀಯ ಸ್ಮಾರಕಗಳ ಮೇಲೇರಿ ಕುಳಿತು ಜೀವ ರಕ್ಷಣೆ ಮಾಡಿಕೊಂಡಿದ್ದರು. ಸುಧೀರ ಸಜ್ಜನ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಪ್ರವಾಹ ಕುರಿತು ಅಧ್ಯಯನ ನಡೆಸಿದ್ದು, ನದಿ ಪಾತ್ರದಿಂದ 20 ಮೀಟರ್ ಎತ್ತರದಲ್ಲಿರುವ ಪ್ರವಾಸಿ ತಾಣಗಳಿಗೆ ನೀರು ನುಗ್ಗಿದ್ದು ಏಕೆ ಎಂಬ ಅಂಶದ ಮೇಲೆ ಪ್ರಮುಖವಾಗಿ ಬೆಳಕು ಚೆಲ್ಲಿದ್ದಾರೆ.
ನದಿ ನಿರ್ವಹಣೆ -ಹೂಳು-ಬ್ಯಾರೇಜ್ ಗೇಟ್‌ಕಾರಣ: ಪ್ರವಾಹದ ವೇಳೆ ಅತಿಹೆಚ್ಚು ರಾಷ್ಟ್ರೀಯ ಸ್ಮಾರಕಗಳು ನೀರಲ್ಲಿ ಮುಳುಗಲು ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ತುಂಬಿರುವ ಹೂಳು, ಎರಡು ಪ್ರಮುಖ ಸೇತುವೆಗಳು ಕಾರಣವಾಗಿವೆ. ನಾರಾಯಣಪುರ ಜಲಾಶಯದ ನೀರು, 60 ಕಿ.ಮೀವರೆಗೆ ಹಿನ್ನೀರು ನಿಲ್ಲುತ್ತದೆ. ಅಲ್ಲದೇ ಮುದ್ದೇಬಿಹಾಳ ತಾಲೂಕಿನ ತಂಗಡಗಿ (ಸಂಗಮದಿಂದ 5 ಕಿ.ಮೀ ದೂರವಿದೆ) ಮತ್ತು ಹುನುಗಂದ ತಾಲೂಕಿನ ಬೆಳಗಲ್ ಬಳಿ ಪ್ರಮುಖ ಸೇತುವೆಗಳು. ಈ ಸೇತುವೆ ತೂಗುಗಳು ಕೇವಲ ನಾಲ್ಕು ಮೀಟರ್ ಎತ್ತರ ಇವೆ. ಇವು ಇಷ್ಟೊಂದು ಕೆಳಮಟ್ಟದಲ್ಲಿರುವುದರಿಂದ ನದಿ, ಜಲಾಯಶ ಹಿನ್ನೀರ ಪಾತ್ರದಲ್ಲಿ ಅತಿಹೆಚ್ಚು ಹೂಳು ತುಂಬಿಕೊಳ್ಳಲು ಕಾರಣವಾಗಿವೆ ಎಂಬುದು ಅಧ್ಯಯನದಲ್ಲಿ ಉಲ್ಲೇಖೀಸಲಾಗಿದೆ.
ಮುನ್ನೆಚ್ಚರಿಕೆ ಅಗತ್ಯ: ಮಲಪ್ರಭಾ ಅಥವಾ ಕೃಷ್ಣಾ ನದಿಗೆ ಎಷ್ಟೇ ಪ್ರವಾಹ ಬಂದರೂ ಕೂಡಲಸಂಗಮ, ಐಹೊಳೆ, ಪಟ್ಟದಕಲ್ಲ ಗ್ರಾಮದೊಳಗೆ ನೀರು ನುಗ್ಗುವಂತಹ ಪರಿಸ್ಥಿತಿ ಈ ಹಿಂದೆ ಇರಲಿಲ್ಲ. ಈಗ ಮಲಪ್ರಭಾ ನದಿಗೆ 40 ಸಾವಿರ ಕ್ಯೂಸೆಕ್ ನೀರು ಬಂದರೂ ಐಹೊಳೆ, ಪಟ್ಟದಕಲ್ಲು ಗ್ರಾಮಕ್ಕೆ ನೀರು ನುಗ್ಗಲು ಪ್ರಮುಖ ಕಾರಣಗಳನ್ನು ಎಂಜಿನಿಯರ್ ಸುಧೀರ ಸಜ್ಜನ, ತಮ್ಮ ವಿಸ್ತೃತ ವರದಿಯಲ್ಲಿ ಕಂಡು ಹಿಡಿದಿದ್ದಾರೆ. ಇದಕ್ಕೆ ಪರಿಹಾರಗಳೇನು ಎಂಬುದನ್ನೂ ಸಜ್ಜನ ಅವರು ವರದಿಯಲ್ಲಿ ಉಲ್ಲೇಖೀಸಿದ್ದಾರೆ. ನದಿಗಳ ಒಡಲಲ್ಲಿ ನಿರ್ಮಿಸುವ ಬ್ಯಾರೇಜ್, ಸೇತುವೆಗಳ ನೀಲನಕ್ಷೆ ಬದಲಾಗಬೇಕು. ಪ್ರವಾಹ ಬಂದಾಗ ಬ್ಯಾರೇಜ್, ಜಲಾಶಯಗಳ ಗೇಟ್‌ಗಳನ್ನು ಪೂರ್ಣ ಮಟ್ಟದಲ್ಲಿ ಎತ್ತಿದಾಗ ಹೂಳು ಸಹಿತ ರಭಸವಾಗಿ ಹರಿದು ಮುಂದಕ್ಕೆ ಹೋಗುತ್ತದೆ ಎಂಬಂತಹ ಸಾಮಾನ್ಯ ನಿರ್ವಹಣೆ ಅಂಶಗಳು ವರದಿಯಲ್ಲಿವೆ. ಒಟ್ಟಾರೆ, ನದಿಗಳ ನಿರ್ವಹಣೆ, ಬ್ಯಾರೇಜ್, ಸೇತುವೆಗಳು ಹೂಳು ಹಿಡಿದಿಟ್ಟುಕೊಳ್ಳುವ ಸ್ಥಿತಿಯಲ್ಲಿರದೇ ಎಚ್ಚರಿಕೆ ವಹಿಸಬೇಕಿದೆ.
ಇಲ್ಲದಿದ್ದರೆ ಮುಂದಿನ ಹತ್ತಾರು ವರ್ಷಗಳಲ್ಲಿ ಈ ಅಂತರ್ ರಾಷ್ಟ್ರೀಯ, ರಾಷ್ಟ್ರೀಯ ಸ್ಮಾರಕಗಳು ನೀರಿನಲ್ಲಿ ಮುಳುಗಿ ಹೋಗುವ ಆತಂಕವನ್ನು ಎಂಜಿನಿಯರ್ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಕಾದು ನೋಡಬೇಕು.
-ಎಸ್.ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.