ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು
Team Udayavani, Feb 19, 2020, 6:50 AM IST
ಬ್ರಿಸºನ್: ಇನ್ನೆರಡು ದಿನಗಳಲ್ಲಿ ಆರಂಭವಾಗಲಿರುವ ಐಸಿಸಿ ವನಿತಾ ಟಿ20 ವಿಶ್ವಕಪ್ ಕೂಟಕ್ಕೆ ಭಾರತೀಯ ವನಿತೆಯರು ಉತ್ತಮ ರೀತಿಯಲ್ಲಿ ಸಜ್ಜುಗೊಂಡಿದ್ದಾರೆ. ಮಂಗಳವಾರ ನಡೆದ ಅಲ್ಪ ಮೊತ್ತದ ಅಭ್ಯಾಸ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಎರಡು ರನ್ನುಗಳ ರೋಚಕ ಗೆಲುವು ಒಲಿಸಿಕೊಂಡ ಭಾರತ ವಿಶ್ವಕಪ್ ಸೆಣಸಾಟಕ್ಕೆ ಸಿದ್ಧವಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟಿಗೆ 107 ರನ್ ಪೇರಿಸಿತ್ತು. ಇದಕ್ಕುತ್ತರವಾಗಿ ವೆಸ್ಟ್‌ಇಂಡೀಸ್ 7 ವಿಕೆಟಿಗೆ 105 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಶ್ರೀಲಂಕಾ, ಆಸೀಸ್‌ಗೆ ಜಯ
ದಿನದ ಇನ್ನೆರಡು ಪಂದ್ಯಗಳಲ್ಲಿ ಶ್ರೀಲಂಕಾವು ಇಂಗ್ಲೆಂಡ್ ತಂಡವನ್ನು 10 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದರೆ ಆಸ್ಟ್ರೇಲಿಯವು ದಕ್ಷಿಣ ಆಫ್ರಿಕಾ ವಿರುದ್ಧ 4 ವಿಕೆಟ್‌ಗಳಿಂದ ಜಯ ಸಾಧಿಸಿತು. ಇಂಗ್ಲೆಂಡ್ ತಂಡವು 9 ವಿಕೆಟಿಗೆ 122 ರನ್ ಪೇರಿಸಿದರೆ ಶ್ರೀಲಂಕಾ ತಂಡವು ಯಾವುದೇ ವಿಕೆಟ್ ಕಳೆದುಕೊಳ್ಳದೇ 12.3 ಓವರ್‌ಗಳಲ್ಲಿ 123 ರನ್ ಪೇರಿಸಿ ಜಯಭೇರಿ ಬಾರಿಸಿತು. ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ 6 ವಿಕೆಟಿಗೆ 147 ರನ್ನಿಗೆ ಉತ್ತರವಾಗಿ ಆಸ್ಟ್ರೇಲಿಯವು 19.3 ಓವರ್‌ಗಳಲ್ಲಿ 6 ವಿಕೆಟಿಗೆ 150 ರನ್ ಗಳಿಸಿ ವಿಜಯೋತ್ಸವ ಆಚರಿಸಿತು.
ಹಠಾತ್ ಕುಸಿತ
ಭಾರತ ವಿರುದ್ದ ಜಯ ಸಾಧಿಸಲು ಸುಲಭ ಸವಾಲು ಪಡೆದ ವೆಸ್ಟ್ ಇಂಡೀಸ್ ಉತ್ತಮ ರೀತಿಯಲ್ಲಿ ಆಟ ಆರಂಭಿಸಿತು. ಮೊದಲ 13 ಓವರ್ ಮುಗಿದಾಗ ತಂಡ ಕೇವಲ ಒಂದು ವಿಕೆಟಿಗೆ 57 ರನ್ ಪೇರಿಸಿ ಉತ್ತಮ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದ ಲೀ-ಆ್ಯನ್ ಕಿರ್ಬಿ ಅವರನ್ನು ಕ್ಲೀನ್‌ಬೌಲ್ಡ್ ಬಲೆಗೆ ಬೀಳಿಸಿದ ದೀಪ್ತಿ ಶರ್ಮ ವಿಂಡೀಸ್‌ಗೆ
ಪ್ರಬಲ ಹೊಡೆತವಿಕ್ಕಿದರು. ಈ ಆಘಾತದಿಂದ ತಂಡ ಕುಸಿಯಲು ಆರಂಭಿಸಿತು.
ಕಿರ್ಬಿ 41 ಎಸೆತಗಳಿಂದ 42 ರನ್ ಸಿಡಿಸಿದ್ದರು. ಅವರ ವಿಕೆಟ್ ಪತನಗೊಳ್ಳುತ್ತಲೇ ಕುಸಿದ ವಿಂಡೀಸ್ 17ನೇ ಓವರಿನಲ್ಲಿ 67 ರನ್ನಿಗೆ 5 ವಿಕೆಟ್ ಕಳೆದುಕೊಂಡಿತ್ತು. ಅಂದರೆ 10 ರನ್ ಅಂತರದಲ್ಲಿ ತಂಡದ 4 ವಿಕೆಟ್ ಉರುಳಿದ್ದವು. ಹೇಲೆ ಮ್ಯಾಥ್ಯೂಸ್ (25) ಮತ್ತು ಚಿನೆಲೆ ಹೆನ್ರಿ (17) 19ನೇ ಓವರಿನಲ್ಲಿ ಮೂರು ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ್ದರಿಂದ ವಿಂಡೀಸ್ ಗೆಲ್ಲಲು ಕೊನೆಯ 6 ಎಸೆತಗಳಲ್ಲಿ 11 ರನ್ ಗಳಿಸಬೇಕಿತ್ತು. ಹೆನ್ರಿ ಒಂದು ಬೌಂಡರಿ ಬಾರಿಸಿದರೆ ನಾಲ್ಕನೇ ಎಸೆತದಲ್ಲಿ ಮ್ಯಾಥ್ಯೂಸ್ ಔಟಾದರು.
ಅಂತಿಮ ಎಸೆತದಲ್ಲಿ 3 ರನ್ ಬೇಕಿತ್ತು. ಆದರೆ ಹೆನ್ರಿ ಔಟಾಗುವುದರೊಂದಿಗೆ ಭಾರತ ಗೆಲುವು ಆಚರಿಸಿತು. ಬಿಗು ದಾಳಿ ಸಂಘಟಿಸಿದ ಪೂನಂ ಯಾದವ್ 20 ರನ್ನಿಗೆ 3 ವಿಕೆಟ್ ಕಿತ್ತು ಮಿಂಚಿದರು.
ಈ ಮೊದಲು ಭಾರತದ ಅಗ್ರ ಕ್ರಮಾಂಕದ ಆಟಗಾರ್ತಿಯರು ನೀರಸವಾಗಿ ಆಡಿದ್ದರಿಂದ ಭಾರತ 3.1 ಓವರ್ ತಲುಪುತ್ತಲೇ 17 ರನ್ನಿಗೆ 3 ವಿಕೆಟ್ ಕಳೆದುಕೊಂಡಿತ್ತು. ಜೆಮಿಮಾ ರಾಡ್ರಿಗಸ್ ರನ್ ಖಾತೆ ತೆರೆಯಲು ವಿಫಲರಾದರೆ ಸ್ಮತಿ ಮಂದನಾ 4 ರನ್ ಗಳಿಸಲಷ್ಟೇ ಶಕ್ತರಾದರು. ಆಬಳಿಕವೂ ರನ್ ಗಳಿಸಲು ಒದ್ದಾಡಿದ ಭಾರತ 11.2 ಓವರ್ ತಲುಪಿದಾಗ 52 ರನ್ನಿಗೆ 5 ವಿಕೆಟ್ ಕಳೆದುಕೊಂಡಿತ್ತು.
ಬೌಲರ್‌ಗಳಾದ ದೀಪ್ತಿ ಮತ್ತು ಪಾಂಡೆ ಅವರ ಉಪಯುಕ್ತ ಆಟದಿಂ ದಾಗಿ ಭಾರತದ ಮೊತ್ತ 100ರ ಗಡಿ ದಾಟುವಂತಾಯಿತು. 24 ರನ್ ಗಳಿಸಿದ ಪಾಂಡೆ ಅಜೇಯರಾಗಿ ಉಳಿದರು.
ಸಂಕ್ಷಿಪ್ತ ಸ್ಕೋರು
ಭಾರತ ವನಿತೆಯರು: 20 ಓವರ್‌ಗಳಲ್ಲಿ 8 ವಿಕೆಟಿಗೆ 107 (ಶಿಖಾ ಪಾಂಡೆ 24 ಔಟಾಗದೆ, ಎ. ಮೊಹಮ್ಮದ್ 16ಕ್ಕೆ 2); ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 7 ವಿಕೆಟಿಗೆ 105 (ಲೀ-ಆ್ಯನ್ ಕಿರ್ಬಿ 42, ಪೂನಂ ಯಾದವ್ 20ಕ್ಕೆ 3).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.