ಸ್ತ್ರೀ ಸಬಲಿಕರಣಕ್ಕೆ ಸರ್ಕಾರ ಒತ್ತು
Team Udayavani, Feb 20, 2020, 3:00 AM IST
ಕೋಲಾರ: ಪ್ರತಿ ಗ್ರಾಮ ಪಂಚಾಯ್ತಿಗೊಂದು ಮಹಿಳಾ ಒಕ್ಕೂಟ ರಚಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರ್ಥಿಕ ಸೌಲಭ್ಯ ಒದಗಿಸುವ ಮೂಲಕ ಸ್ತ್ರೀಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಜಿಪಂ ಸಂಯೋಜಕ ಎಸ್.ಸುಂದರೇಶ್ ತಿಳಿಸಿದರು. ತಾಲೂಕಿನ ಕುರಗಲ್ ಗ್ರಾಪಂನಲ್ಲಿ ಜಿಪಂನಿಂದ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ ರಚನೆಯಡಿ ತಾಲೂಕಿನ 18ನೇ ಮಹಿಳಾ ಒಕ್ಕೂಟದ ರಚನೆ ಹಾಗೂ ಜಾಗೃತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆಯರ ಸಬಲೀಕರಣವಾದರೆ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬ ಸತ್ಯ ಅರಿತೇ ಸರ್ಕಾರಗಳು ನಿಮ್ಮ ಆರ್ಥಿಕ ಬಲವರ್ಧನೆಗೆ ಒತ್ತು ನೀಡುತ್ತಿವೆ ಎಂದ ಅವರು, ಹಳ್ಳಿಯ ಪ್ರತಿ ಮನೆಯ ಮಹಿಳೆಯೂ ಸದಸ್ಯತ್ವ ಹೊಂದುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು.
ಗ್ರಾಪಂ ವ್ಯಾಪ್ತಿಯಲ್ಲಿನ 35 ರಿಂದ 50 ಮಹಿಳಾ ಸ್ವಸಹಾಯ ಸಂಘಗಳನ್ನು ಒಗ್ಗೂಡಿಸಿ ಒಕ್ಕೂಟ ರಚಿಸುವ ಮೂಲಕ ಅವರಿಗೆ ಕನಿಷ್ಠ 10 ಲಕ್ಷದಿಂದ 20 ಲಕ್ಷ ರೂ.ವರೆಗೂ ಬಂಡವಾಳವನ್ನು ಸರ್ಕಾರವೇ ನೀಡಲಿದೆ. ಇದಕ್ಕೆ ವಾರ್ಷಿಕ ಶೇ.12 ಬಡ್ಡಿ ವಿಧಿ ಸಲಾಗುವುದು ಎಂದು ಹೇಳಿದರು.
ಗದಗ ಜಿಲ್ಲೆಯೇ ರಾಜ್ಯಕ್ಕೆ ಮಾದರಿ: ಅದೇ ರೀತಿ ಮಹಿಳೆಯರ ಚಟುವಟಿಕೆಯಾಧಾರಿತ ಕಾರ್ಯಗಳಿಗೆ ಸಾಲ ನೀಡುತ್ತಿದ್ದು, ಕಳೆದ ಐದು ವರ್ಷಗಳ ಹಿಂದೆ ಗದಗದಲ್ಲಿ ಮಹಿಳಾ ಒಕ್ಕೂಟ ರಚಿಸಿ 20 ಲಕ್ಷ ನೆರವು ಪಡೆದ ಒಕ್ಕೂಟಗಳು 5 ಕೋಟಿ ರೂ. ವಹಿವಾಟು ನಡೆಸುತ್ತಿವೆ ಎಂದು ತಿಳಿಸಿ ಗದಗ ಜಿಲ್ಲೆ ಮಾದರಿಯಾಗಿದೆ ಎಂದರು.
ಸುತ್ತುನಿಧಿ: ಪ್ರತಿ ತಿಂಗಳ ವಸೂಲಿಯನ್ನೂ ಮತ್ತೆ ಸಾಲವಾಗಿ ನೀಡಬಹುದಾಗಿದೆ. ಈ ನಡುವೆ ಹೊಸದಾಗಿ ರಚನೆಯಾಗುವ ಪ್ರತಿ ಸಂಘಕ್ಕೆ ಒಮ್ಮೆಲೆಗೆ 15 ಸಾವಿರ ರೂ. ಸುತ್ತುನಿಧಿಯನ್ನು ಸರ್ಕಾರವೇ ನೀಡುತ್ತದೆ ಎಂದು ವಿವರಿಸಿದರು.
ಹೆಣ್ಣು ಸಬಲವಾದ್ರೆ ಆರ್ಥಿಕ ಬಲ: ಮಹಿಳಾ ಸಂಘಗಳು ಸಾಲಕ್ಕಾಗಿ ಅಲೆದಾಟ ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಯೋಜನೆ ರೂಪಿಸಿದ್ದು, ಹೆಣ್ಣು ಸಬಲಳಾದರೆ ಮಾತ್ರ ಇಡೀ ಕುಟುಂಬ ಆರ್ಥಿಕವಾಗಿ ಬಲಗೊಳ್ಳುತ್ತದೆ ಎಂಬ ಪರಿಕಲ್ಪನೆಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಚೌಡಪ್ಪ ಮಾತನಾಡಿ, ಸರ್ಕಾರ ಮಾತ್ರವಲ್ಲ, ಸಹಕಾರ ಸಂಘಗಳು ಸಹಾ ಮಹಿಳೆಯರಿಗೆ ಧೈರ್ಯದಿಂದ ಸಾಲ ನೀಡಲು ಮುಂದೆ ಬರುತ್ತಿವೆ. ಕಾರಣ ಮಹಿಳೆಯರು ಸಾಲ ಪಾವತಿ ಮತ್ತು ಪಡೆದ ಸಾಲದ ಹಣದ ಸದ್ಬಳಕೆ ಮೂಲಕ ಬದುಕು ರೂಪಿಸಿಕೊಳ್ಳುತ್ತಿರುವುದೇ ಆಗಿದೆ ಎಂದರು.
ಪಿಡಿಒ ಮುನಿರಾಜು ಮಾತನಾಡಿ, ಮಹಿಳಾ ಸಂಘಗಳು ಒಕ್ಕೂಟವಾಗಿ ಬಲಗೊಂಡು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು, ಆರ್ಥಿಕವಾಗಿ ಬಲಗೊಳ್ಳಲು ಉದ್ಯೋಗಾಧಾರಿತ ಚಟುವಟಿಕೆ ಆರಂಭಿಸಿ ಉತ್ತಮ ಬದುಕುರೂಪಿಸಿಕೊಳ್ಳಬೇಕು ಎಂದು ಹೇಳಿದರು. ಗ್ರಾಪಂ ಸದಸ್ಯರಾದ ಮುರಳಿಮೋಹನ್, ರತ್ನಮ್ಮ, ರಮೇಶ್, ಶ್ರೀನಿವಾಸ್, ಮುಖಂಡರಾದ ಚೌಡಪ್ಪ, ಸುರೇಶ್, ಜಿಪಂನ ಅಕರ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.