ಸುಸಜ್ಜಿತ ಕಟ್ಟಡವಿದ್ದರೂ 3 ವರ್ಷಗಳಿಂದ ಬೀಗ
ಈದು ಬಿ ಆರೋಗ್ಯ ಉಪಕೇಂದ್ರ
Team Udayavani, Feb 20, 2020, 6:08 AM IST
ಈದು ಗ್ರಾ.ಪಂ. ವ್ಯಾಪ್ತಿಯ ಪಲ್ಕೆಯಲ್ಲಿರುವ ಹೊಸ್ಮಾರು ಈದು ಬಿ. ಪ್ರಾಥಮಿಕ ಉಪಕೇಂದ್ರ ನಿರುಪಯುಕ್ತವಾಗಿ ಉಳಿದಿದೆ. ಉತ್ತಮ ಸ್ಥಿತಿಯಲ್ಲಿಯೇ ಇದ್ದ ಉಪಕೇಂದ್ರ ಮತ್ತೆ ಮೊದಲಿನಂತಾಗಬೇಕಾಗಿದೆ.
ಬಜಗೋಳಿ: ಹಲವು ಕಡೆಗಳಲ್ಲಿ ಆರೋಗ್ಯ ಉಪಕೇಂದ್ರಗಳಿಗೆ ಸುಸಜ್ಜಿತ ವ್ಯವಸ್ಥೆ, ಕಟ್ಟಡದ ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೆ ಈದು ಗ್ರಾ.ಪಂ. ವ್ಯಾಪ್ತಿಯ ಪಲ್ಕೆಯಲ್ಲಿರುವ ಹೊಸ್ಮಾರು ಈದು ಬಿ. ಪ್ರಾಥಮಿಕ ಉಪಕೇಂದ್ರದಲ್ಲಿ ಎಲ್ಲವೂ ಇದ್ದರೂ ಪ್ರಯೋಜನಕ್ಕಿಲ್ಲವಾಗಿದೆ. ಇಲ್ಲಿಗೆ ಸಿಬಂದಿ ಬರದೇ ಇರುವುದರಿಂದ ಕಟ್ಟಡಕ್ಕೆ ಬೀಗ ಹಾಕಿದ್ದು ಕಟ್ಟಡ, ವ್ಯವಸ್ಥೆಗಳು ನಿರುಪಯುಕ್ತವಾಗಿವೆ. ಈ ಉಪಕೇಂದ್ರ ಬಾಗಿಲು ಹಾಕಿದ್ದರಿಂದ ಸಾರ್ವಜನಿಕರು ಚಿಕಿತ್ಸೆಗೆ ಬೇರೆ ಸ್ಥಳಕ್ಕೆ ಅಲೆದಾಡುವಂತಾಗಿದೆ.
ಮೂಲಸೌಕರ್ಯ ಇದೆ!
ಸಾಮಾನ್ಯ ಆರೋಗ್ಯ ಚಿಕಿತ್ಸೆಗೆ ಬೇಕಾದ ಎಲ್ಲ ಮೂಲಸೌಕರ್ಯಗಳು ಇಲ್ಲಿವೆ. ಕಟ್ಟಡವೂ ಅಚ್ಚುಕಟ್ಟಾಗಿ ನಿರ್ಮಾಣವಾಗಿವೆ. ಆದರೆ ಬಳಕೆ ಇಲ್ಲದ್ದರಿಂದ ಗಿಡಗಂಟಿಗಳಿಂದ ಆವೃತವಾಗಿದ್ದು ಪಾಳು ಬೀಳುತ್ತಿದೆ. ಆರಂಭದ ದಿನಗಳಲ್ಲಿ ಇಲ್ಲಿ ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯೋರ್ವರು ಸೇವೆ ಸಲ್ಲಿಸುತ್ತಿದ್ದು, ಸಾರ್ವಜನಿಕರಿಗೆ ಬಹಳ ಅನುಕೂಲವಾಗುತ್ತಿತ್ತು.
3 ವರ್ಷಗಳಿಂದ ಬೀಗ
2012ರಲ್ಲಿ ಸುಸಜ್ಜಿತ ಕಟ್ಟಡದಲ್ಲಿ ಪ್ರಾರಂಭಗೊಂಡ ಈದು ಬಿ ಉಪಕೇಂದ್ರವು ಪ್ರಾರಂಭದಲ್ಲಿ ಉತ್ತಮ ಸೇವೆ ನೀಡುವ ಮೂಲಕ ಈದು ಪರಿಸರದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿತ್ತು. ಆದರೆ ಕಳೆದ 3 ವರ್ಷಗಳಿಂದ ಯಾವುದೇ ಸೇವೆಗಳನ್ನು ನೀಡದೇ ಕಟ್ಟಡಕ್ಕೆ ಬೀಗ ಹಾಕಲಾಗಿದೆ. ಆದ್ದರಿಂದ ಪಲ್ಕೆ ಭಾಗದ ಸಾರ್ವಜನಿಕರು ಸುಮಾರು 5 ಕಿ.ಮೀ. ಕ್ರಮಿಸಿ ಹೊಸ್ಮಾರುವಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸುವಂತಾಗಿದೆ. ಇದರೊಂದಿಗೆ ಈ ಭಾಗದಲ್ಲಿ ಯಾವುದೇ ಬಸ್ಸು ಸೌಲಭ್ಯವಿಲ್ಲದೆ ರೋಗಿಗಳು ಪರದಾಡುವಂತಾಗಿದೆ.
ವಿದ್ಯುತ್ ಕೂಡ ಕಡಿತ
ಕೇಂದ್ರಕ್ಕೆ ಬೀಗ ಹಾಕಿದ್ದರಿಂದ ವಿದ್ಯುತ್ ಸಂಪರ್ಕವನ್ನೂ ಮೆಸ್ಕಾಂ ಕಡಿತಗೊಳಿಸಿದೆ. ಕೇಂದ್ರದ ವಿದ್ಯುತ್ ಬಿಲ್ ಕಟ್ಟದೇ ಇರುವುದರಿಂದ ಹೀಗಾಗಿದೆ. ಆದರೆ ಇದೀಗ ಇಲಾಖೆ ವತಿಯಿಂದ ಮತ್ತೆ ಸಂಪರ್ಕ ಕಲ್ಪಿಸಲು ಅರ್ಜಿ ಸಲ್ಲಿಸಲಾಗಿದೆ.
ಸಿಬಂದಿ ಕೊರತೆ
ಈದು ಬಿ ಆರೋಗ್ಯ ಉಪಕೇಂದ್ರ, ಈದು ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುತ್ತದೆ. ಇದರಡಿಯಲ್ಲಿ ಒಟ್ಟು 10 ಹುದ್ದೆಗಳಿದ್ದು ಇದರಲ್ಲಿ ವೈದ್ಯಾಧಿಕಾರಿಯವರು ಸೇರಿ 3 ಮಂದಿ ಗುತ್ತಿಗೆ ಆಧಾರದಲ್ಲಿ, 3 ಮಂದಿ ಖಾಯಂ ಸಿಬಂದಿ ಇದ್ದು, ಹೆಚ್ಚುವರಿ ಸೇವೆ ಸಲ್ಲಿಸುತ್ತಿದ್ದಾರೆ. ಉಳಿದ ನಾಲ್ಕು ಹುದ್ದೆ ಖಾಲಿ ಇದ್ದು, ಕುಗ್ರಾಮಗಳ ಜನರ ಸೇವೆಗೆ ಅಡಚಣೆಯಾಗುತ್ತಿದೆ. ಈದು ಉಪಕೇಂದ್ರದಲ್ಲಿ ಮತ್ತೆ ಸೇವೆ ಪುನರಾರಂಭಿಸಬೇಕು. ಇದರಿಂದ ಕುಗ್ರಾಮದ ಮಂದಿಗೆ ಬಹಳ ಅನುಕೂಲವಾಗಲಿದೆ. ಸಿಬಂದಿ ಕೊರತೆಯಿರುವ ಹಿನ್ನೆಲೆಯಲ್ಲಿ ಕನಿಷ್ಠ 2 ದಿನಕ್ಕೊಮ್ಮೆಯಾದರೂ ಸೇವೆ ನೀಡಿದರೆ ಪ್ರಯೋಜನವಾಗಲಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಆವರಣ ಗೋಡೆ!
ಆರೋಗ್ಯ ಉಪಕೇಂದ್ರದ ಕಟ್ಟಡ ಊಟಕ್ಕಿಲ್ಲದ ಉಪ್ಪಿನ ಕಾಯಿಯಾದರೂ ಕಟ್ಟಡಕ್ಕೆ 2018 19ನೇ ಸಾಲಿನಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ಆವರಣ ಗೋಡೆ ನಿರ್ಮಿಸಲಾಗಿದೆ. ಕೇಂದ್ರ ಯಾವುದೇ ಆರೋಗ್ಯ ಸೇವೆ ನೀಡದಿರುವಾಗ ಇನ್ನು ಆವರಣ ಗೋಡೆ ನಿರ್ಮಿಸಿ ಸಾಧಿಸಿದ್ದೇನು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ
ಸಮಸ್ಯೆ ಕುರಿತು ಹಲವಾರು ಬಾರಿ ಜನಪ್ರತಿನಿಧಿಗಳನ್ನು ಸಂಪರ್ಕಿಸಲಾದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ. ಆದ್ದರಿಂದ ಕೂಡಲೇ ಪಲ್ಕೆಯಲ್ಲಿರುವ ಉಪಕೇಂದ್ರ ಕಟ್ಟಡ ಸಾರ್ವಜನಿಕರಿಗೆ ಬಳಕೆಯಾಗುವಂತಾಗಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸುಸಜ್ಜಿತ ಕಟ್ಟಡ ಇದ್ದರೂ ಕಟ್ಟಡಕ್ಕೆ ಬೀಗ ಹಾಕಲಾಗಿದೆ. ಆರೋಗ್ಯ ಕೇಂದ್ರ ಇದ್ದೂ ಇಲ್ಲದಂತಾಗಿದೆ.
ಬಹುದೂರ
ತುರ್ತು ಆರೋಗ್ಯ ಸಮಸ್ಯೆ ಸಂದರ್ಭ ಹೊಸ್ಮಾರುವಿನಲ್ಲಿ ಸೇವೆ ಲಭ್ಯವಿಲ್ಲದಿದ್ದರೆ ಇಲ್ಲಿನ ಗ್ರಾಮಸ್ಥರು 17 ಕಿ.ಮೀ. ದೂರದ ಬಜಗೋಳಿ ಪ್ರಾ.ಆ.ಕೇಂದ್ರ ಅಥವಾ 27 ಕಿ.ಮೀ. ದೂರದ ಕಾರ್ಕಳ ತಾಣ ಆರೋಗ್ಯ ಕೇಂದ್ರವನ್ನು ಅವಲಂಬಿಸಬೇಕಾಗುತ್ತದೆ. ಈದು ಪಲ್ಕೆ ಭಾಗದಲ್ಲಿ ಸುಮಾರು 500ಕ್ಕೂ ಅಧಿಕ ಮನೆಗಳಿದ್ದು, ಈ ಭಾಗದ ವಯೋವೃದ್ಧರು, ಮಕ್ಕಳು, ಗರ್ಭಿಣಿಯರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.
ಚರ್ಚಿಸಿ ಕ್ರಮ
ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಉಪಕೇಂದ್ರದಲ್ಲಿ ಆರೋಗ್ಯ ಸಹಾಯಕಿಯರು ಕಾರ್ಯನಿರ್ವಹಿಸುವಂತೆ ಮೇಲಧಿಕಾರಿಗಳಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
-ಡಾ. ಗಿರೀಶ್ ಗೌಡ ಎಂ., ವೈದ್ಯಾಧಿಕಾರಿ
ಕಷ್ಟಕರ
ವಯೋವೃದ್ಧರು ನಾವು ಯಾವುದೇ ರೀತಿಯ ಚಿಕಿತ್ಸೆಗಾದರೂ ಹೊಸ್ಮಾರುವಿಗೆ ತೆರಳಲು ಕಷ್ಟಕರವಾಗುತ್ತಿದ್ದು, ಪಲ್ಕೆಯಲ್ಲಿರುವ ಉಪಕೇಂದ್ರದಲ್ಲಿಯೇ ಚಿಕಿತ್ಸೆ ನೀಡುವಂತಾದಲ್ಲಿ ತುಂಬಾ ಪ್ರಯೋಜನವಾದೀತು.
-ಸಿದ್ದಮ್ಮ ಪೂಜಾರ್ತಿ, ಪಾಲಾಡ್ಕ
ಜನಪ್ರತಿನಿಧಿಗಳು ಪ್ರಯತ್ನಿಸಲಿ
ಪಾಳು ಬಿದ್ದ ಈದು ಬಿ ಉಪಕೇಂದ್ರ ಸಾರ್ವಜನಿಕರಿಗೆ ಸೇವೆ ನೀಡುವ ಮೂಲಕ ಸುಸಜ್ಜಿತ ಕಟ್ಟಡ ಬಳಕೆಯಾಗಲು ಸಂಬಂಧ ಪಟ್ಟ ಜನ ಪ್ರತಿನಿಧಿಗಳು ಪ್ರಯತ್ನಿಸಬೇಕು.
- ಧರ್ಮಣ್ಣ ಪೂಜಾರಿ, ನಡುಬಟ್ಟೇಣಿ
ಸಂದೇಶ್ ಕುಮಾರ್ ನಿಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.