![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Feb 20, 2020, 3:09 AM IST
ಬೆಂಗಳೂರು: ಚಿಕ್ಕಪೇಟೆ, ಗಾಂಧೀನಗರ ಹಾಗೂ ಕಾಟನ್‌ಪೇಟೆ ವಾರ್ಡ್ ವ್ಯಾಪ್ತಿಯಲ್ಲಿ ಬುಧವಾರ ಪರಿಶೀಲನೆಗೆ ತೆರಳಿದ್ದ ಮೇಯರ್ ಎಂ.ಗೌತಮ್‌ಕುಮಾರ್ ನೇತೃತ್ವದ ತಂಡಕ್ಕೆ ಸಾರ್ವಜನಿಕರಿಂದ ವಿನೂತನ ರೀತಿಯ ಸ್ವಾಗತ ದೊರೆಯಿತು.
ಗಾಂಧಿನಗರ ವಾರ್ಡ್ ಹಾಗೂ ಚಿಕ್ಕಪೇಟೆ ವಾರ್ಡ್ ವ್ಯಾಪ್ತಿಯ ಬಿ.ವಿ.ಕೆ. ಅಯ್ಯಂಗರ್ ರಸ್ತೆಯ ಅಭಿನಯ್ ಚಿತ್ರ ಮಂದಿರದಿಂದ ಕಾಲ್ನಡಿಗೆಯ ಮೂಲಕ ಮೇಯರ್ ಬುಧವಾರ ಪರಿಶೀಲನೆ ಪ್ರಾರಂಭಿಸಿದರು. ಈ ವೇಳೆ ಮೇಯರ್‌ಗೆ ವಿವಿಧ ವಾರ್ಡ್‌ನ ಜನ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದರು.
“ಮೇಯರ್ ಬಂದರೆ ಬೀದಿಗಳು ಸ್ವಚ್ಛವಾಗುತ್ತವೆ, ಮಳೆ ಬಂದರೆ ಊರು ಸ್ವಚ್ಛವಾಗುತ್ತದೆ’ ಎನ್ನುವ ಸುಭಾಷಿತದ ಮೂಲಕ ತಂಡಕ್ಕೆ ಸ್ವಾಗತ ಕೋರಲಾಯಿತು. ಚಿಕ್ಕಪೇಟೆ ವಾರ್ಡ್‌ನಲ್ಲಿ ಪರಿಶೀಲನೆ ನಡೆಸುವ ವೇಳೆ “ನಮ್ಮ ವಾರ್ಡ್ ಎಷ್ಟು ಹಾಳಾಗಿದೆ ಎಂದು ನಿಮಗೆ ಗೊತ್ತಿದೆಯೇ, ಒಂದು ಸಭೆ ನಡೆಸಿ, ಬೈಕ್‌ನಲ್ಲಿ ಸುತ್ತಿದರೆ ಸಮಸ್ಯೆಗೆ ಪರಿಹಾರ ಸಿಗುವುದೇ’ ಎಂದು ಸಾರ್ವಜನಿಕರು ಮೇಯರ್ ಹಾಗೂ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಅವರನ್ನು ಪ್ರಶ್ನಿಸಿದರು.
ಅವೆನ್ಯೂ ರಸ್ತೆಯಲ್ಲಿ ಹಾಗೂ ಸುಲ್ತಾನ್‌ಪೇಟೆಯಲ್ಲಿ ತಪಾಸಣೆ ನಡೆಸುವ ವೇಳೆ ಸಾರ್ವಜನಿಕರು ಪ್ರಶ್ನೆಗಳ ಸುರಿಮಳೆ ಸುರಿಸಿದರು. ಮಳೆ ಬಂದರೆ ರಸ್ತೆಯಲ್ಲೇ ನೀರು ನಿಲ್ಲುತ್ತದೆ. ಒಳಚರಂಡಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ ಎಂದು ದೂರಿದರು. ಈ ವೇಳೆ ಸಾರ್ವಜನಿಕರು ಹಾಗೂ ಮೇಯರ್ ನಡುವೆ ಮಾತಿನ ಚಕಮಕಿಯೂ ನಡೆಯಿತು. ಏರುದನಿಯಲ್ಲಿ ಸಾರ್ವಜನಿಕರು ಪ್ರಶ್ನೆ ಮಾಡಿದ್ದಕ್ಕೆ ಗರಂ ಆದ ಮೇಯರ್, “ನಾವು ಕೆಲಸ ಮಾಡುವುದಕ್ಕೇ ಬಂದಿರುವುದು.
ಹೀಗೆ ಮಾತನಾಡಿದರೆ ಹೇಗೆ’ ಎಂದು ಪ್ರಶ್ನೆ ಮಾಡಿದರು. ಒಂದು ಹಂತದಲ್ಲಿ “ನೀವೇ ಮಾಡಿಕೊಳ್ಳಿ’ ಎಂದು ಮೇಯರ್ ಹೇಳಿದರು. ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ, ಅಧಿಕಾರಿಗಳನ್ನು ಲೆಫ್ಟ್ರೈಟ್ ತೆಗೆದುಕೊಂಡ ಮೇಯರ್, “ನೀವು ಸರಿಯಾಗಿ ಕೆಲಸ ಮಾಡದೆ ಇರುವುದರಿಂದ ನಾವು ಜನರಿಂದ ಬೈಸಿಕೊಳ್ಳಬೇಕಾಗಿದೆ’ ಎಂದು ಜಲ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್, ಚಿಕ್ಕಪೇಟೆ ಹಾಗೂ ಕಾಟನ್‌ಪೇಟೆ ವಾರ್ಡ್‌ಗಳಲ್ಲಿ ಏನು ಸಮಸ್ಯೆ ಇದೆ ಎಂದು ತಿಳಿದುಕೊಳ್ಳಲಾಗಿದೆ. ರಸ್ತೆ ದುರಸ್ತಿ ಕಾಮಗಾರಿ, ಕಸದ ಸಮಸ್ಯೆ ಕುರಿತಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಪ್ರಮುಖ ಕಾಮಗಾರಿಗಳನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಚಿಕ್ಕಪೇಟೆ, ಕಾಟನ್‌ಪೇಟೆ, ಸುಲ್ತಾನ್ ಪೇಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ 50 ಸಾವಿರಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿದ್ದು, ಕಸದ ಸಮಸ್ಯೆ ಉಲ್ಬಣಗೊಂಡಿದೆ. ಪೌರಕಾರ್ಮಿಕರು ಕಸ ಸಂಗ್ರಹ ಮಾಡಿದ ಬಳಿಕ, ವ್ಯಾಪಾರಿಗಳು ರಸ್ತೆ ಮೇಲೆ ಕಸ ಬಿಸಾಡುತ್ತಿದ್ದಾರೆ. ಹೀಗಾಗಿ, ವಾಣಿಜ್ಯ ಮಳಿಗೆಗಳ ಅಸೋಶಿ ಯೇಷನ್ ಜತೆ ಸಭೆ ನಡೆಸಿ, ಕಸದ ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದರು.
ಟೆಂಡರ್ ಶ್ಯೂರ್ ರಸ್ತೆ ಪರಿಶೀಲನೆ: ಇದೇ ವೇಳೆ ಟೆಂಡರ್ ಶ್ಯೂರ್ ಯೋಜನೆಯಡಿ ಅಭಿ ವೃದ್ಧಿಪಡಿಸುತ್ತಿರುವ ಕಾಟನ್‌ಪೇಟೆ ಮುಖ್ಯರಸ್ತೆ ಕಾಮಗಾರಿ ಪ್ರಗತಿಯನ್ನು ಮೇಯರ್ ಪರಿಶೀಲಿಸಿದರು. ಸೈಡ್‌ಡ್ರೈನ್, ವಿದ್ಯುತ್ ತಂತಿ ಹಾಗೂ ಒಳಚರಂಡಿ ಮಾರ್ಗ ಬದಲಾವಣೆ ಮಾಡಿರುವುದಾಗಿ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು. ಸಂಸದ ಪಿ.ಸಿ.ಮೋಹನ್, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಮತ್ತಿತರರು ಹಾಜರಿದ್ದರು.
ಮೇಯರ್ ನೀಡಿದ ಸೂಚನೆಗಳು
* ಬಿ.ವಿ.ಕೆ. ಅಯ್ಯಂಗರ್ ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿನ ಅನಧಿಕೃತ ಮಳಿಗೆಗಳ ತೆರವಿಗೆ ನಿರ್ದೇಶನ.
* ಅವೆನ್ಯೂ ರಸ್ತೆ, ಮಾಮೂಲ್‌ಪೇಟೆ, ಸುಲ್ತಾನ್ ಪೇಟೆ, ತರಗುಪೇಟೆ, ಕಾಟನ್ ಪೇಟೆಯಲ್ಲಿ ಕಸದ ಸಮಸ್ಯೆ, ರಸ್ತೆ ಹಾಳಾಗಿರುವುದು, ಒಳಚರಂಡಿ ನೀರು ರಸ್ತೆ ಮೇಲೆ ನಿಂತಿರುವುದು, ಪಾದಚಾರಿ ಮಾರ್ಗ, ಬೀದಿದೀಪ ಅಳವಡಿಕೆ ಬಗ್ಗೆ ಸಾರ್ವಜನಿಕರಿಂದ ದೂರು. ಇವುಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು ತಾಕೀತು.
* ಕಾಟನ್‌ಪೇಟೆ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಟೆಂಡರ್ ಶ್ಯೂರ್ ಕಾಮಗಾರಿ ಪ್ರಗತಿಯಲ್ಲಿದ್ದು, ಪಾದಚಾರಿ ಮಾರ್ಗಕ್ಕೆ ಹೆಚ್ಚು ಸ್ಥಳಾವಕಾಶ ನೀಡಿರುವುದರಿಂದ ವಾಹನ ಸವಾರರಿಗೆ ತೊಂದರೆ; ಸಮಸ್ಯೆ ಪರಿಶೀಲನೆಗೆ ಸೂಚನೆ.
* ಒಳಚರಂಡಿಗಳಲ್ಲಿನ ಹೂಳು ತೆಗೆದು ಸ್ಥಳದಲ್ಲೇ ಬಿಡದೆ ಜಲ ಮಂಡಳಿಯಿಂದಲೇ ತೆರವುಗೊಳಿಸುವಂತೆ ಜಲಮಂಡಳಿ ಅಧ್ಯಕ್ಷರಿಗೆ ಪತ್ರ ಬರೆಯಲು ಆಯುಕ್ತರಿಗೆ ಸೂಚನೆ.
You seem to have an Ad Blocker on.
To continue reading, please turn it off or whitelist Udayavani.