ಸಂತ್ರಸ್ತರಿಗೆ ಪರಿಹಾರ: ಅನ್ವಯಿಸುತ್ತಿಲ್ಲ ಹೊಸ ಕಾಯ್ದೆ
ಪರಿಹಾರ ಜತೆಗೆ ಕನಿಷ್ಟ 7.86 ಲಕ್ಷ ವಿವಿಧ ಸೌಲಭ್ಯ ಕಡ್ಡಾಯ | ಮಾಸಿಕ 3 ಸಾವಿರ ಭತ್ಯೆ ಕೊಡ್ತಿಲ್ಲ
Team Udayavani, Feb 20, 2020, 1:39 PM IST
ಬಾಗಲಕೋಟೆ: ಆಲಮಟ್ಟಿ ಜಲಾಶಯ ಎತ್ತರದಿಂದ ಸ್ವಾಧೀನಗೊಳ್ಳಲಿರುವ ಬಾಗಲಕೋಟೆ ನಗರದ ಮುಳುಗಡೆ ಸಂತ್ರಸ್ತರಿಗೆ ಹೊಸ ಭೂ ಸ್ವಾಧೀನ ಕಾಯ್ದೆಯಡಿ ಪರಿಹಾರ, ಪುನರ್‌ವಸತಿ ಹಾಗೂ ಪುನರ್ ನಿರ್ಮಾಣ ದೊರೆಯುತ್ತಿಲ್ಲ ಎಂಬ ಅಸಮಾಧಾನ ಕೇಳಿ ಬರುತ್ತಿದೆ.
ಹೌದು, ಕೇಂದ್ರ ಸರ್ಕಾರ ಕಳೆದ 2014ರ ಜನವರಿಯಿಂದ ಇಡೀ ದೇಶಕ್ಕೆ ಅನ್ವಯವಾಗುವಂತೆ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿದೆ. ಇಡೀ ದೇಶದಲ್ಲೇ ಈ ಹೊಸ ತಿದ್ದುಪಡಿ ಕಾನೂನು ಪ್ರಥಮ ಬಾರಿಗೆ ಅನ್ವಯವಾಗಿದ್ದು ಕೃಷ್ಣಾ ಮೇಲ್ದಂಡೆ ಯೋಜನೆಗೆ. ಹೊಸ ಕಾಯ್ದೆಯಡಿಯೇ ಭೂಮಿ ಮತ್ತು ಮುಳುಗಡೆ ವ್ಯಾಪ್ತಿಯ ಕಟ್ಟಡಗಳ ಸ್ವಾಧೀನ ಪಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಈ ಹೊಸ ಕಾನೂನಿನ ಅಂಶಗಳಡಿ ಪುನರ್‌ವಸತಿ, ಪುನರ್ ನಿರ್ಮಾಣದ ಸೌಲಭ್ಯ ಸಂತ್ರಸ್ತರಿಗೆ ದೊರೆಯುತ್ತಿಲ್ಲ. ಈ ವಿಷಯದಲ್ಲಿ ಬಿಟಿಡಿಎ ಹೊಸ ಭೂಸ್ವಾಧೀನ ಕಾಯ್ದೆಯ ಅಂಶಗಳನ್ನು ಉಲ್ಲಂಘನೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಪರಿಹಾರಕ್ಕೆ ಮಾತ್ರ ಅನ್ವಯ: ಸದ್ಯ ನಗರದ 523 ಮೀಟರ್‌ನಿಂದ 525 ಮೀಟರ್ ಮುಳುಗಡೆ ವ್ಯಾಪ್ತಿಗೆ ಒಟ್ಟು 2421 ಜನ ಕಟ್ಟಡ ಮಾಲೀಕರು ಬರುತ್ತಾರೆ. ಅಲ್ಲದೇ ಈ ಹಂತದಲ್ಲಿ ಮುಳುಗಡೆಯಾಗುವ ಕಟ್ಟಡ ಮಾಲೀಕರು, ಬಾಡಿಗೆದಾರರಿಗೆ ಪುನರ್‌ವಸತಿ ಕಲ್ಪಿಸಲು ನಗರದ ದಡ್ಡೇನವರ ಕ್ರಾಸ್‌ನಿಂದ ಎಪಿಎಂಸಿವರೆಗೆ ಬಾಗಲಕೋಟೆ, ಮುಚಖಂಡಿ ಹಾಗೂ ಶಿಗಿಕೇರಿ ಗ್ರಾಮಗಳ ಒಟ್ಟು 1640 ಎಕರೆ ಭೂಮಿ ಬೇಕಾಗಿದ್ದು, ಅದರಲ್ಲಿ 1257 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿದೆ. 1257
ಎಕರೆ ಭೂಮಿ ನೀಡಿದ ರೈತರಿಗೆ ಹಾಗೂ ಸ್ವಾಧೀನಗೊಂಡ ಕಟ್ಟಡ ಮಾಲೀಕರಿಗೆ ಹೊಸ ಭೂಸ್ವಾಧೀನ ಕಾಯ್ದೆಯಡಿ ಪರಿಹಾರ ನೀಡಲಾಗಿದೆ. ಕಟ್ಟಡ ಮಾಲೀಕರಿಗೆ ಕೇವಲ ಪರಿಹಾರ ನೀಡಲಾಗಿದೆ ಹೊರತು, ಇನ್ನುಳಿದ ಪುನರ್‌ವಸತಿ, ಪುನರ್‌ನಿರ್ಮಾಣ ಸೌಲಭ್ಯ ಈ ವರೆಗೆ ಕಲ್ಪಿಸಿಲ್ಲ.
ಹೊಸ ಕಾಯ್ದೆ ಸೌಲಭ್ಯಗಳೇನು?: ಹಳೆಯ ಕಾನೂನಿನಡಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದರೂ ಹೊಸ ಕಾಯ್ದೆಯ ಸೆಕ್ಟನ್ 24ರಡಿ ಹೊಸ ಕಾನೂನಿಗೆ ಅದನ್ನು ಅನ್ವಯಿಸಬೇಕು. ಯಾವುದೇ ಭೂಮಿ ಅಥವಾ ಕಟ್ಟಡ ಸ್ವಾಧೀನದ ಐತೀರ್ಪು ಹೊರಡಿಸಿದ ಮೂರು ತಿಂಗಳೊಳಗಾಗಿ ಪರಿಹಾರ ಧನ ನೀಡಲೇಬೇಕು. ಅಲ್ಲದೇ ಆರು ತಿಂಗಳ ಒಳಗಾಗಿ ಪುನರ್‌ವಸತಿ ಮತ್ತು ಪುನರ್ ನಿರ್ಮಾಣದ ಹಣಕಾಸಿನ ಆರ್ ಆ್ಯಂಡ್ ಆರ್ ಅರ್ಹತೆ ಕಲ್ಪಿಸಬೇಕು ಎಂಬುದನ್ನು ಹೊಸ ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಿದೆ.
ಮುಳುಗಡೆಗೊಂಡ ಕಟ್ಟಡ ಮಾಲೀಕರಿಗೆ ಒಂದು ವರ್ಷದವರೆಗೆ ಮಾಸಿಕ ತಲಾ 3 ಸಾವಿರ ನಿರ್ವಹಣಾ ಭತ್ಯೆ, ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ಇಲ್ಲವೇ 5 ಲಕ್ಷ ರೂ. ನಗದು, ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಲು 1.50 ಲಕ್ಷ ರೂ, ಮನೆ ಸ್ಥಳಾಂತರಿಸಲು 50 ಸಾವಿರ ಪುನರ್‌ವ್ಯವಸ್ಥೆ ಭತ್ಯೆ, 50 ಸಾವಿರ ಸಾರಿಗೆ ಭತ್ಯೆ ಹೀಗೆ ಒಟ್ಟು ಒಬ್ಬ ಸಂತ್ರಸ್ತರಿಗೆ ಸುಮಾರು 7.86 ಲಕ್ಷ ರೂ. ಪುನರ್‌ವಸತಿ, ಪುನರ್ ನಿರ್ಮಾಣ ಸೌಲಭ್ಯದಡಿ ಬರಬೇಕು. ಆದರೆ, ಮಾಲೀಕರಿಗೆ ಕಟ್ಟಡ ಮೌಲ್ಯಮಾಪನ ಪರಿಹಾರ ನೀಡಲಾಗಿದೆ ಹೊರತು, ಈ ಸೌಲಭ್ಯಗಳು ಸಂತ್ರಸ್ತರಿಗೆ ಈ ವರೆಗೆ ದೊರೆತಿಲ್ಲ.
ಪರಿಹಾರಧನವೇ ಖಾಲಿ: 2421 ಕಟ್ಟಡ ಮಾಲೀಕರಿಗೆ ಈಗಾಗಲೇ ಪರಿಹಾರ ನೀಡಲಾಗಿದ್ದು, 3ನೇ ಯೂನಿಟ್ ಸಿದ್ಧಪಡಿಸಿ ಅವರಿಗೆ ನಿವೇಶನ ನೀಡಿಲ್ಲ. ಹೀಗಾಗಿ ಪರಿಹಾರ ಪಡೆದ ಸಂತ್ರಸ್ತರು ವಿವಿಧ ಅನಿವಾರ್ಯತೆಗಾಗಿ ಪರಿಹಾರಧನ ಖರ್ಚು ಮಾಡಿಕೊಂಡಿದ್ದಾರೆ. ಕಾನೂನು ಪ್ರಕಾರ, ಅಧಿಸೂಚನೆ ಹೊರಡಿಸಿದ 18 ತಿಂಗಳಲ್ಲೇ ನಿವೇಶನಸಹಿತ ಪುನರ್‌ವಸತಿ ಹಾಗೂ ಪುನರ್ ನಿರ್ಮಾಣದ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂಬ ಕಾನೂನಿದ್ದರೂ ಪಾಲನೆಯಾಗಿಲ್ಲ. ಪರಿಹಾರಧನ ಖರ್ಚು ಮಾಡಿಕೊಂಡ ಭೂ ಮಾಲೀಕರು, ಪುನಃ ಮನೆ ನಿರ್ಮಾಣಕ್ಕಾಗಿ ಸಾಲ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.
ಹೊಸ ಕಾಯ್ದೆ ಅನ್ವಯಕ್ಕೆ ಕಾನೂನು ವಿಭಾಗಕ್ಕೆ: ಹೊಸ ಭೂಸ್ವಾಧೀನ ಕಾಯಿದೆಯಡಿ ಪುನರ್‌ವಸತಿ, ಪುನರ್ ನಿರ್ಮಾಣ ಸೌಲಭ್ಯ ಅನ್ವಯಿಸಲು ಒತ್ತಾಯಿಸಿ ನಗರದ 523 ಮೀಟರ್‌ನಿಂದ 525 ಮೀಟರ್ ವ್ಯಾಪ್ತಿಯ ಕಟ್ಟಡ ಮಾಲೀಕರೊಬ್ಬರು ಎಸ್‌ಎಲ್‌ಒಗೆ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಿದ್ದು, ಈ ಕುರಿತು ಬಿಟಿಡಿಎ ಕಾನೂನು ಸಲಹೆಗಾರರು, ಅವರಿಗೆ ಹೊಸ ಭೂಸ್ವಾಧೀನ ಕಾಯ್ದೆಯಡಿ ದೊರೆಯುವ ಸೌಲಭ್ಯ ಕೊಡಲೇಬೇಕೆಂದು ವರದಿ ನೀಡಿದ್ದಾರೆ. ಹೀಗಾಗಿ ಈ ಪ್ರಸ್ತಾವನೆ ಸದ್ಯ ಎಸ್‌ಎಲ್‌ಒ ಕಚೇರಿಯಿಂದ ಆರ್.ಒ ಕಚೇರಿಗೆ ಹೋಗಿದ್ದು, ಶೀಘ್ರವೇ ಅನ್ವಯವಾಗುವ ಹಂತದಲ್ಲಿದೆ. ಇದೇ ಮಾದರಿ, 2421 ಕಟ್ಟಡ ಮಾಲಿಕರಿಗೂ ಅನ್ವಯವಾಗುತ್ತದೆ. ಆದರೆ, ಇದಕ್ಕೆ ಕಟ್ಟಡ ಮಾಲೀಕರೂ ಜಾಗೃತರಾಗಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಟ್ಟಡ ಮಾಲೀಕರಿಗೆ ಹೊಸ ಕಾಯ್ದೆಯಡಿ ಪರಿಹಾರದ ಜತೆಗೆ ಪುನರ್‌ವಸತಿ, ಪುನರ್ ನಿರ್ಮಾಣದ ಭತ್ಯೆ, ಸೌಲಭ್ಯ ದೊರೆಯುತ್ತವೆ. ಹೊಸ ಕಾಯಿದೆಯಡಿ ಪರಿಹಾರ ನೀಡಿದರೂ ಈ ಸೌಲಭ್ಯಗಳನ್ನು ಸಂತ್ರಸ್ತರಿಗೆ ಅನ್ವಯಿಸುತ್ತಿಲ್ಲ. ಅಲ್ಲದೇ ಯೂನಿಟ್-3ರ ನಕ್ಷೆಯೇ ನಗರ ಯೋಜನೆ ಪ್ರಾಧಿಕಾರದಿಂದ ಅನುಮೋದನೆ ಆಗಿಲ್ಲ. ಹೀಗಾಗಿ ಲೇಔಟ್ ಅಭಿವೃದ್ಧಿಪಡಿಸಲೂ ಆಗಿಲ್ಲ. ಸಂತ್ರಸ್ತರಿಗೆ ಪರಿಹಾರ ಧನ ನೀಡಿ ವರ್ಷವೇ ಕಳೆದಿದ್ದು, ಕೂಡಲೇ ನಿವೇಶನ ಹಂಚಿಕೆ ಮಾಡುವ ಜತೆಗೆ ಹೊಸ ಕಾಯ್ದೆಯಡಿ ನೀಡಬೇಕಾದ ಎಲ್ಲ ಸೌಲಭ್ಯ ನೀಡಬೇಕು.
ವೆಂಕಟಾಚಲಪತಿ ಬಳ್ಳಾರಿ, ಕಾರ್ಯದರ್ಶಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಹೋರಾಟ ಸಮಿತಿ
523ರಿಂದ 525 ಮೀಟರ್ ವರೆಗಿನ ಕೆಲವು ಕಟ್ಟಡಗಳು ಹಳೆಯ ಮತ್ತು ಇನ್ನೂ ಕೆಲವು ಹೊಸ ಕಾಯಿದೆಯಡಿ ಸ್ವಾಧೀನಗೊಂಡಿವೆ. ಹಲವರು ಹೆಚ್ಚಿನ ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಹೊಸ ಕಾಯ್ದೆಯಡಿ ಸಂತ್ರಸ್ತರಿಗೆ ಪುನರ್ ವಸತಿ ಮತ್ತು ಪುನರ್‌ನಿರ್ಮಾಣ ಸೌಲಭ್ಯಗಳು ಅನ್ವಯವಾಗಿರುವ ಕುರಿತು ಸಂಪೂರ್ಣ ಮಾಹಿತಿ ಇಲ್ಲ. ಈ ಕುರಿತು ಪರಿಶೀಲಿಸಲಾಗುವುದು.
ಎಂ. ಗಂಗಪ್ಪ,
ವಿಶೇಷ ಭೂಸ್ವಾಧೀನಾಧಿಕಾರಿ, ಬಿಟಿಡಿಎ
ಎಸ್.ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಗಲಕೋಟೆ: ಕುಳಗೇರಿ ಕೆರೆಗೆ ಸೋಮನಕೊಪ್ಪ ಚರಂಡಿ ನೀರು!
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.