ಮೂಲಸೌಕರ್ಯ ಅನುದಾನದಲ್ಲೂ ಅಕ್ರಮ
ಅತಿವೃಷ್ಟಿ ಅನುದಾನ ದುರ್ಬಳಕೆ ಆರೋಪ ಸಮಗ್ರ ತನಿಖೆಗೆ ಜಿಲ್ಲಾದ್ಯಂತ ಒತ್ತಡ
Team Udayavani, Feb 20, 2020, 6:45 PM IST
ಹಾವೇರಿ: ಅತಿವೃಷ್ಟಿ ಪರಿಹಾರಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಮನೆಹಾನಿ ಹಾಗೂ ಬೆಳೆಹಾನಿ ಪರಿಹಾರದಲ್ಲಿ ಭಾರಿ ಅಕ್ರಮ-ಅವ್ಯವಹಾರ ಪ್ರಕರಣಗಳು ಹೊರಬೀಳುತ್ತಿದ್ದಂತೆ ಅತಿವೃಷ್ಟಿಯಿಂದ ಹಾಳಾದ ಮೂಲಭೂತ ಸೌಕರ್ಯ ಅಭಿವೃದ್ಧಿ ಅನುದಾನದಲ್ಲಿಯೂ ಭಾರಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ.
ನೆರೆ-ಬರ ಪರಿಹಾರ ಬಂದಾಗ ಅದು ಸಾರ್ವಜನಿಕರಿಗೆ, ಸಾರ್ವಜನಿಕ ಅಭಿವೃದ್ಧಿ ಕೆಲಸಗಳಿಗೆ ಬಳಕೆಯಾಗುವುದಕ್ಕಿಂತ ಹೆಚ್ಚಾಗಿ ಅಧಿಕಾರಿಶಾಹಿ ಹಾಗೂ ರಾಜಕಾರಣಿಗಳಿಗೆ ಹಣ ಹೊಡೆಯುವ “ಸುಗ್ಗಿ’ ಯಾಗಿ ಮಾರ್ಪಡುತ್ತದೆ ಎಂಬುದಕ್ಕೆ ಜಿಲ್ಲೆಯಲ್ಲಿ ನಡೆದ ಬೆಳೆಹಾನಿ, ಮನೆಹಾನಿ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಅನುದಾನ ದುರ್ಬಳಕೆಯೇ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ ಮೊದಲು ಅತಿವೃಷ್ಟಿ ಹಾನಿಗೆ ಸಂಬಂಧಿಸಿ ಅರ್ಹ ಸಂತ್ರಸ್ತರಿಗೆ ಮನೆ ಹಾನಿ ಪರಿಹಾರ ದೊರಕಿಲ್ಲ. ಅಧಿಕಾರಿಗಳು ಹಣ ಪಡೆದು ಅನರ್ಹರಿಗೆ ಮನೆ ಹಾನಿ ಪರಿಹಾರ ನೀಡಿದ್ದಾರೆ. ಪೂರ್ಣ ಮನೆ ಬಿದ್ದವರಿಗೆ ಅಲ್ಪ ಪರಿಹಾರ, ಅಲ್ಪ ಮನೆ ಬಿದ್ದವರಿಗೆ ಹೆಚ್ಚು ಪರಿಹಾರ, ಇನ್ನು ಮನೆ ಬೀಳದೆ ಇದ್ದರೂ ಮನೆ ಬಿದ್ದಿದೆ ಎಂದು ಪರಿಹಾರ ವಿತರಣೆ, ಒಂದೇ ಕುಟುಂಬದ ಮೂರ್‍ನಾಲ್ಕು ಸದಸ್ಯರಿಗೆ ಹಾಗೂ ಗ್ರಾಪಂ ಜನಪ್ರತಿನಿಧಿಗಳ ಸಂಬಂಧಿಕರಿಗೆ ಹೆಚ್ಚು ಮನೆ ಪರಿಹಾರ ಸಿಕ್ಕಿದೆ ಎಂಬ ಆರೋಪ ಕೇಳಿ ಬಂದಿತು. ಇದನ್ನು ಸರಿಪಡಿಸಬೇಕು ಹಾಗೂ ಅನರ್ಹರಿಗೆ ಪರಿಹಾರ ನೀಡಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಅಲ್ಲಲ್ಲಿ ಪ್ರತಿಭಟನೆ ಈಗಲೂ ನಡೆಸುತ್ತಿದ್ದಾರೆ.
ಅದು ಇನ್ನೂ ಪೂರ್ಣ ತನಿಖೆಯಾಗಿಲ್ಲ. ಅದೇ ರೀತಿ ಈಗ ಬೆಳೆಹಾನಿ ಪರಿಹಾರ ವಿತರಣೆಯಲ್ಲಿಯೂ ಭಾರಿ ಅಕ್ರಮ ನಡೆದಿರುವುದು ಬಹಿರಂಗಗೊಂಡಿದೆ. ಇದು ಮನೆ ಹಾನಿ ಪರಿಹಾರ ಅಕ್ರಮಕ್ಕಿಂತ ದೊಡ್ಡ ಮಟ್ಟದ್ದಾಗಿದೆ. ಇದರಲ್ಲಿ ಯಾರಧ್ದೋ ಜಮೀನಿನ ಬೆಳೆಹಾನಿಗೆ ಇನ್ಯಾರಧ್ದೋ ಬ್ಯಾಂಕ್ ಖಾತೆಗೆ ಹೋಗಿರುವ ವಿಚಾರ ಹೊರಬಿದ್ದಿದೆ. ಯಾರಧ್ದೋ ಪಹಣಿಗೆ ಯಾರಧ್ದೋ ಆಧಾರ್ ಸಂಖ್ಯೆ ಹಾಕಿ ಅವರ ಖಾತೆಗೆ ಹಣ ಜಮೆ ಮಾಡಲಾಗಿರುವುದು ಇಲಾಖಾ ಪರಿಶೋಧನೆಯಲ್ಲಿ ಗೊತ್ತಾಗಿದ್ದು, ಈಗ ಅದು ಗಂಭೀರ ಸ್ವರೂಪ ಪಡೆದಿದೆ. ಪೊಲೀಸ್ ತನಿಖೆ ಮೂಲಕ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವ ಯತ್ನ ನಡೆದಿದೆ.
ಅತಿವೃಷ್ಟಿ ಪರಿಹಾರಕ್ಕೆ ಸಂಬಂಧಿ ಸಿ ಈ ಎರಡು ಪ್ರಮುಖ ಭ್ರಷ್ಟಾಚಾರದ ವಿಚಾರಗಳು ಜಿಲ್ಲೆಯಲ್ಲಿ ಸದ್ದು ಮಾಡಿದ ಸಂದರ್ಭದಲ್ಲಿಯೇ ಈಗ ನೆರೆಯಿಂದ ಹಾನಿಗೊಳಗಾದ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಸರ್ಕಾರ ವಿವಿಧ ಇಲಾಖೆಗಳಿಗೆ ನೀಡಿದ ಅನುದಾನದಲ್ಲಿಯೂ ಭಾರಿ ಅಕ್ರಮ ನಡೆದಿದೆ ಎಂದು ಕೂಗು ಎದ್ದಿದೆ. ಇದನ್ನೂ ತನಿಖೆ ನಡೆಸಿ ಭ್ರಷ್ಟರ ಮೇಲೆ ಶಿಸ್ತುಕ್ರಮ ಆಗಬೇಕು ಎಂಬ ಒತ್ತಾಯ ವ್ಯಾಪಕವಾಗಿದೆ.
ಏನು ಅಕ್ರಮ?: ವಾಸ್ತವದಲ್ಲಿ ಅತಿವೃಷ್ಟಿಯಿಂದ ಹಾನಿಯಾಗದ ರಸ್ತೆ, ಸೇತುವೆ ಹಾಗೂ ಕಟ್ಟಡಗಳನ್ನು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಕೆಲವೆಡೆ ಕಾಮಗಾರಿ ಮಾಡದೆ ಅನುದಾನ ಬಿಡುಗಡೆ ಮಾಡಲಾಗಿದೆ. ಅಲ್ಪ ಮೊತ್ತದ ಕಾಮಗಾರಿಗೆ ದೊಡ್ಡ ಮೊತ್ತದ ಕ್ರಿಯಾಯೋಜನೆ ತಯಾರಿಸಲಾಗಿದೆ. ಈ ಹಿಂದೆ ಬೇರೆ ಅನುದಾನದಲ್ಲಿ ಮಾಡಿದ ಕೆಲಸಗಳನ್ನೇ ಮತ್ತೆ ಅತಿವೃಷ್ಟಿ ಪರಿಹಾರ ಅನುದಾನದಲ್ಲಿ ಸೇರ್ಪಡೆ ಮಾಡಲಾಗಿದೆ. ಹೀಗೆ ಅನೇಕ ರೀತಿಯಲ್ಲಿ ಅಕ್ರಮ ನಡೆದಿದೆ ಎಂದ ಆರೋಪ ಕೇಳಿ ಬಂದಿದೆ.
35 ಕೋಟಿ ಅನುದಾನ: ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ವಿವಿಧ ಇಲಾಖೆಯ 1368 ಮೂಲಭೂತ ಸೌಕರ್ಯಗಳು ಹಾನಿಯಾಗಿದ್ದು, 52.14 ಕೋಟಿ ರೂ. ಹಾನಿಯಾಗಿದೆ ಎಂದು ಅಧಿಕಾರಿಗಳು ಅಂದಾಜು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದರಲ್ಲಿ 24.34 ಕೋಟಿ ರೂ. ಕಾಮಗಾರಿಗೆ ಅನುಮೋದನೆಯೂ ಸಿಕ್ಕಿದ್ದು, ಸರ್ಕಾರದಿಂದ 35 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಇದರಲ್ಲಿ ಶಾಲಾ ಕಟ್ಟಡಗಳು, ಅಂಗನವಾಡಿ ಕಟ್ಟಡಗಳು, ಗ್ರಾಮೀಣ ರಸ್ತೆ, ಸೇತುವೆ, ಕೆರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ತಿ ಹಾಗೂ ಅಭಿವೃದ್ಧಿ ಒಳಗೊಂಡಿದೆ.
ಸರ್ಕಾರ ಮೂಲಭೂತ ಸೌಕರ್ಯಕ್ಕೆ ನೀಡಿದ ಅನುದಾನ ಬಳಕೆ ಬಗ್ಗೆಯೂ ತನಿಖೆ ನಡೆಯಬೇಕು ಎಂಬ ಕೂಗು ಜಿಲ್ಲೆಯಾದ್ಯಂತ ಎದ್ದಿದ್ದು ಸರ್ಕಾರ ಕೂಡಲೇ ಪ್ರಕೃತಿ ವಿಕೋಪದಡಿ ನೀಡಿದ ಅನುದಾನ ಬಳಕೆ ಬಗ್ಗೆಯೂ ತನಿಖೆ ನಡೆಸಿ, ಕೋಟ್ಯಂತರ ರೂ.ಪೋಲಾಗುವುದನ್ನು ತಪ್ಪಿಸಬೇಕಿದೆ.
ಸಮಗ್ರ ತನಿಖೆಯಾಗಲಿ ಅತಿವೃಷ್ಟಿ ಹಾಗೂ ನೆರೆ ಸಂತ್ರಸ್ತರ ಜೀವಹಾನಿ, ಮನೆ ಹಾನಿ ಪರಿಹಾರಕ್ಕಾಗಿ ಸರ್ಕಾರದಿಂದ ಒಟ್ಟು 90ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ ಪಶು ಇಲಾಖೆಗೆ 53.49ಲಕ್ಷ ರೂ., ಆರೋಗ್ಯ ಇಲಾಖೆಗೆ 10ಲಕ್ಷ ರೂ., ಆಹಾರ ಇಲಾಖೆಗೆ 30.18ಲಕ್ಷ ರೂ. ಹಂಚಿಕೆ ಮಾಡಲಾಗಿದೆ. ಮೂಲಭೂತ ಸೌಕರ್ಯ ದುರಸ್ತಿಗಾಗಿ ಪ್ರತ್ಯೇಕ 35 ಕೋಟಿ ರೂ. ಸರ್ಕಾರದಿಂದ ಬಿಡುಗಡೆಯಾಗಿದೆ. ಒಟ್ಟಾರೆ ಈ ಎಲ್ಲ ಅನುದಾನ ಸದ್ಬಳಕೆಯಾಗಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ.
ಅತಿವೃಷ್ಟಿ ಪರಿಹಾರದ ಹಣ ಯಾರ್ಯಾರೋ ತಿಂದು ಸರ್ಕಾರ, ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಒಳ್ಳೆಯದ್ದನ್ನು ಮಾಡುವ ಸರ್ಕಾರದ ಉದ್ದೇಶ ಈಡೇರುತ್ತಿಲ್ಲ. ಈ ಬಗ್ಗೆ ಪ್ರತ್ಯೇಕ ತನಿಖೆ ನಡೆಸಿ, ಅತಿವೃಷ್ಟಿ ಹೆಸರಲ್ಲಿ ಆಗುತ್ತಿರುವ ಅಕ್ರಮ ತಡೆದು, ಅರ್ಹರಿಗೆ ನ್ಯಾಯ, ಸರ್ಕಾರಿ ಹಣ ಪೋಲಾಗುವುದನ್ನು ತಪ್ಪಿಸಬೇಕು. ಈ ಬಗ್ಗೆ ಉದಾಸೀನ ತೋರಿದರೆ ಬೀದಿಗಿಳಿದು ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ. ರಾಮಣ್ಣ ಕೆಂಚಳ್ಳೇರ,
ರೈತ ಮುಖಂಡ
ಅತಿವೃಷ್ಟಿಯಿಂದ ಹಾನಿಗೊಳಗಾದ ಮೂಲಸೌಕರ್ಯ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ ಯಾವುದೇ ರೀತಿಯಲ್ಲಿ ದುರ್ಬಳಕೆಯಾಗಿದ್ದರೆ ಆ ಬಗ್ಗೆ ಸಾರ್ವಜನಿಕರು ನಿರ್ದಿಷ್ಟವಾಗಿ ದೂರು ನೀಡಬೇಕು. ಅದನ್ನು ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ತಮ್ಮ ಪ್ರದೇಶದಲ್ಲಿ ಆಗುತ್ತಿರುವ ಕಾಮಗಾರಿಯ ವಿವರ ತಿಳಿದುಕೊಂಡು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಗುತ್ತಿಗೆದಾರರು ಸಹ ಕಡ್ಡಾಯವಾಗಿ ಕಾಮಗಾರಿ ಸ್ಥಳದಲ್ಲಿ ಕಾಮಗಾರಿ ವಿವರ ಫಲಕ ಹಾಕಬೇಕು.
ಕೃಷ್ಣ ಭಾಜಪೇಯಿ
ಜಿಲ್ಲಾಧಿಕಾರಿ, ಹಾವೇರಿ
ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.