ಉಗ್ರರ ರಣತಂತ್ರ
Team Udayavani, Feb 21, 2020, 6:20 AM IST
ಹಲವು ಪ್ರಮುಖ ಪ್ರಕರಣಗಳನ್ನು ತನಿಖೆ ನಡೆಸಿದ ಪೊಲೀಸ್ ಅಧಿಕಾರಿ ರಾಕೇಶ್ ಮಾರಿಯಾ ಅವರ ದಕ್ಷತೆ ಬಗ್ಗೆ ಯಾರೂ ಅನುಮಾನ ಪಡುವಂತಿಲ್ಲ. ಭಯೋತ್ಪಾದನಾ ಪ್ರಕರಣಗಳ ತನಿಖೆಯಲ್ಲಿ ಅವರು ವಿಶೇಷ ನೈಪುಣ್ಯ ಹೊಂದಿದ್ದಾರೆ. ರಾಕೇಶ್ ಮಾರಿಯಾ ಬಹಿರಂಗಗೊಳಿಸಿರುವ ಸಂಗತಿಗಳು, ಉಗ್ರರು ತಮ್ಮ ರಣತಂತ್ರವನ್ನು ಹೇಗೆಲ್ಲ ಬದಲಿಸಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.
ಮುಂಬಯಿಯ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಅವರ ಆತ್ಮಕತೆ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. “ಲೆಟ್ ಮಿ ಸೇ ಇಟ್ ನೌ’ ಎಂಬ ಈ ಪುಸ್ತಕದಲ್ಲಿ ಮಾರಿಯಾ 28 ವರ್ಷಗಳ ಪೊಲೀಸ್ ಸೇವೆಯ ಕೆಲವು ಪ್ರಮುಖ ಘಟನಾವಳಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಈ ಪೈಕಿ ಶೀನಾಬೋರಾ ಕೊಲೆ ಪ್ರಕರಣ ಮತ್ತು 2006ರಲ್ಲಿ ಮುಂಬಯಿ ಮೇಲೆ ನಡೆದ ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆಗೆ ಸಂಬಂಧಪಟ್ಟಂತೆ ಮಾರಿಯಾ ಹಂಚಿಕೊಂಡಿರುವ ವಿಚಾರಗಳು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿವೆ.
ಹಲವು ಪ್ರಮುಖ ಪ್ರಕರಣಗಳನ್ನು ತನಿಖೆ ನಡೆಸಿದ ಪೊಲೀಸ್ ಅಧಿಕಾರಿ ರಾಕೇಶ್ ಮಾರಿಯಾ ಅವರ ದಕ್ಷತೆ ಬಗ್ಗೆ ಯಾರೂ ಅನುಮಾನ ಪಡುವಂತಿಲ್ಲ. ಭಯೋತ್ಪಾದನಾ ಪ್ರಕರಣಗಳ ತನಿಖೆಯಲ್ಲಿ ಅವರು ವಿಶೇಷ ನೈಪುಣ್ಯ ಹೊಂದಿದ್ದಾರೆ. 1993ರ ಸರಣಿ ಬಾಂಬ್ ಸ್ಫೋಟ ಪ್ರಕರಣವನ್ನು ಭೇದಿಸಿದ್ದೇ ರಾಕೇಶ್ ಮಾರಿಯಾ. ಮುಂಬಯಿ ಪೊಲೀಸ್ ಕಮಿಶನರ್ ಆಗಿ ನಿವೃತ್ತರಾಗುವವರೆಗೆ ಪೊಲೀಸ್ ಇಲಾಖೆಯಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದವರು ಅವರು. ಹೀಗಾಗಿ ಅವರ ಆತ್ಮ ಕಥನ ಸಹಜವಾಗಿಯೇ ಸಾಕಷ್ಟು ಕುತೂಹಲ ಕೆರಳಿಸಿತ್ತು.
ನಿರೀಕ್ಷೆಗೆ ತಕ್ಕಂತೆ ಮಾರಿಯಾ ಕೆಲವು ಸ್ಫೋಟಕ ರಹಸ್ಯಗಳನ್ನು ಬಯಲುಗೊಳಿಸಿದ್ದಾರೆ. ಈ ಪೈಕಿ ಶೀನಾ ಬೋರಾ ಹತ್ಯಾ ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗಲೇ ತನ್ನನ್ನು ಕಮಿಶನರ್ ಹುದ್ದೆಯಿಂದ ಎತ್ತಂಗಡಿ ಮಾಡಿದ ಹಿಂದಿನ ಕಾರಣವನ್ನು ಅವರು ಬಹಿರಂಗಪಡಿಸಿದ್ದಾರೆ. ಇದು
ಇಲಾಖೆಗೆ ಸಂಬಂಧಪಟ್ಟ ವಿವಾದವಷ್ಟೆ. ಆದರೆ 26/11 ಭಯೋತ್ಪಾದನಾ ದಾಳಿಯ ಬಗ್ಗೆ ಅವರು ಬಹಿರಂಗ ಪಡಿಸಿರುವ ಕೆಲವು ವಿಚಾರಗಳು ರಾಷ್ಟ್ರವ್ಯಾಪಿಯಾಗಿ ಮಹತ್ವ ಪಡೆದುಕೊಂಡಿವೆ.
ಈ ದಾಳಿಯನ್ನು ಹಿಂದು ಭಯೋತ್ಪಾದನೆ ಎಂಬುದಾಗಿ ಬಿಂಬಿಸಲು ಪಾಕ್ ಉಗ್ರವಾದಿ ಸಂಘಟನೆ ಲಷ್ಕರ್ ಹುನ್ನಾರ ನಡೆಸಿತ್ತು. ಇದಕ್ಕಾಗಿಯೇ ಜೀವಂತ ಸೆರೆ ಸಿಕ್ಕಿದ ಉಗ್ರ ಕಸಬ್‌ಗ ಹಿಂದು ಹೆಸರಿನಲ್ಲಿ ಬೆಂಗಳೂರಿನ ವಿಳಾಸವಿರುವ ಗುರುತಿನ ಕಾರ್ಡ್ ಸೃಷ್ಟಿಸಲಾಗಿತ್ತು. ಅವನ ಗಡ್ಡ ಮೀಸೆ ಬೋಳಿಸಿ, ಕೈಗೆ ಹಿಂದುಗಳು ಸುತ್ತಿಕೊಳ್ಳುವಂಥ ಕೆಂಪು ದಾರವನ್ನು ಸುತ್ತಲಾಗಿತ್ತು. ಒಂದು ವೇಳೆ ಕಸಬ್ ಜೀವಂತ ಸೆರೆ ಸಿಗದಿರುತ್ತಿದ್ದರೆ ಅವನು ಹಿಂದು ಉಗ್ರನಾಗಿ ಸಾಯುತ್ತಿದ್ದ. ಈ ಮೂಲಕ ದಾಳಿ ಹಿಂದುಗಳದ್ದೇ ಕೃತ್ಯ ಎಂಬುದಾಗಿ ಸಾಬೀತಾಗುತ್ತಿತ್ತು ಎಂದು ಬರೆದಿದ್ದಾರೆ ಮಾರಿಯಾ.
ಈ ಪುಸ್ತಕ ಬಿಡುಗಡೆಯಾಗುತ್ತಿದ್ದಂತೆ ಕಾಂಗ್ರೆಸ್ ಟಂಕಿಸಿರುವ “ಹಿಂದು ಭಯೋತ್ಪಾದನೆ’ “ಕೇಸರಿ ಭಯೋತ್ಪಾದನೆ’ ಎಂಬ ಶಬ್ದದ ಬಗ್ಗೆಯೂ ಮತ್ತೆ ಚರ್ಚೆ ಭುಗಿಲೆದ್ದಿದೆ. ಪಾಕಿಸ್ಥಾನದ ಉಗ್ರ ಸಂಘಟನೆಗಳ ಧೋರಣೆಗೂ ಕಾಂಗ್ರೆಸ್‌ನ ಆರೋಪಗಳಿಗೂ ಸಾಮ್ಯತೆ ಇದೆ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ. ಈ ಹಿಂದೆ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಭಯೋತ್ಪಾದನೆ ದಾಳಿ ಹಿಂದುಗಳದ್ದೇ ಕೃತ್ಯ ಎಂಬ ಧಾಟಿಯಲ್ಲಿ ಆರೋಪಿಸಿದ್ದರು, ಅಲ್ಲದೇ “ಮುಂಬಯಿ ದಾಳಿಯಲ್ಲಿ ಆರ್‌ಎಸ್‌ಎಸ್‌ನ ಹುನ್ನಾರವಿದೆಯೇ?’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಅಜ್ಮಲ್ ಕಸಾಬ್ ಪಾಕಿಸ್ಥಾನದವನು ಎನ್ನುವುದು ಸಿಕ್ಕಿ ಬಿದ್ದಾಗಲೇ ಸಾಬೀತಾಗಿತ್ತು, ಪಾಕಿಸ್ಥಾನದಿಂದ ಉಗ್ರರಿಗೆ ಬರುತ್ತಿದ್ದ ಸ್ಯಾಟಲೈಟ್ ಫೋನಿನ ದಾಖಲೆಯೂ ಭಾರತಕ್ಕೆ ಸಿಕ್ಕಿತು, ಇನ್ನು ನಾರ್ಕೋ ಅನಲಿಸಿಸ್ ಪರೀಕ್ಷೆಯಲ್ಲೂ ಅವನು ತನ್ನ ಕೃತ್ಯದ ಬಗ್ಗೆ ಹೇಳಿದ್ದ. ಈ ಕಾರಣಕ್ಕಾಗಿಯೇ, ಕೃತ್ಯಕ್ಕೆ ಹಿಂದೂ ಭಯೋತ್ಪಾದನೆಯ ರೂಪ ಕೊಡಲು ಕೆಲವರು ಪ್ರಯತ್ನಿಸಿದ್ದು ಅಂದು ಸಹಜವಾಗಿಯೇ ಟೀಕೆಗೆ ಗುರಿಯಾಗಿತ್ತು. ಆದಾಗ್ಯೂ, ಭಯೋತ್ಪಾದಕರು ಹಿಂದುಗಳಂತೆ ಕಾಣಿಸಿಕೊಳ್ಳುವ ವೇಷ ಧರಿಸಿದ್ದರು ಎನ್ನುವ ಅಂಶ ತನಿಖೆಯ ಸಂದರ್ಭದಲ್ಲೇ ಬಹಿರಂಗವಾಗಿತ್ತು. ಎಫ್ಐಆರ್ ನಲ್ಲೂ ಈ ಅಂಶವನ್ನು ಉಲ್ಲೇಖೀಸಲಾಗಿದೆ.
ಆದರೂ, ರಾಕೇಶ್ ಮಾರಿಯಾ ಬಹಿರಂಗಗೊಳಿಸಿರುವ ಮತ್ತಷ್ಟು ವಿವರಗಳು, ಉಗ್ರರು ತಮ್ಮ ರಣತಂತ್ರವನ್ನು ಹೇಗೆಲ್ಲ ಬದಲಿಸಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ರಾಕೇಶ್ ಮಾರಿಯಾ ಈ ಅಂಶಗಳನ್ನು ಹೇಳಲು ಇಷ್ಟು ಸಮಯ ಏಕೆ ತೆಗೆದುಕೊಂಡರು ಎನ್ನುವ ಪ್ರಶ್ನೆಗಳೂ ಏಳುತ್ತಿವೆ. ಇದು ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರವಾದ್ದರಿಂದ, ಅವರು ಮೊದಲೇ ಮಾತನಾಡಬೇಕಿತ್ತು ಎನ್ನುವ ವಾದವನ್ನು ಸಂಪೂರ್ಣ ತಳ್ಳಿ ಹಾಕುವುದಕ್ಕೂ ಆಗುವುದಿಲ್ಲ. ಏನೇ ಇದ್ದರೂ, ಶಾಂತಿಯ ನಾಟಕವಾಡುತ್ತಿರುವ ಪಾಕಿಸ್ಥಾನ ಭಾರತವನ್ನು ಒಡೆಯಲು ಹೇಗೆಲ್ಲ ಪ್ರಯತ್ನಿಸುತ್ತಿದೆ ಎಂಬುದಕ್ಕೆ ಈ ಸಂಗತಿಗಳು ಸಾಕ್ಷಿಯಾಗಿ ನಿಲ್ಲುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.