![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 22, 2020, 7:04 AM IST
“ನಾನ್ ಹೀರೋ ಕಣ್ರೋ, ಎಲ್ರೂ ವಿಲನ್ ಅನ್ಕೊಂಡಿದ್ದಾರೆ…’ ಆ ಟೈಗರ್ ಸೀನ ಈ ಡೈಲಾಗ್ ಹೇಳುವ ಹೊತ್ತಿಗೆ, ಅಲ್ಲೆಲ್ಲೋ ಒಂದು ಮರ್ಡರ್ ಆಗಿದ್ದರೆ, ಇನ್ನೆಲ್ಲೋ ಆ ಪ್ರೇಮಿಗಳನ್ನು ಪೊಲೀಸರು ಜೈಲಿಗೆ ಕಳುಹಿಸಿರುತ್ತಾರೆ. ಮತ್ತೆಲ್ಲೋ ರೌಡಿಯೊಬ್ಬನ ಅಟ್ಟಹಾಸ ನಡೆಯುತ್ತಿರುತ್ತೆ. ಒಂದು ಸಿನಿಮಾದಲ್ಲಿ ನಾಲ್ಕು ದಿಕ್ಕಿನ ಕಥೆ ಸಾಗುತ್ತೆ. ಅದನ್ನು ತೋರಿಸಿರುವ ರೀತಿಯೇ ರೋಚಕ. ಹಾಗಾಗಿ, ಇದು ಪಕ್ಕಾ ನಿರ್ದೇಶಕ ಸೂರಿ ಸಿನಿಮಾ. ಅಷ್ಟೇ ಅಲ್ಲ, ನಿರ್ದೇಶಕರ ಕಲ್ಪನೆ ಮೀರಿ ತುಂಬಾ “ರಾ’ ಎನಿಸುವ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರತಿ ಪಾತ್ರಗಳೂ ಇಲ್ಲಿ ಜೀವಿಸಿವೆ.
ಹಾಗಾಗಿ, ಇದೊಂದು ಮಾಸ್ ಸಿನಿಮಾ ಆಗಿ ಯೂಥ್ ಹಾಗು ಪಡ್ಡೆಗಳಿಗೆ ಕಾಡುವ ಸಿನಿಮಾ ಎಂಬುದರಲ್ಲಿ ಅನುಮಾನವಿಲ್ಲ. ಸೂರಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡವರಿಗೆ ಈ ಚಿತ್ರ ಸಲೀಸಾಗಿ ಅರ್ಥವಾಗುತ್ತೆ. ಅದರಾಚೆಗೂ, ನಿರ್ದೇಶಕರು ಹೆಣೆದಿರುವ ಕಥೆ, ಚಿತ್ರಕಥೆ, ತೋರಿಸಿರುವ ರೀತಿ ಹೊಸತರಲ್ಲಿ ಹೊಸತು. ಪಾತ್ರಗಳನ್ನು ರಗಡ್ ಆಗಿ ಕಟ್ಟಿಕೊಟ್ಟಿದ್ದರೂ ಅವುಗಳಿಗೆ ಚೌಕಟ್ಟು ಹಾಕಿ, ಎಲ್ಲೋ ಒಂದು ಕಡೆ ಅವುಗಳ ಮೇಲೆ “ಫೀಲ್’ ಎನಿಸುವ ಅಂಶ ಇಟ್ಟಿರುವುದು ಹೈಲೈಟ್. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು. ಕಥೆ. ಮೊದಲೇ ಹೇಳಿದಂತೆ, ಇಲ್ಲಿ ನಾಲ್ಕು ದಿಕ್ಕಿನಲ್ಲೂ ಕಥೆ ರನ್ ಆಗುತ್ತದೆ.
ಒಂದೊಂದು ದಿಕ್ಕಿನಲ್ಲಿ ಒಬ್ಬೊಬ್ಬರ ಕಥೆ ಸಾಗಿದರೂ, ಕ್ಲೈಮ್ಯಾಕ್ಸ್‌ನಲ್ಲಿ ಮಾತ್ರ ಆ ಎಲ್ಲಾ ಪಾತ್ರಗಳನ್ನು ಕಲೆಹಾಕಿ ಅಲ್ಲೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ಅದೇ ಚಿತ್ರದ ಹೈಲೈಟ್. ಸೂರಿ ಚಿತ್ರದಲ್ಲಿ ಅವರದೇ ಆದ ಒಂದಷ್ಟು ಫ್ಲೇವರ್ ಇದ್ದೇ ಇರುತ್ತೆ. ಅದು ಇಲ್ಲಿ ಎಂದಿಗಿಂತ ಸ್ವಲ್ಪ ಹೊಸದಾಗಿದೆ. ಅವರು ಆಯ್ಕೆ ಮಾಡಿಕೊಂಡ ಕಥೆಯಷ್ಟೇ ಅಲ್ಲ, ಪಾತ್ರಗಳು, ಲೊಕೇಷನ್‌ಗಳು, ಮೇಕಿಂಗ್, ವಿಷ್ಯುಯಲ್ ಟ್ರೀಟ್ ಪ್ರತಿಯೊಂದು ಸಣ್ಣ ಅಂಶವನ್ನೂ ಬಿಡದೆ, ರಿಜಿಸ್ಟರ್ ಆಗುವಂತೆ ಮಾಡುವ ಮತ್ತು ಅದನ್ನು ಪ್ರೇಕ್ಷಕರು ಅಷ್ಟೇ ಸೂಕ್ಷ್ಮವಾಗಿ ಗಮನಿಸುವಂತೆ ಕಟ್ಟಿಕೊಡುವ ರೀತಿ ಮೆಚ್ಚಬೇಕು.
ಪರಭಾಷೆ ಸಿನಿಮಾಗಳ ಕಥೆ, ಮೇಕಿಂಗು ಇತ್ಯಾದಿ ಬಗ್ಗೆ ಮಾತನಾಡುವ ಕೆಲ ಮಂದಿಗೆ ಈ ಚಿತ್ರ ನೋಡಿದರೆ, ಖಂಡಿತ ನಾವೇನ್ ಕಮ್ಮಿ ಅಂತ ಹೇಳದಿರಲಾರರು. ಅಷ್ಟರ ಮಟ್ಟಿಗೆ ಸೂರಿ ತಮ್ಮ ಹೊಸ “ದುನಿಯಾ’ ದರ್ಶನ ಮಾಡಿಸಿದ್ದಾರೆ. ಸೂರಿ ಸಿನಿಮಾದಿಂದ ಸಿನಿಮಾಗೆ ಅಪ್‌ಡೇಟ್ ಆಗಿದ್ದಾರೆ ಅನ್ನುವುದನ್ನು ಮುಲಾಜಿಲ್ಲದೆ ಹೇಳಬಹುದು. ನೋಡುಗರಿಗೆ ಅದು ಎಲ್ಲೋ ಸ್ಲಂನಲ್ಲಿ ನಡೆದ ಘಟನೆ, ಅದೆಲ್ಲೋ ಸಿಟಿಯ ಅಡ್ಡವೊಂದ ರಲ್ಲಿ ಕಂಡ ದೃಶ್ಯ, ಅಂತಹ ವ್ಯಕ್ತಿಗಳನ್ನು ಯಾವಾಗಲೋ ಒಮ್ಮೆ ಹಾದೀಲಿ ನೋಡಿದಂತಹ ನೆನಪು ಎಂಬಷ್ಟರಮಟ್ಟಿಗೆ ಚಿತ್ರದ ಪ್ರತಿ ದೃಶ್ಯ,
ಪಾತ್ರಗಳನ್ನು ಹಾರೈಕೆ ಮಾಡಿ ತೋರಿಸಿರುವ ರೀತಿಗೆ ಸೂರಿ ಕುಸುರಿ ಕೆಲಸ ಇಷ್ಟವಾಗುತ್ತೆ. ಮೊದಲರ್ಧ ಮುಗಿ ಯೋದೇ ಗೊತ್ತಾಗಲ್ಲ. ಅಲ್ಲಲ್ಲಿ ಅಸಹ್ಯ ಎನಿಸುವ ಕೆಲ ಮಾತುಗಳು, ಆಗಾಗ ಬರುವ ಪೋಲಿ ಮಾತುಗಳು ಮುಜುಗರ ಎನಿಸುತ್ತವೆ. ಬರೀ ಬಿಲ್ಡಪ್‌ಗ್ಳಲ್ಲೇ ಕುತೂಹಲ ಮೂಡಿಸಿರುವುದು ವಿಶೇಷ. ದ್ವಿತಿಯಾ ರ್ಧದಲ್ಲಿ ಮತ್ತಷ್ಟು ಪಾತ್ರಗಳು, ಹೊಸ ವಿಷಯಗಳು ಬಿಚ್ಚಿಕೊಳ್ಳುತ್ತವೆಯಾ ದರೂ, ಒಂದಷ್ಟು ಕತ್ತರಿಗೆ ಅವಕಾಶ ಕೊಡಬಹುದಿತ್ತು. ಸ್ವಲ್ಪ ಅವಧಿ ಕಡಿಮೆಗೊಳಿಸಿದರೆ, ಪಾಪ್‌ಕಾರ್ನ್ ಇನ್ನಷ್ಟು ರುಚಿಸುತ್ತಿತ್ತೇನೋ? ಇದೊಂದು ರಕ್ತಸಿಕ್ತ ಅಧ್ಯಾಯದ ಪುಟಗಳಿರುವ ಕಥೆ.
ಒಂದೊಂದು ಪುಟ ತೆರೆದಷ್ಟೂ ತಣ್ಣನೆ ಕ್ರೌರ್ಯ, ಬೊಗಸೆಯಷ್ಟು ಪ್ರೀತಿ, ಕೊಲೆ ಗೈಯುವಷ್ಟು ದ್ವೇಷ, ಅಸೂಯೆ, ಹಣದ ಆಸೆ, ಹೆಣ್ಣಿನ ವ್ಯಾಮೋಹ, ತಾಯಿಯ ಸಂಕಟ, ಸಂಬಂಧಗಳ ಮೌಲ್ಯ, ಮನಸ್ಥಿತಿಯ ಒದ್ದಾಟ, ಪರಿಸ್ಥಿತಿಯ ಗುದ್ದಾಟಗಳೆಲ್ಲವೂ ಸುತ್ತಿಕೊಂಡು ಸಮಾಜದೊಳಗಿನ ವ್ಯವಸ್ಥೆ ಮತ್ತು ನೈಜಕ್ಕೆ ಹತ್ತಿರ ಎನಿಸುವ ಅಂಶಗಳನ್ನೇ ಬಗೆದಿಟ್ಟಿದ್ದಾರೆ. ಮುಂದೇನು ಎಂಬ ಕುತುಹಲದಲ್ಲೇ ಸಾಗುವ ಚಿತ್ರದಲ್ಲಿ “ದುನಿಯಾ’ದೊಳಗಿನ ಕ್ರೈಮು, ರೌಡಿಸಂನ ಛಾಯೆ ಕಾಣಬಹುದು, “ಇಂತಿ ನಿನ್ನ ಪ್ರೀತಿಯ’ ಕುಡುಕ ನೆನಪಾಗಬಹುದು, “ಕೆಂಡಸಂಪಿಗೆ’ಯಂತಹ ಪ್ರೀತಿ ಕಾಡಬಹುದು.
ಶ್ರದ್ಧೆ, ಶ್ರಮ, ಪ್ರೀತಿ ಹೀಗೆ ಎಲ್ಲಾ ಅವತಾರಗಳನ್ನು ಒಮ್ಮೆಲೆ ಮಿಕ್ಸ್ ಮಾಡಿ ಪಾಪ್‌ಕಾರ್ನ್ ರುಚಿಗೆ ಹೊಸ ಫ್ಲೇವರ್ ಹೆಚ್ಚಿಸಿದ್ದಾರೆ. ಇಲ್ಲಿ ಮೆಚ್ಚುವ ಇನ್ನೊಂದು ಅಂಶವೆಂದರೆ, ಬಹುತೇಕ ಹೊಸ ಮುಖಗಳು. ಸೂರಿ ಸಿನಿಮಾದ ವಿಶೇಷವೇ ಹಾಗೆ. ಸಣ್ಣ ಪಾತ್ರ ಕೂಡ ಇಲ್ಲಿ ಪ್ರಮುಖ ಎನಿಸುತ್ತೆ. ಈ ಬಾರಿ ಬಹುತೇಕ ಹೊಸ ಪ್ರತಿಭೆಗಳ ಅನವಾರಣಗೊಂಡಿದೆ. ಗಮನಿಸಬೇಕಾದ ಅಂಶವೆಂದರೆ, ಸೂರಿ ತಮ್ಮ ಕಲ್ಪನೆಯ ಪಾತ್ರಗಳಿಗೆ “ಟೈಗರ್ ಸೀನ’, “ಮಂಕಿ ಸೀನ’,”ಮೂಗ’, “ಗಲೀಜು’,”ರೇಸರ್ ಗೋಪಿ’,”ಹಾವು-ರಾಣಿ’,”ಕುಷ್ಕ’,”ಕಪ್ಪೆ’,”ಶುಗರ್’,”ಕೊತ್‌ಮ್ರಿ’ ಹೀಗೆ ಹಲವು ವಿಶೇಷ ಹೆಸರುಗಳೇ ಮಜವೆನಿಸುತ್ತವೆ ಮತ್ತು ಕುತೂಹಲಕ್ಕೂ ಕಾರಣವಾಗುತ್ತಾ ಹೋಗುತ್ತವೆ.
ಇಲ್ಲಿ ಪಾತ್ರಗಳ ಹೆಸರೇ ಹೀಗಿವೆ ಅಂದಮೇಲೆ, ಸಿನಿಮಾ ಹೇಗಿರಬೇಡ? ಸೂರಿಯ ಹೊಸ ಫ್ಲೇವರ್ ಬೇಕೆಂದವರು ಒಂದೊಮ್ಮೆ ಸಿನಿಮಾ ನೋಡಿ, ನೈಜತೆಯ ಅನುಭವ ಪಡೆದು ಬರಲ್ಲಡ್ಡಿಯಿಲ್ಲ. ಕಥೆ ಬಗ್ಗೆ ಹೇಳುವುದಕ್ಕಿಂತ ಮೇಕಿಂಗ್ ಮೂಲಕ ಕಥೆ ಅರ್ಥೈಸಿಕೊಂಡರೆ ಅರ್ಥವಾಗುತ್ತೆ. ಚಿತ್ರಕಥೆಯನ್ನು ತುಂಬಾ ಗಂಭೀರವಾಗಿ ಫಾಲೋ ಮಾಡಿದರೆ ಮಾತ್ರ ಚಿತ್ರದೊಳಗಿನ “ಕೆಂಡ ಮತ್ತು ಸಂಪಿಗೆ’ಯ ಪರಿಮಳ ಸವಿಯಬಹುದು. ಒಟ್ಟಾರೆ, ಇಲ್ಲಿ ವಾಸ್ತವ ಪ್ರಪಂಚದ ನೈಜ ಚಿತ್ರಣ ತೋರಿಸುವ ಪ್ರಯತ್ನವಿದೆ. ಇಂತಹ ಚಿತ್ರಗಳಿಗೆ ಪಾತ್ರಗಳು ಮುಖ್ಯ ಧನಂಜಯ್ ಇಲ್ಲಿ “ಡಾಲಿ’ ಇಮೇಜ್ ಪಕ್ಕಕ್ಕಿರಿಸುವಂತಹ ಪಾತ್ರದಲ್ಲೇ ಮಿಂಚಿದ್ದಾರೆ. ತಮ್ಮ ನಟನೆ, ಡೈಲಾಗ್ ಡಿಲವರಿ ಮೂಲಕ ಇಷ್ಟವಾಗುತ್ತಾರೆ. ಅಲ್ಲಲ್ಲಿ ಸಣ್ಣದ್ದಾಗಿ ರೆಪ್ಪೆ ತೇವಗೊಳಿಸುವಲ್ಲೂ ಯಶಸ್ವಿಯಾಗುತ್ತಾರೆ.
ನಿವೇದಿತಾ (ಸ್ಮಿತಾ) ಇಲ್ಲಿ ಎರಡು ಶೇಡ್ ಪಾತ್ರದಲ್ಲೂ ಗಮನಸೆಳೆಯುತ್ತಾರೆ. ಕಾಕ್ರೋಚ್ ಸುಧಿ, ರೇಖಾ, ಅಮೃತಾ ಅಯ್ಯಂಗಾರ್, ಪ್ರಶಾಂತ್ ಸಿದ್ದಿ, ಎಲ್ಲರೂ ಕೂಡ ಸೂರಿ ಕಲ್ಪನೆಗೆ ಮೋಸ ಮಾಡಿಲ್ಲ. “ರೇಸರ್ ಗೋಪಿ’ ಮೂಗ, ಗಿರಿಜಾ, ಮತ್ತು ಗಲೀಜು ಪಾತ್ರ ಮಾಡಿರುವ ಕಲಾವಿದರಿಗೂ ಭವಿಷ್ಯವಿದೆ. ಇಲ್ಲಿ ಇನ್ನೊಂದು ಹೈಲೈಟ್ ಅಂದರೆ ಅದು ಚರಣ್‌ರಾಜ್ ಅವರ ಹಿನ್ನೆಲೆ ಸಂಗೀತ. ಚಿತ್ರದ ವೇಗಕ್ಕೆ ಸಂಗೀತ ಹೆಗಲಾಗಿದೆ. ಶೇಖರ್ ಛಾಯಾಗ್ರಹಣ ಚಿತ್ರದ ವಿಶೇಷ. ಎಲ್ಲವನ್ನೂ ಚೆನ್ನಾಗಿ ಕಟ್ಟಿಕೊಟ್ಟು, ಕೊನೆಯಲ್ಲೊಂದು ಪ್ರಶ್ನೆ ಇಟ್ಟು, ಮತ್ತೂಂದು ಕುತೂಹಲಕ್ಕೂ ಸೂರಿ ಕಾರಣ ಆಗುತ್ತಾರೆ. ಆ ಪ್ರಶ್ನೆ ಏನು? ಉತ್ತರ ಬೇಕಿದ್ದರೆ ಸಿನಿಮಾ ನೋಡಬಹುದು.
ಚಿತ್ರ: ಪಾಪ್‌ಕಾರ್ನ್ ಮಂಕಿ ಟೈಗರ್
ನಿರ್ದೇಶನ: ಸೂರಿ
ನಿರ್ಮಾಣ: ಸುಧೀರ್ ಕೆ.ಎಂ.
ತಾರಾಗಣ: ಧನಂಜಯ್, ನಿವೇದಿತಾ, ಕಾಕ್ರೋಚ್ ಸುಧಿ, ರೇಖಾ, ಅಮೃತಾ, ಸಪ್ತಮಿ, ಪ್ರಶಾಂತ್ ಸಿದ್ದಿ ಇತರರು.
* ವಿಜಯ್ ಭರಮಸಾಗರ
You seem to have an Ad Blocker on.
To continue reading, please turn it off or whitelist Udayavani.