ಪಟ್ಟು ಹಿಡಿದು ಹೋರಾಡಿದ್ರೆ ಪಟ್ಟ ಸಿಗೋದು ಗ್ಯಾರಂಟಿ!
Team Udayavani, Feb 23, 2020, 7:15 AM IST
ಮಿಡ್ಲ್ಕ್ಲಾಸ್ ಫ್ಯಾಮಿಲಿಗೆ ಸೇರಿದ ಒಬ್ಬಳು ಗೃಹಿಣಿ. ಆಕೆಗೆ ಇಬ್ಬರು ಮಕ್ಕಳಿದ್ದಾರೆ. ವಯಸ್ಸು 30ನ್ನು ದಾಟಿದೆ. ಅಂಥವಳಿಗೆ, ದಿಢೀರ್ ಅನಾರೋಗ್ಯ ಉಂಟಾದರೆ? ಮೆದುಳಿನಲ್ಲಿ ಸ್ವಲ್ಪ ಸಮಸ್ಯೆಯಿದೆ ಕಣ್ರಿ ಎಂದು ವೈದ್ಯರೇ ಹೇಳಿಬಿಟ್ಟರೆ? ಆನಂತರದಲ್ಲಿ ಏನೇನಾಗಬಹುದು?
ಬಹಳಷ್ಟು ಸಂದರ್ಭದಲ್ಲಿ, ಆ ಗೃಹಿಣಿಯ ಮನೆಯವರು ಹತ್ತಾರು ದೇವಾಲಯಗಳಿಗೆ ಎಡತಾಕುತ್ತಾರೆ. ಏಳೆಂಟು ಆಸ್ಪತ್ರೆಗಳಿಗೆ ಹೋಗಿ ಬರುತ್ತಾರೆ. ಈ ಮಧ್ಯೆಯೇ ನೂರೆಂಟು ಮಂದಿಯ ಸಲಹೆ ಕೇಳಿ, ಆಲೋಪತಿ, ಆಯುರ್ವೇದ, ಯುನಾನಿ, ಹೋಮಿ ಯೋಪತಿ… ಹೀಗೆ ಎಲ್ಲ ಬಗೆಯ ಚಿಕಿತ್ಸೆ ಕೊಡಿಸಲೂ ಮುಂದಾ ಗುತ್ತಾರೆ. ನಂತರ- “ನಮ್ಮ ಪ್ರಯತ್ನ ನಾವು ಮಾಡ್ತಾನೇ ಇದೀವಿ. ಮುಂದಿನದು ಭಗವಂತನಿಗೆ ಬಿಟ್ಟಿದ್ದು’ ಎಂದು ಹೇಳಿಕೊಂಡು ಸುಮ್ಮನಾಗುತ್ತಾರೆ. ಇಂಥ ಸಾಧ್ಯತೆಗಳೇ ಹೆಚ್ಚಾಗಿರುವ ಸಂದರ್ಭ ದಲ್ಲಿ, ಮಿದುಳಿನ ಸಮಸ್ಯೆಗೆ ಒಳಗಾದ ಗೃಹಿಣಿಯೊಬ್ಬಳು- ಬಾಡಿ ಬಿಲ್ಡರ್ ಆಗಿ ಬದ ಲಾದಳು ಅಂದರೆ; ಸಿಕ್ಸ್‌ಪ್ಯಾಕ್ ದೇಹ ಹೊಂದಿದಳು ಅಂದರೆ; ಬಾಹು ಬಲಿ ಸಿನಿಮಾದ ನಾಯಕ-ನಾಯಕಿಯಾದ ಪ್ರಭಾಸ್, ಅನೂಷ್ಕಾಗೂ ಫಿಟ್‌ನೆಸ್‌ನ ಪಾಠ ಹೇಳಿಕೊಟ್ಟಳು ಅಂದರೆ ನಂಬಲು ಸಾಧ್ಯವಾ?
ಅಂಥದೊಂದು ರಿಯಲ್ ಸ್ಟೋರಿಯ ಕಥಾ ನಾಯಕಿಯೇ ಕಿರಣ್ ಡೆಂಬ್ಲಾ. ತಮ್ಮ ಬಾಳಕಥೆಯನ್ನು ಇಲ್ಲಿ ಅವರೇ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಓದಿಕೊಳ್ಳಿ…
ದೆಹಲಿಗೆ ಸಮೀಪವಿರುವ ಆಗ್ರಾ ನಮ್ಮೂರು. ತಾಜಮಹಲಿನ ಚೆಲುವನ್ನು ಕಣ್ತುಂಬಿಕೊಂಡೇ ಬೆಳೆದವಳು ನಾನು. ಅಪ್ಪ ಬ್ಯಾಂಕರ್. ಅವರ ಹೆಸರು ಜಯಂತ್ ಮೀರ್‌ಚಂದಾನಿ. ಅಮ್ಮ ಆಶಾ, ಗೃಹಿಣಿ. ತಮ್ಮಂದಿರು, ತಂಗಿಯರಿದ್ದ ತುಂಬು ಕುಟುಂಬ ನಮ್ಮದು. ಶಾಸ್ತ್ರೀಯ ಸಂಗೀತದ ಬಗ್ಗೆ ಎಲ್ಲರಿಗೂ ಒಲವಿತ್ತು. ಎಷ್ಟೋ ಬಾರಿ, ಅಮ್ಮ ಹಾಡಲು ಶುರುಮಾಡಿದರೆ, ಆಗ ಅಪ್ಪನೂ, ಅವರ ನಂತರ ನಾವು ಮಕ್ಕಳೂ ದನಿಗೂಡಿಸುತ್ತಿದ್ದೆವು. ಹಾಡುವುದರಲ್ಲಿ ಉಳಿದೆಲ್ಲರಿಗಿಂತ ಮುಂದಿದ್ದ ನಾನು, ನಾಲ್ಕನೇ ವಯಸ್ಸಿಗೇ ಸ್ಟೇಜ್ ಶೋ ಕೊಡುವಷ್ಟರಮಟ್ಟಿಗೆ’ ಸಂಗೀತ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಸಾಧಿಸಿದ್ದೆ.
25 ತುಂಬುವುದರೊಳಗೆ ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಬಿಡಬೇಕು ಎಂದು ಮಿಡ್ಲ್ಕ್ಲಾಸ್ ಫ್ಯಾಮಿಲಿಗಳ ಎಲ್ಲ ಪೋಷಕರೂ ಯೋಚಿ ಸು ತ್ತಾರೆ ತಾನೆ? ನನ್ನ ಹೆತ್ತವರೂ ಅದಕ್ಕೆ ಹೊರತಾಗಿರಲಿಲ್ಲ. ಪರಿ ಣಾಮ: 23ನೇ ವಯಸ್ಸಿಗೇ ನನ್ನ ಮದುವೆಯಾಯಿತು. ಪತಿ ರಾಯ ಅಜಿತ್‌ಗೆ ಎಂಎನ್‌ಸಿಯೊಂದರಲ್ಲಿ ನೌಕರಿಯಿತ್ತು. 1997ರಲ್ಲಿ ಮದುವೆಯಾದವಳು, ನಂತರದ ಒಂಬತ್ತು ವರ್ಷಗಳಲ್ಲಿ ಬೆಂಗಳೂರು, ಮುಂಬಯಿ, ಜಪಾನ್, ಜರ್ಮನಿ, ಅಮೆರಿಕಗಳಲ್ಲಿ ಬದುಕು ಕಳೆದೆ. ಈ ಅವಧಿಯಲ್ಲಿ ಇಬ್ಬರು ಮಕ್ಕಳು ಮಡಿಲು ತುಂಬಿದರು. ಕಡೆಗೊಮ್ಮೆ, ಇನ್ನು ಊರೂರು ಸುತ್ತಿದ್ದು ಸಾಕು. ಎಲ್ಲಾದರೂ ಒಂದು ಕಡೆ ಸೆಟಲ್ ಆಗಿಬಿಡೋಣ ಎಂದುಕೊಂಡಾಗ ಕಾಣಿಸಿದ್ದು ಹೈದ್ರಾಬಾದ್. ಅಲ್ಲಿ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಉಳಿದುಕೊಂಡದ್ದಾಯ್ತು.
ನೆಂಟರು, ಗೆಳೆಯರು, ನೆರೆಹೊರೆಯವರಿಂದ ಸದಾ ಗಿಜಿಗಿಜಿ ಅನ್ನುತ್ತಿದ್ದ ಪರಿಸರದಲ್ಲಿ ಬೆಳೆದವಳು ನಾನು. ಆದರೆ ಹೈದರಾಬಾದ್‌ನಲ್ಲಿ ಪರಿಚಿತರಿಲ್ಲದೆ ದಿನದೂಡಬೇಕಿತ್ತು. ಮನೆಕೆಲಸ, ಅಡುಗೆ ಕೆಲಸ, ನಿದ್ರೆ -ಇದಿಷ್ಟೇ ರೂಟೀನ್ ಆಯಿತು. ಈ ನಡುವೆ, ಏಕತಾನತೆ ಕಳೆಯಲೆಂದು ನೆರೆಹೊರೆಯ ಮಕ್ಕಳಿಗೆ ಸಂಗೀತ ಹೇಳಿಕೊಡಲು ನಿರ್ಧರಿಸಿದೆ. ಹೀಗೇ ಒಂದೆರಡು ವಾರ ಕಳೆಯಿತು. ಮೂರನೇ ವಾರ, ಸಂಗೀತದ ಪಾಠ ಹೇಳಿಕೊಡುವ ನೆಪದಲ್ಲಿ ಹಾಡಲು ಹೋದರೆ, ಯಾಕೋ ಉಸಿರು ಕಟ್ಟಿದಂತಾಯಿತು. ಆನಂತರದ ದಿನಗಳಲ್ಲಿ ಅರ್ಧ ಕಿಲೋಮೀಟರ್ ನಡೆಯುವುದೂ, ಹತ್ತು ನಿಮಿಷಗಳ ಕಾಲ ಒಂದೇ ಕಡೆ ನಿಲ್ಲುವುದೂ ಕಷ್ಟವೆನಿಸತೊಡಗಿತು. ದೇಹವನ್ನು ಸ್ವಲ್ಪ ಮಾತ್ರ ಬಾಗಿಸುವುದೂ ಹಿಂಸೆ ಅನ್ನಿಸತೊಡಗಿತು. ಅರೆರೆ, ಇದೇನಾಗಿ ಹೋಯ್ತು ಎಂಬ ಗಾಬರಿಯೊಂದಿಗೇ ಕನ್ನಡಿಯ ಮುಂದೆ ನಿಂತವಳು ಬೆಚ್ಚಿಬಿದ್ದೆ. ಕಾರಣ, ನನ್ನ ದೇಹ ಪೂರಿಯಂತೆ ಊದಿಕೊಂಡಿತ್ತು. ಹೈಸ್ಕೂಲು-ಕಾಲೇಜಿನ ದಿನಗಳಲ್ಲಿ “ಬಳುಕುವ ಬಳ್ಳಿ’ ಎಂದು ಎಲ್ಲರಿಂದಲೂ ಕರೆಸಿಕೊಂಡಿದ್ದವಳು ನಾನು. ಆದರೆ ಈಗ, ನನ್ನ ಗುರುತು ನನಗೇ ಸಿಗದಂತೆ ಆಗಿಹೋಗಿದ್ದೆ. ಸಾಲ ದೆಂಬಂತೆ’ ಮೇಲಿಂದ ಮೇಲೆ ಉಬ್ಬಸ, ಸುಸ್ತು, ತಲೆನೋವು, ವಾಂತಿ!
ಅವತ್ತು ಸಂಜೆ ಗಂಡ ಮನೆಗೆ ಬಂದಾಕ್ಷಣ, ನನ್ನ ಕಷ್ಟವನ್ನೆಲ್ಲ ಹೇಳಿ ಕೊಂಡೆ. ಮರುದಿನವೇ ತಜ್ಞವೈದ್ಯರನ್ನು ಭೇಟಿಯಾದೆವು. ಅವರು, ಹತ್ತಾರು ಬಗೆಯ ಪರೀಕ್ಷೆ ಮಾಡಿ, ಕಡೆಗೊಮ್ಮೆ ವಿಷಾದದಿಂದ ಹೇಳಿ ದರು: “ಮೆದುಳಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ರಕ್ತ ಹೆಪ್ಪುಗಟ್ಟಿದೆ. ದೇಹದ ತೂಕ ಅತಿಯಾಗಿರುವ ಕಾರಣ, ಅನಾರೋಗ್ಯ ಜೊತೆಯಾಗಿದೆ. ಮೊದಲು ತೂಕ ಕಡಿಮೆ ಮಾಡಿಕೊಳ್ಳಿ. ಇಲ್ಲಾಂದ್ರೆ ಕಷ್ಟ ಆಗುತ್ತೆ…’
ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂಬ ಸುದ್ದಿ ಕೇಳಿದಾಕ್ಷಣ ತಲೆಸುತ್ತು ಬಂತು. ಒಳ್ಳೆಯ ಚಿಕಿತ್ಸೆ ಸಿಗದೇ ಹೋದರೆ ಸ್ಟ್ರೋಕ್ ಆಗುವುದು ಗ್ಯಾರಂಟಿ. ಹಾಗೇನಾದರೂ ಆದರೆ, ದೇಹದ ಅರ್ಧಭಾಗ ಬಿದ್ದು ಹೋಗು ತ್ತದೆ. ಆನಂತರ ಸಾಯುವವರೆಗೂ ಇನ್ನೊಬ್ಬರ ಮೇಲೇ ಡಿಪೆಂಡ್ ಆಗಬೇಕು. ಹೀಗೇನಾದರೂ ಆದರೆ, ನನ್ನ ಮಕ್ಕಳ ಗತಿಯೇನು? ನನ್ನ ಬದುಕು 30 ವರ್ಷಕ್ಕೇ ಮುಗಿದು ಹೋಗುತ್ತಾ? -ಹೀಗೆಲ್ಲ ಯೋಚಿಸಿದವಳಿಗೆ, ಹೇಗಾದರೂ ಮಾಡಿ, ಮೊದಲು ದೇಹದ ತೂಕ ಇಳಿಸಿಕೊಳ್ಳಬೇಕು. ಆನಂತರ ಯಾವುದಾದ್ರೂ ಆಸ್ಪತ್ರೆ ಸೇರಿ ಆರೇಳು ತಿಂಗಳ ಕಾಲ ನಿರಂತರವಾಗಿ ಚಿಕಿತ್ಸೆ ಪಡೆಯಬೇಕೆಂಬ ಐಡಿಯಾ ಜೊತೆಯಾಯ್ತು. ಗಂಡನಿಗೂ ಇದನ್ನೇ ಹೇಳಿದೆ. ದಿನವೂ ಅರ್ಧಗಂಟೆ ಈಜು ಹೊಡೆದರೆ ಖಂಡಿತ ತೆಳ್ಳಗಾಗಬಹುದು ಎಂಬ ಸಲಹೆ ಹಲವರಿಂದ ಬಂತು.
ಮರುದಿನವೇ, ಈಜು ಕಲಿಕೆಯ ತರಗತಿಗೆ ಸೇರಿಕೊಂಡೆ. ಆದರೆ, ನೀರಿಗಿಳಿವ ಮೊದಲೇ ಭಯ ಶುರುವಾಯಿತು. ನಾನೇನಾದರೂ ನೀರಲ್ಲೇ ಮುಳುಗಿ ಸತ್ತುಹೋದರೇ, ವಿಪರೀತ ದಪ್ಪಗಿರುವುದರಿಂದ ಕೈಕಾಲು ಬಡಿಯುವುದೇ ಕಷ್ಟವಾದರೆ, ಅದೇ ಕಾರಣಕ್ಕೆ ಮುಳುಗಿ ಹೋದರೆ, ಈಜುತ್ತಿದ್ದಾಗಲೇ ಸ್ಟ್ರೋಕ್ ಅಥವಾ ಹಾರ್ಟ್ ಅಟ್ಯಾಕ್ ಆಗಿಬಿಟ್ಟರೆ… ಇಂಥ ಕೆಟ್ಟ ಯೋಚನೆಗಳೇ ಮತ್ತೆ ಮತ್ತೆ ಬರತೊಡಗಿದವು. ಪರಿಣಾಮ, ನಾಲ್ಕೇ ದಿನಕ್ಕೆ ಈಜು ತರಗತಿಗೆ ಗುಡ್‌ಬೈ ಹೇಳಿದೆ. ಆಮೇಲೆ ಮನೆಯಲ್ಲಿ ಒಬ್ಬಳೇ ಇದ್ದಾಗ ಒಳಮನಸ್ಸು ಎಚ್ಚರಿಸಿತು: ಮನೆಯಲ್ಲಿಯೇ ಕೂತರೆ ತೂಕ ಇಳಿಯುವುದಿಲ್ಲ. ಏನಾದರೂ ಸಾಧಿಸಬೇಕೆಂದರೆ, ಕಷ್ಟಗಳ ಸೈಕಲ್ ತುಳಿಯಲೇಬೇಕು. ಈಜುವವ ರೆಲ್ಲಾ ಸತ್ತುಹೋಗಿದಾರಾ? ಹೆದರುವುದೇಕೆ? ಸ್ವಲ್ಪ ರಿಸ್ಕ್ ತಗೋ…
ಇಂಥದೊಂದು ಫೀಲ್ ಜೊತೆಯಾದ ಮೇಲೆ ಮತ್ತೆ ಈಜುಕೊಳಕ್ಕೆ ಹೋದೆ. ಆನಂತರದ ಹತ್ತೇ ದಿನದಲ್ಲಿ ಬೆಸ್ಟ್ ಸ್ವಿಮ್ಮರ್ ಅನ್ನಿಸಿಕೊಂಡೆ. ಮುಂದಿನ ನಾಲ್ಕು ತಿಂಗಳಲ್ಲಿ 12 ಕೆ.ಜಿ. ತೂಕ ಇಳಿಸಿಕೊಂಡೆ. ಆದರೆ ದಿನವೂ ನೀರಿಗಿಳಿದ ಪರಿಣಾಮ, ಚರ್ಮದ ಸಮಸ್ಯೆ ಕಾಣಿಸಿಕೊಂಡಿತು. ಈಗ ಈಜುವುದನ್ನು ತಕ್ಷಣ ನಿಲ್ಲಿಸಿದರೆ ಮತ್ತೆ ಊದಿಕೊಳ್ಳುವ ಅಪಾಯವಿತ್ತು. ಹಾಗಾಗಿ, ಜಿಮ್‌ಗೆ ಸೇರಿಕೊಂಡೆ.
ಇದೆಲ್ಲಾ 14 ವರ್ಷದ ಹಿಂದಿನ ಮಾತು. ಆಗೆಲ್ಲಾ ಜಿಮ್‌ನಲ್ಲಿ ವರ್ಕ್ ಔಟ್ ಮಾಡುವುದು ಗಂಡಸರು ಮಾತ್ರ ಎಂಬ ನಂಬಿಕೆ ಯಿತ್ತು. ಅವರನ್ನು ಬಿಟ್ಟರೆ, 18-20 ವರ್ಷದ ಸಿನಿಮಾ ಹೀರೋ ಯಿನ್ ಗಳು ಮಾತ್ರ ಜಿಮ್‌ಗೆ ಹೋಗಿ ದೇಹವನ್ನು ಹುರಿಗಟ್ಟಿಸುತ್ತಿ ದ್ದರು. ಇಂಥ ಸಂದರ್ಭದಲ್ಲಿಯೇ 33 ವರ್ಷ ದಾಟಿದ್ದ ನಾನೂ ಜಿಮ್‌ಗೆ ಹೋಗಿದ್ದೆ. ಗಂಡಸರು ಜಿಮ್‌ನ ತುಂಬೆಲ್ಲಾ ಹರಡಿ ಕೊಂಡು ಕಸರತ್ತು ಮಾಡುತ್ತಿದ್ದರು. ನಾನು ಒಂದು ಮೂಲೆಯಲ್ಲಿ ಗುಬ್ಬಚ್ಚಿಯಂತೆ ಮುದುರಿನಿಂತು, ತರಬೇತಿ ದಾರನ ಸಲಹೆಗಳನ್ನು ಪಾಲಿಸುತ್ತಿದ್ದೆ. ಈ ಸಂದರ್ಭದಲ್ಲಿ ಗಂಡಸರಲ್ಲಿ ಕೆಲವರು- ನನ್ನನ್ನೇ ಎವೆಯಿಕ್ಕದೆ ನೋಡುತ್ತಿದ್ದರು. ಆಗೆಲ್ಲಾ ಮುಜುಗರವಾಗುತ್ತಿತ್ತು. ತೂಕ ಇಳಿಸಲೇ ಬೇಕಿದ್ದರಿಂದ ಇಂಥ ಸಂಕಟಗಳನ್ನೆಲ್ಲ ಹಲ್ಲುಕಚ್ಚಿ ಸಹಿಸಿಕೊಳ್ಳಲೇಬೇಕಿತ್ತು.
ದಿನಗಳು ಉರುಳಿದಂತೆಲ್ಲಾ ಜಿಮ್‌ನಲ್ಲಿ ಕಸರತ್ತು ಮಾಡುವುದು ಅತೀ ಅನ್ನುವಷ್ಟು ಇಷ್ಟವಾಗತೊಡಗಿತು. ಎಷ್ಟರಮಟ್ಟಿಗೆ ಎಂದರೆ- ಬಾಡಿಬಿಲ್ಡಿಂಗ್‌ಗೆ ಸಂಬಂಧಿಸಿದಂತೆ ಅಮೆರಿಕದ ವಿ.ವಿ.ಯೊಂದು ನಡೆಸುವ 8 ತಿಂಗಳ ಕೋರ್ಸ್ ಕೂಡ ಮಾಡಿದೆ. ಇದೇ ವೇಳೆಗೆ, ನನ್ನ ದೇಹದ ತೂಕ 78 ಕೆ.ಜಿ.ಯಿಂದ 54 ಕೆ.ಜಿ.ಗೆ ಇಳಿಯಿತು. ಅಂದರೆ, ಪೂರ್ತಿ 24 ಕೆ.ಜಿ.ಯಷ್ಟು ತೂಕ ಕಳೆದುಕೊಂಡು ಮತ್ತೆ ಬಳುಕುವ ಬಳ್ಳಿಯಂತಾದೆ. ನನ್ನ ಪರಿಶ್ರಮ ಮತ್ತು ಶ್ರದ್ಧೆಯನ್ನು ಗಮನಿಸಿದ ತರಬೇತುದಾರ- “ನಿಮ್ಮಂಥವರು ಸಾವಿರಕ್ಕೆ ಒಬ್ಬರು ಮೇಡಂ. ನೀವು ನಿಜವಾದ ಸಾಧಕಿ’ ಎಂದ. ಈ ವೇಳೆಗೆ ನನಗೂ ಸಿಕ್ಸ್‌ಪ್ಯಾಕ್ ಮಾಡುವ ಆಸೆ ಜೊತೆಯಾಗಿತ್ತು. ತರಬೇತುದಾರನಿಗೆ ಅದನ್ನೇ ಹೇಳಿಕೊಂಡೆ. “ಕಸರತ್ತು ಮಾಡಲು ನಾನು ರೆಡಿ ಇದೀನಿ. ನನ್ನನ್ನು ಸಿಕ್ಸ್‌ಪ್ಯಾಕ್ ಲೇಡಿಯಾಗಿ ರೂಪಿಸಿ’ ಎಂದು ಕೇಳಿಕೊಂಡೆ.
ಆನಂತರದಲ್ಲಿ ನಡೆದಿದ್ದೆಲ್ಲಾ ಗೆಲುವಿನ ಕಥೆಯೇ. ಬಾಡಿಬಿಲ್ಡಿಂಗ್‌ನ ಗುಟ್ಟುಗಳೆಲ್ಲ ಬಹುಬೇಗನೆ ಅರ್ಥವಾದವು. ಜಿಮ್‌ನಲ್ಲಿ ಕಸರತ್ತು ಮಾಡಿದರೆ, ಹೆಂಗಸರು ಹತ್ತಾರು ಕಾಯಿಲೆಗಳಿಂದ ದೂರ ಉಳಿಯು ತ್ತಾರೆ ಎಂಬ ಸಂಗತಿಯೂ ಅರ್ಥವಾಯಿತು. ಮುಖ್ಯವಾಗಿ, ನನಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು ಅಂದೆನಲ್ಲ; ಅದು ಬಂದಷ್ಟೇ ಬೇಗ ಕಣ್ಮರೆಯಾಗಿತ್ತು. ನನಗೆ ತಿಳಿದಿರುವುದನ್ನೇ ಹತ್ತು ಜನರಿಗೆ ಹೇಳಿಕೊಡ ಬೇಕು ಎಂಬ ಉದ್ದೇಶದಿಂದ ಹೈದ್ರಾಬಾದ್‌ನ ಬೇಗಂಪೇಟೆಯಲ್ಲಿ ನನ್ನದೇ ಒಂದು ಜಿಮ್ ಆರಂಭಿಸಿದೆ. ಇದರ ಬೆನ್ನಿಗೇ, ಎಂಟು ತಿಂಗಳ ಸತತ ಪ್ರಯತ್ನದಿಂದ ಸಿಕ್ಸ್‌ಪ್ಯಾಕ್ ಲೇಡಿ ಆಗಿಯೂಬಿಟ್ಟೆ. ಅಷ್ಟೇ ಅಲ್ಲ; ಇಂಡಿಯನ್ ಫೆಡರೇಷನ್ ಆಫ್ ಬಾಡಿಬಿಲ್ಡಿಂಗ್ ನಡೆಸುವ ರಾಷ್ಟ್ರಮಟ್ಟದ ಸ್ಪರ್ಧೆಯೊಂದಕ್ಕೆ ಹೋಗಿಯೂಬಿಟ್ಟೆ.
ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ, ಸಿಕ್ಸ್‌ಪ್ಯಾಕ್ ಅಂಗಸೌಷ್ಟವ ಪ್ರದರ್ಶನ ದಲ್ಲಿ ಬಿಕನಿ ಧರಿಸಬೇಕು. ಆಗ ಸಹಜವಾಗಿಯೇ ಮುಜುಗರವಾ ಗುತ್ತದೆ. ಅಂಥದೇ ಫೀಲ್ ನನಗೂ ಆಯಿತು. ಅದರಲ್ಲೂ ಕೆಲವು ಗಂಡಸರು ಸಿಕ್ಸ್‌ಪ್ಯಾಕ್ ಬದಲಿಗೆ ಮತ್ತೆಲ್ಲೋ ನೋಡುತ್ತಿದ್ದಾರೆ ಅನ್ನಿಸಿದಾಗ ತುಂಬಾ ಕಸಿವಿಸಿಯಾಯಿತು. ಆದರೆ, ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರಿಂದ, ಹಲವು ದೇಶದ ಕ್ರೀಡಾ ಪ್ರೇಮಿಗಳಿಗೆ, ಭಾರತದ ಕ್ರೀಡಾಪ್ರಮುಖರಿಗೆ ನನ್ನ ಹೆಸರು ಗೊತ್ತಾಯಿತು. ಹಿಂದೆಯೇ, ಹಂಗರಿಯ ಬುಡಾಫೆಸ್ಟ್‌ನಲ್ಲಿ ನಡೆಯ ಲಿದ್ದ ವಿಶ್ವ ಬಾಡಿಬಿಲ್ಡಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಅವಕಾಶವೂ ಸಿಕ್ಕಿತು.
ಹಾಗಂತ ನನಗೆ ಕಷ್ಟಗಳೇ ಇರಲಿಲ್ಲವೆಂದಲ್ಲ; ಅವು ಟೀಕೆಯ ರೂಪದಲ್ಲಿ ಬಂದವು. “ಅಹಹಹ, ಏನ್ ವಯ್ನಾರ ಇವಳದು? ಎದೆಯೆತ್ತರ ಬೆಳೆದ ಮಕ್ಕಳಿದ್ದಾರೆ. ವಯಸ್ಸೂ 40ರ ಹತ್ತಿರ ಇದೆ. ಈ ವಯಸ್ಸಲ್ಲಿ ಸಾವಿರಾರು ಜನರ ಮುಂದೆ ನಿಂತು ದೇಹ ತೋರೊದಾ? ಶೇಮ್. ಇವಳನ್ನು ಹೀಗೆಲ್ಲಾ ಮೆರೆದಾಡಲು ಬಿಟ್ಟಿದಾನಲ್ಲ; ಆ ಗಂಡನಿಗಾದ್ರೂ ಬುದ್ಧಿ ಬೇಡವಾ?’ ಎಂದೆಲ್ಲಾ ಜನ ಮಾತಾಡಿಬಿಟ್ಟರು. ಆಗ ನನ್ನ ಗಂಡ- “ಜನ ತಲೆಗೊಂದು ಮಾತಾಡ್ತಾರೆ. ವಿದೇಶದಲ್ಲಿ ನಡೆವ ಸ್ಪರ್ಧೆಗೆ ನೀನು ಹೋಗುವುದು ಬೇಡ’ ಅಂದರು. “ನೋಡೀ, ನಾನು ಏಕಕಾಲಕ್ಕೆ ತಾಯಿ, ಮಗಳು ಮತ್ತು ಹೆಂಡತಿ. ಎಂಥ ಸಂದರ್ಭದಲ್ಲೂ ನಾನು ಮೈಮರೆಯೋದಿಲ್ಲ. ಸುಮ್ಮನಿದ್ದು ಸಾಯುವ ಬದಲು ಏನಾದ್ರೂ ಸಾಧನೆ ಮಾಡಿ ಸಾಯಬೇಕು ಅಂದ್ಕೊಂಡಿದೀನಿ. ಕುಟುಂಬಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡಲಾರೆ. ದಯವಿಟ್ಟು ಕಳಿಸಿಕೊಡಿ’ ಎಂದು ಪ್ರಾರ್ಥಿಸಿದೆ. ನಾನು ಹೋಗುವುದೇ ಸೈ ಎಂದು ಪಟ್ಟುಹಿಡಿದೆ. ಕಡೆಗೆ, ನನ್ನ ಹಠವೇ ಗೆದ್ದಿತು. ಆ ಸ್ಪರ್ಧೆಯಲ್ಲಿ ನನಗೆ ಪದಕ ಸಿಗಲಿಲ್ಲ. ಆದರೆ, ಜಗತ್ತಿನ ಎಲ್ಲಾ ಸ್ಪರ್ಧಿಗಳಿಂದ ಮೆಚ್ಚುಗೆ ಸಿಕ್ಕಿತು. ಯಾವುದೇ ಕ್ರೀಡೆಯಾದರೂ, 30 ವರ್ಷಕ್ಕೇ ಎಲ್ಲರೂ ನಿವೃತ್ತಿ ಪಡೆಯುತ್ತಾರೆ. ಹಾಗಿರುವಾಗ, 33ನೇ ವರ್ಷದಲ್ಲಿ ಜಿಮ್‌ಗೆ ಹೋಗಿ ಸಿಕ್ಸ್‌ಪ್ಯಾಕ್ ಮಾಡಿರುವುದು ಬಹುದೊಡ್ಡ ಸಾಧನೆ ಎಂದು ಎಲ್ಲರೂ ಹೊಗಳಿದರು. ಪರಿಣಾಮ: ನನ್ನ ಪರಿಶ್ರಮದ ಕಥೆ ಬ್ರೇಕಿಂಗ್ ನ್ಯೂಸ್ ಆಗಿಬಿಟ್ಟಿತು.
ಆಮೇಲೆ ಏನಾಯಿತೆಂದರೆ- ತೆಲುಗು ಚಿತ್ರರಂಗದ ಎಲ್ಲರಿಗೂ ನನ್ನ ಯಶೋಗಾಥೆ ಗೊತ್ತಾಗಿಹೋಯಿತು. ಕಟ್ಟುಮಸ್ತಾದ ದೇಹ ಹೊಂದಬೇಕೆಂಬ ಆಸೆಯಿಂದ ಬಾಹುಬಲಿಯ ನಾಯಕ ಪ್ರಭಾಸ್, ನಾಯಕಿ ಅನೂಷ್ಕಾ, ನಿರ್ದೇಶಕ ರಾಜಮೌಳಿ, ಪ್ರಕಾಶ್ ರೈ, ಅಜಯ್ ದೇವಗನ್, ತಮನ್ನಾ ಸೇರಿದಂತೆ ಹಲವರು ನನ್ನಲ್ಲಿ ತರಬೇತಿ ಪಡೆದರು. ತಮ್ಮ ಮಹಿಳಾ ಸಿಬ್ಬಂದಿಗೂ ತರಬೇತಿ ನೀಡುವಂತೆ, ಹೈದರಾಬಾದ್‌ನ ಪೊಲೀಸ್ ಕಮೀಷನರ್ ಮನವಿ ಮಾಡಿಕೊಂಡರು.
ನನಗೀಗ 45 ತುಂಬಿದೆ. ಆದರೆ, ಒಬ್ಬಳೇ ಹತ್ತು ಜನರನ್ನು ಹೊಡೆದುಹಾಕಬಲ್ಲೆ, ಅಷ್ಟು ಗಟ್ಟಿಯಾಗಿ ಇದೀನಿ. “ಅಯ್ಯೋ, ಜಿಮ್‌ಗೆ ಹೋಗಲು ಟೈಮ್ ಎಲ್ಲಿದೆ? ಮಕ್ಕಳನ್ನು ನೋಡ್ಕೊಳ್ಳಲು ಯಾರೂ ಇಲ್ಲ. ಕೆಲಸದವಳು ಬಂದಿಲ್ಲ’ ಎಂದೆಲ್ಲಾ ಕಾರಣ ಹೇಳಿದ್ದಿದ್ರೆ, ನಾನೂ ಅಡುಗೆಮನೇಲೇ ಇರ್ತಾ ಇದ್ದೆನೇನೋ… ಒಂದು ರಿಸ್ಕ್ ತಗೊಳ್ಳೋಣ ಅಂದುಕೊಂಡಿದ್ದರಿಂದ, ನಾನೂ ಸೆಲೆಬ್ರಿಟಿ ಆಗಲು ಸಾಧ್ಯವಾಯ್ತು. ಎಲ್ಲಾ ಹೆಂಗಸರಿಗೂ ನನಗೆ ಸಿಕ್ಕಂಥ ಯಶಸ್ಸೇ ಸಿಗಲಿ ಅಂತ ಪ್ರಾರ್ಥಿ ಸ್ತೇನೆ…’ ಎನ್ನುತ್ತಾ ತಮ್ಮ ಮಾತು ಮುಗಿಸುತ್ತಾರೆ ಕಿರಣ್ ಡೆಂಬ್ಲಾ.
– ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.