ಓಬಿರಾಯನ ಕಾಲದ್ದು! ಎಸ್.ಟಿ.ಡಿ ಬೂತ್
Team Udayavani, Feb 24, 2020, 4:37 AM IST
ಹಿಂದೆಲ್ಲಾ ಈಡೀ ಊರಿಗೆ ಒಂದೇ ಒಂದು ಎಸ್.ಟಿ.ಡಿ. ಬೂತ್ ಇರುತ್ತಿತ್ತು. ಇದು ದಶಕಗಳ ಹಿಂದಿನ ಮಾತು. ಆಗ, ಯಾರ ಬಳಿಯೂ ಮೊಬೈಲ್ ಇರುತ್ತಿರಲಿಲ್ಲವಾದ್ದರಿಂದ ಊರವರು ಸರದಿಯಲ್ಲಿ ನಿಂತುಕೊಂಡು ಕರೆ ಮಾಡುತ್ತಿದ್ದರು. ಅದಲ್ಲದೆ ಇನ್ನೊಂದು ವ್ಯವಸ್ಥೆಯೂ ಜಾರಿಯಲ್ಲಿರುತ್ತಿತ್ತು. ಕರೆ ಮಾಡುವವರು ಮತ್ತು ಸ್ವೀಕರಿಸುವವರು ಇಬ್ಬರೂ ಮುಂಚೆಯೇ ಇಂಥಾ ದಿನದಂದು ಇಂಥಾ ಸಮಯಕ್ಕೆ ಫೋನ್ ಮಾಡುತ್ತೀನಿ ಎಂಬುದಾಗಿ ಮಾತಾಡಿಕೊಂಡಿರುತ್ತಿದ್ದರು.
ಹೀಗಾಗಿ ಆ ಸಮಯಕ್ಕೆ ಒಂದೈದು ನಿಮಿಷ ಮುಂಚಿತವಾಗಿಯೇ ಕರೆ ಸ್ವೀಕರಿಸುವವರು ಎಸ್.ಟಿ.ಡಿ ಬಳಿ ಬಂದು ಕಾಯುತ್ತಿರುತ್ತಿದ್ದರು. ಕರೆ ಕಟ್ ಮಾಡಿದ ಕೂಡಲೆ ಅಲ್ಲೇ ಇರುತ್ತಿದ್ದ ಪ್ರಿಂಟರ್‌ನಿಂದ ಬಿಲ್ ಪ್ರಿಂಟ್ ಆಗಿ ಹೊರಬರುತ್ತಿತ್ತು. ಅಷ್ಟು ಬಿಲ್ಲನ್ನು ಕರೆ ಮಾಡಿದವರು ತೆತ್ತು ಹೋಗುತ್ತಿದ್ದರು. ಮನೆ ಮನೆಗೂ ಲ್ಯಾಂಡ್‌ಲೈನ್ ಸಂಪರ್ಕ ಬಂದ ಮೇಲೆ ಎಸ್‌ಟಿಡಿ ಬೂತ್‌ಗಳ ಅವಶ್ಯಕತೆ ಕಡಿಮೆಯಾಗುತ್ತಾ ಸಾಗಿತು. ಇನ್ನು ಎಲ್ಲರ ಕೈಗಳಲ್ಲೂ ಮೊಬೈಲ್ ಬಂದ ಮೇಲಂತೂ ಎಸ್‌ಟಿಡಿ ಬೂತ್‌ಗಳನ್ನು ಕೇಳುವವರೇ ಇಲ್ಲವಾದರು. ಇಂದು ಎಸ್.ಟಿ.ಡಿ ಬೂತ್‌ಗಳು ವಿರಳವಾಗಿವೆ.