ಸೆರೆಹಿಡಿದ ವನ್ಯ ಜೀವಿಗಳ ಸೂಕ್ತ ಆರೈಕೆಗೆ ದಿಗ್ಬಂಧನ ಕೇಂದ್ರ
Team Udayavani, Feb 26, 2020, 3:00 AM IST
ಮೈಸೂರು: ಕಾಡಂಚಿನ ಗ್ರಾಮಗಳಲ್ಲಿ ಜನಸಾಮಾನ್ಯರಿಗೆ ಉಪಟಳ ನೀಡಿ, ಸೆರೆ ಹಿಡಿಯಲ್ಪಟ್ಟ ವನ್ಯಜೀವಿಗಳ ಆರೈಕೆಗಾಗಿ ನಗರದ ಹೊರವಲಯದಲ್ಲಿರುವ ಚಾಮುಂಡಿ ಪುನರ್ವಸತಿ ಕೇಂದ್ರದಲ್ಲಿ ಪ್ರತ್ಯೇಕ ದಿಗ್ಬಂದನ ಕೇಂದ್ರ (ಕ್ವಾರಂಟೇನ್ ಸ್ಟೇಷನ್) ನಿರ್ಮಾಣಕ್ಕೆ ಮೈಸೂರು ಮೃಗಾಲಯ ಚಿಂತನೆ ನಡೆಸಿದೆ.
ಮೈಸೂರು ಜಿಲ್ಲೆಗೆ ಹೊಂದಿಕೊಂಡಂತಿರುವ ನಾಗರಹೊಳೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕೊಡಗು, ಚಾಮರಾಜನಗರ, ಮಂಡ್ಯ ಸೇರಿದಂತೆ ವಿವಿಧ ಭಾಗಗಳಲ್ಲಿ ಜನರಿಗೆ ಉಪಟಳ ನೀಡಿ ಸೆರೆ ಸಿಕ್ಕುವ ಮಾಂಸಾಹಾರಿ ಪ್ರಾಣಿಗಳನ್ನು ಮೊದಲಿನಿಂದಲೂ ಮೈಸೂರು ಮೃಗಾಲಯಕ್ಕೆ ತಂದು ಪುನರ್ವಸತಿಯೊಂದಿಗೆ ಅಗತ್ಯ ಚಿಕಿತ್ಸಾ ಸೌಲಭ್ಯ ನೀಡುತ್ತಾ ಬರಲಾಗಿದೆ.
ಆದರೆ, ಸೆರೆ ಸಿಕ್ಕುವ ಪ್ರಾಣಿಗಳು ಕಾಡಿನಲ್ಲಿ ತಿಗಣೆ, ಉಣ್ಣೆ, ಉಪ್ಪಟೆ, ಚಿಗಟೆ ಸೇರಿದಂತೆ ಅನೇಕ ಪರಾವಲಂಬಿ ಕೀಟಗಳ ಬಾಧೆಗೆ ಒಳಪಟ್ಟು ಅನಾರೋಗ್ಯಕ್ಕೀಡಾಗಿದ್ದರೆ, ಆ ಸೋಂಕು ಮೃಗಾಲಯದಲ್ಲಿರುವ ಪ್ರಾಣಿಗಳಿಗೂ ಹರಡುವ ಸಾಧ್ಯತೆ ಹೆಚ್ಚಾಗಿತ್ತು. ಇದರಿಂದ ಸೆರೆಹಿಡಿದು ಮೃಗಾಲಯಕ್ಕೆ ತರುವ ಪ್ರಾಣಿಗಳ ರಕ್ಷಣೆಯೊಂದಿಗೆ, ಅವುಗಳಿಂದ ಇತರೆ ಪ್ರಾಣಿಗಳಿಗೆ ಸೋಂಕು ಹರಡದೇ ಇರುವುದನ್ನು ತಡೆಗಟ್ಟುವುದೇ ಮೃಗಾಲಯಕ್ಕೆ ಸವಾಲಾಗಿತ್ತು.
ಏನಿದು ಕ್ವಾರಂಟೇನ್ ಸ್ಟೇಷನ್?: ಇತ್ತೀಚಿನ ದಿನಗಳಲ್ಲಿ ಜನ-ಜಾನುವಾರು ಹಾಗೂ ಪ್ರಾಣಿಗಳು ಹೊಸ ಹೊಸ ಸೋಂಕಿನಿಂದ ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಸೆರೆಹಿಡಿದ ಪ್ರಾಣಿಗಳಿಂದ ಮೃಗಾಲಯ ಮತ್ತು ಪುನರ್ವಸತಿ ಕೇಂದ್ರಗಳಲ್ಲಿರುವ ಇತರೆ ಪ್ರಾಣಿಗಳಿಗೆ ಆಗಬಹುದಾದ ತೊಂದರೆ ತಪ್ಪಿಸಲೆಂದೇ ಕ್ವಾರಂಟೇನ್ ಸ್ಟೇಷನ್ ನಿರ್ಮಾಣಕ್ಕೆ ಮೃಗಾಲಯ ಮುಂದಾಗಿದೆ.
ದಿಗ್ಬಂಧನ ಕೇಂದ್ರ ಎಂದೂ ಕರೆಯುವ ಈ ವ್ಯವಸ್ಥೆಯಿಂದ ಪ್ರಾಣಿಗಳ ಹಿತಕಾಯಲು ಸಹಕಾರಿ. ಈ ಕೇಂದ್ರ ನಿರ್ಮಾಣವಾದ ನಂತರ ಮುಂದಿನ ದಿನಗಳಲ್ಲಿ ರಕ್ಷಣೆ ಮಾಡಿ ತರಲಾದ ವನ್ಯಜೀವಿಗಳನ್ನು ಪ್ರತ್ಯೇಕವಾಗಿರುವ ಈ ಕೇಂದ್ರದಲ್ಲಿಟ್ಟು ಚಿಕಿತ್ಸೆ ನೀಡಿದ ನಂತರವಷ್ಟೇ ಇತರೆ ಪ್ರಾಣಿಗಳಿರುವ ಬೋನ್‌ಗಳಲ್ಲಿ ಆಶ್ರಯ ಕಲ್ಪಿಸಲಾಗುತ್ತದೆ.
ಚಾಮುಂಡಿ ಪುನರ್ವಸತಿ ಕೇಂದ್ರ: ಮೈಸೂರಿನ ಕೂರ್ಗಳ್ಳಿಯಲ್ಲಿರುವ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರ 113 ಎಕರೆ ವಿಸ್ತೀರ್ಣ ಹೊಂದಿದ್ದು, 10 ಎಕರೆ ವಿಸ್ತಾರವಾದ ನೈಸರ್ಗಿಕವಾದ ಕೆರೆ ಸಂರಕ್ಷಿಸಿ ತಂದ ವನ್ಯಜೀವಿಗಳಿಗೆ ನೀರೊದಗಿಸುತ್ತಿದೆ. ಕೆರೆ ಜೊತೆಗೆ ಎರಡು ಬೋರ್‌ವೆಲ್ ತೋಡಿಸಲಾಗಿದೆ. ಈ ಕೇಂದ್ರದಲ್ಲಿ 7 ಹುಲಿ, 13 ಚಿರತೆ, 5 ಆನೆ, 1 ಕಾಡೆಮ್ಮೆ(ಇಂಡಿಯನ್ ಗಾರ್) ಹಾಗೂ 4 ಕಾಡುನಾಯಿಗಳು ಸೇರಿದಂತೆ ನವಿಲು ಇನ್ನಿತರ ಪಕ್ಷಿಗಳು ಆಶ್ರಯ ಪಡೆದಿವೆ. ಕೇಂದ್ರದಲ್ಲಿ 15 ಸಿಬ್ಬಂದಿ, ಕಾರ್ಯನಿರ್ವಹಿಸಲಿದ್ದಾರೆ. ಈ ಕೇಂದ್ರದ ನಿರ್ವಹಣೆ ವಾರ್ಷಿಕ 1.50 ಕೋಟಿ ರೂ. ವೆಚ್ಚವಾಗುತ್ತಿದ್ದು, ಮೈಸೂರು ಮೃಗಾಲಯವೇ ಇದರ ನಿರ್ವಹಣೆ ಮಾಡುತ್ತಿದೆ.
ಕ್ವಾರಂಟೇನ್ ಸ್ಟೇಷನ್ ವಿಶೇಷತೆ ಇದು!: ಹೊರಗಿನಿಂದ(ಕಾಡಿನಲ್ಲಿ ಬೆಳೆದ) ತರುವ ಪ್ರಾಣಿಗಳಲ್ಲಿ ಸಾಮಾನ್ಯವಾಗಿ ರಕ್ತ ಹೀರುವ ತಿಗಣೆ, ಚಿಗಟೆ, ಉಣ್ಣೆ ಸೇರಿ ಇನ್ನಿತರೆ ಕೀಟಗಳಿರುತ್ತವೆ. ಹುಲಿ, ಚಿರತೆಯಂತಹ ಪ್ರಾಣಿಗಳು ಕಾದಾಟದಲ್ಲಿ ಅಥವಾ ರೋಗಗ್ರಸ್ಥ ಪ್ರಾಣಿಗಳನ್ನು ಭಕ್ಷಿಸಿದ್ದಾಗ ಕೆಲವು ವೇಳೆ ನೈಸರ್ಗಿಕವಾಗಿ ಗುಣಪಡಿಸಲಾಗದ ಸೋಂಕು ಪ್ರಾಣಿಗಳಲ್ಲಿ ಕಂಡು ಬರುತ್ತವೆ.
ಸಾಕು ಪ್ರಾಣಿಗಳಲ್ಲಿ ಸೋಂಕು ಕಂಡು ಬಂದರೆ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಆದರೆ ವನ್ಯಜೀವಿಗಳಲ್ಲಿ ಸೋಂಕು ಇದ್ದರೆ ಯಾವುದೇ ಚಿಕಿತ್ಸಾ ಸೌಲಭ್ಯವಿರುವುದಿಲ್ಲ. ಇದರಿಂದಾಗಿಯೇ ಕಾಡಿನಿಂದ ನಾಡಿಗೆ, ಕಾಡಂಚಿನ ಗ್ರಾಮಕ್ಕೆ ಬಂದು ಉಪಟಳ ನೀಡುವ ಪ್ರಾಣಿಗಳನ್ನು ರಕ್ಷಣೆ ಮಾಡಿ, ಪುನರ್ವಸತಿ ಕೇಂದ್ರಕ್ಕೆ ತಂದಾಗ ಇತರೆ ಪ್ರಾಣಿಗಳಿಗೆ ಸಮಸ್ಯೆಯಾಗಬಹುದು ಎಂಬ ಆತಂಕ ಸಾಮಾನ್ಯವಾಗಿ ಕಾಡುತ್ತಿತ್ತು.
ಕ್ವಾರಂಟೇನ್ ಸ್ಟೇಷನ್ ನಿರ್ಮಾಣ ಮಾಡಿದರೆ ಅದರಲ್ಲಿ ಕಾಡಿಂದ ತರುವ ಪ್ರಾಣಿಗಳನ್ನು ಇಟ್ಟು, ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಮೈ ಮೇಲಿರುವ ಚಿಟ್ಟೆ, ಕೀಟಗಳನ್ನು ತೆಗೆಯುವುದಕ್ಕೆ ಬೇಕಾದ ಔಷಧ ಸಿಂಪಡಣೆ ಮಾಡಲಾಗುತ್ತದೆ. ಕಡ್ಡಾಯವಾಗಿ ಒಂದೂವರೆ ಅಥವಾ ಎರಡು ತಿಂಗಳು ದಿಗ್ಬಂಧನ ಕೇಂದ್ರದಲ್ಲಿಟ್ಟು ಸೂಕ್ಷ್ಮವಾಗಿ ಉಪಚರಿಸಲಾಗುತ್ತದೆ. ಬಳಿಕ ಆ ಪ್ರಾಣಿ ಆರೋಗ್ಯವಾಗಿದೆ ಎಂದು ದೃಢಪಟ್ಟ ನಂತರವಷ್ಟೇ ಬೋನ್‌ಗೆ ಸ್ಥಳಾಂತರಿಸಲಾಗುತ್ತದೆ.
ಶೀಘ್ರದಲ್ಲೇ ಕಾಮಗಾರಿ ಆರಂಭ: ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ದಿಗ್ಬಂಧನ ಕೇಂದ್ರದಲ್ಲಿ ಐದಾರು ಕೊಠಡಿಗಳಿದ್ದು, ಅದರಲ್ಲಿ ಇಟ್ಟಿರುವ ಪ್ರಾಣಿಗಳಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತದೆ. ಕಾಲ ಕಾಲಕ್ಕೆ ಅದರ ರಕ್ತ ಪರೀಕ್ಷೆ ಮಾಡಲಾಗುತ್ತದೆ. ಜತೆಗೆ ನಿರಂತರವಾಗಿ ಚಿಕಿತ್ಸೆ ನೀಡುವುದರೊಂದಿಗೆ ತೀವ್ರ ನಿಗಾ ವಹಿಸಲಾಗುತ್ತದೆ. ಅದಕ್ಕಾಗಿ ಬೇಕಾದ ಸಲಕರಣೆ, ಔಷಧ ದಾಸ್ತಾನು ಇಡಲಾಗುತ್ತದೆ. ಈ ಕೇಂದ್ರ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿ ಆರಂಭವಾಗಲಿದೆ. ಮುಂದಿನ 6 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಮೃಗಾಲಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ಹಲವು ಕಾರಣಗಳಿಂದ ರಕ್ಷಣೆ ಮಾಡಿ ತರುವ ವನ್ಯಜೀವಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಒಂದೂವರೆ ತಿಂಗಳವರೆಗೆ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡುವುದು ಅನಿವಾರ್ಯ. ಇದಕ್ಕಾಗಿ ಸೌಲಭ್ಯದ ಕೊರತೆ ಇತ್ತು. ಇದರಿಂದ ಎಲ್ಲಾದರೂ ಹಿಡಿದು ತಂದ ಪ್ರಾಣಿಗಳನ್ನು ಬೋನ್‌ಗೆ ಹಾಕಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವುಗಳಿಗೆ ಏನಾದರೂ ಸೋಂಕು ಇದ್ದರೆ, ಅದು ಬೇರೆ ಪ್ರಾಣಿಗಳಿಗೂ ಹರಡುವ ಸಾಧ್ಯತೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ದಿಗ್ಬಂಧನ ಕೇಂದ್ರ ನಿರ್ಮಿಸಲಾಗುತ್ತಿದೆ.
-ಅಜಿತ್ ಎಂ.ಕುಲಕರ್ಣಿ, ಕಾರ್ಯನಿರ್ವಾಹಕ ನಿರ್ದೇಶಕ, ಮೈಸೂರು ಮೃಗಾಲಯ
* ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.