ಅಂಗವಿಕಲ ಬಾಲಕನ ಶಿಕ್ಷಣಕ್ಕೆ ಗೆಳೆಯರೇ ಊರುಗೋಲು
ಕಾಲುಗಳ ಸ್ವಾಧೀನವಿಲ್ಲದ ಬಾಲಕನ ಬೇಕು-ಬೇಡಗಳಿಗೆಲ್ಲ ಇವರದ್ದೇ ಸ್ಪಂದನೆ
Team Udayavani, Feb 28, 2020, 11:02 AM IST
ಭರಮಸಾಗರ: ಕಷ್ಟ ಕಾಲದಲ್ಲಿ ಕುಟುಂಬದವರು, ಬಂಧುಗಳು ಕೈ ಬಿಡಬಹುದು. ಆದರೆ ಗೆಳೆಯರು ಮಾತ್ರ ಜೀವಕ್ಕೆ ಜೀವ ಕೊಡಲೂ ಸೈ ಎನ್ನುವಂತಹ ನಿದರ್ಶನವೊಂದು ಇಲ್ಲಿದೆ. ಈ ಕಥೆ ಓದಿದರೆ ಕಣ್ಣಂಚಿನಲ್ಲಿ ನೀರು ಜಿನುಗದೇ ಇರದು.
ಆತ ಜನ್ಮತಃ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡ ವಿಶೇಷ ಅಗತ್ಯವುಳ್ಳ ಬಾಲಕ. ಶಾಲೆಗೆ ಹೋಗಿ ಓದುವ ಹುಮ್ಮಸ್ಸಿದ್ದರೂ ಕರೆದೊಯ್ಯುವವರು ಯಾರು ಎಂಬ ಸಮಸ್ಯೆ ತಲೆದೋರಿದಾಗ ಆತನಿಗೆ ಊರುಗೋಲಾಗಿ ನಿಂತವರೇ ಇಬ್ಬರು ಕುಚಿಕು ಗೆಳೆಯರು.
ಆಟೋದಿಂದ ಎತ್ತಿಕೊಂಡು ಹೋಗಿ ತರಗತಿಯಲ್ಲಿ ಕೂರಿಸಿ ಬರುವ ಮೂಲಕ ಗೆಳೆತನದ ಶಕ್ತಿ ಎಂಥದ್ದು ಎಂಬುದನ್ನು ಸಾರಿದ್ದಾರೆ. ಹೆಗಡೆಹಾಳು ಗ್ರಾಮದ ಕೆ.ಇ. ಬಸವರಾಜ ತನ್ನ ಸ್ನೇಹಿತರ ನೆರವಿನಿಂದ ಪ್ರಸ್ತುತ ಭರಮಸಾಗರದ ಸರ್ಕಾರಿ ಶಾಲೆಯಲ್ಲಿಒಂಭತ್ತನೇ ತರಗತಿಯಲ್ಲಿ ಓದುತ್ತಿರುವ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿ.
ಹುಟ್ಟಿದಾಗಿನಿಂದಲೂ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಈತ, 1-5ನೇ ತರಗತಿವರೆಗೆ ತನ್ನೂರಿನಲ್ಲೇ ಓದಿದ್ದಾನೆ. ಪೋಷಕರೇ ನಿತ್ಯ ಎತ್ತಿಕೊಂಡು ಹೋಗಿ ಶಾಲೆಗೆ ಬಿಟ್ಟು ಕರೆತರುತ್ತಿದ್ದರು. 5ನೇ ತರಗತಿ ಮುಗಿಸಿದ ಮೇಲೆ ಬಸವರಾಜನನ್ನು ಮನೆಯಲ್ಲೇ ಇಟ್ಟುಕೊಳ್ಳುವ ಇರಾದೆ ಕೂಲಿಕಾರ ತಂದೆ-ತಾಯಿಗಳದಾಗಿತ್ತು. ಏಕೆಂದರೆ ಇಬ್ಬರು ಪುತ್ರಿಯರನ್ನು ಸಾಕುವ ಹೊಣೆಗಾರಿಕೆ ಅವರ ಮೇಲಿದೆ. ಆದರೆ ತಾನು ಮುಂದೆ ಓದುವುದಾಗಿ ಬಸವರಾಜ ಹಠ ಹಿಡಿದ. ಕೊನೆಗೂ ಗೆದ್ದಿದ್ದು ಆತನ ಹಠವೇ. ಅವನ ಅಜ್ಜಿ ಮತ್ತು ಭರಮಸಾಗರದ ಶಿಕ್ಷಕರೊಬ್ಬರು ಆತನ ಶಿಕ್ಷಣ ಪ್ರೀತಿಗೆ ಪ್ರೋತ್ಸಾಹ ನೀಡಿದರು. ಹೆಗಡೆಹಾಳು ಗ್ರಾಮದಿಂದ ನಾಲ್ಕು ಕಿಮೀ ದೂರದ ಭರಮಸಾಗರ ಶಾಲೆಗೆ 6ನೇ ತರಗತಿಗೆ ಸೇರಿಸಿದರು.
ಆಪತ್ಪಾಂಧವರಾದ ಗೆಳೆಯರು: ಸಮಸ್ಯೆಯಾಗಿದ್ದೇ ಇಲ್ಲಿ. ಹೇಗಪ್ಪಾ ಇವನನ್ನು ಶಾಲೆಗೆ ಕರೆದೊಯ್ಯುವುದು ಎಂದು ಚಿಂತೆಯಾದಾಗ, ಶಾಲಾ ಶಿಕ್ಷಕರು ಆಟೋ ಸೌಲಭ್ಯ ಕಲ್ಪಿಸಿದರು. ನಿತ್ಯ ಶಾಲೆಗೆ ಕರೆತರಲು ಪೋಷಕರಿಗೆ ಅಸಾಧ್ಯವಾಗಿತ್ತು. ಆಗ ನೆರವಿಗೆ ಬಂದವನೇ ಅದೇ ಊರಿನ ಎಸ್‌ಎಸ್ ಎಲ್‌ಸಿ ವಿದ್ಯಾರ್ಥಿ ಹನುಮಂತು. ಬಸವರಾಜನ ಅಜ್ಜಿ ಆಟೋದಲ್ಲಿ ಮನೆ ಬಳಿ ಹತ್ತಿಸಿದರೆ, ಹನುಮಂತು, ಶಾಲೆ ಬಳಿ ಆಟೋದಿಂದ ಶಾಲೆಗೆ ಕರೆದೊಯ್ದು ತರಗತಿಗೆ ಬಿಟ್ಟು ಬರುತ್ತಿದ್ದ. ಶೌಚಾಲಯಕ್ಕೂ ಎತ್ತಿಕೊಂಡು ಹೋಗುತ್ತಿದ್ದ. ಅಲ್ಲದೆ ಮಧ್ಯಾಹ್ನದ ಊಟ ಕೂಡ ಮಾಡಿಸುತ್ತಿದ್ದ. ಸಂಜೆ ಶಾಲೆ ಬಳಿಗೆ ಬರುವ ಆಟೋದಲ್ಲಿ ಜೊತೆಗೆ ಕರೆದೊಯ್ದು ಮನೆ ಸೇರಿಸಿ ಬರುತ್ತಿದ್ದ. ಹನುಮಂತು ಎಸ್ಸೆಸ್ಸೆಲ್ಸಿ ಉತ್ತೀರ್ಣನಾಗಿ ಕಾಲೇಜು ಸೇರಿದ ಬಳಿಕ ಬಸವರಾಜನನ್ನು ಶಾಲೆಗೆ ಕರೆದೊಯ್ಯುವವರು ಯಾರು ಎಂಬ ಚಿಂತೆ ಅಜ್ಜಿ ಮತ್ತು ಶಿಕ್ಷಕರನ್ನು ಕಾಡತೊಡಗಿತು.
ಆಗ ಆಪದ್ಭಾದವನಾದವನು ಬಸವರಾಜನ ಆಪ್ತಮಿತ್ರ ಹಾಗೂ ಸಹಪಾಠಿ ಸಿ. ಕಾರ್ತಿಕ್. ಹನುಮಂತುವಿನ ಸಹಾಯ-ಸಹಕಾರದಿಂದ ಪ್ರೇರಿತನಾಗಿ ಕಳೆದ ಮೂರು ವರ್ಷಗಳಿಂದ ಬಸವರಾಜನ ಬೆನ್ನಿಗೆ ನಿಂತಿದ್ದಾನೆ. ಒಡಹುಟ್ಟಿದವರು ಮಾಡದ ಮಾನವೀಯ ಕೆಲಸಗಳನ್ನು ಕಾರ್ತಿಕ್ ಮಾಡುತ್ತಿದ್ದಾನೆ. ಈ ಮೂಲಕ ಶಾಲಾ ಶಿಕ್ಷಕರ ಪ್ರಶಂಸೆಗೆ ಪಾತ್ರನಾಗಿದ್ದಾನೆ. ಊಟ, ಶೌಚ, ಇತರೆ ಬೇಕು ಬೇಡುಗಳನ್ನು ಶಾಲಾವ ಧಿಯಲ್ಲಿ ಹೆತ್ತವರಂತೆ ನೋಡಿಕೊಳ್ಳುವ ಕಾರ್ತಿಕ್‌ನ ಸೇವೆಗೆ ಬೆಲೆ ಕಟ್ಟಲಾಗದು. ಗ್ರಾಮದ ಜನರು ನಿನ್ನಂಥ ಗುಣವಂತ ಮಗ ನಮಗೂ ಇರಬೇಕಪ್ಪಾ ಎಂದು ಹಾಡಿ ಹೊಗಳುತ್ತಾರೆ.
ಶಿಕ್ಷಕರ ಸೇವೆಯೂ ಅನನ್ಯ: ಆಟೋದಲ್ಲಿ ನಿತ್ಯ ಶಾಲೆಗೆ ಕರೆತರುವ
ಪ್ರಯಾಣ ಭತ್ಯೆ, ಅಂಗವಿಕಲರ ವೇತನ, ವ್ಹೀಲ್ ಚೇರ್, ಮೆಡಿಕಲ್ ಕ್ಯಾಂಪ್ ಸೇರಿದಂತೆ ಇತರೆ ಸೌಲಭ್ಯಗಳನ್ನೆಲ್ಲವನ್ನೂ ಶಾಲಾ ವಿಶೇಷ ಅಗತ್ಯವುಳ್ಳ ಮಕ್ಕಳ ಮೇಲ್ವಿಚಾರಕ ಶಿಕ್ಷಕ ರಾಜು ನಾಯ್ಕ ದೊರಕಿಸಿಕೊಟ್ಟಿದ್ದಾರೆ. ಓದಿನಲ್ಲೂ ಚುರುಕಾಗಿರುವ ಬಸವರಾಜ, ಅಂಗವಿಕಲ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ತನ್ನದಾಗಿಸಿಕೊಂಡಿದ್ದಾನೆ.
ಒಟ್ಟಿನಲ್ಲಿ ಹನುಮಂತು ಹಾಗೂ ಕಾರ್ತಿಕ್‌ರ ಸೇವಾ ತತ್ಪರತೆ ಮಾದರಿ. ಗೆಳೆಯರಿದ್ದರೆ ಇಂಥವರು ಇರಬೇಕಪ್ಪಾ ಎನ್ನುವಷ್ಟರ ಮಟ್ಟಿಗೆ ಅವರಿಬ್ಬರು ಜನಮಾನಸದಲ್ಲಿ ನೆಲೆಯಾಗಿದ್ದಾರೆ. ದೋಸ್ತಿಯ ಮಹತ್ವ ಎಂಥದ್ದು ಎಂಬುದಕ್ಕೆ ಇನ್ನೇನು ಬೇಕು?.
ಬಸವರಾಜನ ಶಿಕ್ಷಣಕ್ಕೆ ಅಗತ್ಯ ಸಹಕಾರ ನೀಡುತ್ತಿದ್ದೇನೆ. ಯಾವುದೇ ಖರ್ಚು ಬಂದರೂ ನಾನು ಭರಿಸುತ್ತಿದ್ದೇನೆ. ನಿತ್ಯ ಶಾಲೆಗೆ ಆಟೋದಲ್ಲಿ ಜೊತೆಗೆ ಕರೆದುಕೊಂಡು ಬಂದು ಹೋಗುವ ಕಾರ್ತಿಕ್, ಹನುಮಂತು ಸೇವೆಗೆ ಬೆಲೆ ಕಟ್ಟಲಾಗದು. ಪಿಯು ಶಿಕ್ಷಣ ಪೂರೈಸುವವರೆಗೆ ಬಸವರಾಜನ ಜವಾಬ್ದಾರಿ ನನ್ನದು.
ರಾಜು ನಾಯ್ಕ, ವಿಶೇಷ ಅಗತ್ಯವುಳ್ಳ ಮಕ್ಕಳ
ಮೇಲ್ವಿಚಾರಕ ಶಿಕ್ಷಕರು, ಸರ್ಕಾರಿ ಶಾಲೆ, ಭರಮಸಾಗರ
ನನ್ನ ಗೆಳೆಯನನ್ನು ಶಾಲೆಗೆ ಕರೆತರುವ ಕೆಲಸ ಖುಷಿ ಕೊಟ್ಟಿದೆ. ಅದು ನನಗೆ ಭಾರ ಎಂದು ಅನ್ನಿಸಯೇ ಇಲ್ಲ. ಅವನು ಕೂಡ ನನ್ನಂತೆ ಓದಬೇಕು. ಸ್ನೇಹ ಅಂದರೆ ಕೇವಲ ಮಾತುಕತೆ, ಹರಟೆಗೆ ಸೀಮಿತ ಅಲ್ಲ. ಕಷ್ಟ ಸುಖಗಳಲ್ಲೂ ಪರಸ್ಪರರು ನೆರವಾಗಬೇಕು ಎಂಬುದು ನನ್ನ ಅಭಿಪ್ರಾಯ.
ಸಿ. ಕಾರ್ತಿಕ್, ಬಸವರಾಜನ ಸ್ನೇಹಿತ
ಎಚ್.ಬಿ. ನಿರಂಜನಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಸಿಯೂಟ ಸಿಬ್ಬಂದಿ ಇಡಿಗಂಟಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ
Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…
Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.