ಮನಮೋಹಕ ರೋನಿಕಾ ನರ್ತನ ಶೈಲಿ
Team Udayavani, Feb 29, 2020, 6:09 AM IST
ಚಟುವಟಿಕೆಯ ಚಿಲುಮೆ ರೋನಿಕಾ ಲವಲವಿಕೆಯಿಂದ ರಂಗಪ್ರವೇಶಿಸಿ, ಆತ್ಮವಿಶ್ವಾಸದಿಂದ ನೃತ್ಯ ಪ್ರಸ್ತುತಪಡಿಸಿದ ಬಗೆ ಮುದ ತಂದಿತ್ತು. ಅಂಗಶುದ್ಧಿ, ಕಲಾನೈಪುಣ್ಯದ ನರ್ತನ ವೈಖರಿ, ಸ್ಫುಟವಾದ ಆಂಗಿಕಾಭಿನಯ ಅವಳ ಧನಾತ್ಮಕ ಅಂಶಗಳು. ಗುರು ರೇಖಾ ಜಗದೀಶ್‌ರಿಂದ ತರಬೇತಿ ಪಡೆದ ಇವಳು, ಪ್ರಸ್ತುತಪಡಿಸಿದ ಕವಿತ್ವಂ ರೂಪದ “ವಿನಾಯಕ ಸ್ತುತಿ’ (ನೃತ್ಯ ಸಂಯೋಜನೆ-ವೀಣಾಮೂರ್ತಿ) ಅರ್ಥಪೂರ್ಣ ನಡೆಯಲ್ಲಿ, ರಮ್ಯತೆಯ ಗುಣದಿಂದ ಸೆಳೆಯಿತು.
ಮುಂದೆ-ಡಿವಿಜಿ ಅವರ “ಅಂತಃಪುರ ಗೀತೆ’ಯಲ್ಲಿ ಜೀವಂತಿಕೆ ಪಡೆದು ನರ್ತಿ ಸುವ ಶಿಲಾಬಾಲಿಕೆ ಯರ ನೃತ್ತಾಮೋದ, ಉನ್ಮಾದ- ವಿನೋದಗಳ ಉತ್ಕಟತೆಯ ಬಗ್ಗೆ ಕೌತುಕತೆ ಯಿಂದ ಬಣ್ಣಿಸುತ್ತಾ, -ಏನೀ ಮಹಾ ನಂದವೇ ಓ ಭಾಮಿನಿ ?… ಎಂದು ಚೆನ್ನಕೇಶವ ಸ್ವಾಮಿಯಲ್ಲಿ ಅನುರಕ್ತಳಾದ ಮದನಿಕೆಯ ಸಂಭ್ರಮವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾರೆ. ಕಲಾವಿದೆ ತನ್ಮಯತೆಯಿಂದ ಆಹ್ಲಾದಕರ ನರ್ತನೋಲ್ಲಾಸವನ್ನು ತೋರಿದಳು.
“ಭರತನಾಟ್ಯದ ಮಾರ್ಗಂ’ ಪದ್ಧತಿಯ ಪ್ರಮುಖಘಟ್ಟ “ವರ್ಣ’. ಸಂಕೀರ್ಣ ನೃತ್ತ-ಪಲುಕುಗಳಿಂದ ಕಲಾನೈಪುಣ್ಯ ಹಾಗೂ ಅಭಿನಯ ಸಾಮರ್ಥ್ಯ ಪ್ರದರ್ಶಿಸುವ ಪ್ರಮುಖಭಾಗ. “ಮಹಾ ತ್ರಿಪುರ ಸುಂದರಿ’ಯನ್ನು ಕುರಿತ ಭಕ್ತಿಪ್ರಧಾನ ವರ್ಣವನ್ನು ರೋನಿಕಾ ಶ್ರದ್ಧಾ- ಭಕ್ತಿಗಳಿಂದ ಸಾಕ್ಷಾತ್ಕರಿಸಿದಳು. ದೇಹದ ಮೇಲಿನ ನಿಯಂತ್ರಣಕ್ಕೆ ಸಾಕ್ಷಿಯಾದ ಜಗಜ್ಜನನಿಯ ಅನೇಕ ಕ್ಲಿಷ್ಟಕರ ಭಂಗಿ ಗಳು ಅನುಪಮವಾಗಿದ್ದವು. ವಿವಿಧ ಬಗೆಯ ಮನೋಹರ ನೃತ್ತಗಳನ್ನು ನಿರೂಪಿಸಿದಳು.
ಶಿಷ್ಟ ರಕ್ಷಕಿ-ದುಷ್ಟಸಂಹಾರಿಣಿಯಾಗಿ, ಚಾಮುಂಡಿದೇವಿಯ ರೌದ್ರಭಾವವನ್ನು ಆವಾಹಿಸಿಕೊಂಡ ಕಲಾವಿದೆ ಅಷ್ಟೇ ಸೊಗಸಾಗಿ ಪ್ರಸನ್ನಭಾವವನ್ನೂ ಅಭಿವ್ಯಕ್ತಿಸಿದಳು. ಹದಿನಾಲ್ಕರ ಬಾಲೆ ತನ್ನ ವಯಸ್ಸಿಗೂ ಮೀರಿದ ಪ್ರತಿಭೆ ತೋರಿದ್ದು ಮೆಚ್ಚುಗೆ ತಂದಿತು. ಜತಿಗಳಲ್ಲೇ ನಡೆಯನ್ನು ಪ್ರದರ್ಶಿಸುತ್ತ ಲೀಲಾಜಾಲ ವಾಗಿ ಭ್ರಮರಿ- ಆಕಾಶಚಾರಿಗಳನ್ನು ನಿರ್ವಹಿಸಿದಳು.
ಅನಂತರ- ವೀರೋಚಿತ ಖಚಿತ ಅಡವುಗಳಿಂದ, ಪಾದಭೇದಗಳ ಸೌಂದರ್ಯದಿಂದ, ಗಮನಾರ್ಹ ಆಂಗಿಕಾಭಿನಯಗಳಿಂದ ಮಹಾದೇವ ಶಿವಶಂಭುವಿನ ವಿಶಿಷ್ಟರೂಪವನ್ನು ಕಂಡರಿಸಿದಳು. ಶ್ರೀಪಾದರಾಯರ “ಆಡಲು ಹೋಗೋಣ ಬಾರೋ ರಂಗ’ ದೇವರನಾಮದ ಸುಂದರಾಭಿನಯದಲ್ಲಿ ಮನ ಸೆಳೆದರೆ, ಸಂಭ್ರಮದ “ತಿಲ್ಲಾನ’ ದೊಂದಿಗೆ ಪ್ರಸ್ತುತಿ ಸಂಪನ್ನಗೊಳಿಸಿದಳು. ಇತ್ತೀಚೆಗೆ, ಎಡಿಎ ರಂಗಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಿತು.
* ವೈ.ಕೆ. ಸಂಧ್ಯಾಶರ್ಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.