ಕಾಸರಗೋಡಿನಲ್ಲೂ 25 ರೂ.ಗೆ ಊಟ
ಹಸಿವು ರಹಿತ ರಾಜ್ಯ ಯೋಜನೆ
Team Udayavani, Feb 29, 2020, 6:23 AM IST
ಸಾಂದರ್ಭಿಕ ಚಿತ್ರ
ಕಾಸರಗೋಡು: ರಾಜ್ಯ ಸರಕಾರ ಮುಂಗಡಪತ್ರದಲ್ಲಿ ಘೋಷಿಸಿರುವ “ಹಸಿವು ರಹಿತ ರಾಜ್ಯ ಯೋಜನೆ’ಯ ಅಂಗವಾಗಿ ಇನ್ನು ಮುಂದೆ ಕಾಸರಗೋಡಿನಲ್ಲೂ 25 ರೂ.ಗೆ ಮಧ್ಯಾಹ್ನ ಭೋಜನ ಲಭಿಸಲಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 2020-21ನೇ ವರ್ಷದ ಕುಟುಂಬಶ್ರೀ ಜಿಲ್ಲಾ ಕ್ರಿಯಾ ಯೋಜನೆ ಪ್ರಸ್ತುತಿ ಸಭೆಯಲ್ಲಿ ಈ ವಿಚಾರವನ್ನು ಪ್ರಕಟಿಸಲಾಯಿತು. ಮಧ್ಯಾಹ್ನ ಭೋಜನ ಯೋಜನೆಗಾಗಿ 38 ಗ್ರಾ.ಪಂ.ಗಳು, ಮೂರು ನಗರಸಭೆಗಳು ಸೇರಿದಂತೆ 41 ಕಡೆ ಹೊಟೇಲ್‌ಗಳನ್ನು ತೆರೆಯಲಾಗುವುದು ಎಂದು ಕ್ರಿಯಾಯೋಜನೆ ಮಂಡಿಸಿದ ಕುಟುಂಬಶ್ರೀ ಜಿಲ್ಲಾ ಸಮಿತಿ ಸಂಚಾಲಕ ಟಿ.ಟಿ. ಸುರೇಂದ್ರನ್ ತಿಳಿಸಿದರು.
ಕುಟುಂಬಶ್ರೀ ಚಟುವಟಿಕೆಗಳಿಗೆ ಅಗತ್ಯವಿರುವ ತರಬೇತಿ ನೀಡಿ ಮಾ. 15ರ ಮುಂಚಿತವಾಗಿ ನೂತನ ಆಹಾರ ಕೇಂದ್ರಗಳನ್ನು ಆರಂಭಿಸಲಾಗುವುದು. ಈ ಮೂಲಕ ಸುಮಾರು 200 ಮಂದಿಗೆ ಉದ್ಯೋಗ ಲಭಿಸಲಿದೆ. ಯೋಜನೆಗೆ ಮೂಲ ಸೌಲಭ್ಯಗಳನ್ನು ಸ್ಥಳೀಯಡಳಿತ ಸಂಸ್ಥೆಗಳು ಒದಗಿಸಲಿವೆ ಎಂದರು.
10 ಸಾವಿರ ಉದ್ಯೋಗ ಸೃಷ್ಟಿ
ಕುಟುಂಬಶ್ರೀ ನೇತೃತ್ವದಲ್ಲಿ ಜಿಲ್ಲೆಯಲ್ಲಿ 10 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆ ಜಾರಿಗೊ ಳ್ಳಲಿದೆ. ಇದಕ್ಕಾಗಿ ಜಿಲ್ಲೆಯಾದ್ಯಂತ ಒಂದು ಸಾವಿರ ಕೃಷಿಕ ಗುಂಪುಗಳನ್ನು ರಚಿಸಲಾಗುವುದು. ತರಕಾರಿ, ಹಣ್ಣುಗಳ ಉತ್ಪಾದನೆಗೆ ಆದ್ಯತೆ ನೀಡಿ, ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಲಾಗುವುದು ಎಂದರು.
ಕುಟುಂಬಶ್ರೀಯ ಉತ್ಪನ್ನಗಳನ್ನು ಮನೆ ಮನೆಗೆ ತಲಪಿಸುವ “ಮನೆಯಲ್ಲೊಂದು ಕುಟುಂಬಶ್ರೀ ಉತ್ಪನ್ನ’ ಎಂಬ ಯೋಜನೆ ಅನುಷ್ಠಾನಗೊಳಿಸಲಾಗುವುದು. ಇದಕ್ಕಾಗಿ ಒಂದು ಸಾವಿರ ಸೇಲ್ಸ್ ಎಕ್ಸಿಕ್ಯೂಟಿವ್‌ಗಳನ್ನು ನೇಮಿಸಲಾಗುವುದು ಎಂದರು. ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಸಭೆಯನ್ನು ಉದ್ಘಾಟಿಸಿದರು. ಕುಟುಂಬಶ್ರೀ ಸಹಾಯಕ ಜಿಲ್ಲಾ ಸಮಿತಿ ಸಂಚಾಲಕರಾದ ಸಿ. ಹರಿದಾಸನ್, ಪ್ರಕಾಶನ್ ಪಾಲಾಳಿ, ಜೋಸೆಫ್ ಪೆರುಂಗಿಲ್, ಡಿಡಿಯುಜಿಕೆವೈ ಜಿಲ್ಲಾ ಯೋಜನೆ ಪ್ರಬಂಧಕಿ ರೇಷ್ಮಾ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.