ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬಕ್ಕೆ ಡಿಕೆಶಿ ಬೇಸರ
ಡಿಕೆಶಿ ಭೇಟಿ ಮಾಡಿದ ಗುಲಾಂ ನಬಿ ಆಝಾದ್
Team Udayavani, Feb 29, 2020, 7:09 PM IST
ಬೆಂಗಳೂರು: ಖಾಸಗಿ ಕೆಲಸದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಶುಕ್ರವಾರ ಬೆಳಗ್ಗೆಯೇ ಬೆಂಗಳೂರಿಗೆ ಆಗಮಿಸಿದ್ದರೂ ರಾಜ್ಯದ ಯಾವುದೇ ನಾಯಕರ ಭೇಟಿಗೆ ಅವಕಾಶ ನೀಡಿರಲಿಲ್ಲ. ಆದರೆ ಶನಿವಾರ ಸ್ವತಃ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದರು.
ಪ್ರಮುಖವಾಗಿ ಇಬ್ಬರೂ ನಾಯಕರು ರಾಜ್ಯ ರಾಜಕಾರಣದ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದ್ದು, ಕೆಪಿಸಿಸಿ ಅಧ್ಯಕ್ಷರ ನೇಮಕದ ಕುರಿತಂತೆ ಹೈಕಮಾಂಡ್ ಮಟ್ಟದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಗುಲಾಂ ನಬಿ ಆಝಾದ್ ಅವರೆದುರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸುವ ಕುರಿತು ಹೈಕಮಾಂಡ್ ಮಟ್ಟದಲ್ಲಿ ಹಿರಿಯ ನಾಯಕರಾದ ಅಹ್ಮದ್ ಪಟೇಲ್, ಗುಲಾ| ನಬಿ ಆಝಾದ್, ಅಂಬಿಕಾ ಸೋನಿ ಸಹಿತ ಅನೇಕ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಎದುರು ಡಿ.ಕೆ.ಶಿವಕುಮಾರ್ ಪರವಾಗಿಯೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಬಾರದು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಈ ಸಂಬಂಧ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮೂಲಕ ಸೋನಿಯಾ ಗಾಂಧಿ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿದ್ದರಾಮಯ್ಯಅವರು ಕೆ.ಸಿ.ವೇಣುಗೋಪಾಲ್ ಮೂಲಕ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದು, ಇದರಿಂದ ರಾಜ್ಯದಲ್ಲಿ ಪಕ್ಷಕ್ಕೆ ನಾಯಕತ್ವ ಇಲ್ಲದಂತಾಗಿದ್ದು ಕಾರ್ಯಕರ್ತರು ಗೊಂದಲದಲ್ಲಿ ಸಿಲುಕಿದ್ದಾರೆ. ಇದು ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಗುಲಾಂ ನಬಿ ಆಝಾದ್ ಕೂಡ ಡಿ.ಕೆ.ಶಿವಕುಮಾರ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಆದಷ್ಟು ಶೀಘ್ರವೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮೂಲಕ ಆದೇಶ ಹೊರಡಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿರುವುದರಿಂದ ಅವರ ಅನುಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕ ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿದ್ದರಾಮಯ್ಯ ನಡೆಗೆ ಆಕ್ಷೇಪ
ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರನ್ನು ಹೊಗಳಿರುವ ಬಗ್ಗೆಯೂ ಡಿ.ಕೆ.ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸೋನಿಯಾ ಗಾಂಧಿ ಗಮನಕ್ಕೆ ತರುವುದಾಗಿ ಗುಲಾಂ ನಬಿ ಅಝಾದ್ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.