ಪ್ರಬಂಧ: ಎಡಬಲಗಳ ಎಡವಟ್ಟು
Team Udayavani, Mar 1, 2020, 5:43 AM IST
ಮೊನ್ನೆ ಒಮ್ಮೆ ಹೀಗಾಯಿತು. ಕ್ಯಾಟರಾಕ್ಟ್ ಆಗಿ ಒಂದು ತಿಂಗಳ ನಂತರ ಮಾವನನ್ನು ಕರೆದುಕೊಂಡು ಟೆಸ್ಟ್‌ಗೆ ಎಂದು ಕಣ್ಣಿನ ಡಾಕ್ಟರ್ ಬಳಿ ಹೋಗಿದ್ದೆ. ಅವರಿಗೆ ಸಮಸ್ಯೆಯಾದದ್ದು ಎಡಗಣ್ಣಿನಲ್ಲಿ. ಬಲಗಣ್ಣಿಗೆ ಒಂದು ವರ್ಷದ ಹಿಂದೆಯೇ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಡಾಕ್ಟರ್, “ಎಡಗಣ್ಣು ಏನೂ ತೊಂದರೆಯಿಲ್ಲ. ಆದರೆ, ಬಲಗಣ್ಣಿಗೆ ಡಯಾಬಿಟೀಸ್‌ನಿಂದಾಗಿ ಸ್ವಲ್ಪ ತೊಂದರೆಯಾದಂತಿದೆ’ ಅದಕ್ಕೆ ಸಂಬಂಧಪಟ್ಟ ಡಾಕ್ಟರ್ ಬಳಿ ಕಳುಹಿಸಿದರು. ಎಡಗಣ್ಣಿಗೆ ಬೇರೆ, ಬಲಗಣ್ಣಿಗೆ ಬೇರೆ ಡಾಕ್ಟರ್‌ಗಳೆ ಎಂದು ಹುಬ್ಬೇರಿಸಬೇಡಿ. ಅದಕ್ಕೆ ಸಂಬಂಧಪಟ್ಟ ಎಂದರೆ ಡಯಾಬಿಟೀಸ್‌ಗೆ ಸಂಬಂಧಪಟ್ಟ ಡಾಕ್ಟರ್ ಎಂದರ್ಥ.
ಆ ಡಾಕ್ಟರ್ ಬಳಿ ಹೋದಾಗ ಅವರು ಬಲಗಣ್ಣು ಪರೀಕ್ಷೆ ಮಾಡಿ, ಎಡಗಣ್ಣಿಗೆ ಡ್ರಾಪ್ಸ್ ಬರೆದುಕೊಟ್ಟರು. ಒಂದು ತಿಂಗಳು ಬಿಟ್ಟು ಬನ್ನಿ ಎಂದರು. ಮಾವನನ್ನು ಕರೆದುಕೊಂಡು ಕಾರ್‌ಪಾರ್ಕಿಂಗ್ ಬಳಿ ಬಂದಾಗ ನನ್ನ ಯಜಮಾನರಿಂದ ಫೋನ್, “ಡಾಕ್ಟರ್ ಕರಿತೀದಾರೆ, ಕೂಡಲೇ ಹೋಗು’ ನಾನು ಡಾಕ್ಟರ್‌ಗೆ ಯಜಮಾನರ ನಂಬರನ್ನೇ ಕೊಟ್ಟಿದ್ದೆ. ಮಾವನನ್ನು ಅಲ್ಲೇ ಕೂರಿಸಿ ಲಿಫ್ಟ್ಗಾಗಿ ಕಾಯದೆ ಗಡಿಬಿಡಿಯಲ್ಲಿ ಎರಡು ಮಾಳಿಗೆ ಹತ್ತಿ ಡಾಕ್ಟರ್ ಎದುರು ಹೋಗಿ ನಿಂತೆ. “ಸ್ವಲ್ಪ ಪ್ರಿಸ್‌ಕ್ರಿಪ್ಷನ್ ತೋರಿಸಿ’ ಎಂದರು. ಅದರಲ್ಲಿ “ಎಲ್’ ಇದ್ದದ್ದನ್ನು ಹೊಡೆದು, “ಆರ್’ ಎಂದು ಬರೆದುಕೊಟ್ಟು, “ಎಡಗಣ್ಣಿಗಲ್ಲ ಬಲಗಣ್ಣಿಗೆ ಡ್ರಾಪ್ಸ್ ಹಾಕಬೇಕು’ ಎಂದರು. “ಸರಿ’ ಎಂದು ತಲೆ ಅಲ್ಲಾಡಿಸಿ ಬಂದೆ. ಆದರೆ ಈಗಲೂ ಡ್ರಾಪ್ಸ್ ಹಾಕುವಾಗ ಎಡ-ಬಲ-ಎಡ-ಬಲ ಎಂದು ಗೊಂದಲ ಉಂಟಾಗುತ್ತದೆ. ಡಾಕ್ಟರ್ ಮೊದಲಿಗೆ ಹೇಳಿದ್ದು “ಬಲ’, ಆಮೇಲೆ ತಿದ್ದಿ “ಎಡ’ ಎಂದಧ್ದೋ ಅಥವಾ ಮೊದಲಿಗೆ “ಎಡ’, ಆಮೇಲೆ “ಬಲ’ ಎಂದಧ್ದೋ? ಒಟ್ಟೂ ಗೊಂದಲ! ನಾನು ಪ್ರತಿಸಲ ಪ್ರಿಸ್‌ಕ್ರಿಪ್ಷನ್ ನೋಡಿ ಖಾತರಿ ಮಾಡಿಕೊಂಡೇ ಡ್ರಾಪ್ಸ್ ಹಾಕುವುದು!
ಅಲ್ಲದೇ ಹೋದರೂ ನಾನು ಎಡ-ಬಲದ ಬಗ್ಗೆ ಸ್ವಲ್ಪ ಕನ್‌ಫ್ಯೂಸ್ ಮಾಡಿಕೊಳ್ಳುವುದೇ ಜಾಸ್ತಿ. ನನ್ನ ಬಲ ಗೊತ್ತಾಗಬೇಕಾದರೂ ಒಮ್ಮೆ ಊಟ ಮಾಡಿದ ಹಾಗೆ ಅಭಿನಯಿಸಬೇಕು. ಬೇರೆಯವರ ಎಡಬಲ ತಿಳಿಯಬೇಕಾದರೆ ಇನ್ನೂ ಕಷ್ಟ. ನನ್ನ ಬಲ ಯಾವುದೆಂದು ಮೊದಲು ನಿರ್ಧರಿಸಿ ನಂತರ ಅದನ್ನು ಉಲ್ಟಾ ಆಗಿ ಭಾವಿಸಬೇಕು!
ಒಮ್ಮೆ ಇಂಟರ್ನೆಟ್‌ನಲ್ಲಿ ಹುಡುಕುತ್ತಿರುವಾಗ ಒಂದು ಮಾಹಿತಿ ಸಿಕ್ಕಿತು. ತಮ್ಮ ಎಡ-ಬಲ ಯಾವುದೆಂದು ಮರೆತು ಹೋಗುವವರು ಜಗತ್ತಿನಲ್ಲಿ ತುಂಬ ಜನ. ಅಂಥವರಿಗೆ ಎಡ-ಬಲ ತಿಳಿಯಲು ಒಂದು ಉಪಾಯವಿದೆಯಂತೆ. ತಮ್ಮ ಎರಡು ಕೈಯ ಹೆಬ್ಬೆರಳು ಮತ್ತು ತೋರು ಬೆರಳನ್ನು ಬಿಡಿಸಿಟ್ಟು ಉಳಿದ ಬೆರಳುಗಳನ್ನು ಮಡಚಬೇಕಂತೆ. ಅವಾಗ ಯಾವ ಕೈಯಲ್ಲಿ “ಎಲ್’ ಶೇಪ್ ಕಾಣುತ್ತದೋ ಅದೇ ಎಡಗೈಯಂತೆ.
ಎಡಚರು ಹೆಚ್ಚು ಚುರುಕು! ಇದ್ದರೂ ಇರಬಹುದು. ಕಾಲೇಜಿನಲ್ಲಿ ನನ್ನ ಒಬ್ಬ ಗೆಳತಿಯಿದ್ದಳು. ಆಕೆ ಎಡಗೈಯಲ್ಲೇ ಬರೆಯುವುದು, ಊಟ ಮಾಡುವುದು! ಕಲಿಯುವುದರಲ್ಲೂ ಮುಂದಿದ್ದಳು. ಆದರೆ, ಎಡಗೈ ಉಪಯೋಗಿಸುವಲ್ಲಿ ಬಲಗೈಯನ್ನು ಉಪಯೋಗಿಸುತ್ತಾಳಾ ಎಂದು ಆಪ್ತವಾಗಿ ಕೇಳಬೇಕಿತ್ತು. ಆಗಲಿಲ್ಲ !
ಇದು ಬಿಟ್ಟು ಇನ್ನು ನಾವು ಎಡ-ಬಲ ಕೇಳುವುದು ಕವಾಯತ್‌ನಲ್ಲಿ. ಇಂಗ್ಲಿಷಿನಲ್ಲಿ ಲೆಫ್ಟ್-ರೈಟ್ ಹೇಳಿದರೆ ಸ್ವಲ್ಪವಾದರೂ ತಿಳಿಯುತ್ತದೆ, ಅವರು ಹೇಳುವುದು ಅಪ್ಪಟ ಹಿಂದಿಯಲ್ಲಿ !
ಬಾಂಯೇ ಎಂದರೆ ಎಡ, ದಾಂಯೇ ಎಂದರೆ ಬಲ! ನಮ್ಮ ಮಾತೃಭಾಷೆಯಲ್ಲಿ ದಾಂವೆ ಎಂದರೆ ಎಡ! ಹಾಗಾಗಿ, ಹಿಂದೆ ಶಾಲೆಗೆ ಹೋಗುವಾಗ ಪೀಟಿ ಪಿರಿಯಡ್‌ನಲ್ಲಿ ಅಧ್ಯಾಪಕರು ದಾಂಯೇ ಮುಡ್ ಎಂದರೆ ನಾನು ಎಡನೋ ಬಲನೋ ಎಂದು ಪಿಳಿಪಿಳಿ ಕಣ್ಣು ಬಿಡುತ್ತ ನಿಂತು, ಮತ್ತೆ ಎಲ್ಲರೂ ತಿರುಗಿದ ದಿಕ್ಕಿಗೇ ತಿರುಗುತ್ತಿದ್ದೆ.
ಗ್ರೂಪ್ ಫೋಟೋಗಳಲ್ಲಿ ಎಡ-ಬಲ ಎಂದರೆ ಆ ಫೋಟೋ ನೋಡುತ್ತಿರುವವರ ಎಡ-ಬಲ ಎಂದು ತಾನೆ? ಎಡದಿಂದ ಎರಡನೆಯವನು ಎಂದರೆ ನಮ್ಮ ಎಡದಿಂದಲೇ ಹೊರತು ಫೋಟೋದಲ್ಲಿರುವವರ ಎಡದಿಂದ ಅಲ್ಲ. ಅದೇ ಸೆಲ್ಫಿಯಲ್ಲಾದರೆ ಎಲ್ಲಾ ಆಚೆ ಈಚೆ, ಕಲಸುಮೇಲೋಗರ. ಯಾಕೆಂದರೆ, ಫೋಟೋ ತೆಗೆಯುವವನೂ ಫೊಟೊದಲ್ಲಿರುತ್ತಾನೆ. ಎಡಬದಿಯಲ್ಲಿರುವ ಮೂಗುಬೊಟ್ಟು ಬಲ ಬದಿಯಲ್ಲಿದ್ದಂತೆಯೂ, ಎಡಕ್ಕೆ ತೆಗೆದ ಸೀರೆ ಸೆರಗು ಬಲಕ್ಕೆ ಪಿನ್ ಮಾಡಿದಂತೆಯೂ, ಬಲಬದಿಯಲ್ಲಿರುವ ಡ್ರೈವಿಂಗ್ ಸೀಟ್ ಎಡಬದಿಯಲ್ಲಿದ್ದಂತೆಯೂ ಕಾಣುತ್ತದೆ.
ಎಡ-ಬಲ ಮುಖ್ಯವಾಗಿ ಬೇಕಾಗುವುದು ವಾಹನ ಚಲಾಯಿಸುವಾಗ. ಆದರೆ, ಅಲ್ಲಿಯೂ ಇದರ ಗೊಂದಲ ಇದ್ದದ್ದೇ. ಬಲಕ್ಕೆ ತಿರುಗುವಾಗ ಎಡಕ್ಕೆ ಇಂಡಿಕೇಟರ್ ಕೊಡುವುದು ಮತ್ತು ಎಡಕ್ಕೆ ತಿರುಗುವಾಗ ಬಲಕ್ಕೆ ಕೊಡುವುದು ಸರ್ವೇಸಾಮಾನ್ಯ. ರೈಟ್‌ಗೆ ತಿರುಗಿ ಎಂದರೆ ಎಡಕ್ಕೆ ತಿರುಗಿ ಎಡವಟ್ಟು ಮಾಡಿಕೊಳ್ಳದವರು ಈ ಜಗತ್ತಿನಲ್ಲಿ ಯಾರಿದ್ದಾರೆ! ಕೆಲವರಿಗೆ ಎಡ-ಬಲಗಳನ್ನು ಮನದಟ್ಟು ಮಾಡಿಸುವಷ್ಟರಲ್ಲಿ ನಮ್ಮ ಎಡ-ಬಲಗಳನ್ನು ಮರೆತುಬಿಟ್ಟಿರುತ್ತೇವೆ. ಮದುಮಕ್ಕಳನ್ನು ಅಥವಾ ಗಂಡ-ಹೆಂಡತಿಯನ್ನು ವ್ರತ-ಪೂಜೆಗಳಿಗೆ ಕೂರಿಸುವಾಗ ಹೆಂಡತಿಯ ಎಡಗಡೆ ಗಂಡನೋ ಅಥವಾ ಗಂಡನ ಎಡಗಡೆ ಹೆಂಡತಿಯೋ ಎಂಬ ಗೊಂದಲ ಇದ್ದದ್ದೇ.
ರಾಜಕೀಯದಲ್ಲಂತೂ ಎಡ-ಬಲಗಳ ಭಾಷ್ಯವೇ ಬೇರೆ. ಮೇಲೆ-ಕೆಳಗೆ ಎಂದು ದಿಕ್ಕುಗಳನ್ನು ಹೇಳಿದಷ್ಟು ಸುಲಭವಾಗಿ ಈ ಎಡ-ಬಲಗಳ ಬಗ್ಗೆ ಹೇಳಲಾಗುವುದಿಲ್ಲ ಎಂದು ವಿಜ್ಞಾನಿಗಳೂ ಒಪ್ಪಿಕೊಳ್ಳುತ್ತಾರೆ. ಎಷ್ಟು ಶೇಕಡಾ ಮಂದಿ ಸರಿಯಾಗಿ ಎಡ-ಬಲ ದಿಕ್ಕನ್ನು ಗುರುತಿಸಬಲ್ಲರು ಎಂದು ಸರ್ವೇ ಕೂಡ ನಡೆಸಿದ್ದಾರಂತೆ. ಏನೇ ಇರಲಿ, ನಾವೆಲ್ಲ ಎಡಕ್ಕೆ ಎಡವದೇ ಬಲಕ್ಕೆ ಬಳುಕದೇ ಈ ಬದುಕೆಂಬ ಹಗ್ಗದ ಮೇಲಿನ ನಡಿಗೆಯಲ್ಲಿ ಸಮತೋಲನವನ್ನು ಸಾಧಿಸೋಣ.
ಶಾಂತಲಾ ಎನ್. ಹೆಗ್ಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.