ಆನಂದ್ ಸಿಂಗ್ ಗೆ ಅರಣ್ಯಖಾತೆ ನೀಡಿರುವುದು ಕುರಿ ಕಾವಲಿಗೆ ತೋಳವನ್ನು ಇಟ್ಟಂತಾಗಿದೆ: ಉಗ್ರಪ್ಪ
Team Udayavani, Mar 1, 2020, 3:34 PM IST
ಬಳ್ಳಾರಿ: ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಿರುವುದು ಕುರಿಗಳಿಗೆ ತೋಳವನ್ನು ಕಾವಲು ಇಟ್ಟಂತಾಗಿದೆ ಎಂದು ಮಾಜಿ ಸಂಸದ, ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಟೀಕಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ಧ ಗಣಿಗಾರಿಕೆ ವೇಳೆ ಅರಣ್ಯ ಕಾಯ್ದೆ ಉಲ್ಲಂಘನೆಯಡಿ 8 ಪ್ರಕರಣಗಳು ದಾಖಲಾಗಿದೆ. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಒಟ್ಟು23,20,88,429 ರೂ. ನಷ್ಟ ಉಂಟು ಮಾಡಿದ್ದಾರೆ ಎಂದರು.
ಆನಂದ್‌ಸಿಂಗ್ ಅವರು ಗಣಿಗಾರಿಕೆ ನಡೆಸುತ್ತಿದ್ದಾಗ ಎಂಎಆರ್‌ಡಿ, ಐಪಿಸಿ, ಅರಣ್ಯ ಕಾಯ್ದೆ ಉಲ್ಲಂಘನೆಯಡಿ ಸಿಬಿಐ, ಲೋಕಾಯುಕ್ತದಲ್ಲಿ 8 ಪ್ರಕರಣಗಳು ದಾಖಲಾಗಿವೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಈ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಹ ಸಲ್ಲಿಸಲಾಗಿದೆ ಎಂದರು.
ರಾಮಾಯಣ ಬರೆದಿರುವ ವಾಲ್ಮೀಕಿಯಂತೆ ನನಗೂ ಬದಲಾವಣೆಯಾಗಲು ಅವಕಾಶ ಕೊಡಿ ಎಂದು ಆನಂದ್‌ಸಿಂಗ್ ಹೇಳಿಕೆಯನ್ನು ಟೀಕಿಸಿದ ಉಗ್ರಪ್ಪ, ವಾಲ್ಮೀಕಿ ಸುಳ್ಳನೂ ಅಲ್ಲ, ಕಳ್ಳನೂ ಅಲ್ಲ. ಈ ಬಗ್ಗೆ ವಾಲ್ಮೀಕಿಯವರೇ ರಾಮಾಯಣದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಹೀಗಾಗಿ ಆನಂದ್ ಸಿಂಗ್ ಹೇಳಿಕೆ ಸಮುದಾಯಕ್ಕೆ ಮಾಡಿದ ಅಪಮಾನವಾಗಿದ್ದು, ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಯತ್ನಾಳ್ ಮೇಲೆ ದೇಶದ್ರೋದ ಕೇಸ್ ಹಾಕಿ
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡುವುದು ಸರಿಯಲ್ಲ. ದೊರೆಸ್ವಾಮಿಯವರು ಹಿಂದೆ ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳ ವಿರುದ್ಧವೂ ಹೋರಾಟ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಮಾತನಾಡಬಾರದು ಎಂಬ ಅಧಿನಿಯಮವೇ ಇದೆ. ಹಾಗಾಗಿ ಯತ್ನಾಳ್ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.