“5ಜಿ’ ಮೇಲಾಣೆ!”ರಿಯಲ್‌ಮಿ ಎಕ್ಸ್ 50 ಪ್ರೊ 5ಜಿ’ ಬಂದಾಯ್ತು…
Team Udayavani, Mar 2, 2020, 5:23 AM IST
ಚೀನಾದ ದೈತ್ಯ ಮೊಬೈಲ್ ಕಂಪನಿ ಬಿಬಿಕೆ ಎಲೆಕ್ಟ್ರಾನಿಕ್ಸ್, ರಿಯಲ್‌ಮಿ ಎಕ್ಸ್ 50 ಪ್ರೊ 5ಜಿ ಎಂಬ ಹೊಸ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಆ ಕಂಪನಿಯ ಮೊದಲ 5ಜಿ ಫೋನ್. ಫ್ಲಾಗ್‌ಶಿಪ್ ದರ್ಜೆಯ ಈ ಫೋನಿನ ಇಲ್ಲಿ ನೀಡಲಾಗಿದೆ…
ಮೊಬೈಲ್ ಫೋನ್‌ನಲ್ಲಿ ಹೊಸ ತಂತ್ರಜ್ಞಾನ, ಹೊಸ ವಿನ್ಯಾಸ, ಹೊಸ ಕ್ಯಾಮೆರಾ ಸೆಟಪ್‌ಗ್ಳು ಇತ್ಯಾದಿ ಏನೇ ಇರಲಿ, ಅವುಗಳನ್ನು ಬೇಗ ತಮ್ಮ ಫೋನ್‌ಗಳಲ್ಲಿ ಕೊಟ್ಟುಬಿಡಬೇಕು ಎಂಬ ಆತುರ ಕೆಲವು ಕಂಪನಿಗಳಿಗೆ. ಆ ತಂತ್ರಜ್ಞಾನ ಗ್ರಾಹಕರಿಗೆ ಅತ್ಯಗತ್ಯವೇ? ನಾವು ನೀಡುವ ಈ ತಂತ್ರಜ್ಞಾನಕ್ಕೆ ಗ್ರಾಹಕ ಹೆಚ್ಚು ಹಣ ತೆರಬೇಕಾಗುತ್ತದೆ. ಆದರೆ, ಅದು ಆತನಿಗೆ ಅವಶ್ಯವೇನೂ ಇಲ್ಲ ಎಂದೆಲ್ಲ ಕಂಪನಿಗಳು ಯೋಚಿಸುವುದಿಲ್ಲ. ಇಂಥದ್ದೊಂದು ವೈಶಿಷ್ಟé ಈ ಫೋನ್‌ನಲ್ಲಿದೆ ಅಂದಾಕ್ಷಣ, ಗ್ರಾಹಕರು ಸಹ ಅದು ತಮಗೆ ಅಗತ್ಯವೇ ಎಂದು ಯೋಚಿಸದೇ ಅಂಥದ್ದನ್ನು ಕೊಂಡುಕೊಳ್ಳುತ್ತಾರೆ. ಆ ಕಂಪನಿ ಹೊಸ ಸೌಲಭ್ಯ ನೀಡಿದೆ, ನಾನು ನೀಡದಿದ್ದರೆ ಪೈಪೋಟಿಯಲ್ಲಿ ಹಿಂದೆ ಬೀಳಬೇಕಾಗುತ್ತದೆ ಎಂದು ಇನ್ನೊಂದು ಕಂಪನಿಯೂ ಇದನ್ನು ಕಾಪಿ ಹೊಡೆಯುತ್ತದೆ.
ಇಷ್ಟೆಲ್ಲ ಪೀಠಿಕೆ ಯಾಕೆಂದರೆ, ರಿಯಲ್‌ಮಿ ಕಂಪನಿ ಹೊಸ ಫೋನನ್ನು ನಾಲ್ಕೈದು ದಿನಗಳ ಹಿಂದೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಅದರ ಹೆಸರು, ರಿಯಲ್‌ಮಿ ಎಕ್ಸ್50 ಪ್ರೊ 5ಜಿ. ಕಂಪನಿಯು ಇದರಲ್ಲಿ 5ಜಿ ನೆಟ್‌ವರ್ಕ್ ಸೌಲಭ್ಯ ಇದೆ ಎಂಬುದನ್ನೇ ಹೆಚ್ಚುಗಾರಿಕೆಯಾಗಿ ಪ್ರಚಾರ ಮಾಡುತ್ತಿದೆ. ಆದರೆ, ಭಾರತದಲ್ಲಿ 5ಜಿ ನೆಟ್‌ವರ್ಕ್ ತರುವ ಬಗ್ಗೆ ಆರಂಭಿಕ ಚಟುವಟಿಕೆ ಸಹ ಇನ್ನೂ ಶುರುವಾಗಿಲ್ಲ. ಹುವಾವೇ ಕಂಪನಿ ಭಾರತದಲ್ಲಿ 5ಜಿ ನೆಟ್‌ವರ್ಕ್ ಸೇವೆ ನೀಡಲು ಸನ್ನದ್ಧವಾಗಿದೆ. ಆದರೆ, ಅದಿನ್ನೂ ಸರ್ಕಾರದ ಮಟ್ಟದಲ್ಲಿ ಮಾತುಕತೆ ಹಂತದಲ್ಲಿದೆ. ಎಲ್ಲ ಹಂತದ ಕೆಲಸಗಳು ಮುಗಿದು ಭಾರತದಲ್ಲಿ ನಮ್ಮ ಮೊಬೈಲ್‌ಗಳಲ್ಲಿ 5ಜಿ ಎಂಬ ಸಿಗ್ನಲ್ ಕಾಣಿಸಲು ಕನಿಷ್ಠ 2 ವರ್ಷಗಳು ಬೇಕು. ವಾಸ್ತವ ಹೀಗಿದ್ದರೂ, ತನ್ನದು 5ಜಿ ಸವಲತ್ತು ಇರುವ ಭಾರತದ ಮೊದಲ ಮೊಬೈಲ್ ಫೋನ್ ಎಂದು ರಿಯಲ್‌ಮಿ ಪ್ರಚಾರ ಪಡೆದುಕೊಳ್ಳುತ್ತಿದೆ! ಈಗಿನ 4ಜಿಗಿಂತ 10 ಪಟ್ಟು ವೇಗದ ಡೌನ್‌ಲೋಡ್‌ಗೆ ಸಿದ್ಧರಾಗಿರಿ, ಎಚ್‌ಡಿ ಮೂವಿ 10 ಸೆಕೆಂಡ್‌ಗಳಲ್ಲಿ ಡೌನ್‌ಲೋಡ್ ಆಗುತ್ತದೆ ಎಂದೆಲ್ಲ ತನ್ನ ಪ್ರಚಾರದಲ್ಲಿ ಹೇಳಿದೆ! ಆದರೆ, ರಿಯಲ್‌ಮಿಗಿರುವ ಆತುರ ಭಾರತದಲ್ಲಿ 5ಜಿ ನೆಟ್‌ವರ್ಕ್ ಜಾರಿಗೊಳಿಸಲು ಇಲ್ಲವಲ್ಲ!
ಇರಲಿ. ನಾಲ್ಕೈದು ದಿನಗಳ ಹಿಂದೆ ದೆಹಲಿಯಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಲಾಯಿತು. ಇದು ಕಂಪನಿಯ ಅತ್ಯುತ್ತಮ ದರ್ಜೆ (ಫ್ಲಾಗ್‌ಶಿಪ್) ಫೋನಾಗಿದ್ದು, ಈ ಫೋನು 6.44 ಇಂಚಿನ ಫುಲ್ ಎಚ್‌ಡಿ ಪ್ಲಸ್ (1080*2400 ಪಿಕ್ಸಲ್ಸ್) ಡಿಸ್‌ಪ್ಲೆ. 90 ಹಟ್ಜ್ ರಿಫ್ರೆಶ್‌ರೇಟ್. ಕಾರ್ನಿಂಗ್ ಗೊರಿಲ್ಲಾ ಗಾಜಿನ ಲೇಪನವಿದೆ. ಪರದೆಯ ಮೇಲೆ ಬೆರಳಚ್ಚು ಸ್ನ್ಯಾನಿಂಗ್ ಮಾಡಬಹುದಾಗಿದೆ.
ಪ್ರೊಸೆಸರ್ ಮತ್ತು ಕ್ಯಾಮೆರಾ: ಸ್ನಾಪ್‌ಡ್ರಾಗನ್ 865 ಎಂಟು ಕೋರ್‌ಗಳ ಪ್ರೊಸೆಸರ್ ಇದ್ದು, 2.84 ಗಿಗಾಹಟ್ಜ್ ವೇಗ ಹೊಂದಿದೆ. ಅಂಡ್ರಾಯ್ಡ 10 ಕಾರ್ಯಾಚರಣೆ ವ್ಯವಸ್ಥೆಯಿದೆ. 64 ಮೆಗಾ ಪಿಕ್ಸಲ್‌ಗಳ ಮುಖ್ಯ ಕ್ಯಾಮೆರಾ ಲೆನ್ಸ್ ಇದ್ದು, ಇದಕ್ಕೆ 12 ಮೆಗಾಪಿಕ್ಸಲ್‌ಗಳ ಟೆಲಿಫೋಟೋ ಲೆನ್ಸ್, 8 ಮೆ.ಪಿ. ವೈಡ್ ಆ್ಯಂಗಲ್ ಲೆನ್ಸ್, 2 ಮೆ.ಪಿ. ಮ್ಯಾಕ್ರೋ ಲೆನ್ಸ್‌ಗಳಿವೆ. 32 ಮತ್ತು 8 ಮೆ.ಪಿ.ಯ ಯುಗಳ ಕ್ಯಾಮೆರಾ ಸೆಲ್ಫಿಗಾಗಿ ಇದೆ.
ಬ್ಯಾಟರಿ: 4200 ಎಂಎಎಚ್ ಬ್ಯಾಟರಿ ಇದ್ದು, 65 ವ್ಯಾಟ್ಸ್‌ನ ಈ ಬ್ಯಾಟರಿ, ಅತ್ಯಂತ ವೇಗದಲ್ಲಿ ರೀಚಾರ್ಜ್ ಆಗುತ್ತದೆ. ಇದಕ್ಕೆ ವೇಗವಾಗಿ ಚಾರ್ಜ್ ಮಾಡಲು 10ವಿ 6.5ಎ ಚಾರ್ಜರ್ ಸಹ ನೀಡಲಾಗಿದೆ.
ಕೊಸರು: ರಿಯಲ್‌ಮಿ ಬ್ರಾಂಡ್ ಚೀನಾದ ಬಿಬಿಕೆ ಎಲೆಕ್ಟ್ರಾನಿಕ್ಸ್‌ನ ಒಡೆತನಕ್ಕೆ ಸೇರಿದೆ. ಈ ಕಂಪನಿ ಒನ್‌ಪ್ಲಸ್ ಬ್ರಾಂಡ್‌ನಡಿ ಆನ್‌ಲೈನ್ ಮೂಲಕ ಫ್ಲಾಗ್‌ಶಿಪ್ ದರ್ಜೆಯ ಫೋನ್‌ಗಳನ್ನು ನೀಡುತ್ತಿದೆ. ಮತ್ತದು ತನ್ನ ಗುಣಮಟ್ಟಕ್ಕಾಗಿ ಹೆಸರು ಪಡೆದಿದೆ. ಈಗ ರಿಯಲ್‌ಮಿಯ ಎಕ್ಸ್50 ಪ್ರೊ. 5ಜಿ ಫೋನ್‌ನ ದರಗಳು ಹೆಚ್ಚು ಕಡಿಮೆ ಒನ್‌ಪ್ಲಸ್ ಫೋನ್‌ಗಳ ಸಮಕ್ಕೇ ಇವೆ. ರಿಯಲ್‌ಮಿ ಫ್ಲಾಗ್‌ಶಿಪ್‌ಗ್ಳು ಇನ್ನೂ ಕೊಂಚ ಕಡಿಮೆ ಇರಬಹುದು ಎಂಬ ಭಾವನೆ ಗ್ರಾಹಕರಲ್ಲಿತ್ತು. 40 ಸಾವಿರ ಕೊಟ್ಟು ರಿಯಲ್‌ಮಿ ಕೊಳ್ಳುವ ಬದಲು, ಒನ್‌ಪ್ಲಸ್ ಅನ್ನೇ ಕೊಳ್ಳಬಹುದಲ್ಲ ಎಂಬ ಭಾವನೆ ಅನೇಕ ಗ್ರಾಹಕರಲ್ಲಿ ಬರುತ್ತದೆ. ಬಿಬಿಕೆ ಎಲೆಕ್ಟ್ರಾನಿಕ್ಸ್‌ನ ದೂರಗಾಮಿ ಯೋಚನೆ ಏನಿದೆಯೋ ? ಹಿಂದೂಸ್ತಾನ್ ಲೀವರ್ ಕಂಪೆನಿ ಲೈಫ್ಬಾಯ್, ಲಕ್ಸ್, ರೆಕೊÕàನಾ, ಆಯುಷ್, ಹಮಾಮ್ ಸೇರಿ ಇನ್ನೂ ಅನೇಕ ಸೋಪ್‌ಗ್ಳನ್ನು ತಯಾರಿಸುತ್ತಿದೆ. ಮಾರುಕಟ್ಟೆಯಲ್ಲಿ ಗ್ರಾಹಕ ಯಾವುದನ್ನೇ ಕೊಂಡರೂ ತನ್ನ ಸೋಪೇ ಅಲ್ಲಿ ಇರಬೇಕು ಎಂದು ಆ ಕಂಪೆನಿ ಮನೋಭಾವ. ಹಾಗೇ ಬಿಬಿಕೆಯದೂ ಆಗಿರಬಹುದು!
ರ್ಯಾಮ್, ರೋಮ್ ಮತ್ತು ರೂ.
ಈ ಫೋನು ಒಟ್ಟು ಮೂರು ಆವೃತ್ತಿಗಳಲ್ಲಿ ದೊರಕುತ್ತದೆ.
– 6 ಜಿಬಿ ರ್ಯಾಮ್‌ಗೆ 128 ಜಿಬಿ ಆಂತರಿಕ ಸಂಗ್ರಹ- 38 ಸಾವಿರ ರೂ.
– 8 ಜಿಬಿ ರ್ಯಾಮ್‌ಗೆ 128 ಜಿಬಿ ಆಂತರಿಕ ಸಂಗ್ರಹ- 40 ಸಾವಿರ ರೂ.
– 12 ಜಿಬಿ ರ್ಯಾಮ್‌ಗೆ 256 ಜಿಬಿ ಆಂತರಿಕ ಸಂಗ್ರಹ: 45 ಸಾವಿರ ರೂ.
– ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.