ಆಲ್ ದ ಬೆಸ್ಟ್; ಪರೀಕ್ಷೆಯನ್ನೇ ಗೆದ್ದು ಬನ್ನಿ ಮಕ್ಕಳೇ
Team Udayavani, Mar 3, 2020, 6:00 AM IST
ಪರೀಕ್ಷೆ ಅಂದರೆ ಯುದ್ಧವಲ್ಲ. ಪರೀಕ್ಷೆ ಬದುಕಿನ ಒಂದು ಅನುಭವ; ಆದರೇ, ಪರೀಕ್ಷೆಯೇ ಬದುಕಲ್ಲ. ನಾವು ಎಷ್ಟೆಲ್ಲಾ ಕಷ್ಟಪಟ್ಟು ಓದುತ್ತೀವಿ ಗೊತ್ತಾ ಅಂತ ಈಗಿನ ಮಕ್ಕಳು ಅಂದುಕೊಳ್ಳಬಹುದು. ಆದರೆ, ನಮ್ಮ ಹಿರಿಯರು ಹೇಗೆಲ್ಲಾ ಓದುತ್ತಿದ್ದರು ಅನ್ನೋದಕ್ಕೆ ಇಲ್ಲಿ ಮೂರು ಜನ ಗಣ್ಯರು ಮಾತನಾಡಿದ್ದಾರೆ. ಪರೀಕ್ಷೆ ಬರೆಯುತ್ತಿರುವ ನಿಮಗೆ ಇವರ ಅನುಭವಗಳು ಆತ್ಮವಿಶ್ವಾಸದ ದೀಪ ಹೊತ್ತಿಕೊಳ್ಳಬಹುದು. ಬದುಕಿನ ಪೂರ್ತಿ ಇದೇ ದಾರಿದೀಪ ಅಲ್ಲವೇ?
ನಾನೂ ನಿಮ್ಮಥರಾನೇ
ಪ್ರಿಯ ವಿದ್ಯಾರ್ಥಿಗಳೇ,
ಪರೀಕ್ಷೆ ಬರೆಯೋಕೆ ಸಿದ್ಧರಾಗಿದ್ದೀರಿ. ನಮ್ಮ ಕಾಲದಲ್ಲಿ ವರ್ಷಕ್ಕೆ ಮೂರು ಪರೀಕ್ಷೆ ಇರ್ತಾ ಇತ್ತು. ದಸರಾ ಹಬ್ಬಕ್ಕೆ ಮುಂಚೆ, ಕ್ರಿಸಮಸ್‌ಗೂ ಮೊದಲು ಹೀಗೆ ಎರಡು ಪರೀಕ್ಷೆ. ಇವುಗಳಲ್ಲಿ ಉತ್ತೀರ್ಣವಾದರೂ ಮುಂದಿನ ತರಗತಿಗೆ ಬಡ್ತಿ ಕೊಡ್ತಿರಲಿಲ್ಲ. ಆದರೆ, ನಮ್ಮ ಓದಿನ ಸಾಮರ್ಥ್ಯ ಎಷ್ಟಿದೆ? ಅಂತ ತಿಳಿಯೋದು. ಕೊನೆಯ ಪರೀಕ್ಷೆ ಏಪ್ರಿಲ್ ತಿಂಗಳಲ್ಲಿ ನಡೆಯೋದು. ಅದರಲ್ಲಿ ಪಾಸಾದರೆ ಮಾತ್ರ ಮೇಲಿನ ಕ್ಲಾಸ್‌ಗೆ ಪ್ರಮೋಷನ್ ಆಗ್ತಾ ಇತ್ತು. ಆದ್ದರಿಂದ, ಮೂರು ಹಂತಗಳ ಪರೀಕ್ಷೆಗಳಲ್ಲೂ ಪಾಸಾಗೋ ಪ್ರಯತ್ನ ಮಾಡ್ತಾ ಇದ್ವಿ. ಇದಕ್ಕೆ ಕಾರಣ ಇದೆ. ಈ ಪರೀಕ್ಷೆಗಳ ಅಂಕ ಪಟ್ಟಿಯನ್ನು ಪೋಷಕರಿಗೆ ತೋರಿಸಿ ಸಹಿ ಪಡೆಯಬೇಕಿತ್ತು.ಅವರೂ ಜಾಗೃತರಾಗಿರುತ್ತಿದ್ದರು. ಫೇಲ್ ಆಗಿದ್ದರೆ, ಕಡಿಮೆ ಅಂಕ ಪಡೆದಿದ್ದರೆ, ಏಕೆ, ಏನಾಯ್ತು ಅಂತೆಲ್ಲಾ ಪ್ರಶ್ನೆಗಳನ್ನು ಎದುರಿಸಬೇಕಾಗಿತ್ತು.
ನಾನು ಈಗ ನಿವೃತ್ತ ನ್ಯಾಯಮೂರ್ತಿ. ಹಾಗಂತ ವಿದ್ಯಾರ್ಥಿ ಜೀವನದಲ್ಲಿ ಬುದ್ಧಿವಂತ, ಮೇಧಾವಿ ಆಗಿರಲಿಲ್ಲ. ನಾನೂ, ನಿಮ್ಮ ಥರಾನೇ ಇದ್ದ ವಿದ್ಯಾರ್ಥಿ. ನಾನು ರ್‍ಯಾಂಕ್‌ಗೀಂಕ್ ಪಡೆದವನಲ್ಲ; ಸೆಕೆಂಡ್ ಕ್ಲಾಸ್ ವಿದ್ಯಾರ್ಥಿ. ಅದರಿಂದಾಗಿಯೇ ಹೆತ್ತವರು ಇನ್ನೂ ಜಾಸ್ತಿ ಮಾರ್ಕ್‌ತೆಗೆದು ಫಸ್ಟ್ ಕ್ಲಾಸ್ ಬರಬೇಕು ಅಂತ ಹೇಳ್ತಿದ್ದರು. ಶಾಲೆಯಲ್ಲಿ ಆಟಕ್ಕೆ ಹೆಚ್ಚು ಗಮನ ಕೊಡ್ತಾ ಇದ್ದೆ. ಹಾಕಿ, ಕ್ರಿಕೆಟ್‌ನಲ್ಲಿ ಶಾಲಾ, ಕಾಲೇಜುಗಳನ್ನು ಪ್ರತಿನಿಧಿಸಿ ಪ್ರಶಸ್ತಿ ಗಳಿಸುತ್ತಿದ್ದೆ. ವಿದ್ಯಾಭ್ಯಾಸ, ಕ್ರೀಡೆ ಈ ಎರಡೂ ಕಡೆ ಗಮನ ಹರಿಸುತ್ತಿದ್ದೆ. ನಮ್ಮ ಕಾಲದಲ್ಲಿ ಡಿಸ್ಟ್ರಾಕ್ಷನ್ ಕಡಿಮೆ. ಈಗಿನಂತೆ ಟಿವಿ. ಮೊಬೈಲ್, ಅದರಲ್ಲೊಂದಷ್ಟು ಹಾಡು, ಸಿನಿಮಾಗಳು ಇವ್ಯಾವೂ ಇರಲಿಲ್ಲ. ಸಾಯಂಕಾಲ 5ರಿಂದ 6 ಗಂಟೆ ತನಕ ಆಟಗೀಟ ಆಡಿ ಮನೆಗೆ ಬಂದರೆ, ನನ್ನ ತಾಯಿ ಸಹೋದರ, ಸಹೋದರಿಯನ್ನು ಕೂಡಿಸಿ, ಚೆನ್ನಾಗಿ ಓದಿ ಅಂತ ಹೇಳುತ್ತಿದ್ದರು. ಒಂದು ಗಂಟೆ ಶಾಲೆಯಲ್ಲಿ ಮಾಡಿದ ಪಾಠಗಳನ್ನು ಮತ್ತೆ ಓದುವುದು ರೂಢಿ. ಆಮೇಲೆ ಊಟ ಮಾಡಿ, ಮನೆಯವರ ಜೊತೆ ಹರಟೆ ಹೊಡೆದು ಮಲಗುವುದು ಆಗಿನ ದಿನಚರಿ. ಪರೀಕ್ಷಾ ಸಮಯದಲ್ಲಿ ರಾತ್ರಿ ಹತ್ತು ಗಂಟೆ ತನಕ ಓದಿದ್ದಿದೆ. ಇಡೀ ರಾತ್ರಿ ಓದಿದ್ದು ಇಲ್ಲವೇ ಇಲ್ಲ. ಆರೀತಿ ಓದುವ ಅಗತ್ಯವೂ ಇಲ್ಲ.
ನನ್ನದೊಂದು ಪಾಲಿಸಿ ಇತ್ತು. ಓದೋ ಸಮಯದಲ್ಲಿ ಓದುವುದು, ಆಡೋ ಸಮಯದಲ್ಲಿ, ಆಡುವುದು ಅಂತ. ಓದಿನ ವಿಚಾರದಲ್ಲಿ ನನಗೆ ಮನೆ ಕಡೆಯಿಂದಲೂ ತೀರ ಒತ್ತಡ ಅಂತೇನೂ ಇರಲಿಲ್ಲ. ಮುಖ್ಯವಾಗಿ, ಪರೀಕ್ಷೆ ಬಂತು ಅಂತ ಓದುತ್ತಿರಲಿಲ್ಲ. ಪರೀಕ್ಷೆಗೂ ಮೊದಲು ಬೇಕಾದ ಸಿದ್ಧತೆ ಮಾಡಿಕೊಂಡಿರುತ್ತಿದ್ದೆ. ಇಡೀ ವರ್ಷದ ಓದನ್ನು ವಾರ, ಹತ್ತು ದಿನದಲ್ಲಿ ಪೂರೈಸುವುದಕ್ಕೆ ಆಗೋಲ್ವಲ್ಲ? ಈಗಿನವರು ಮಾಡುವ ತಪ್ಪು ಇದೇ. ಎಲ್ಲವನ್ನೂ ಪರೀಕ್ಷೆ ಸಮಯದಲ್ಲಿ ಓದೋಕೆ ಹೋಗ್ತಾರೆ. ಮುಗ್ಗರಿಸುತ್ತಾರೆ. ಹಂತ, ಹಂತವಾಗಿ ಓದ್ಕೋತಾ ಹೋಗಬೇಕು. ನಮ್ಮ ಕಾಲದಲ್ಲಿ ಈಗಿನಷ್ಟು ಸಾಮಾಜಿಕ ಒತ್ತಡ ಕೂಡ ಇರಲಿಲ್ಲಪ್ಪ. ಸೆಕೆಂಡ್‌ಕಾÉಸ್ ಫಸ್ಟ್ ಕ್ಲಾಸ್ ಬಂದವರಿಗೂ ಮೆಡಿಕಲ್, ಎಂಜಿನಿಯರಿಂಗ್‌ಗೆಲ್ಲ ಸೀಟು ಸಿಗೋದು. ಹೀಗಾಗಿ, ಪರೀಕ್ಷೆ ಸಮಯದಲ್ಲೂ ಬಹಳ ರಿಲ್ಯಾಕ್ಸ್ ಆಗಿಯೇ ಇರುತ್ತಿದ್ದೆ.
ನಾನು ನಿಮಗೆ ಹೇಳ್ಳೋದು ಇಷ್ಟೇ. ನೀವೆಲ್ಲ ಈಗಿನ ಎಲ್ಲ ಸೌಲಭ್ಯಗಳನ್ನು, ಮನರಂಜನೆಗಳನ್ನು ಬಿಟ್ಟು ಸನ್ಯಾಸಿಗಳಾಗಿಬಿಡಿ ಅಂತ ಹೇಳಲ್ಲ. ಮನುಷ್ಯನಿಗೆ ಡಿಸ್ಟ್ರಾಕ್ಷನ್ ಬೇಕು; ಇರಬೇಕು. ಇದರ ಜೊತೆ ಜೊತೆಗೆ ನಿಮ್ಮ ಭವಿಷ್ಯದ ಬಗ್ಗೆಯೂ ಚಿಂತಿಸಬೇಕು. ಪೋಷಕರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಬೇಕು; ಇದು ನಿಮ್ಮ ಕರ್ತವ್ಯ. ಏಕೆಂದರೆ, ಅವರ ಎಷ್ಟೋ ಕನಸುಗಳನ್ನು ಅದುಮಿಟ್ಟುಕೊಂಡು, ನಮ್ಮ ಮಕ್ಕಳು ಓದಿ ಬಹಳ ದೊಡ್ಡವರಾಗ್ತಾರೆ ಅಂತ ಆಸೆ ಇಟ್ಕೊಂಡಿರ್ತಾರೆ. ನನ್ನ ಮಗಳು ಇಂಥ ಕೆಲಸದಲ್ಲಿ ಇದ್ದಾಳೆ ಅಂತ ಹೆಮ್ಮೆಯಿಂದ ಬೀಗುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ಸಾಲ ಸೋಲ ಮಾಡಿ ದುಡ್ಡು ಕಟ್ಟುತ್ತಾರೆ. ಅವರು ಎಷ್ಟೆಲ್ಲಾ ಮಾಡಿದ್ದಾರೆ ಅಂತ ನೀವು ಒಂದು ಸಲ ಯೋಚನೆ ಮಾಡಿ.
ಈ ಎಲ್ಲದರ ಮಧ್ಯೆ, ನೀವು ಎಲ್ಲ ಪ್ರಯತ್ನಗಳನ್ನು ಮಾಡಿಯೂ ಫಲಿಸಲಿಲ್ಲ ಅಂದರೆ, ತಲೆ ಕೆಡಿಸಿಕೊಳ್ಳಬೇಡಿ. ಇದರಲ್ಲಿ ನಿರಾಸೆ ಆಗುವಂಥದ್ದೇನೂ ಇಲ್ಲ. ಒಂದು ಸಲ ಹಿಂತಿರುಗಿ ನೋಡಿ, ನಿಮ್ಮ ಮಟ್ಟಕ್ಕೂ ಬರಲಾಗದಂಥ ಲಕ್ಷಾಂತರ ಮಂದಿ ನಿಮ್ಮ ಹಿಂದೆ ಇರುತ್ತಾರೆ. ವಿಫಲವಾದಾಗ ನಿರಾಸೆ ಆಗಬಹುದು; ಮುಂದೆ ಎಲ್ಲರಂತೆ ನಿಮಗೂ ಒಳ್ಳೆ ದಿನ ಇದ್ದೇ ಇರ್ತದೆ ಅನ್ನೋದನ್ನು ಮಾತ್ರ ಮರೀಬೇಡಿ.
ಖುಷಿಯಿಂದ ಪರೀಕ್ಷೆ ಬರೆಯಿರಿ.
ನ್ಯಾ. ಸಂತೋಷ ಹೆಗ್ಡೆ
ನಿವೃತ್ತ ನ್ಯಾಯಮೂರ್ತಿಗಳು
ಕೂಲಾಗಿ ಇರ್ತಿದ್ದುದರ ರಹಸ್ಯ
ನನ್ನ ಮೂಲ ಮಹಾರಾಷ್ಟ್ರದ ವಿದರ್ಭದಲ್ಲಿರುವ ಕಾರಂಜಿಲಾಡ್ ತಾಲೂಕಿನಲ್ಲಿರುವ ವೋಹಾ ಅನ್ನೋ ಹಳ್ಳಿ. ನನ್ನ ಶಾಲೆಗೂ, ಮನೆಗೂ ಎಂಟು ಕಿ.ಮೀ ದೂರ. ಅಪ್ಪ-ಅಮ್ಮ ಕರೆದುಕೊಂಡು ಬಂದು, ಶಾಲೆಗೆ ಹೋಗು ಪುಟ್ಟಾ ಅಂತ ದಿನಾ ಬಿಡುವ ಸೀನೇ ಇಲ್ಲ. ನಾನೇ ಆಟೋದಲ್ಲೋ, ಸೈಕ್‌ಲ್‌ನಲ್ಲೋ ಹೋಗಿ ಬರ್ತಾ ಇದ್ದೆ. ಪರೀಕ್ಷೆ ಬಂದರೆ ನನಗೊಂಥರ ರಿಲ್ಯಾಕ್ಸ್. ನೋಡೊªàರು, ಎಕ್ಸಾಂ ಇಟ್ಕೊಂಡೂ ಏನಿವನು ಇಷ್ಟೊಂದು ತಂಪಾಗಿದ್ದಾನಲ್ಲ ಅಂದುಕೊಳ್ಳುತ್ತಿದ್ದರು. ಆದರೆ, ನಾನು ಓದೋ ರೀತಿನೇ ಹಾಗಿತ್ತು. ಪರೀಕ್ಷೆ ಬಂತು ಅಂತ ಹೆದರೋದು, ಇನ್ನೂ ಆ ವಿಷಯ ಕವರೇ ಮಾಡಿಲ್ವಲ್ಲ ಅಂತ ಬೆದರೋದು ಇಲ್ವೇ ಇಲ್ಲ. ಇದಕ್ಕೆಲ್ಲಾ ಕಾರಣ, ನನ್ನೊಳಗಿದ್ದ ಕಾನಿ³ಡೆನ್ಸ್. ಇದು ಬಂದಿದ್ದು ಶಾಲೆಯಿಂದ. ಅಲ್ಲಿ ಮೇಷ್ಟ್ರು ಪಾಠ ಮಾಡುತ್ತಿರಬೇಕಾದರೆ ನನ್ನ ಗಮನ ಎಲ್ಲಾ ಪಾಠದ ಮೇಲೆ ಇರುತ್ತಿತ್ತು. ಆಮೇಲೇ ಬಂದು ಮನೇಲಿ ಓದ್ಕೋತಾ ಇದ್ದೆ. ಇಷ್ಟೇ.
ಎಲ್ಲವೂ ತಲೆ ಅನ್ನೋ ಹಾರ್ಡ್‌ಡಿಸ್ಕ್ಗೆ ಹೋಗಿಬಿಡೋದು. ಇನ್ನೇನು ಪರೀಕ್ಷೆ ಮೂರು ತಿಂಗಳು ಇದೆ ಅಂದಾಗ, ಸ್ವಲ್ಪ ಹೆಚ್ಚಿಗೆ ಸಮಯ ಕೊಟ್ಟು ರಿವಿಷನ್ ಮಾಡ್ಕೊತಾ ಇದ್ದೆ. ಇಲ್ಲಿಗೆ ಮುಗೀತು. ಇನ್ನು ಪರೀಕ್ಷೆ ಹಿಂದಿನ ದಿನ, ಹಳೇ ಪ್ರಶ್ನೆ ಪತ್ರಿಕೆಗಳನ್ನು ತಿರುವಿ ಹಾಕಿದರೆ ಎದೆಯಲ್ಲಿ ಆತ್ಮವಿಶ್ವಾಸದ ಬುಗ್ಗೇನೇ ಏಳ್ಳೋದು.
ವಿದ್ಯಾರ್ಥಿಗಳಿಗೆ ಬೇಕಾಗಿರೋದು ಇಷ್ಟೇ. ಭಯ ಇದ್ದರೆ ಕಾನಿ³ಡೆನ್ಸ್ ಇರೋಲ್ಲ. ಭಯ ಹೋಗಬೇಕಾದರೆ ಓದಬೇಕು. ಈ ಓದು ತಂದು ಕೊಡುವ ಆತ್ಮವಿಶ್ವಾಸವನ್ನು ಯಾರೂ ಕೊಡಲು ಸಾಧ್ಯವಿಲ್ಲ. ಅದನ್ನು ಏಕಾಗ್ರತೆ ಹಾದಿಯಲ್ಲಿ ನಡೆದರೆ ಸಿಗುತ್ತೆ ಅಂತ ನಾನು ಕಂಡು ಹಿಡಿದುಕೊಂಡಿದ್ದರಿಂದಲೇ ಎದುರಿಗೆ ಪರೀಕ್ಷೆನಿಂತರೂ, ತಣ್ಣಗೆ ಇರುತ್ತಿದ್ದದ್ದು. ನಾನು ಯುಪಿಎಸ್‌ಸಿ ಪರೀಕ್ಷೆ ಬರೆಯುವಾಗ ನನ್ನ ಓದಿನ ರೀತಿ ಬದಲಾಯಿಸಿಕೊಂಡು ಬಿಟ್ಟಿದ್ದೆ. ಆಗ ನೋಡಿ ಆಯ್ತು ಎಡವಟ್ಟು. ಅದೇನೆಂದರೆ, ಪರೀಕ್ಷೆಗೆ ಮೊದಲೇ ಸಿದ್ಧವಾಗುತ್ತಿದ್ದವನು, ಯುದ್ಧ ಕಾಲದಲ್ಲೇ ಶಸ್ತ್ರಾಭ್ಯಾಸ ಅನ್ನೋ ರೀತಿ , ಎದುರಿಗೆ ಪರೀಕ್ಷೆ ಬಂದು ನಿಂತಾಗ, ಅದರ ಮುಂದೆ ಕೂತು ನಾನು ಪ್ರಶ್ನೆ ಪತ್ರಿಕೆಗಳನ್ನು ಗುಡ್ಡೆ ಹಾಕ್ಕೊಂಡು ಅಭ್ಯಾಸ ಮಾಡೋಕೆ ಶುರುಮಾಡಿದೆ. ಪರಿಣಾಮ ಫೇಲ್. ಬೇಜಾರಾಗಲಿಲ್ಲ. ನನಗೆ ಗೊತ್ತಿತ್ತು. ತಪ್ಪುಗಳು ಎಲ್ಲಾಗಿವೆ ಅಂತ. ಮತ್ತೆ ಎಲ್ಲವನ್ನೂ ಸರಿ ಮಾಡಿಕೊಂಡೆ.
ನನ್ನ ವಿದ್ಯಾರ್ಥಿ ಬದುಕು ಕಲಿಸಿದ್ದು ಏನು ಗೊತ್ತಾ? ಆತ್ಮವಿಶ್ವಾಸ, ಕಾನ್ಸೆಂಟ್ರೇಷನ್. ಇವೆರಡೂ ಗೆಲುವಿನ ರಹದಾರಿ ಅಂತ. ನೀವು ನೋಡಿ, ಕಾನ್ಸೆಂಟ್ರೇಷನ್ ಇರೋ ವಿದ್ಯಾರ್ಥಿ ಒಂದು ಪಾಠವನ್ನು ಹದಿನೈದೇ ನಿಮಿಷದಲ್ಲಿ ಓದಿ ಅರಗಿಸಿಕೊಳ್ಳುತ್ತಾನೆ. ಅದು ಇಲ್ಲದವನು, ಅದೇ ಪಾಠವನ್ನು ಎರಡು ಗಂಟೆ ಓದುತ್ತಾನೆ. ನನ್ನ ಯಶಸ್ಸಿನ ಹಿಂದೆ ಇದ್ದದ್ದು ಈ ಎರಡು ದಾರಿಗಳು.
ನೀವು ಇದನ್ನು ಏಕೆ ಅಳವಡಿಸಿಕೊಳ್ಳಬಾರದು?
ಸುರಲ್ಕರ್ ವಿಕಾಸ್ ಕಿಶೋರ್
ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾಪ್ರಾಧಿಕಾರ
ಒತ್ತಡ ಮಾಡ್ಕೋತಾ ಇರಲಿಲ್ಲ…
ನಮ್ಮ ಕಾಲದಲ್ಲಿ ಪರೀಕ್ಷೆ ಬರೆಯುವಾಗ ಯಾವುದೇ ಒತ್ತಡಗಳು ಇರಲಿಲ್ಲ. ಹಾಗಾಗಿ, ಕಣ್ತುಂಬ ನಿದ್ದೆ, ಹೊಟ್ಟೆ ತುಂಬ ಊಟ ಮಾಡುತ್ತಿದ್ದೆವು. ಯಾವ ಕಾಲಕ್ಕೂ ಯುದ್ಧಕಾಲೇ ಶಸ್ತ್ರಾಭ್ಯಾಸ ಮಾಡುತ್ತಲೇ ಇರಲಿಲ್ಲ. ನಮಗೆ ಇದ್ದದ್ದು ಒಂದೇ. ಹಾಲ್‌ಟಿಕೆಟ್ ಟೆನ್ಷನ್. ಪರೀಕ್ಷೆಗೆ ಮೊದಲೇ ಕೊಟ್ಟರೆ ವಿದ್ಯಾರ್ಥಿಗಳು ಕೆಳೆದುಕೊಳ್ಳುತ್ತಾರೆ ಅಂತ ಪರೀಕ್ಷೆಯ ಹಿಂದಿನ ದಿನ ಕೊಡುತ್ತಿದ್ದರು. ಆಗಲೇ ನಮ್ಮ ಪರೀಕ್ಷಾ ಕೇಂದ್ರ ಯಾವುದು ಅಂತ ತಿಳಿಯುತ್ತಿದ್ದದ್ದು. ಆಗ ಓಡಿ, ನಮ್ಮ ಸೀರಿಯಲ್ ನಂಬರ್ ಹುಡುಕಿ, ಪರೀಕ್ಷೆಗೆ ಕುಳಿತುಕೊಳ್ಳಬೇಕಿತ್ತು. ಇದಿಷ್ಟನ್ನೂ, ನಾವೇ ಅಂದರೆ ವಿದ್ಯಾರ್ಥಿಗಳೇ ಮಾಡಬೇಕಿತ್ತು. ಹೆತ್ತವರನ್ನು ಒಳಗೊಂಡಂತೆ ಯಾರೂ ಕೂಡ ನಮ್ಮ ನೆರವಿಗೆ ಬರುತ್ತಿರಲಿಲ್ಲ.
ಇವತ್ತು ಪರೀಕ್ಷೆ ಇದೆಯಮ್ಮಾ ಅಂದರೆ, “ಹೌದಾ, ಹೋಗಿ ಬರೆದು ಬಾ’ ಅನ್ನೋರು ಅಷ್ಟೇ. ಹಾಗಾಗಿ, ಪರೀಕ್ಷಾ ಕೇಂದ್ರ ಹುಡುಕುವ ಗಡಿಬಿಡಿಯಿಂದ ಸ್ವಲ್ಪ ಒತ್ತಡವಾಗುತ್ತಿತ್ತೇ ಹೊರತು, ಓದಿನ ವಿಚಾರವಾಗಿ ಏನೂ ಇರಲಿಲ್ಲ. ನಮ್ಮ ತಂದೆ ಶಿಕ್ಷಕರು. ಇನ್ನು ಕೇಳಬೇಕೆ? ಭಾನುವಾರ ಬಂದರೆ, ಶಾಲೆಯಲ್ಲಿ ಮಾಡಿದ ಪಾಠಗಳನ್ನು ಮತ್ತೆ ಮತ್ತೆ ಓದಿಸುತ್ತಿದ್ದರು.
ಪರೀಕ್ಷೆ ಹತ್ತಿರವಾದರೆ ಸಾಕು, ಒಂದಷ್ಟು ಪ್ರಶ್ನೆ ಪತ್ರಿಕೆಗಳನ್ನು ತಂದು ಗುಡ್ಡೆ ಹಾಕಿ ಉತ್ತರ ಹುಡುಕಿಸೋರು. ಹೀಗಾಗಿ, ಪರೀಕ್ಷೆಯಲ್ಲಿ ಫೇಲಾಗುತ್ತೇನೆ ಅನ್ನೋ ಭಯವೇ ಹುಟ್ಟಿರಲಿಲ್ಲ.
ಆಗೆಲ್ಲ ಐದು ಅಂಕ, ಎರಡು ಅಂಕ, ಒಂದು ಅಂಕ, ಮೂರು ಅಂಕದ ಪ್ರಶ್ನೆಗಳು ಇರುತ್ತಿದ್ದವು. ಪುಸ್ತಕದ ಯಾವ ಮೂಲೆಯಿಂದ ಬೇಕಾದರೂ ಪ್ರಶ್ನೆಗಳು ಎದ್ದು ಬಂದು ನಿಮ್ಮ ಮುಂದೆ ನಿಲ್ಲಬಹುದಿತ್ತು. ಹೀಗಾಗಿ, ಇಡೀ ಪುಸ್ತಕ ಓದಲೇಬೇಕಿತ್ತು. ಬೇರೆ ದಾರಿಯೇ ಇರಲಿಲ್ಲ. ಆಗೆಲ್ಲ ಎಸ್‌ಎಸ್‌ಎಲ್‌ಸಿ ಪಾಸಾಗುವುದೇ ದೊಡ್ಡ ವಿಚಾರ. ಫಸ್ಟ್‌ಕ್ಲಾಸ್, ರ್‍ಯಾಂಕ್‌ನ ನಿರೀಕ್ಷೆಗಳು ಬಹಳ ಕಮ್ಮಿ. ಹೀಗಾಗಿ, ವಿದ್ಯಾರ್ಥಿಗಳ ಮೇಲೆ ಒತ್ತಡ ಇರಲಿಲ್ಲ. ನಾನು ಹತ್ತನೇ ತರಗತಿಯಲ್ಲಿ ಫಸ್ಟ್ , ನನ್ನ ಅಕ್ಕ ಸೆಕೆಂಡ್ ಕ್ಲಾಸ್‌ನಲ್ಲಿ ಉತ್ತೀರ್ಣರಾದಾಗ ನಮ್ಮ ತಂದೆ ಈ ಖುಷಿಗೆ ಊರಿಗೆಲ್ಲಾ ಲಾಡು ಹಂಚಿ ಬಂದಿದ್ದು ಇನ್ನೂ ನೆನಪಿದೆ. ನಮ್ಮ ಅಪ್ಪ-ಅಮ್ಮ ಮಕ್ಕಳು ಪ್ರತಿ ತರಗತಿಯಲ್ಲಿ ರ್‍ಯಾಂಕ್ ಬರಲೇಬೇಕು ಅಂತ ಹಠ ಹಿಡಿಯುವುದು, ಒತ್ತಡ ಹಾಕುವುದು ಮಾಡಲಿಲ್ಲ.
ವಿದ್ಯಾಭ್ಯಾಸ ಅನ್ನೋದು ಮುಕ್ತವಾದ ವಾತಾವರಣದಲ್ಲಿ ಮಗುವಿನ ಆಯ್ಕೆಯಾಗಿತ್ತು. ಈಗ ಇದು ಹೆತ್ತವರ ಆಯ್ಕೆಯಾಗಿದೆ. ಹೀಗಾಗಿಯೇ, ನಮ್ಮ ತಂದೆ ಕೇಳದೇ ಇದ್ದರೂ ಬಿಎಡ್, ಎಂಎಡ್‌ನಲ್ಲಿ ನಾನು ಗೋಲ್ಡ್ ಮೆಡಲ್ ತಗೊಂಡೆ. ಪ್ರತಿ ತರಗತಿಯಲ್ಲೂ ಫಸ್ಟ್ ಕ್ಲಾಸ್ ವಿದ್ಯಾರ್ಥಿ ಆಗಿದ್ದೆ. ಹೀಗೆ, ಆಗಬೇಕು ಅಂತ ಅವರು ಒತ್ತಡ ಇರಲಿ, ಹೇಳಿಯೂ ಇರಲಿಲ್ಲ.
ಫ್ರೀಡಂ ಹಾಗಿತ್ತು. ಬರೀ ಆಟ ಆಡೋದು ನನ್ನ ದೊಡ್ಡ ಖಯಾಲಿ. ಕತ್ತಲಾದರೂ ಮನೆಗೆ ಬರುತ್ತಿರಲಿಲ್ಲ. ಅಮ್ಮ,”ದೀಪ ಹಚ್ಚೋ ಹೊತ್ತಾಯ್ತು. ಓದ್ಕೋ ಬಾರೆ’ ಅಂದಾಗಲೇ ಮನೆಗೆ ಬಂದು, ಕೈಕಾಲು ತೊಳೆದು ಪುಸ್ತಕ ಹಿಡಿಯುತ್ತಿದ್ದದ್ದು. ಹೀಗೆ, ಒತ್ತಡ ರಹಿತವಾಗಿ ಓದಿ, ಒಳ್ಳೆ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದ್ದು.
ಈಗ ಆಡೋಕೆ ಮೈದಾನವೂ ಇಲ್ಲ. ಮಾತಾಡೋಕೆ ಒಳ್ಳೆ ಗೆಳೆಯರೂ ಇಲ್ಲ.
ಸುಮಂಗಲಾ
ನಿರ್ದೇಶಕರು, ಕರ್ನಾಟಕ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.