ಕ್ಲೋಜಿಂಗ್ ಡ್ಯಾಮ್‌ಗೆ ಬೇಕು ಇಚ್ಛಾ ಶಕ್ತಿ
Team Udayavani, Mar 4, 2020, 11:09 AM IST
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ರಾಜ್ಯದಲ್ಲಿ ಹರಿಯುವ ಕೆಲ ಜೀವನದಿಗಳ ನೀರು ಹೆಚ್ಚಿನ ಬಳಕೆ ಇಲ್ಲದೆ ಸಮುದ್ರ ಸೇರುತ್ತಿವೆ. ನೀರಿನ ಬಳಕೆ ನಿಟ್ಟಿನಲ್ಲಿ ಕೆಲವೊಂದು ನದಿಗಳಿಗೆ ಕ್ಲೋಜಿಂಗ್ ಡ್ಯಾಂ(ನದಿ ಇನ್ನೊಂದು ನದಿ ಸೇರುವ ಮುನ್ನ ಪ್ರದೇಶದಲ್ಲಿ)ನಿರ್ಮಾಣಕ್ಕೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಾಗಿದೆ. ಇದರಿಂದ ನೀರಾವರಿ ಸೌಲಭ್ಯ, ಕುಡಿಯುವ ನೀರು ಪೂರೈಕೆಗೆ ಸಹಕಾರಿ ಆಗಲಿದೆ.
ನದಿಗಳ ನೀರು ಬಳಕೆ ಹಾಗೂ ಪ್ರವಾಹ ನಿಯಂತ್ರಣ ದೃಷ್ಟಿಯಿಂದಲೂ ಕ್ಲೋಜಿಂಗ್ ಡ್ಯಾಂ ನಿರ್ಮಾಣ ಪ್ರಯೋಜನಕಾರಿ ಆಗಲಿದೆ ಎಂಬುದು ಕೆಲ ಎಂಜಿನಿಯರ್‌ಗಳ ಅಭಿಮತ. ಡ್ಯಾಂಗಳ ನಿರ್ಮಾಣಕ್ಕೆ ಯಾವುದೇ ಹಳ್ಳಿ-ನಗರ, ಭೂಮಿ ಮುಳುಗಡೆ ಆಗದಂತೆಯೇ ಕಾಮಗಾರಿ ಕೈಗೊಳ್ಳಬಹುದು ಎಂಬುದಕ್ಕೆ ತೆಲಂಗಾಣದಲ್ಲಿ ಕೈಗೊಂಡ ಕಾಳೇಶ್ವರಂ ಯೋಜನೆ ಮಾದರಿಯಾಗಿದೆ. ಅದೇ ಮಾದರಿಯನ್ನು ನಮ್ಮಲ್ಲಿಯೂ ಅಳವಡಿಕೆಗೆ ಸಾಧ್ಯವೇ ಎಂಬುದರ ಬಗ್ಗೆ ಅಧ್ಯಯನ ನಡೆಸುವ ಅವಶ್ಯಕತೆ ಇದೆ.
ಪ್ರವಾಹ ತಡೆ ಸಾಧ್ಯ: ಭೀಮಾ ಮತ್ತು ಘಟಪ್ರಭಾ ನದಿಗಳು ಕೃಷ್ಣಾ ನದಿಯ ಪ್ರಮುಖ ಉಪ ನದಿಗಳಾಗಿವೆ. ಮಳೆಗಾಲ ಸಂದರ್ಭದಲ್ಲಿ ಹೆಚ್ಚಿನ ಮಳೆ ಬಿದ್ದರೆ ಕೃಷ್ಣಾ ನದಿ ಪ್ರವಾಹದಿಂದ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಯಾದಗಿರಿ, ರಾಯಚೂರು ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಭೀಮಾ ನದಿ ಮಹಾರಾಷ್ಟ್ರದ ಸೋಲಾಪುರ, ರಾಜ್ಯದ ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ, ಘಟಪ್ರಭಾ ನದಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಸುವುದಲ್ಲದೆ, ಕೃಷ್ಣಾಕ್ಕೆ ಸೇರಿ ಪ್ರವಾಹ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲು ಕೊಡುಗೆ ನೀಡುತ್ತಿವೆ. ಈ ಎರಡು ನದಿಗಳಿಗೆ ಕ್ಲೋಜಿಂಗ್ ಡ್ಯಾಂ ನಿರ್ಮಾಣಕ್ಕೆ ಮುಂದಾದರೆ ಪ್ರವಾಹ ಪ್ರಮಾಣ ನಮ್ಮಲ್ಲಿಯಷ್ಟೇ ಅಲ್ಲದೆ, ಆಂಧ್ರಪ್ರದೇಶ, ತೆಲಂಗಾಣದಲ್ಲೂ ನಿಯಂತ್ರಣಕ್ಕೆ ಸಾಧ್ಯವಾಗಲಿದೆ. ಮುಖ್ಯವಾಗಿ ಕಲಬುರಗಿ, ಬೀದರ, ರಾಯಚೂರು ಭಾಗಗಳಿಗೆ ಇನ್ನಷ್ಟು ನೀರಾವರಿ ಸೌಲಭ್ಯ ಒದಗಿಸಬಹುದಾಗಿದೆ. ಭೀಮಾ ನದಿಗೆ ಕಲಬುರಗಿ ಜಿಲ್ಲೆ ನೆಲೋಗಿಯಲ್ಲಿ ಜಲಾಶಯ ನಿರ್ಮಾಣಕ್ಕೆ ಯೋಜಿಸಲಾಗಿದೆಯಾದರೂ ಅದು ಇಂದಿಗೂ ಸಾಕಾರಗೊಂಡಿಲ್ಲ. ಸಮರ್ಪಕ ನೀರಿನ ಬಳಕೆಯೂ ಆಗಿಲ್ಲ. ಜತೆಗೆ ಮಹಾರಾಷ್ಟ್ರದವರು ಭೀಮಾ ನದಿ ನೀರನ್ನು ಸುರಂಗ ಕಾಲುವೆ ಮೂಲಕ ತಿರುಗಿಸಿಕೊಂಡು ಪ್ರಯೋಜನ ಪಡೆಯುತ್ತಿದ್ದಾರೆ.
ಸಾಧ್ಯಾಸಾಧ್ಯತೆ ಅಧ್ಯಯನ ಅವಶ್ಯ: ಭೀಮಾ ನದಿ ಮಹಾರಾಷ್ಟ್ರದ ಭೀಮಾಶಂಕರ ಎಂಬ ಪ್ರಮುಖ ಧಾರ್ಮಿಕ ಸ್ಥಳದ ಅರಣ್ಯ ಪ್ರದೇಶದಲ್ಲಿ ಜನಿಸುತ್ತಿದ್ದು, ರಾಯಚೂರು ಜಿಲ್ಲೆಯ ಕಡೂರು ಬಳಿ ಕರ್ನಾಟಕ -ತೆಲಂಗಾಣ ಗಡಿಭಾಗದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ. ಭೀಮಾ ನದಿ ಸುಮಾರು 861 ಕಿಮೀ ದೂರ ಹರಿಯುತ್ತಿದೆ. ಭೀಮಾ ನದಿಗೆ ಅಮರ್ಜಾ, ಗಂಡೋರಿ ಹಳ್ಳ, ಮುಲ್ಲಾಮಾರಿ, ಬೆಣ್ಣೆತೋರಾ ಹಾಗೂ ಕಾಗಿನಾ ಉಪ ನದಿಗಳಿವೆ. ಕಾಗಿನಾ ನದಿ ಸೇರುವ ಜಾಗದಲ್ಲಿ ಇದಕ್ಕೆ ಜಲಾಶಯ ನಿರ್ಮಾಣ ಮಾಡಬಹುದಾಗಿದೆ ಎಂದು ನಿವೃತ್ತ ಎಂಜಿನಿಯರ್‌ರೊಬ್ಬರು ಕಳೆದ ಏಳೆಂಟು ವರ್ಷಗಳ ಹಿಂದೆಯೇ ಯೋಜನೆ ರೂಪಿಸಿದ್ದಾರೆ. ಭೀಮಾ ನದಿಗೆ ಸಣ್ಣ ಪ್ರಮಾಣದ ಅಣೆಕಟ್ಟು ನಿರ್ಮಿಸಿದರೆ, ಸುಮಾರು 10 ಎಕರೆಗೆ ನೀರು ಒದಗಿಸಬಹುದಾಗಿದೆ ಎಂಬುದನ್ನು ಅವರು ತಮ್ಮ ಯೋಜನಾ ವರದಿಯಲ್ಲಿ ನಮೂದಿಸಿದ್ದಾರೆ.
ಘಟಪ್ರಭಾ ನದಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಜೀವನದಿಗಳಲ್ಲಿ ಒಂದಾಗಿದ್ದು, ಕೃಷ್ಣಾ ನದಿಗೆ ಪ್ರಮುಖ ಉಪ ನದಿಯಾಗಿದೆ. ಈ ನದಿ ಸುಮಾರು 8,829 ಚದರ ಕಿಮೀ ನದಿ ಪಾತ್ರ ಹೊಂದಿದೆ. 1977ರಲ್ಲಿ ಬೆಳಗಾವಿ ಜಿಲ್ಲೆ ಹಿಡಕಲ್‌ನಲ್ಲಿ ಈ ನದಿಗೆ ಜಲಾಶಯ ನಿರ್ಮಾಣ ಮಾಡಿದ್ದು ಬಿಟ್ಟರೆ ಬೇರಲ್ಲೂ ಜಲಾಶಯಗಳ ನಿರ್ಮಾಣ ಆಗಿಲ್ಲ. ಹಿರಣ್ಯಕೇಶಿ ಹಾಗೂ ಮಾರ್ಕಂಡೇಯ ನದಿಗಳು ಈ ನದಿಯ ಪ್ರಮುಖ ಉಪ ನದಿಗಳಾಗಿವೆ. ಚಿಕ್ಕಸಂಗಮ ಬಳಿ ಘಟಪ್ರಭಾ ನದಿ ಕೃಷ್ಣಾ ನದಿಯಲ್ಲಿ ವಿಲೀನವಾಗುತ್ತದೆ. ಬಾಗಲಕೋಟೆ ಜಿಲ್ಲೆ ಲೋಕಾಪುರ ದಾಟಿದ ನಂತರ ಸಣ್ಣ ಪ್ರಮಾಣದ ಜಲಾಶಯ ನಿರ್ಮಾಣ ಮಾಡಬಹುದಾಗಿದೆ ಎಂಬುದ ಎಂಜಿನಿಯರ್‌ಗಳ ಅಭಿಮತ.
ಏನಿದು ತೆಲಂಗಾಣ ಮಾದರಿ? : ಜಲಾಶಯ ನಿರ್ಮಾಣ ಎಂದ ಕೂಡಲೇ ಮೊದಲ ಚಿತ್ರಣ ಹಳ್ಳಿ, ಪಟ್ಟಣ-ನಗರಗಳು, ಕೃಷಿ ಭೂಮಿ ಮುಳುಗಡೆ, ನಿರ್ಮಾಣ ವೆಚ್ಚ, ಪುನರ್ವಸತಿ ವೆಚ್ಚ ಇತ್ಯಾದಿ ಮೂಡುತ್ತದೆ. ಆದರೆ, ತೆಲಂಗಾಣದಲ್ಲಿ ಕೈಗೊಂಡಿರುವ ಕಾಳೇಶ್ವರಂ ಯೋಜನೆ ಇವೆಲ್ಲವನ್ನು ಇಲ್ಲವಾಗಿ ವಿಶ್ವಕ್ಕೆ ಮಾದರಿ ರೂಪದಲ್ಲಿ ಗೋಚರಿಸುತ್ತಿದೆ. ತೆಲಂಗಾಣದಲ್ಲಿ ಗೋದಾವರಿ-ಪ್ರಾಣಹಿತ ನದಿಗಳ ಸಂಗಮ ನೀರನ್ನು ಬಳಸಿಕೊಂಡು ಕಾಳೇಶ್ವರಂ ಮೆಗಾ ಪ್ರೊಜೆಕ್ಟ್ ಕೈಗೊಂಡಿದೆ. ಅಂದಾಜು 80,200 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಸುಮಾರು 240 ಟಿಎಂಸಿ ಅಡಿಯಷ್ಟು ನೀರು ಬಳಸಿಕೊಂಡು ಇದರಲ್ಲಿ ಸುಮಾರು 169 ಟಿಎಂಸಿ ಅಡಿ ನೀರನ್ನು ಅಂದಾಜು 45 ಲಕ್ಷ ಎಕರೆಗೆ ನೀರಾವರಿ ಒದಗಿಸಲು, 40 ಟಿಎಂಸಿ ಅಡಿ ನೀರನ್ನು ಹೈದರಾಬಾದ್ ಸೇರಿದಂತೆ ನಗರಗಳು, ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ, 16 ಟಿಎಂಸಿ ಅಡಿ ನೀರು ಕೈಗಾರಿಕೆಗೆ ನೀಡಲಾಗುತ್ತಿದೆ. ಒಂದು ಸೆಕೆಂಡ್‌ಗೆ 60 ಸಾವಿರ ಲೀಟರ್ ನೀರು ಮೇಲಕ್ಕೆತ್ತುವ ಸಾಮರ್ಥ್ಯದ ಬಾಹುಬಲಿ ಪಂಪ್‌ಗ್ಳನ್ನು ಅಳವಡಿಸಲಾಗಿದೆ. ಇಷ್ಟಾದರೂ ಯೋಜನೆಗಾಗಿ ಒಂದೇ ಒಂದು ಹಳ್ಳಿ ಮುಳುಗಡೆಯಾಗಿಲ್ಲ. ಹೆಚ್ಚಿನ ಭೂ ಸ್ವಾಧೀನ ಆಗಿಲ್ಲ. ಪುನರ್ವಸತಿ ಸಮಸ್ಯೆ ಎದುರಾಗಿಲ್ಲ. ನದಿಯ ಎರಡು ಬದಿ ತಡೆಗೋಡೆ ನಿರ್ಮಾಣದ ಮೂಲಕ ನದಿಯಲ್ಲಿಯೇ ಆಳ ರೂಪದಲ್ಲಿ ನೀರು ಸಂಗ್ರಹಿಸುವ, ಆ ನೀರನ್ನು ಹಿಮ್ಮುಖವಾಗಿ ಪಂಪ್ ಮಾಡುವ ಮೂಲಕ ನೀರು ಪಡೆಯಲಾಗುತ್ತದೆ. ವಿವಿಧ 9 ಬ್ಯಾರೇಜ್‌ಗಳಲ್ಲಿ ಸುಮಾರು 147 ಟಿಎಂಸಿ ಅಡಿಯಷ್ಟು ನೀರು ಲೈವ್ ಸ್ಟೋರೇಜ್ ಮಾಡಲಾಗುತ್ತಿದೆ. ಕಾಳೇಶ್ವರಂ ಯೋಜನೆಯ ತಂತ್ರಜ್ಞಾನ ನಮಗೆ ಎಷ್ಟು ಪೂರಕವಾಗಲಿದೆಯೋ ಅಷ್ಟನ್ನು ಬಳಕೆಗೆ ಮುಂದಾಗಬೇಕಾಗಿದೆ. ಹಳ್ಳಿ-ಪ್ರದೇಶ ಮುಳುಗಡೆ ಇಲ್ಲದೆ, ಪುನರ್ವಸತಿ ಸಮಸ್ಯೆ ಎದುರಾಗದ ರೀತಿಯಲ್ಲಿ ಕ್ಲೋಜಿಂಗ್ ಡ್ಯಾಂಗಳ ನಿರ್ಮಾಣ ಸಾಧ್ಯತೆ ನಿಟ್ಟಿನಲ್ಲಿ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ. ಭವಿಷ್ಯದ ದೃಷ್ಟಿಯಿಂದ ಇದು ಪ್ರಯೋಜನಕಾರಿ ಆಗಬಲ್ಲದಾಗಿದೆ.
ಭೀಮಾ ನದಿಗೆ ಜಲಾಶಯ ನಿರ್ಮಾಣದಿಂದ ಕಲಬುರಗಿ ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ನೀರಾವರಿಗೆ, ಕುಡಿಯಲು ನೀರು ನೀಡಬಹುದು. ಈ ಉದ್ದೇಶದಿಂದಲೇ ಸುಮಾರು ಎಂಟು ವರ್ಷಗಳ ಹಿಂದೆಯೇ ಯೋಜನೆ ತಯಾರಿಸಿದ್ದೇನೆ. ಅದೇ ರೀತಿ ಘಟಪ್ರಭಾ ನದಿಗೂ ಸಣ್ಣ ಮಟ್ಟದ ಕ್ಲೋಜಿಂಗ್ ಡ್ಯಾಂ ನಿರ್ಮಾಣ ಮಾಡಬಹುದಾಗಿದೆ. – ಪ್ರಕಾಶ ಕುದರಿ, ನಿವೃತ್ತ ಉಪ ಮುಖ್ಯ ಎಂಜಿನಿಯರ್
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.