ಪಿಯುಸಿ ಪರೀಕ್ಷೆ ಆರಂಭ: ಮೊದಲ ದಿನ ಸುಲಭ ಸವಾಲು!
Team Udayavani, Mar 5, 2020, 5:16 AM IST
ವಿಶೇಷ ವರದಿ– ಕುಂದಾಪುರ: ರಾಜ್ಯಾದ್ಯಂತ ಬುಧವಾರ ದಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿದ್ದು, ಕುಂದಾಪುರದಲ್ಲಿಯೂ ಮೊದಲ ದಿನ ಪರೀಕ್ಷೆಯು ಯಾವುದೇ ಅಡೆ- ತಡೆಗಳಿಲ್ಲದೆ ಸಾಂಗ ರೀತಿಯಲ್ಲಿ ನಡೆಯಿತು. ಪ್ರಥಮ ಪರೀಕ್ಷೆ ಸುಲಭವಿತ್ತು ಎನ್ನುವ ಅಭಿಪ್ರಾಯ ಹೆಚ್ಚಿನ ವಿದ್ಯಾರ್ಥಿಗಳಿಂದ ವ್ಯಕ್ತವಾಯಿತು.
ಪರೀಕ್ಷೆ ನಡೆಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ, ಪದವಿ ಪೂರ್ವ ಶಿಕ್ಷಣ ಇಲಾಖೆಯು ಸಾಕಷ್ಟು ಮುನ್ನೆಚ್ಚರಿಕೆ ಮತ್ತು ಭದ್ರತಾ ಕ್ರಮಗಳನ್ನು ತೆಗೆದುಕೊಂಡಿತ್ತು. ಬೆಳಗ್ಗೆ 10.15 ಕ್ಕೆ ಆರಂಭಗೊಂಡ ಪರೀಕ್ಷೆಯು ಮಧ್ಯಾಹ್ನ 1.30 ರವರೆಗೆ ನಡೆಯಿತು.
ಪರೀಕ್ಷಾ ಕೇಂದ್ರಗಳು
ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಒಟ್ಟು 9 ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿತ್ತು. ಕುಂದಾಪುರ ಸರಕಾರಿ ಪ.ಪೂ. ಕಾಲೇಜು, ಭಂಡಾರ್‌ಕಾರ್ಸ್, ಆರ್. ಎನ್. ಶೆಟ್ಟಿ ಪಿಯು ಕಾಲೇಜು, ಬೈಂದೂರು, ಶಿರೂರು, ನಾವುಂದ, ವಂಡ್ಸೆ, ಬಿದ್ಕಲ್‌ಕಟ್ಟೆ , ಕೋಟೇಶ್ವರ ಪಿ. ಯು. ಕಾಲೇಜುಗಳಲ್ಲಿ ಪರೀಕ್ಷೆ ನಡೆಯಿತು.
ವಾಹನ ವ್ಯವಸ್ಥೆ
ಕುಂದಾಪುರದಲ್ಲಿ ಒಟ್ಟು ಒಂಬತ್ತು ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದ್ದು, ದೂರದ ಶಿಕ್ಷಣ ಸಂಸ್ಥೆಗಳಿಂದ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿ
ಗಳು ಬರಲು ಅನುಕೂಲವಾಗುವಂತೆ ಕೆಲ ಸಂಸ್ಥೆಗಳುವಾಹನದ ವ್ಯವಸ್ಥೆ ಮಾಡಿದ್ದರು.ಇದಲ್ಲದೆ ಪರೀಕ್ಷಾ ಕೇಂದ್ರದಿಂದ ಮನೆಗೆ ಮತ್ತು ಮನೆ ಯಿಂದ ಪರೀಕ್ಷಾ ಕೇಂದ್ರಕ್ಕೆ ಶುಲ್ಕ ರಹಿತ ಪ್ರಯಾ ಣಕ್ಕೆ ವಿದ್ಯಾರ್ಥಿಗಳಿಗೆ ಸರಕಾರಿ ಬಸ್‌ಗಳಲ್ಲಿ ಅವಕಾಶ ಮಾಡಿ ಕೊಡಲಾಗಿತ್ತು.
ಬಿಗಿ ಭದ್ರತೆ
ಪರೀಕ್ಷಾ ಅಕ್ರಮಗಳನ್ನು ತಡೆಯಲು ಪ್ರತೀ ಪರೀಕ್ಷಾ ಕೇಂದ್ರದಲ್ಲೂ ಪ.ಪೂ. ಶಿಕ್ಷಣ ಇಲಾಖೆಯ ಇಬ್ಬರು ವಿಶೇಷ ಜಾಗೃತಿ ದಳದ ಸಿಬಂದಿ, ಬೇರೆ ಇಲಾಖೆಯ ಒಬ್ಬರು ಅಧಿಕಾರಿ, ಇದಲ್ಲದೆ ಒಬ್ಬರು ಪೊಲೀಸ್ ಸಿಬಂದಿಯನ್ನು ಕೂಡ ನಿಯೋಜಿಸಲಾಗಿತ್ತು. ಪರೀಕ್ಷಾ ಕೇಂದ್ರದ ಸುತ್ತ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿತ್ತು.
ಪ್ರಥಮ ಪರೀಕ್ಷೆ ಮುಗಿಸಿದ ಖುಷಿಯಲ್ಲಿ ವಿದ್ಯಾರ್ಥಿಗಳು ಹೊರಬರುತ್ತಿದ್ದ ದೃಶ್ಯ ಪರೀಕ್ಷೆ ಕೇಂದ್ರಗಳಲ್ಲಿಕಂಡು ಬಂತು. ಕೆಲವರಿಗೆ ಒಂದು ಪರೀಕ್ಷೆ ಮುಗಿದ ಖುಷಿಯಾದರೆ, ಮತ್ತೆ ಕೆಲವರಿಗೆ ಮೊದಲ ಪರೀಕ್ಷೆ ತುಂಬಾ ಸುಲಭವಿತ್ತು. ಒಳ್ಳೆಯ ಅಂಕಗಳು ಬರಬಹುದು ಎನ್ನುವ ಸಂತಸ, ಮತ್ತೆ ಕೆಲವರಿಗೆ ಸ್ವಲ್ಪ ಕಷ್ಟ ಇತ್ತು ಎನ್ನುವ ಆತಂಕದ ಭಾವ ವಿದ್ಯಾರ್ಥಿಗಳಲ್ಲಿ ವ್ಯಕ್ತವಾಯಿತು.
56 ವಿದ್ಯಾರ್ಥಿಗಳು ಗೈರು
ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಒಟ್ಟು 3,126 ಪರೀಕ್ಷೆಗೆ ನೋಂದಾಯಿಸಿದ್ದು, ಈ ಪೈಕಿ 3,070 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 56 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಬುಧವಾರ ನಡೆದ ಭೌತಶಾಸ್ತ್ರ ಪರೀಕ್ಷೆಯಲ್ಲಿ ನೋಂದಾಯಿಸಿದ 1,307 ವಿದ್ಯಾರ್ಥಿಗಳ ಪೈಕಿ 1,299 ಪರೀಕ್ಷೆ ಬರೆದಿದ್ದಾರೆ. ಬೇಸಿಕ್ ಮ್ಯಾಥ್ ನಲ್ಲಿ ನೋಂದಾಯಿಸಿದ 14 ಮಂದಿ ಪರೀಕ್ಷೆ ಬರೆದಿದ್ದಾರೆ. ಇನ್ನು ಇತಿಹಾಸ ವಿಷಯದಲ್ಲಿ 1,805 ಮಂದಿ ನೋಂದಾಯಿಸಿದ್ದು, 1,757 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು,48 ಮಂದಿ ಗೈರಾಗಿದ್ದಾರೆ.
ಪರೀಕ್ಷಾ ಕೇಂದ್ರದ ಸುತ್ತ…
ಕೆಲವೊಂದು ಪರೀಕ್ಷಾ ಕೇಂದ್ರಗಳ ಗೇಟು ಹೊರಗಡೆಯೇ ಪೋಷಕರು, ಹೆತ್ತವರು ತಮ್ಮ ಮಕ್ಕಳು ಪರೀಕ್ಷೆ ಮುಗಿಸಿ ಬರುವುದನ್ನೇ ಕಾಯುತ್ತಿದ್ದರು. ಪರೀಕ್ಷೆ ಮುಗಿಸಿ ಬರುತ್ತಿದ್ದ ವಿದ್ಯಾರ್ಥಿಗಳಲ್ಲಿ ಹೇಗಿತ್ತು ಪರೀಕ್ಷೆ ? ಚೆನ್ನಾಗಿ ಬರೆದಿದ್ದೀಯಾ ಎಂದು ಕೇಳುತ್ತಿದ್ದುದ್ದು ಕಂಡು ಬಂತು. ಹೆತ್ತವರು ಮಾತ್ರವಲ್ಲದೆ ಆಯಾಯ ವಿಷಯದ ಉಪನ್ಯಾಸಕರು ಕೂಡ ಪರೀಕ್ಷಾ ಕೇಂದ್ರದ ಬಳಿ ಬಂದು ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಪತ್ರಿಕೆ, ಉತ್ತರಿಸಿದ ಕುರಿತು ಕೇಳುತ್ತಿದ್ದುದು ಗಮನಸೆಳೆಯಿತು.
ಯಾವುದೇ ಗೊಂದಲವಿರಲಿಲ್ಲ
ಮೊದಲ ಪರೀಕ್ಷೆ ಸುಲಭವಿತ್ತು. ಚೆನ್ನಾಗಿ ಬರೆದಿದ್ದೇವೆ. ಸಿಲೆಬಸ್‌ನಲ್ಲಿ ಇದ್ದ ಪ್ರಶ್ನೆಗಳೇ ಬಂದಿದೆ. ಯಾವುದೇ ಗೊಂದಲ ಇರಲಿಲ್ಲ. ಸಮಯದ ಕೊರತೆ ಕೂಡ ಇರಲಿಲ್ಲ. ಸಾಕಷ್ಟು ಸಮಯವಕಾಶ ಇತ್ತು. .
– ನೀತಿ ಮತ್ತು ನೇಹಾ,
ವಿದ್ಯಾರ್ಥಿಗಳು, ವೆಂಕಟರಮಣ ಪ.ಪೂ. ಕಾಲೇಜು
ಉತ್ತಮ ಅಂಕದ ನಿರೀಕ್ಷೆ
ಪರೀಕ್ಷೆ ಅಷ್ಟೇನು ಕಷ್ಟವಿರಲಿಲ್ಲ. ಓದಿದ ಹೆಚ್ಚಿನ ಪ್ರಶ್ನೆಗಳು ಬಂದಿದೆ. ಉತ್ತಮ ಅಂಕ ಸಿಗುವ ನಿರೀಕ್ಷೆಯಿದೆ. ಒಂದೆರಡು ಪ್ರಶ್ನೆಗಳು ಕಷ್ಟವಿದ್ದದ್ದು ಬಿಟ್ಟರೆ ಮತ್ತೆಲ್ಲ ಸುಲಭವಿತ್ತು.
-ತನೀಶ್‌ಮತ್ತು ನರೇಶ್, ವಿದ್ಯಾರ್ಥಿಗಳು,
ಆರ್.ಎನ್. ಶೆಟ್ಟಿ ಪ.ಪೂ. ಕಾಲೇಜು
ಉತ್ತಮ ಪ್ರಶ್ನೆ ಪತ್ರಿಕೆ
ಪ್ರಶ್ನೆ ಪತ್ರಿಕೆ ಸುಲಭವಿದೆ. ಎಲ್ಲರೂ ಕೂಡ ಉತ್ತೀರ್ಣರಾಗಬಹುದು. ಉತ್ತಮ ಪ್ರಶ್ನೆ ಪತ್ರಿಕೆ. ಸಿಲೆಬಸ್‌ನಲ್ಲಿ ಇಲ್ಲದ ಯಾವುದೇ ಪ್ರಶ್ನೆಗಳು ಬಂದಿಲ್ಲ. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಓದಿಕೊಂಡಿದ್ದರೆ ಸುಲಭವಾಗುತ್ತಿತ್ತು.
– ಸುಕನ್ಯಾ, ಭೌತಶಾಸ್ತ್ರ ಶಿಕ್ಷಕಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.