ಮೈಸೂರನ್ನು ಹೀಗೆ ಕಡೆಗಣಿಸಿದ್ದು ಎಷ್ಟು ನ್ಯಾಯ?
Team Udayavani, Mar 6, 2020, 3:00 AM IST
ರಾಜಧಾನಿ ಬೆಂಗಳೂರಿನ ಬಳಿಕ ಎಲ್ಲರ ದೃಷ್ಟಿ ಹರಿಯುವುದು ಮೈಸೂರಿನತ್ತ. ಆದರೆ, ಈ ಬಜೆಟ್‌ನಲ್ಲಿ ಹೊಸ ಯೋಜನೆಗಳೂ ಇಲ್ಲ, ಒಂದಿಷ್ಟು ಅನುದಾನ ಕೂಡ ಇಲ್ಲ, ಜಿಲ್ಲೆಯ ಜನರ ನಿರೀಕ್ಷೆ ಹುಸಿಗೊಳಿಸಿದ್ದು ಮಾತ್ರವಲ್ಲ, ಬಿಜೆಪಿಯ ಶಾಸಕರು, ಸಂಸದರು ಕೇಳಿದ್ದನ್ನೂ ಕೊಟ್ಟಿಲ್ಲ. ಆಯವ್ಯಯದಲ್ಲಿ ನೇರವಾಗಿ ಮೈಸೂರಿಗೆ ಘೋಷಿಸಿರುವುದು 1.80 ಕೋಟಿ ರೂ. ಮಾತ್ರ! ಅದೂ ಸರ್ಕಾರಿ ಸಂಸ್ಥೆಗಳ ಉನ್ನತೀಕರಣಕ್ಕೆ.
ಉಸ್ತುವರಿ ಸಚಿವ ಸೋಮಣ್ಣ ಭರವಸೆ ನೀಡಿದಂತೆ ಕನಿಷ್ಠ 100 ಕೋಟಿ ರೂ. ಅನುದಾನ ಕೂಡ ಕಲ್ಪಿಸಿಲ್ಲ, ಚಾಮುಂಡೇಶ್ವರಿಗೆ ಸ್ವರ್ಣರಥದ ಪ್ರಸ್ತಾವನೆಯೇ ಇಲ್ಲ, ಇನ್ನು ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಚಿತ್ರನಗರಿಯನ್ನು ಬೆಂಗಳೂರಿಗೆ ವರ್ಗಾಹಿಸಲಾಗಿದೆ. ಒಟ್ಟಾರೆ ಮೈಸೂರು ಜಿಲ್ಲೆಗೆ ಈ ಬಜೆಟ್ ಸಿಹಿ, ಖಾರ, ಹುಳಿ, ಉಪ್ಪು ರಹಿತ ಸಾಮಾನ್ಯ ನೀರಸ ಸಪ್ಪೆ ಬಜೆಟ್ ಎಂದೇ ಸಾರ್ವಜನಿಕ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಮೈಸೂರು: ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಮಂಡಿಸಿದ 2020-21ನೇ ಸಾಲಿನ ಆಯವ್ಯಯದಲ್ಲಿ ಮೈಸೂರು ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇಲಾಖಾವಾರು ಕಾರ್ಯಕ್ರಮಗಳ ಘೋಷಣೆ ಬದಲಿಗೆ ಈ ಬಾರಿಯ ಆಯವ್ಯಯದಲ್ಲಿ ವಲಯವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿದ್ದು, ವಲಯ-1ರಲ್ಲಿ ಕೃಷಿ ಪೂರಕ ಚಟುವಟಿಕೆಗಳು, ವಲಯ-2ರಲ್ಲಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ, ವಲಯ-3ರಲ್ಲಿ ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ, ವಲಯ-4ರಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿ,
ವಲಯ-5ರಲ್ಲಿ ಸಂಸ್ಕೃತಿ, ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ವಲಯ-6ರಲ್ಲಿ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು ಶೀರ್ಷಿಕೆಯಲ್ಲಿ 112 ಪುಟಗಳ ಆಯವ್ಯಯ ಪುಸ್ತಕದಲ್ಲಿ 289 ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿದೆಯಾದರೂ ಮೈಸೂರು ಜಿಲ್ಲೆಗೆ ವಿಶೇಷ ಕಾರ್ಯಕ್ರಮಗಳ ಘೋಷಣೆ ಇರಲಿ, 2 ಲಕ್ಷದ 37 ಸಾವಿರ ಕೋಟಿ ಗಾತ್ರದ ಆಯವ್ಯಯದಲ್ಲಿ ನೇರವಾಗಿ ಮೈಸೂರಿಗೆ ಘೋಷಿಸಿರುವುದು ಕೇವಲ 1.80 ಕೋಟಿ ರೂ. ಮಾತ್ರ! ಅದೂ ಸರ್ಕಾರಿ ಸಂಸ್ಥೆಗಳ ಉನ್ನತೀಕರಣಕ್ಕೆ.
ಪಾರಂಪರಿಕ ವೈದ್ಯಪದ್ಧತಿ: ಬುಡಕಟ್ಟು ಜನರ ಪಾರಂಪರಿಕ ವೈದ್ಯಪದ್ಧತಿ ಮತ್ತು ಆಚರಣೆಗಳ ದಾಖಲೀಕರಣ ಮತ್ತು ಆಯ್ದ ಔಷಧಿಗಳ ಸಂಸ್ಕರಣಾ ಘಟಕಗಳನ್ನು ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಆಯುಷ್ ಇಲಾಖೆಯ ಸಹಯೋಗದೊಂದಿಗೆ ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಮೈಸೂರಿನಲ್ಲಿರುವ ಸರ್ಕಾರಿ ಬ್ರೈಲ್ ಮುದ್ರಣಾಲಯಕ್ಕೆ 80 ಲಕ್ಷ ರೂ.ಗಳ ವೆಚ್ಚದಲ್ಲಿ ಒಂದು ಆಧುನಿಕ ಮುದ್ರಣ ಯಂತ್ರವನ್ನು ಖರೀದಿಸಲಾಗುವುದು ಎಂದು ಘೋಷಿಸಲಾಗಿದೆ.
ಉಳಿದಂತೆ ನೇರವಾಗಿ ಮೈಸೂರು ಜಿಲ್ಲೆಯ ಹೆಸರಿಲ್ಲದಿದ್ದರೂ ರಾಜ್ಯದ ಆಯ್ದ ಜಿಲ್ಲೆಗಳು, ತಾಲೂಕುಗಳು ಎಂದು ಹೇಳಲಾಗಿರುವ ಸ್ವಾತಂತ್ರ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಇವರ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ. ನಗದು ಪ್ರಶಸ್ತಿಯನ್ನು ನೀಡಲಾಗುವುದು. ಈ ಉದ್ದೆಶಕ್ಕಾಗಿ 2020-21ನೇ ಸಾಲಿನಲ್ಲಿ 60 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದೆ. ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸದರಿ ತೀವ್ರ ನಿಗಾ ಘಟಕಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಉದ್ದೇಶಿಸಲಾಗಿದೆ.
2020-21ನೇ ಸಾಲಿನಲ್ಲಿ ಈ ಘಟಕಗಳನ್ನು ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲು ಸರ್ಕಾರವು 2020-21ನೇ ಸಾಲಿನಲ್ಲಿ 60 ಲಕ್ಷ ರೂ. ಅನುದಾನ ಒದಗಿಸಲಿದೆ. ಪೊಲೀಸ್ ತರಬೇತಿ ಶಾಲೆಗಳಲ್ಲಿ ಹಾಗೂ ಸಿಎಆರ್, ಡಿಎಆರ್ ಕೇಂದ್ರಸ್ಥಾನಗಳಲ್ಲಿ ಮಹಿಳೆಯರಿಗೆ ಸ್ವಯಂ ರಕ್ಷಣೆ ತರಬೇತಿಯನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಆಯವ್ಯಯ ಭಾಷಣದಲ್ಲಿ ಹೇಳಿದ್ದಾರೆ.
ಚಾಮುಂಡೇಶ್ವರಿಗೆ ಸ್ವರ್ಣರಥವೂ ಇಲ್ಲ: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಸತಿ ಸಚಿವ ವಿ.ಸೋಮಣ್ಣ ಅವರು ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಿಗೆ ಸ್ವರ್ಣರಥ ನಿರ್ಮಿಸಿಕೊಡುವ ಸಂಬಂಧ ಮಾತುಕತೆ ನಡೆಸಿದ್ದು, ಈ ಬಜೆಟ್‌ನಲ್ಲಿ ಘೋಷಣೆಯಾಗುವ ವಿಶ್ವಾಸವಿದೆ ಎಂದು ಹೇಳಿದ್ದರು. ದೇವಿಗೆ ಚಿನ್ನದ ರಥ ನಿರ್ಮಿಸುವ ವಿಚಾರವನ್ನು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜೊತೆ ಮಾತನಾಡಿದ್ದೇನೆ. ಚಿನ್ನದ ರಥ ನಿರ್ಮಾಣ ಮಾಡುವುದಕ್ಕೆ ಬಜೆಟ್‌ನಲ್ಲಿ ಅನುದಾನ ಕೊಡಿಸುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ತಿಳಿಸಿದ್ದರು. ಹೀಗಾಗಿ ಚಿನ್ನದ ರಥಕ್ಕೆ ಅನುದಾನ ನೀಡಬಹುದು ಎಂದು ನಿರೀಕ್ಷೆ ಹೊಂದಲಾಗಿತ್ತು. ಆದರೆ, ಈ ವಿಷಯವೇ ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ.
ಚಿತ್ರನಗರಿ ಕೈತಪ್ಪಿದ್ದು ಕ್ಷೇತ್ರಕ್ಕೆ ನಷ್ಟ: ಹೊಸ ಕಾರ್ಯಕ್ರಮಗಳಿಲ್ಲದ ನಿರಾಶಾದಾಯಕ ಬಜೆಟ್ ಇದು. ಕೃಷಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರೂ ಬಜೆಟ್‌ನ ಒಟ್ಟು ಹಣದಲ್ಲಿ ಕೃಷಿಗೆ ಮೀಸಲಿಟ್ಟಿರುವುದು ಕೇವಲ ಶೇ.4ರಷ್ಟು ಮಾತ್ರ. ಇದರಿಂದ ಕೃಷಿ ಕ್ಷೇತ್ರದ ಅಭಿವೃದ್ಧಿ ಸಾಧ್ಯವೇ? ಚಿತ್ರೀಕರಣಕ್ಕೆ ಪ್ರಶಸ್ತ ತಾಣಗಳು ಸೇರಿದಂತೆ ಎಲ್ಲ ದೃಷ್ಟಿಯಿಂದಲೂ ಮೈಸೂರು ಚಿತ್ರನಗರಿ ನಿರ್ಮಾಣಕ್ಕೆ ಸೂಕ್ತ ಎಂದು ಚಿತ್ರೋದ್ಯಮದ ಮಂದಿಯೇ ಹೇಳುತ್ತಾರೆ. ಮೈಸೂರಿನ ಹಿಮ್ಮಾವು ಗ್ರಾಮದಲ್ಲೇ ಚಿತ್ರನಗರಿ ನಿರ್ಮಾಣವಾಗಬೇಕೆಂದು ಮುಖ್ಯಮಂತ್ರಿಯವರಿಗೆ ಮನವಿ ಕೂಡ ಮಾಡಿದ್ದೆ. ಆದರೆ, ಚಿತ್ರನಗರಿಯನ್ನು ಬೆಂಗಳೂರಲ್ಲಿ ಮಾಡುವುದಾಗಿ ಬಜೆಟ್‌ನಲ್ಲಿ ಹೇಳಿದ್ದಾರೆ. ಇದರಿಂದ ನನ್ನ ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ.
-ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ
ಬಜೆಟ್‌ನಲ್ಲೇ ಘೋಷಿಸಬೇಕಿಲ್ಲ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಎಲ್ಲವನ್ನೂ ಬಜೆಟ್‌ನಲ್ಲೇ ಘೋಷಣೆ ಮಾಡಬೇಕು ಅಂಥೇನಿಲ್ಲ. ಮೈಸೂರಿನ ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಬಿಲ್ಡಿಂಗ್ ಪುನರ್ ನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿಗೆ ಹಣ ನೀಡುವಂತೆ ಕೇಳಿದ್ದವು. ಆದರೆ, ಬಜೆಟ್‌ನಲ್ಲಿ ಇದಕ್ಕೆ ಹಣ ಘೋಷಿಸದೇ ಇರಬಹುದು. ಸಪ್ಲಿಮೆಂಟರಿ ಬಜೆಟ್‌ನಲ್ಲಿ ಮೈಸೂರಿನ ಅಭಿವೃದ್ಧಿಗೆ ಅನುದಾನ ಘೋಷಿಸುತ್ತಾರೆ ಎಂಬ ನಿರೀಕ್ಷೆ ಇದೆ.
-ಎಲ್.ನಾಗೇಂದ್ರ, ಶಾಸಕ
ಯೋಜನೆಗಳು ಜಾರಿಯಾದರೆ ಸಾರ್ಥಕ: ಕೃಷಿ ಕ್ಷೇತ್ರಕ್ಕೆ 32,259 ಕೋಟಿ ರೂ. ಮೀಸಲಿಟ್ಟಿರುವುದು, ಏತ ನೀರಾವರಿ ಯೋಜನೆಗಳಿಗೆ 5 ಸಾವಿರ ಕೋಟಿ, ಎತ್ತಿನಹೊಳೆ ಯೋಜನೆಗೆ 1500 ಕೋಟಿ, ಮಹಾದಾಯಿ ಯೋಜನೆಗೆ 500 ಕೋಟಿ ರೂ. ಮೀಸಲಿಟ್ಟಿರುವುದು ಸ್ವಾಗತಾರ್ಹ. ಕೃಷಿ ಉಪಕರಣಗಳ ಸಾಲದ ಮೇಲಿನ ಸುಸ್ತಿ ಬಡ್ಡಿ ಮನ್ನಾ ಮಾಡಿರುವುದು ಒಳ್ಳೆಯ ಬೆಳವಣಿಗೆ. ಕೃಷಿ ಕ್ಷೇತ್ರಕ್ಕೆ ಮೀಸಲಿಟ್ಟಿರುವ ಹಣದ ಯೋಜನೆಗಳು ಜಾರಿಯಾದಾಗ ಮಾತ್ರ ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಹುಸಿ ಬಜೆಟ್ ಆಗುತ್ತದೆ. ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಸರ್ಕಾರ ಖರೀದಿ ಮಾಡುವ ಯೋಜನೆ ಬಗ್ಗೆ ಅಥವಾ ಶಾಸನಬದ್ಧ ಬೆಂಬಲ ಬೆಲೆ ನಿಗಧಿ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಸಾಲಮನ್ನಾ ಗೊಂದಲದ ನಿವಾರಣೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದಿರುವುದು ಬೇಸರದ ಸಂಗತಿ.
-ಕುರುಬೂರು ಶಾಂತಕುಮಾರ್, ಅಧ್ಯಕ್ಷರು, ರಾಜ್ಯ ರೈತ ಸಂಘಟನೆಗಳ ಒಕ್ಕೂಟ
ಸಿಹಿ, ಖಾರ, ಹುಳಿ, ಉಪ್ಪು ರಹಿತ ಬಜೆಟ್: ಜಾಗತಿಕ ಬಂಡವಾಳ ಹೂಡಿಕೆದಾರರನ್ನು ಸ್ವಾಗತಿಸಲು ನಡೆಯಲಿರುವ ವಿಶ್ವ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಕೈಗಾರಿಕಾ ಅಭಿವೃಧಿಗೆ ಪೋತ್ಸಾಹ ನೀಡುವ ಯಾವುದೇ ಯೋಜನೆಗಳು, ಕೊಡುಗೆಗಳನ್ನು ಬಜೆಟ್‌ನಲ್ಲಿ ನೀಡಿಲ್ಲ. ಸಿಹಿ, ಖಾರ, ಹುಳಿ, ಉಪ್ಪು ರಹಿತ ಸಾಮಾನ್ಯ ನೀರಸ ಸಪ್ಪೆ ಬಜೆಟ್ ಇದು. ಮೈಸೂರು ರಫ್ತು ಕೇಂದ್ರಕ್ಕೆ ರಾಜ್ಯ ಸರ್ಕಾರದ ಪಾಲಿನ 2 ಕೋಟಿ ರೂ. ನೀಡದಿರುವುದರಿಂದ ಯೋಜನಾ ಗಾತ್ರ ಕಡಿತಗೊಳ್ಳುವ ಸಾಧ್ಯತೆ ಇದೆ. ಮೈಸೂರಿನಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳ ಅಭಿವೃದ್ಧಿ ಪ್ರಕಟಿಸದಿರುವುದು. ಮೈಸೂರು ಕೈಗಾರಿಕೆಗಳ ಸಂಫದ ಬಹುದಿನದ ಬೇಡಿಕೆಯಾದ ಕೈಗಾರಿಕಾ ಪ್ರದೇಶದಲ್ಲಿ ಹೆಲಿಪ್ಯಾಡ್ ನಿರ್ಮಾಣ, ಟ್ರಕ್ ಟರ್ಮಿನಲ್ ಅಭಿವೃದ್ಧಿ, ಘನತ್ಯಾಜ್ಯ ವಿಲೇವಾರಿ ಕೇಂದ್ರ ಪ್ರಕಟಿಸದಿರುವುದು, ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ ಪ್ರಕಟಿಸದಿರುವುದು, ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಪ್ರಕಟಿಸದಿರುವುದು, ಮೈಸೂರಿನ ಕೈಗಾರಿಕಾ ಕಾರ್ಮಿಕರು ಮತ್ತು ಜನ ಸಾಮಾನ್ಯರಿಗಾಗಿ ಹಾಲಿ ಇರುವ ಆಸ್ಪತ್ರೆಗಳ ಉನ್ನತೀಕರಣ ಮತ್ತು ಕಿದ್ವಾಯಿ ಮೈಸೂರು ಫಟಕ ಪ್ರಾರಂಭಕ್ಕೆ ಹಣ ಒದಗಿಸದಿರುವುದು ಬೇಸರದ ಸಂಗತಿ.
-ವಾಸು, ಅಧ್ಯಕ್ಷರು, ಮೈಸೂರು ಕೈಗಾರಿಕೆಗಳ ಸಂಫ
ಇದು ಬೆಂಗಳೂರು ಬಜೆಟ್: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿದ ರಾಜ್ಯ ಬಜೆಟ್ ಸಣ್ಣ ಉದ್ಯಮ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡದಿದ್ದರೂ ಕೆಲವು ಪ್ರಕಟಣೆಗಳ ಮೂಲಕ ಸಮಾಧಾನ ತಂದಿದೆ. ಮೈಸೂರಿನಲ್ಲಿ 100 ಎಕರೆ ಪ್ರದೇಶದಲ್ಲಿ ಪ್ರಾರಂಭವಾಗಬೇಕಿದ್ದ ಫಿಲಂ ಸಿಟಿಯನ್ನು ಬೆಂಗಳೂರಿಗೆ ವರ್ಗಾಯಿಸಿರುವುದು, ಬೆಂಗಳೂರಿನ ಎಲ್ಲಾ ವಿಧದ ಯೋಜನೆಗಳಿಗೆ ವಿಶೇಷ ಅನುದಾನ ನೀಡಿ, ಮೈಸೂರು ಒಳಗೊಂಡಂತೆ ಎರಡನೇ ಸ್ತರದ ಜಿಲ್ಲೆಗಳನ್ನು ಕಡೆಗಣಿಸಿರುವ ಬಜೆಟ್ ಅನ್ನು ಬೆಂಗಳೂರು ಬಜೆಟ್ ಎಂದು ಕರೆಯಬಹುದಾಗಿದೆ.
-ಸುರೇಶ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್
ವಾಲ್ಮೀಕಿ ಪೀಠಕ್ಕೆ ಅನುದಾನ ನೀಡಬೇಕಿತ್ತು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ವಿಭಾಗಮಟ್ಟದಲ್ಲಿ ಒತ್ತಾಯವಿತ್ತು. ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಕೂಡ ಪ್ರಸ್ತಾವನೆಗೆ ಅನುಮೋದನೆ ದೊರೆತು, ಅಧ್ಯಯನ ಪೀಠ ಸ್ಥಾಪನೆಗೆ 5 ಕೋಟಿ ರೂ. ಅನುದಾನ ಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ, ಬಜೆಟ್‌ನಲ್ಲಿ ಪೀಠ ಸ್ಥಾಪನೆಗೆ ಹಣ ಮೀಸಲಿಡದೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ.
-ಪಡುವಾರಹಳ್ಳಿ ಎಂ.ರಾಮಕೃಷ್ಣ, ಅಧ್ಯಕ್ಷರು,ಮೈಸೂರು ನಾಯಕರ ಪಡೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.