ಬಿಎಸ್‌ವೈ ಬಜೆಟ್‌ನಲ್ಲಿ ಚಾಮರಾಜನಗರ ಕಡೆಗಣನೆ
Team Udayavani, Mar 6, 2020, 3:00 AM IST
ಚಾಮರಾಜನಗರ: ಇದುವರೆಗೆ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಚಾಮರಾಜನಗರ ಜಿಲ್ಲೆಯ ಹೆಸರು ಒಮ್ಮೆಯಾದರೂ ಕಾಣುವಂತೆ ಏನಾದರೂ ಒಂದು ಯೋಜನೆಯಿರುತ್ತಿತ್ತು. ಆದರೆ, ಈ ಬಾರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಬಜೆಟ್‌ನಲ್ಲಿ ಚಾಮರಾಜನಗರದ ಉಲ್ಲೇಖ ಎಲ್ಲೂ ಇಲ್ಲ. ಹೀಗಾಗಿ ಜಿಲ್ಲೆಯ ಪಾಲಿಗೆ ಇದು ಅತ್ಯಂತ ನಿರಾಶಾದಾಯಕ ಬಜೆಟ್. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಿನ ಅವಧಿಯ ಬಜೆಟ್ ಜಿಲ್ಲೆಯ ಪಾಲಿಗೆ ಶ್ರೀಮಂತವಾಗಿರುತ್ತಿತ್ತು.
ಜಿಲ್ಲಾ ಕೇಂದ್ರದ ಅಭಿವೃದ್ಧಿಗೆಂದೇ 50 ಕೋಟಿ ರೂ.ಗಳನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದರು. ಇದಲ್ಲದೇ ವೈದ್ಯಕೀಯ ಕಾಲೇಜು, ಕೃಷಿ ಕಾಲೇಜು, ಕಾನೂನು ಕಾಲೇಜಿಗೆ, ಹೊಂಡರಬಾಳಿನ ಅಮೃತಭೂಮಿ ಸೇರಿದಂತೆ ಹತ್ತಾರು ಕಡೆಗಳಿಗೆ ತಮ್ಮ ಬಜೆಟ್‌ನಲ್ಲಿ ಅನುದಾನ ನೀಡಿದ್ದರು. ಕಳೆದ ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಸಹ ಜಿಲ್ಲೆಯನ್ನು ಕಡೆಗಣಿಸಲಾಗಿತ್ತು. ಆದರೆ, ಈ ಪ್ರಮಾಣದಲ್ಲಿ ತೀವ್ರವಾಗಿ ನಿರ್ಲಕ್ಷ್ಯ ತಾಳಿರಲಿಲ್ಲ. ಕಳೆದ ಬಾರಿ ಜಿಲ್ಲೆಗೆಂದೇ ನಿಗದಿಪಡಿಸಿ 8.5 ಕೋಟಿ ರೂ. ಅನುದಾನವನ್ನಾದರೂ ನೀಡಲಾಗಿತ್ತು.
ಜಿಲ್ಲೆಗೆ ಬಿಡಿಗಾಸನ್ನೂ ನೀಡಿಲ್ಲ: ಚಾಮರಾಜನಗರ ಪಟ್ಟಣದಲ್ಲಿ ಈಗಾಗಲೇ ಮುಚ್ಚಿ ಹೋಗಿರುವ ರೇಷ್ಮೆ ಕಾರ್ಖಾನೆ ಪುನಶ್ಚೇತನಕ್ಕೆ 5 ಕೋಟಿ ರೂ. ಹಾಗೂ ಸಂತೆಮರಹಳ್ಳಿ ರೇಷ್ಮೆ ಕಾರ್ಖಾನೆ ಆಧುನೀಕರಣ ಹಾಗೂ ಯುವಕರಿಗೆ ತರಬೇತಿ ನೀಡಲು 2 ಕೋಟಿ ರೂ. ಗಳನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗಿತ್ತು. ಆದರೆ ಈ ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲೆಗೆ ಬಿಡಿಗಾಸನ್ನೂ ನೀಡಿಲ್ಲ.
ಈಡೇರದ ನಿರೀಕ್ಷೆಗಳು: ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿದ್ದು, ರಾಜ್ಯ ಶಿಕ್ಷಣ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಜಿಲ್ಲೆಗೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿತ್ತು. ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಎನ್. ಮಹೇಶ್ ಶಿಕ್ಷಣ ಸಚಿವರಾಗಿದ್ದಾಗ ಜಿಲ್ಲೆಯ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ 79.92 ಕೋಟಿ ರೂ. ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ಸಲುವಾಗಿ ರಾಜ್ಯ ಸರ್ಕಾರ 100 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಬೇಕು ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ ಸಹ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದರ ಬಗ್ಗೆ ಬಜೆಟ್‌ನಲ್ಲಿ ಸಣ್ಣ ಸೊಲ್ಲೂ ಇಲ್ಲ.
ಕಟ್ಟಡ ಕಟ್ಟಲು ಅನುದಾನ ಬೇಕು: ಜಿಲ್ಲೆಯಲ್ಲಿ ಕೃಷಿ ಕಾಲೇಜು ಆರಂಭವಾಗಿ ಎರಡು ವರ್ಷಗಳಾಗಿದೆ. ತಾತ್ಕಾಲಿಕವಾಗಿ ಕೆವಿಕೆ ಮತ್ತು ಮುಕ್ತ ವಿವಿಯಲ್ಲಿ ತರಗತಿಗಳು ನಡೆಯುತ್ತಿವೆ. ಕಾಲೇಜು ಕಟ್ಟಡ ನಿರ್ಮಾಣಕ್ಕೆ 75 ಎಕರೆ ಜಾಗ ಮಂಜೂರಾಗಿದೆ. ಕಟ್ಟಡ ಕಟ್ಟಲು ಅನುದಾನ ಬೇಕು. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಿದರೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಚಾಲನೆ ದೊರೆಯಿತ್ತಿತ್ತು.
ಅಂಬೇಡ್ಕರ್ ವಿಶ್ವವಿದ್ಯಾನಿಲಯ: ನಗರದ ಡಾ. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವನ್ನು ವಿಶ್ವವಿದ್ಯಾಲಯವಾಗಿ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಇದರಿಂದ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಸಹಾಯಕವಾಗುತ್ತದೆ. ಆದ್ದರಿಂದ ಇದನ್ನು ವಿವಿಯಾಗಿ ಪರಿವರ್ತಿಸಬೇಕು. ಇದಕ್ಕೆ ಅನುದಾನ ನೀಡಬೇಕು ಎಂದು ಕೋರಲಾಗಿತ್ತು.
ಚಾಮರಾಜನಗರ, ಗುಂಡ್ಲುಪೇಟೆ ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾರ್ಯಗತವಾಗಿದೆ. ಹನೂರು ತಾಲೂಕಿಗೆ ಇನ್ನೂ ಜಾರಿಯಾಗಿಲ್ಲ. ಆ ತಾಲೂಕಿನ 291 ಹಳ್ಳಿಗಳಿಗೆ 414 ಕೋಟಿ ರೂ. ಗಳ ಯೋಜನೆ ರೂಪಿಸಲಾಗಿದೆ. ಇದರಲ್ಲಿ 98 ಗ್ರಾಮಗಳಿಗೆ 166 ಕೋಟಿ ರೂ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮಂಜೂರಾಗಿ ಕೆಲಸ ಆರಂಭವಾಗಿದೆ. ಇನ್ನುಳಿದ 183 ಹಳ್ಳಿಗಳಿಗೆ 248 ಕೋಟಿ ರೂ. ಅನುದಾನ ಅಗತ್ಯವಿದೆ. ಈ ಅನುದಾನ ನೀಡಿ ಯೋಜನೆ ಕಾರ್ಯಗತವಾದರೆ, ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ದೊರೆತಂತಾಗುತ್ತಿತ್ತು. ಇದನ್ನೂ ಸಹ ಮುಖ್ಯಮಂತ್ರಿ ಕಡೆಗಣಿಸಿದ್ದಾರೆ.
ಒಳಚರಂಡಿ ಕಾಮಗಾರಿ ಕುಂಟುತ್ತಾ ಸಾಗಿದೆ: ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ತಿ.ನರಸೀಪುರದಿಂದ ಕಾವೇರಿ ನೀರು ಪೂರೈಸಲಾಗುತ್ತಿದ್ದು, ಈಗಿನ ಜನಸಂಖ್ಯೆಗೆ ಈ ನೀರು ಸಾಲುತ್ತಿಲ್ಲ. ಹೀಗಾಗಿ ಪಟ್ಟಣಕ್ಕೆ ಎರಡನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆಯನ್ನು ನಿರೀಕ್ಷಿಸಲಾಗಿದೆ. ಮಾಲಂಗಿಯಿಂದ ಪೈಪುಗಳ ಮೂಲಕ ನೀರು ಪೂರೈಸುವ ಈ ಯೋಜನೆಗೆ 220 ಕೋಟಿ ರೂ. ಅಂದಾಜು ತಯಾರಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಗರದ ಒಳಚರಂಡಿ ಕಾಮಗಾರಿ ಕಳೆದ 5 ವರ್ಷಗಳಿಂದ ಕುಂಟುತ್ತಾ ಸಾಗಿದೆ. ಈ ನಡುವೆ ಹೊಸ ಬಡಾವಣೆಗಳು ತಲೆ ಎತ್ತಿದ್ದು ಅಲ್ಲಿಗೂ ಒಳಚರಂಡಿ ಅವಶ್ಯಕತೆಯಿದೆ. ಈ ಮುಂದುವರೆದ ಕಾಮಗಾರಿಗೆ 50 ಕೋಟಿ ರೂ. ಅನುದಾನದ ಪ್ರಸ್ತಾವ ಸಲ್ಲಿಸಲಾಗಿತ್ತು.
ಪ್ರವಾಸೋದ್ಯಮಕ್ಕೂ ದಮ್ಮಡಿ ಕಾಸಿಲ್ಲ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದೆ. ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಗಳನ್ನು ರೂಪಿಸಿ, ಅಭಿವೃದ್ಧಿ ಪಡಿಸಲು ಅನುದಾನದ ಅಗತ್ಯವಿದೆ. ಇದಕ್ಕಾದರೂ ನೆಪಕ್ಕೆ ಒಂದೆರಡು ಕೋಟಿ ರೂ. ದೊರಕಬಹುದೆಂಬ ನಿರೀಕ್ಷೆಯಿತ್ತು. ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆಗಳಿಲ್ಲ. ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಸಮೀಪ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಿ ಉದ್ಯಮಿಗಳನ್ನು ಆಕರ್ಷಿಸಬಹುದೆಂದು ನಿರೀಕ್ಷಿಸಲಾಗಿತ್ತು. ಈ ಎಲ್ಲ ನಿರೀಕ್ಷೆಗಳು ಸಹ ಈಗ ಹುಸಿಯಾಗಿವೆ.
ಎಲ್ಲಾ ವರ್ಗದ ಜನರಿಗೂ ಸಮಾನ ನ್ಯಾಯ ಒದಗಿಸಲಾಗಿದೆ. ಆರೋಗ್ಯ, ಗಾರ್ಮೆಂಟ್ ಹಾಗೂ ರೈತ ಪರವಾದ ಬಜೆಟ್. ಹಿಂದಿನ ಸರ್ಕಾರದ ಯೋಜನೆಗಳನ್ನು ಮುಂದುವರಿಸಿರುವುದು, ಯಶಸ್ವಿನಿ ಆರೋಗ್ಯ ಯೋಜನೆ ಮರುಜಾರಿಗೆ ಚಿಂತನೆ ಸ್ವಾಗತಾರ್ಹವಾಗಿದೆ. ಮಹಿಳಾ ಕಾರ್ಮಿಕರಿಗೆ ಉಚಿತ ಬಸ್‌ಪಾಸ್ ನೀಡುತ್ತಿರುವುದು ಅಭಿನಂದನಾರ್ಹವಾಗಿದೆ.
-ರಾಜೇಶ್ವರಿ, ಗುಂಡ್ಲುಪೇಟೆ
ಸಣ್ಣ ಉದ್ಯಮಗಳ ಚೇತನ ನೀಡಲು ಕ್ರಮ ಕೈಗೊಳ್ಳಲಾಗಿದೆ. ನೀರಾವರಿಗೆ ಆದ್ಯತೆ ನೀಡಿರುವುದು ಕೃಷಿಕರಿಗೆ ಪೂರಕವಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ 2600 ಕೋಟಿ ನೀಡಿರುವುದು ಕೃಷಿ ಕ್ಷೇತ್ರಕ್ಕೆ ಪೂರಕವಾಗಿದೆ.
-ಕಿರಣ್, ಗುಂಡ್ಲುಪೇಟೆ
ಹಿಂದಿನ ಸರ್ಕಾರ 37 ಸಾವಿರ ಕೋಟಿ ವೆಚ್ಚದಲ್ಲಿ ಬಜೆಟ್ ಮಂಡಿಸಿದ್ದರೂ ಈ ಬಾರಿ 26 ಸಾವಿರ ಕೋಟಿಗೆ ಇಳಿಸಿ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕಡಿತಗೊಳಿಸಿದೆ. ಚಾಮರಾಜನಗರ ಜಿಲ್ಲೆಯ ಶೈಕ್ಷಣಿಕ ಹಾಗೂ ಪ್ರವಾಸೋದ್ಯಮಕ್ಕೆ ಯಾವುದೇ ಅನುದಾನ ನೀಡಿಲ್ಲ. ಇದರಿಂದ ನಿರಾಶೆ ಮೂಡಿಸಿದೆ.
-ಗಿರೀಶ್, ಲಕ್ಕೂರು
* ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.