ಕಾರ್ಕಳ: ಇದ್ದೂ ಇಲ್ಲದಂತಾದ ಕೆಎಸ್‌ಆರ್‌ಟಿಸಿ
ಪೇಟೆಗೆ ಬಾರದ ಬಸ್; ಕಚೇರಿಯಿದ್ದರೂ ಸಿಬಂದಿ ಇಲ್ಲ
Team Udayavani, Mar 6, 2020, 4:32 AM IST
ಕಾರ್ಕಳ: ಉಡುಪಿ ಹಾಗೂ ದ.ಕ. ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳ ಕೊಂಡಿಯಾಗಿ ಪಾತ್ರ ನಿರ್ವಹಿಸುತ್ತಿರುವ ಕೆಎಸ್‌ಆರ್‌ಟಿಸಿ ಕಾರ್ಕಳ ಪಾಲಿಗೆ ಮಾತ್ರ ಇದ್ದೂ ಇಲ್ಲದಂತಿದೆ. ಬಂಡಿಮಠದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿದ್ದಾಗ್ಯೂ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್‌ಗಳು ಅಲ್ಲಿಗೆ ತೆರಳದೇ ನೇರವಾಗಿ ಬೈಪಾಸ್ ಮೂಲಕವೇ ಸಾಗುತ್ತಿವೆ.
ಕಾರ್ಕಳದಲ್ಲಿ ಐರಾವತ, ರಾಜಹಂಸ ಸಹಿತ ಸುಮಾರು 150 ಬಸ್‌ಗಳು ದಿನಂಪ್ರತಿ ಓಡಾಟ ನಡೆಸುತ್ತಿದ್ದರೂ ಬಸ್ ಕುರಿತು ಮಾಹಿತಿ ಪಡೆಯಲು ಅಥವಾ ದೂರದೂರಿಗೆ ಪ್ರಯಾಣ ಬೆಳೆಸುವ ನಿಟ್ಟಿನಲ್ಲಿ ಮುಂಗಡವಾಗಿ ಟಿಕೆಟ್ ಪಡೆಯಲು ಇಲ್ಲಿ ಕೌಂಟರೇ ಇಲ್ಲವಾಗಿದೆ.
ಉಪಯೋಗಕ್ಕಿಲ್ಲ ಕೌಂಟರ್
ಬಂಡಿಮಠ ಬಸ್ ನಿಲ್ದಾಣ ಬಳಿ ಪುರಸಭೆ ಕಟ್ಟಡದಲ್ಲಿ ಹೆಸರಿಗೆ ಎಂಬಂತೆ ಕೆಎಸ್‌ಆರ್‌ಟಿಸಿ ಕಚೇರಿಯೊಂದಿದೆ. ಪಕ್ಕನೆ ನೋಡುವಾಗ ಇದೊಂದು ಖಾಲಿ ಕೋಣೆ. ಅದೂ ಕೂಡ ಹೆಚ್ಚಿನ ದಿನಗಳಲ್ಲಿ ಮುಚ್ಚಿರುತ್ತದೆ. ರಾತ್ರಿ ವೇಳೆ ಬಸ್ ಚಾಲಕ- ನಿರ್ವಾಹಕರು ಇದರಲ್ಲಿ ವಾಸ್ತವ್ಯ ಹೂಡಲು ಮಾತ್ರವೇ ಬಳಕೆಯಾಗುತ್ತಿರುವ ಈ ಕಚೇರಿಗೆ ಕಾಯಕಲ್ಪ ದೊರೆಯಬೇಕಿದೆ. ಟಿಸಿ (ಟ್ರಾಫಿಕ್ ಕಂಟ್ರೋಲರ್)ಯೊಬ್ಬರು ಕಾರ್ಯನಿರ್ವಹಿಸುತ್ತಿದ್ದರೂ ಹೆಚ್ಚಿನ ದಿನ ಆರೋಗ್ಯ ಸಮಸ್ಯೆ ಯಿಂದಾಗಿ ಅವರು ರಜೆಯಲ್ಲಿರುತ್ತಾರೆ. ಹೀಗಿರುವಾಗ ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ಆಸ್ಥೆ ವಹಿಸದೇ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಸ್ಥಳೀಯರು ದೂರುತ್ತಾರೆ.
ಮೂಲಸೌಕರ್ಯವೇ ಇಲ್ಲಿಲ್ಲ
ಕಚೇರಿಗೆ ಅಗತ್ಯವಾಗಿ ಬೇಕಾಗಿರುವ ಫೋನ್, ಕಂಪ್ಯೂಟರ್, ಇಂಟರ್ ನೆಟ್ ವ್ಯವಸ್ಥೆಯಿದ್ದರೂ ಯಾವೊಂದು ಸಮರ್ಪಕವಾಗಿಲ್ಲ. ವೇಳಾಪಟ್ಟಿಯೂ ಅಲ್ಲಿಲ್ಲ. ಬಸ್ ವೇಳಾಪಟ್ಟಿ ತಿಳಿಸುವ ಪಿಎಎಸ್(ಪಬ್ಲಿಕ್ ಅನೌನ್ಸ್‌ಮೆಂಟ್ ಸಿಸ್ಟಂ) ಕೂಡ ಕೆಟ್ಟು ಹೋಗಿದೆ.
ಡಿಪೋ ಬೇಡಿಕೆಯಿದೆ
ಪ್ರವಾಸಿ ತಾಣವಾಗಿ ಕಾರ್ಕಳ ಅಭಿವೃದ್ಧಿ ಹೊಂದುತ್ತಿದ್ದರೂ ಕಾರ್ಕಳದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಇಲ್ಲ. ಡಿಪೋ ಇರುತ್ತಿದ್ದಲ್ಲಿ ಗ್ರಾಮೀಣ ಭಾಗಕ್ಕೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಿಕೊಡಬಹುದಿತ್ತು. ಕೆಎಸ್‌ಆರ್‌ಟಿಸಿ ಡಿಪೋ ಸ್ಥಾಪಿಸಲು ಸುಮಾರು 5 ಎಕ್ರೆ ನಿವೇಶನದ ಅಗತ್ಯವಿದ್ದು, ತೋಟಗಾರಿಕೆ ಇಲಾಖೆ ಸಮೀಪವಿರುವ ಸರಕಾರಿ ಜಾಗವನ್ನು ಡಿಪೋಗಾಗಿ ಒದಗಿಸಿ ಕೊಡುವ ನಿಟ್ಟಿನಲ್ಲಿ ಸರ್ವೆ ಕಾರ್ಯ ನಡೆದಿತ್ತು.
ಹೈಮಾಸ್ಟ್ ಲೈಟ್ ಉರಿಯುತ್ತಿಲ್ಲ
ಬಸ್ ನಿಲ್ದಾಣದಲ್ಲಿ ಅಂದು ಅಳವಡಿಸಿದ್ದ ಹೈಮಾಸ್ಟ್ ಲೈಟ್ ಇದೀಗ ಉರಿಯುತ್ತಿಲ್ಲ. ಕೆಟ್ಟು ಹೋದ ಲೈಟ್ ಸರಿಪಡಿಸುವಲ್ಲಿ ಸಂಬಂಧಪಟ್ಟವರು ಗಮನ ಹರಿಸಿಲ್ಲ. ಈ ಕುರಿತು ಸ್ಥಳೀಯರು ಪುರಸಭೆಗೆ ಮಾಹಿತಿ ನೀಡಿದ್ದರೂ ಪುರಸಭೆ ವತಿಯಿಂದ ದುರಸ್ತಿ ಕಾರ್ಯವಾಗಿಲ್ಲ.
ನಿಲ್ಲದ ಬಸ್
ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು, ಹುಬ್ಬಳ್ಳಿ, ಧಾರವಾಡದಿಂದ ಕಾರ್ಕಳ ಮೂಲಕವೇ ಬಸ್ ಓಡಾಟವಿದೆ. ಕೆಲವೊಂದು ಬಸ್‌ಗಳು ಬಂಡಿಮಠ ನಿಲ್ದಾಣಕ್ಕೆ ಬಂದರೂ ಒಂದೈದು ನಿಮಿಷ ನಿಲುಗಡೆ ನೀಡದೇ ತೆರಳುತ್ತಿವೆ. ಹೀಗಾಗಿ ಪ್ರಯಾಣಿಕರಿಗೆ ಬಸ್ ತಪ್ಪುವ ಸಾಧ್ಯತೆ ಅಧಿಕವಾಗಿದ್ದು, ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಕೆಎಸ್‌ಆರ್‌ಟಿಸಿ ಕಚೇರಿ ಇಲ್ಲದ ಪರಿಣಾಮ ವಿದ್ಯಾರ್ಥಿಗಳ ಬಸ್ ಪಾಸ್, ಹಿರಿಯ ನಾಗರಿಕರ ಬಸ್ ಪಾಸ್‌ಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ದೂರದ ಉಡುಪಿಯನ್ನೇ ಅವಲಂಬಿಸಬೇಕಿದೆ.
ಬಂಡಿಮಠ ಬಸ್ ನಿಲ್ದಾಣ
ಪುರಸಭೆಯ 5ನೇ ವಾರ್ಡ್‌ನ ಬಂಡಿಮಠದಲ್ಲಿ 2011-12ರ ವೇಳೆ 2.18 ಎಕ್ರೆ ಜಾಗವನ್ನು ಬಸ್ ನಿಲ್ದಾಣಕ್ಕಾಗಿ ಕಾದಿರಿಸಲಾಗಿದ್ದು, 1.78 ಎಕ್ರೆ ವಿಸ್ತೀರ್ಣದಲ್ಲಿ ಅಂದು 2 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಿ, ಅಭಿವೃದ್ಧಿಪಡಿಸಲಾಗಿತ್ತು. ಅಂದಿನ ಸಿಎಂ. ಡಿ.ವಿ. ಸದಾನಂದ ಗೌಡರು ಬಸ್ ನಿಲ್ದಾಣ ಉದ್ಘಾಟಿಸಿದ್ದರು. ಇಷ್ಟೊಂದು ವೆಚ್ಚದಲ್ಲಿ ವಿಶಾಲವಾದ ಪ್ರದೇಶದಲ್ಲಿ ಬಸ್ ನಿಲ್ದಾಣವಾಯಿತೇ ವಿನಃ ಇದರಿಂದ ಸಾರ್ವಜನಿಕರಿಗೆ ಯಾವೊಂದು ಪ್ರಯೋಜವಾಗಿಲ್ಲ.
ಕ್ರಮ ಕೈಗೊಳ್ಳಲಾಗುವುದು
ಕೆಎಸ್‌ಆರ್‌ಟಿಸಿ ಬಸ್‌ಗಳು ನೇರವಾಗಿ ಬೈಪಾಸ್ ಮೂಲಕ ಸಾಗದೇ ಬಂಡಿಮಠ ಬಸ್ ನಿಲ್ದಾಣಕ್ಕೆ ಆಗಮಿಸಿ ತೆರಳಬೇಕು. ಅಲ್ಲಿಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಕಾರ್ಕಳದಲ್ಲಿ ಖಾಸಗಿ ಏಜೆನ್ಸಿಯವರು ಕೆಎಸ್‌ಆರ್‌ಟಿಸಿ ಮುಂಗಡ ಟಿಕೆಟ್ ನೀಡುತ್ತಿದ್ದಾರೆ.
-ಉದಯ ಶೆಟ್ಟಿ, ಡಿಪೋ ಮ್ಯಾನೇಜರ್, ಉಡುಪಿ
ಪರದಾಡುವಂತಹ ಪರಿಸ್ಥಿತಿ
ಬಂಡಿಮಠ ಬಸ್ ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ಬಸ್ ಆಗಮಿಸುತ್ತಿಲ್ಲ. ಪ್ರಯಾಣಿಕರಿಗೆ ಬಸ್ ಕುರಿತು ಮಾಹಿತಿ ಪಡೆಯಲು ಇಲ್ಲಿ ಕಚೇರಿ, ಸಿಬಂದಿಯಿರುವುದಿಲ್ಲ. ಜನರು ಇದರಿಂದಾಗಿ ಪರದಾಡುವಂತಹ ಪರಿಸ್ಥಿತಿಯಿದೆ.
-ಚಂದ್ರಶೇಖರ್ ಆಚಾರ್, ಬಂಡಿಮಠ
2011-12ರ ಸಂದರ್ಭ
2.18 ಬಸ್ ನಿಲ್ದಾಣಕ್ಕೆ ಕಾದಿರಿಸಲಾದ ಜಾಗ (ಎಕ್ರೆಗಳಲ್ಲಿ)
1.78 ಅಭಿವೃದ್ಧಿಪಡಿಸಲಾದ ಜಾಗ (ಎಕ್ರೆ)
02 ಕೋಟಿ ರೂ. ವೆಚ್ಚ
ರಾಮಚಂದ್ರ ಬರೆಪ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.