ಆಡಿದಷ್ಟೂ ಮುಗಿಯದ ಬೇಂದ್ರೆ


Team Udayavani, Mar 8, 2020, 6:09 AM IST

Bendre

ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು- ಎಂದು ಬೇಂದ್ರೆ ಮಾಸ್ತರ್‌ ಎಲ್ಲೋ ಇದ್ದ ಕಾಮಾಕ್ಷಿಯನ್ನು ಕೇಳುತ್ತಲೇ ಇದ್ದರು. ಆ ಕಾಮಾಕ್ಷಿ ನಮ್ಮಲ್ಲಿಯೇ ಇದ್ದಾಳೆ, ಈಗಲೂ, ಇನ್ನು ಮುಂದೆಯೂ ಇರುವ, ಕನ್ನಡದ ಪದಪದದಲ್ಲಿ, ಕನ್ನಡಿಗರು ಮೂಡಿಸುವ ಪದಗಳಲ್ಲಿ, ಹೆಜ್ಜೆಗುರುತುಗಳಲ್ಲಿ ನಂಟು ಉಳಿಸಿಕೊಂಡಿದ್ದಾಳೆ ಎಂದು ನಮಗೆ ಅರಿವಾಗುವ ಹೊತ್ತಿಗೆ ಮಾಸ್ತರ್‌, “ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ!’ ಎಂದು ಹಾಡುತ್ತ ದೂರ ಹೋಗಿಬಿಟ್ಟಿದ್ದರು. ಪದಗಳ ಕೂಡ, ಅವುಗಳ ಒಳಾರ್ಥಗಳ ಕೂಡ ಯಾವಾಗಲೂ ಆಟ ಆಡುತ್ತಿದ್ದ, ಹುಡುಗಾಟ ಮಾಡುತ್ತಿದ್ದ, ಲೆಕ್ಕ-ಬಾಕಿ ನಡೆಸುತ್ತಿದ್ದ ಬೇಂದ್ರೆ ಮಾಸ್ತರ್‌ ಒಡನಾಟ ಯಾರಿಗಾದರೂ ಬೆಂಕಿಯ ಜೊತೆಗಿನ ಸರಸಾಟವೇ ಆಗಿತ್ತು.

ನಾನು ಬೇಂದ್ರೆಯವರನ್ನು ಮೊದಲ ಸಲ ಕಂಡಿದ್ದು 1956ರಲ್ಲಿ. ಅವರು ಆಗಷ್ಟೆ ಸೊಲ್ಲಾಪುರದಿಂದ ನಿವೃತ್ತರಾಗಿ ಬಂದಿದ್ದರು. ನಾನು ಬಾಸೆಲ್‌ ಮಿಶನ್‌ ಹೈಸ್ಕೂಲಿನಲ್ಲಿ 11ನೇತ್ತ ಕಲಿಯುತ್ತಿದ್ದೆ. ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿದ್ದೆ. ವರದರಾಜ ಹುಯಿಲಗೋಳ ಸರ್‌ ಬೇಂದ್ರೆಯವರ ಎಲ್ಲ ಪುಸ್ತಕ ಓದಲು ಕೊಟ್ಟಿದ್ದರು. ಬೇಂದ್ರೆಯವರಿಗೆ 60 ತುಂಬಿದ್ದಕ್ಕೆ ನಡೆದ ಮೊದಲ ಸಮಾರಂಭ. ಅಂದು (ಆಗಸ್ಟ್‌ 24) ಅವರ ಬಗ್ಗೆ ಬರೆದ 2 ಕವಿತೆ ಓದಿದ್ದೆ. ಕೇಳಿ ಸಂತಸಪಟ್ಟ ಬೇಂದ್ರೆ, ಬಲಗೈ ಮೇಲೆತ್ತಿ, ಗಾರುಡಿಗನ ಗತ್ತಿನಲ್ಲಿ, ಬೆರಳು ಅಲ್ಲಾಡಿಸುತ್ತ, “ಛೆಂದ ಬರದೀ ತಮ್ಮಾ… ನೀ ನನ್ಹಾಂಗ ಬರೀಬೇಕು’ ಎಂದರು. ನನ್ಹಾಂಗ‌ ಅಂದರ ಹ್ಯಾಂಗ? ಅವರ ಮಾತು ಆಶೀರ್ವಾದವೋ ಅಪೇಕ್ಷೆಯೋ ವ್ಯಂಗ್ಯವೋ ಟೀಕೆಯೋ ಅಸಂತೋಷವೋ ಆಹ್ವಾನವೋ ತಿಳಿವಿಗೆ ನಿಲುಕಲಿಲ್ಲ.

ಹಿಂದೀ ಪ್ರಚಾರ ಸಭಾದ ರಜತ ಜಯಂತಿ ಹೊತ್ತಿಗೆ ನಡೆದ ಬಹುಭಾಷಾ ಕವಿಗೋಷ್ಠಿ. ಬೇಂದ್ರೆಯವರನ್ನು ಅಧ್ಯಕ್ಷತೆಗೆ ಒಪ್ಪಿಸುವ ಹೊಣೆ ನನ್ನದಾಗಿತ್ತು. ಅವರ ಮನೆಗೆ ಹೋಗಿ ವಿನಂತಿಸಿದೆ. “ನೀ ಯಾವ ಭಾಷಾದೊಳಗ ಗೋಷ್ಠಿ ನಡಸತಿ?’ ಎಂದು ಕೇಳಿದರು. “ಹಿಂದೀಯೊಳಗರೀ’- ಎಂದೆ. “ಮತ್ತ ಈಗ ಕನ್ನಡದಾಗ ಮಾತಾಡಾಕತ್ತೀಯಲ್ಲ?’

“ನೀವು ಕನ್ನಡ ಕವಿ ಅಲ್ಲರಿ ಮತ್ತ ! ‘
“ಹಂಗಂತ ಯಾರು ಹೇಳಿದರು? ಕವಿ ಬರೇ ಕವಿ ಇರತಾನ. ಅಂವ ಎಲ್ಲಾ ಭಾಷಾದೊಳಗೂ ಕವೀನ— ಆಗಿರತಾನ’ ಎಂದರು.

ನನಗೆ ಏನು ಮಾತಾಡಬೇಕೋ ತಿಳಿಯಲಿಲ್ಲ. ಕೆಲಸ ಕೆಟ್ಟಿತು, ಬಂದ ಉದ್ದೇಶ ಈಡೇರಲಿಲ್ಲ ಅನ್ನಿಸಿತು. ನನ್ನ ಇಳಿಮುಖ ನೋಡುತ್ತ, ಅವರೇ ಸಮಾಧಾನ ಹೇಳಿದರು, “ಇರಲಿ, ಕವಿಗೋಷ್ಠಿ ನಡಸು’ ಅಂದರು. “ಅಂದರ… ನೀವು ಬರತೀರಲ್ಲರಿ ಮತ್ತ?’
“ಬರೂದುಲ್ಲಂತ ಯಾರು ಹೇಳಿದರು?’
“ಹಂಗಲ್ಲರಿ, ನೀವು ಬರಾಕ— ಬೇಕರಿ’- ಅಂದೆ. ನನ್ನ ಮೇಲೆ ಕರುಣೆ ತೋರಿಸಿದವರಂತೆ, “ಆಗಲಿ. ಬರತೇನಿ. ಆದರ ನಾ ಮಾತ್ರ ಕನ್ನಡದಾಗ— ಮಾತಾಡಾಂವ. ನನಗ ಬ್ಯಾರೆ ಭಾಷಾ ಬರೂದುಲ್ಲಂತ ತಿಳಕೋಬ್ಯಾಡ. ಕವಿಗೊಳಿಗೆ ಎಲ್ಲಾ ಭಾಷಾ ತಿಳೀತಾವು’ ಅಂದರು. ಎಲ್ಲ ಅರ್ಥವಾದಂತೆ, “ಹೌದರಿ’ ಅಂದೆ.

“ಏನು ಹಂಗಂದರ? ಎಲ್ಲಾ— ಭಾಷಾ ಕವಿಗೊಳಿಗೆ ತಿಳೀತಾವು. ಆ ಭಾಷಾ ಬರಬೇಕಂತ ಎಲ್ಲೈತಿ? ಭಾಷಾ ತಿಳಿಯೂದ— ಬ್ಯಾರೆ, ಭಾಷಾ ಬರೂದ— ಬ್ಯಾರೆ’ ಎನ್ನುತ್ತ ಎದ್ದು ನಿಂತರು. ಒಂದು ಸ್ಟೀಲ್‌ ಡಬ್ಬಿಯೊಳಗೆ ಕೈಹಾಕಿ ಅರ್ಧ ಚಮಚೆ ಸಕ್ಕರೆ ಕೊಟ್ಟರು. ಇನ್ನು ಹೋಗು ಎಂಬ ಸೂಚನೆ ಅದಾಗಿತ್ತು.

ಬೇಂದ್ರೆ ಅಂದರೆ ಮಾತು. “ಬೆಂದರೆ ಬೇಂದ್ರೆ ಆಗತಾನ, ಬರೇ ಬ್ಯಾಂ ಅಂದರ ಅಲ್ಲ’ ಎಂಬ ಮಾತೂ ಅವರದೇ. ಮಾತು ಮಾತು ಮಾತು. ಬಹುಶಃ ಯಾವ ಕವಿಯೂ ಲೇಖಕನೂ ಬೇಂದ್ರೆಯವರಷ್ಟು ಮಾತು ಆಡಿರಲಿಕ್ಕಿಲ್ಲ, ಬಳಸಿರಲಿಕ್ಕಿಲ್ಲ, ಮಂದಿನ್ನ ಮಾತಾಡಿಸಿರಲಿಕ್ಕಿಲ್ಲ, ವ್ಯರ್ಥವಾಗಿ ಹರಿಯಬಿಟ್ಟಿರಲಿಕ್ಕಿಲ್ಲ. ಮಾತು ಮಾತೆಯನ್ನು ಅವರಷ್ಟು ಯಾರೂ ಆರಾಧಿಸಿರಲಿಕ್ಕಿಲ್ಲ. ಮಾತು ಎಂಬ ಪದಕ್ಕೆ ಜಗಳ, ಹರಟೆ, ಚರ್ಚೆ, ತರ್ಕ, ವಾದವಿವಾದ, ಶಂಕೆ, ದ್ವಂದ್ವ , ದ್ವಿರುಕ್ತಿ ಮುಂತಾದ ಸಕಲಾರ್ಥಬೋಧಕ ಕೋಶಾರ್ಥವನ್ನು ಕರುಣಿಸಿದವರು ಬೇಂದ್ರೆ.

ಶಂ.ಬಾ. ಜೋಶಿಯವರ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ವಿದ್ಯಾರಣ್ಯ ಹೈಸ್ಕೂಲಿನಲ್ಲಿ ಡಾ.ಡಿ.ಸಿ. ಪಾವಟೆಯವರ ಅಧ್ಯಕ್ಷತೆಯಲ್ಲಿ ಸತ್ಕಾರ ಸಮಾರಂಭ. ಹಾಮಾನಾ ಪ್ರಸ್ತಾವನೆಯ ನಂತರ ಶಂ.ಬಾ. ಮಾತಾಡುತ್ತಿದ್ದಾಗಲೇ, ಸಭಿಕರಲ್ಲಿ ಬೆಟಗೇರಿ ಕೃಷ್ಣಶರ್ಮ, ಕಾಂತರಾವ ಕಮಲಾಪುರ ಮುಂತಾದವರ ಜೊತೆ ಕುಳಿತಿದ್ದ ಬೇಂದ್ರೆ ತಟ್ಟನೇ ಎದ್ದು ನಿಂತರು, “ಏ——, ನಾ ಆ— ಅರ್ಥದಾಗ ಹೇಳಿದ್ದಿಲ್ಲೋ…’ ಎಂದರು. ಬಹಿರಂಗ ಯುದ್ಧ ಘೋಷಣೆ! ಶಂಬಾ ಮಾತಿನಲ್ಲಿ ಅವರ ಹೆಸರು ಪ್ರಸ್ತಾಪವಾಗಿರಲಿಲ್ಲ. ಬೇಂದ್ರೆ ಮಾತು ಧಾರವಾಡವನ್ನು ತುಂಡರಿಸಿತು. ಮಾತು ದೀರ್ಘ‌ ಪ್ರಯಾಣ ಮಾಡಬಲ್ಲುದು, ಇತಿಹಾಸ-ಕಸ ಕೆದಕಬಲ್ಲುದು, ಪ್ರಮಾದಗಳನ್ನು ಆಹ್ವಾನಿಸಬಲ್ಲುದು ಎಂಬುದನ್ನು ಅಂದಿನ ಮಾತು ತೋರಿಸಿದ್ದನ್ನು ಸ್ವತಃ ಕಂಡಿದ್ದೇನೆ, ಕೇಳಿದ್ದೇನೆ.

ಧಾರವಾಡದಲ್ಲಿ ಇದ್ದ ಮೇಲೆ, ಅದೂ ಸಾಹಿತ್ಯದ ಒಡನಾಟ ಹೊಂದಿದ ಮೇಲೆ ಬೇಂದ್ರೆಯವರನ್ನು ಬಿಟ್ಟು ಇರಲು ಸಾಧ್ಯವೇ ಇರಲಿಲ್ಲ. 1973ರ ಗಾಂಧೀ ಜಯಂತಿ ದಿನ, ಕೇಂದ್ರ ಸರಕಾರದ ಕ್ಷೇತ್ರ ಪ್ರಚಾರಾಧಿಕಾರಿ ಎಸ್‌.ಕೆ. ಶೇಷಚಂದ್ರಿಕಾ ಶಿರಹಟ್ಟಿಯಲ್ಲಿ ಕವಿಗೋಷ್ಠಿ ಆಯೋಜಿಸಿದ್ದರು. ಒಂದು ದೊಡ್ಡ ಗಾಡಿ ಮಾಡಿದ್ದರು. ಧಾರವಾಡ ಮತ್ತು ಹುಬ್ಳಿಗಳಿಂದ ಎಂ. ಅಕಬರ ಅಲಿ, ಎನ್ಕೆ ಕುಲಕರ್ಣಿ, ಬುದ್ದಣ್ಣ ಹಿಂಗುರೆ, ಶೇಷಗಿರಿ ಕುಲಕರ್ಣಿ, ಗಂಗಪ್ಪ ವಾಲಿ, ಗೌರೀಶ ಕಾಯ್ಕಿಣಿ, ಡಿ. ಎಸ್‌. ಕರ್ಕಿ ಮುಂತಾದ 10-15 ಮಂದಿ ಪ್ರಸಿದ್ಧ ಕವಿಗಳನ್ನು ಒಟ್ಟಿಗೇ ಕರೆದುಕೊಂಡು ಹೋಗಿದ್ದರು. ಅವರಲ್ಲಿ ಅತ್ಯಂತ ಚಿಕ್ಕವರು ನಾನು, ಸಿದ್ಧರಾಮದೇವರು. ನಾವೆಲ್ಲರೂ ಮಾತಾಡಿದ್ದು ಅಂದರೆ ಗೋಷ್ಠಿಯಲ್ಲಿ ಕಾವ್ಯವಾಚನ ಮಾಡಿದ್ದಷ್ಟೆ. ಉಳಿದಂತೆ, ಹೋಗುವಾಗ ಬರುವಾಗ ಎಲ್ಲರಿಗೂ ಹಬ್ಬವಾದದ್ದು ಬೇಂದ್ರೆಯವರ ಮಾತು ಮಾತು. ಅವರಂಥ ದಣಿವರಿಯದ ಮಾತಿನ ಧಣಿ ಮತ್ತು ಖನಿ ಇನ್ನೊಬ್ಬರಿರಲಿಲ್ಲ. ಅವರು ಆಡಿದ ಮಾತುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಸೌಲಭ್ಯ ಆಗ ಇದ್ದಿದ್ದರೆ ಎಷ್ಟು ಜಗಳ ಹಗರಣ ಪ್ರಯೋಜನಗಳಾಗುತ್ತಿದ್ದುವೋ ಹೇಳುವುದು ಕಷ್ಟ.

ಅದೇನು ಕಾರಣವೋ, ನಮ್ಮ ಸಂಕ್ರಮಣ ಪತ್ರಿಕೆಯ ಗೆಳೆಯರಲ್ಲಿ ಬೇಂದ್ರೆಯವರು ಮೊದಲಿನಿಂದಲೂ ನನ್ನ ಬಗ್ಗೆ ವಿಚಿತ್ರ ಮಮತೆ ಇಟ್ಟುಕೊಂಡಿದ್ದರು. ಸಂಕ್ರಮಣದ ಮೊದಲ ಸಂಚಿಕೆಗೆ ಅವರಿಂದ ಒಂದು ಕವಿತೆ ಅಪೇಕ್ಷಿಸಿ “ಶ್ರೀಮಾತಾ’ಕ್ಕೆ ಹೋದೆ. ನಾವು ತರುತ್ತಿರುವ ಸಾಹಿತ್ಯಪತ್ರಿಕೆಯ ಬಗ್ಗೆ, ಅದರ ನವ್ಯನಿಷ್ಠೆಯ ಬಗ್ಗೆ ಹೇಳಿದೆ. ಆ ಹೊತ್ತಿಗಾಗಲೇ ನವ್ಯಕಾವ್ಯ, ಸಾಹಿತ್ಯ ಇತ್ಯಾದಿ ಬಗ್ಗೆ ಕೆಲವು ವಿವರ ತಿಳಿದಿದ್ದ ಬೇಂದ್ರೆಯವರು, ಬಾಕಿನ ಮೇಲೆ ಕುಳಿತಿದ್ದ ನನಗೆ, ತಟ್ಟನೆ, ಮುಖ್ಯ ಬಾಗಿಲ ಬದಿಗೆ ಹಾಕಿದ್ದ ಕುರ್ಚಿ ತೋರಿಸುತ್ತ, “ನಿಮ್ಮ ಅಡಿಗ ಇದ— ಕುರ್ಚೇದಾಗ ಕುಂತಿದ್ದ’ ಎಂದರು. ನಿಮ್ಮ ಅಡಿಗ ಎಂದದ್ದು, ಆ ಕುರ್ಚಿ ತೋರಿಸಿದ್ದು ದಿಗಿಲಾಯಿತು. (ಒಮ್ಮೆ ಸುಮತೀಂದ್ರ ನಾಡಿಗನ ಜೊತೆಗೆ ಹೋದಾಗಲೂ ಇದು ಮರುಕಳಿಸಿತ್ತು.) ಸ್ವಲ್ಪ ಹೊತ್ತು ಸುಮ್ಮನೇ ಕುಳಿತೆ. ಬೇಂದ್ರೆ ಬಲಬದಿಯ ಕೋಣೆಯೊಳಗೆ ಹೋದರು. ಒಂದೆರಡು ಕಾಗದ, ಪೆನ್ನು ಹಿಡಿದುಕೊಂಡು ಬಂದರು. ಅಡಿಗರ ಕುರ್ಚಿಯಲ್ಲಿ ಕುಳಿತರು. ನನ್ನ ಕಡೆಗೆ ನೋಡುತ್ತ ಒಂದು ಕವಿತೆ ಬರೆದವರೇ, ತೊಗೊ, ಇದನ್ನ ಪ್ರಿಂಟ್‌ ಮಾಡಿಕೋ ಎಂದು, ಆ ಕಾಗದ ನನ್ನ ಕೈಯಲ್ಲಿಟ್ಟರು. ಇದು ಕವಿ ಬೇಂದ್ರೆ. ಆ ಕವಿತೆ ಸಂಕ್ರಮಣ-1ರಲ್ಲಿ ಅಚ್ಚಾಗಿದೆ.

ಒಮ್ಮೆ ಚಂಪಾ, ನಾನು ಇಬ್ಬರೂ ಕೂಡಿಯೇ ಬೇಂದ್ರೆಯವರ ಮನೆಗೆ ಹೋದೆವು. ಅದಾಗಲೇ ಅವರನ್ನು ಲಘುವಾಗಿ ಟೀಕಿಸಿ ಚಂಪಾ ಬಹಳ ಸಲ ಬರೆದಿದ್ದ, ಮಾತಾಡಿದ್ದ. ಹಾಗಿದ್ದರೂ ಸಾಮಾನ್ಯವಾಗಿ ಬೇಂದ್ರೆಯವರನ್ನು ಏಕಾಕಿಯಾಗಿ ಕಾಣಲು ಹಿಂಜರಿಯುತ್ತಿದ್ದ. ಹೀಗಾಗಿ, ನನ್ನನ್ನು ಜೊತೆಗೆ ಕರೆದುಕೊಂಡು ಹೋದ. ಇವರಿಬ್ಬರ ಮನೋವಿಲಾಸ ಗೊತ್ತಿದ್ದರೂ ನನಗೂ ಒಂದು ರೀತಿಯ ಭಯ, ಸಂಕೋಚ. ಸಾವಕಾಶ ಹೊರಗಿನ ಗೇಟ್‌ ತೆರೆದೆ. ಮುಂಬಾಗಿಲ ಕೋಣೆಯಲ್ಲಿಂದ ನಮ್ಮನ್ನು ನೋಡಿದ ಬೇಂದ್ರೆ ಹೊರಗೆ ಬಂದವರೇ, “ಯಾಕ—? ಒಬ್ಟಾಂವನ— ಬರಾಕಾಗದ— ನಿನ್ನ ಕರಕೊಂಡ ಬಂದಾನೇನು—?’ ಎಂದರು. “ಹಂಗೇನಿಲ್ಲರಿ. ಇಬ್ಬರೂ ಕೂಡೇ ಬಂದೇವರಿ’ ಅಂದೆ. ಮುಂಬಾಗಿಲ ಮೆಟ್ಟಿಲ ವರೆಗೆ ಬಂದೆವು. “ಗೊತ್ತು, ಗೊತ್ತು… ‘ಎಂದು, “ಬಾಳಾ…’ ಎನ್ನುತ್ತ ಒಳಗಡೆ ಹೋದರು. ಏನಾಯಿತು ಎಂಬುದು ತಿಳಿಯುವ ಮೊದಲೇ, ಬೇಂದ್ರೆ ಸಕ್ಕರೆ ಡಬ್ಬಿ ಹಿಡಿದುಕೊಂಡು ಬಂದರು. ತೊಗೊ ಎಂದರು. ಇದು ಮುಕ್ತಾಯ ಸಮಾರಂಭ.

ಗಾಬರಿಯಿಂದ ಇಬ್ಬರೂ ಅಂಗೈ ಮುಂದೆ ಚಾಚಿದೆವು. ಆ ನಂತರವೂ ನಾನು ಬಹಳ ಸಲ ಅವರನ್ನು ಸಂಪರ್ಕಿಸಿದ್ದೇನೆ, ಮಾತಾಡಿಸಿದ್ದೇನೆ. ಅನೇಕ ಕಾರ್ಯಕ್ರಮಗಳಲ್ಲಿ ಅವರ ಜೊತೆಗಿದ್ದೇನೆ. ಅವರಿಲ್ಲದ ಧಾರವಾಡ ಮಾತ್ರ ಬಿಕೋ ಅನ್ನುತ್ತಿದೆ. ಅಂಥ ಇತಿಹಾಸ ಮತ್ತೆ ಸೃಜಿಸಲೇ ಇಲ್ಲ. ಅಂಬಿಕಾತನಯದತ್ತರ ಸೃಷ್ಟಿ “ರಸವೆ ಜನನ ವಿರಸ ಮರಣ ಸಮರಸವೇ ಜೀವನ’ ಎಂದು ಹಾಡುತ್ತಿತ್ತು. ಆದರೆ ಸರಸ ವಿರಸ ಏಕರಸವೇ ಎನ್ನುತ್ತಿತ್ತು ಬೇಂದ್ರೆ ದೃಷ್ಟಿ. ಈ ದ್ವಂದ್ವ ಅವರ ಸಣ್ತೀವನ್ನು ಹಿಂಡಿ ಹಾಕಿತ್ತು. ಕೊನೆಯಲ್ಲಿ ಮಾಸ್ತರ್‌ ಬೇಸತ್ತಿದ್ದರು. ಧಾರವಾಡ ತೊರೆದರು !

ಸಿದ್ಧಲಿಂಗ ಪಟ್ಟಣಶೆಟ್ಟಿ

ಟಾಪ್ ನ್ಯೂಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.