ಕೋ- ಆಪ್ ನೋಟಿಫಿಕೇಷನ್!
ಸಹಕಾರಿ ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ಹಿಡಿತಕ್ಕೆ?
Team Udayavani, Mar 9, 2020, 5:23 AM IST
ಈ ವರ್ಷದಾರಂಭದ ಕೇಂದ್ರ ಬಜೆಟ್‌ನಲ್ಲಿ ಗ್ರಾಹಕರು ಬ್ಯಾಂಕುಗಳಲ್ಲಿ ಇರಿಸಿದ ಠೇವಣಿ ಮೇಲಿನ ವಿಮಾ ಪರಿಹಾರವನ್ನು ಒಂದು ಲಕ್ಷದಿಂದ ಐದು ಲಕ್ಷಕ್ಕೆ ಏರಿಸಿದ್ದರು. ಆ ಮೂಲಕ ಬ್ಯಾಂಕ್‌ನ ಠೇವಣಿದಾರರ ಹಿತ ಕಾಪಾಡಲು ಸರ್ಕಾರ ಮುಂದಾಗಿತ್ತು. ಇದೀಗ “ಸಹಕಾರಿ ಬ್ಯಾಂಕ್ ತಿದ್ದುಪಡಿ ಕಾನೂನು’ಅನ್ನು ಸಂಸತ್ತಿನಲ್ಲಿ ಮಂಡಿಸುವ ಮೂಲಕ, ಸಹಕಾರಿ ಬ್ಯಾಂಕುಗಳು ರಿಸರ್ವ್ ಬ್ಯಾಂಕ್‌ನ ಕಠಿಣ ಕಾನೂನು ಮತ್ತು ನಿಯಮಾವಳಿ ಅಡಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಲು ಹೊರಟಿದೆ. ದೇಶದಲ್ಲಿ 1540 ಸಹಕಾರಿ ಬ್ಯಾಂಕುಗಳು ಇದ್ದು, ಅವುಗಳಲ್ಲಿ 8.60 ಕೋಟಿ ಠೇವಣಿದಾರರು 5 ಲಕ್ಷ ಕೋಟಿ ರೂ.ನಷ್ಟು ಠೇವಣಿ ಇಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಹಕಾರಿ ಬ್ಯಾಂಕುಗಳ ವೈಫಲ ಹೆಚ್ಚಾಗುತ್ತಿದ್ದು, ಠೇವಣಿದಾರರ ಹಿತಾಸಕ್ತಿಯ ರಕ್ಷಣೆ ಸರ್ಕಾರಕ್ಕೆ ದೊಡ್ಡ ಸವಾಲೇ ಆಗಿದೆ. ಪಂಜಾಬ್ ಮತ್ತು ಮಹಾರಾಷ್ಟ್ರ ಕೋ- ಅಪರೇಟಿವ್ ಬ್ಯಾಂಕ್ ವಂಚನೆ ತೀರಾ ಇತ್ತೀಚಿನ ಉದಾಹರಣೆ. ಇನ್ನೂ ಕೆಲವು ಬ್ಯಾಂಕುಗಳ ಹೆಸರುಗಳು ಈ ನಿಟ್ಟಿನಲ್ಲಿ ಕೇಳಿಬರುತ್ತಿವೆ.
ಏಕೆ ಈ ತಿದ್ದುಪಡಿ?
ಸಹಕಾರಿ ಬ್ಯಾಂಕುಗಳ ನಿರ್ವಹಣೆ ಉಭಯ (dual control) ನಿಯಂತ್ರಣದಲ್ಲಿದ್ದು, ಅಡಳಿತ ಗೊಂದಲಮಯವಾಗಿದೆ. ಇವುಗಳು ಆಯಾ ರಾಜ್ಯದ ಸಹಕಾರಿ ಸಂಘಗಳ ಕಾಯ್ದೆ ಅಡಿಯಲ್ಲಿ, ಆಯಾ ರಾಜ್ಯದ ರಿಜಿಸ್ಟ್ರಾರ್ ಆಫ್ ಕೋ- ಅಪರೇಟಿವ್ ಸೊಸೈಟಿಗಳ ಆಧೀನಕ್ಕೆ ಬರುತ್ತವೆ. ಆದರೆ, ಬ್ಯಾಂಕಿಂಗ್ ವ್ಯವಹಾರಗಳು ರಿಸರ್ವ್ ಬ್ಯಾಂಕ್ ನಿರ್ದೇಶನದಲ್ಲಿ ನಡೆಯುತ್ತಿದ್ದು ಒಂದು ರೀತಿಯ ಉಭಯ ನಿಯಂತ್ರಣ (dual control) ದಲ್ಲಿರುತ್ತದೆ. ಆದರೆ, ಪಿಎಮ್‌ಸಿ ಬ್ಯಾಂಕ್ ರೀತಿಯ ವಂಚನೆ ನಡೆದಾಗ, ಪರಿಹಾರ ನೀಡುವ ನಿಟ್ಟಿನಲ್ಲಿ ಇಬ್ಬರೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಸಹಕಾರಿ ಬ್ಯಾಂಕುಗಳ ಆಂತರಿಕ ಹಣಕಾಸು ನಿರ್ವಹಣೆ ಮತ್ತು ವ್ಯವಹಾರ, ರಿಸರ್ವ್ ಬ್ಯಾಂಕ್‌ನ ಸಂಗಡ ಜೋಡಣೆ ಆಗದಿರುವುದರಿಂದ, ಈ ಬ್ಯಾಂಕುಗಳಲ್ಲಿ ಅಗುವ ವಂಚನೆ, ಅವ್ಯವಹಾರಗಳು ರಿಸರ್ವ್ ಬ್ಯಾಂಕ್‌ನ ಗಮನಕ್ಕೆ ಶೀಘ್ರ ಬರುವುದಿಲ್ಲ ಎನ್ನುವ ಮಾತೂ ಇದೆ. 2016ರಲ್ಲಿ ನೋಟುಗಳ ಅಮಾನ್ಯಿಕರಣ ನಡೆದ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ವ್ಯವಹಾರಗಳು ಈ ಬ್ಯಾಂಕುಗಳಲ್ಲಿ ಆಗಿದೆ. ಅದ್ಯಾವುದೂ, ರಿಸರ್ವ್ ಬ್ಯಾಂಕಿನ ಗಮನಕ್ಕೆ ಬಂದಿರಲಿಲ್ಲ ಎನ್ನುವ ಆರೋಪ ಇದೆ. ಈ ಕಾರಣಕ್ಕಾಗಿಯೇ ಸಹಕಾರಿ ಬ್ಯಾಂಕುಗಳನ್ನು ರಿಸರ್ವ್ ಬ್ಯಾಂಕ್‌ನ ತೆಕ್ಕೆಗೆ ತರಬೇಕು ಎನ್ನುವ ಕೂಗು ಕೇಳಿಬರುತ್ತಿತ್ತು. ಸಹಕಾರಿ ಬ್ಯಾಂಕುಗಳು ಖಾಸಗಿ ಟ್ರಸ್ಟ್‌ಗಳ ಮೂಲಕ ನಡೆಯುತ್ತವೆ. ಈ ತಿದ್ದುಪಡಿಗೆ ಸಂಸತ್ತಿನಲ್ಲಿ ಅನುಮೋದನೆ ದೊರಕಿದರೆ, ಎಲ್ಲಾ ಸಹಕಾರಿ ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ನಿರ್ದೇಶನ ಮತ್ತು ನಿಯಮಾವಳಿಯ ಪ್ರಕಾರವೇ ಕಾರ್ಯನಿರ್ವಹಿಸಬೇಕಾಗುತ್ತದೆ.
ತಿದ್ದುಪಡಿಯಲ್ಲಿ ಏನಿದೆ?
ಈ ತಿದ್ದುಪಡಿ ಪ್ರಕಾರ, ರಿಸರ್ವ್ ಬ್ಯಾಂಕ್, ಪ್ರತಿಯೊಂದು ಸಹಕಾರಿ ಬ್ಯಾಂಕ್‌ಗೂ ಒಬ್ಬ ಮುಖ್ಯಕಾರ್ಯ ನಿರ್ವಹಣಾಧಿಕಾರಿ (chief executive offi cer)ಯನ್ನು ನೇಮಿಸುತ್ತದೆ. ಬ್ಯಾಂಕಿನ ಪ್ರತಿಯೊಂದು ಹಣಕಾಸು ವ್ಯವಹಾರಗಳಿಗೆ ಆತನ ಒಪ್ಪಿಗೆ ಕಡ್ಡಾಯ. ಪ್ರತಿಯೊಂದು ಹಣಕಾಸು ವ್ಯವಹಾರವನ್ನೂ ಅತನ ಗಮನಕ್ಕೆ ತರಬೇಕು. ರಿಸರ್ವ್ ಬ್ಯಾಂಕ್‌ನ ನಿರ್ದೇಶನ, ಸೂಚನೆ ಮತ್ತು ನಿಯಮಾವಳಿಗಳಂತೆ ಲೆಕ್ಕ ಪತ್ರಗಳ ನಿರ್ವಹಣೆ ಮತ್ತು ಪರಿಶೋಧನೆ ಆಗಬೇಕು. ಆಡಳಿತಾತ್ಮಕ ವ್ಯವಹಾರಗಳು, ಸಂಬಂಧಪಟ್ಟ ರಾಜ್ಯಗಳ ರಿಜಿಸ್ಟ್ರಾರ್ ಆಫ್ ಕೋ-ಅಪರೇಟಿವ್ ಸೊಸೈಟೀಸ್- ಇದರ ನಿರ್ದೇಶನದಂತೆ ನಡೆಯುತ್ತದೆ.
ಬಂಡವಾಳ ಸೆಳೆತ
ಸಹಕಾರಿ ಬ್ಯಾಂಕುಗಳಲ್ಲಿ ವೃತ್ತಿಪರತೆ ಹೆಚ್ಚಿಸಿ ಬ್ಯಾಂಕುಗಳನ್ನು ಸದೃಢಗೊಳಿಸುವುದು, ಅಡಳಿತದಲ್ಲಿ ಪಾರದರ್ಶಕತೆಯನ್ನು ತರುವುದು, ಅವು ಕ್ಯಾಪಿಟಲ್ ಮಾರ್ಕೆಟ್‌ನಲ್ಲಿ ಕ್ಯಾಪಿಟಲ್ ಆಕರ್ಷಿಸುವಂತೆ ಮಾಡುವುದು ಮತ್ತು ತನ್ಮೂಲಕ ಅವು ಹೆಚ್ಚು ಸಾಲ ನೀಡುವಂತೆ ಮಾಡುವುದು, ಇವು ಈ ತಿದ್ದುಪಡಿಯ ಹಿಂದಿನ ಇತರ ಕಾರಣಗಳು. ಸಹಕಾರಿ ಬ್ಯಾಂಕ್‌ಗಳಲ್ಲಿ ಕ್ಯಾಪಿಟಲ್ ತುಂಬಾ ಕಡಿಮೆ ಇದ್ದು, ದುಡಿಯುವ ಬಂಡವಾಳದ(ವರ್ಕಿಂಗ್ ಕ್ಯಾಪಿಟಲ್) ಕೊರತೆ ಇದೆ. ಅವು ಈ ತಿದ್ದುಪಡಿಯ ನಂತರ ಬಂಡವಾಳಕ್ಕಾಗಿ, ಕ್ಯಾಪಿಟಲ್ ಮಾರುಕಟ್ಟೆಯ ಬಾಗಿಲು ಬಡಿಯಬಹುದು.
ಗ್ರಾಹಕರಿಗೆ ಏನು ಪ್ರಯೋಜನ?
ಪ್ರತಿಯೊಂದು ಹಣಕಾಸು ವ್ಯವಹಾರವೂ ರಿಸರ್ವ್ ಬ್ಯಾಂಕ್ ಗಮನಕ್ಕೆ ಬರುವುದರಿಂದ, ಗ್ರಾಹಕರು ವಂಚನೆ ಮತ್ತು ಮೋಸಕ್ಕೆ ಬಲಿಯಾಗುವ ಸಾಧ್ಯತೆ ಕಡಿಮೆ. ವಂಚನೆಗಳು ನಡೆದರೂ ರಿಸರ್ವ್ ಬ್ಯಾಂಕ್ ಬಿಗಿ ಕ್ರಮಗಳಿಗೆ ಮುಂದಾಗುತ್ತದೆ. ಗ್ರಾಹಕನ ಠೇವಣಿಗೆ, ಸರ್ಕಾರಿ ಬ್ಯಾಂಕುಗಳಂತೆ 5 ಲಕ್ಷದ ತನಕ ಠೇವಣಿ ವಿಮಾ ಪರಿಹಾರ ದೊರಕುತ್ತದೆ. ಕೆಲವು ಸಹಕಾರಿ ಬ್ಯಾಂಕುಗಳಲ್ಲಿ ಈ ಸೌಲಭ್ಯ ಇರಲಿಲ್ಲ, ಸಹಕಾರಿ ಬ್ಯಾಂಕುಗಳ ವೈಫಲ್ಯದ ಸಮಯದಲ್ಲಿ ಯಾರೂ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಆಗುವುದಿಲ್ಲ.
- ರಮಾನಂದ ಶರ್ಮಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.