ಜಿಲ್ಲೆಯಲ್ಲಿ ಸದ್ದಿಲ್ಲದೇ ಖಾಸಗಿ ಬಸ್ ದರ ಏರಿಕೆ
Team Udayavani, Mar 9, 2020, 3:00 AM IST
ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ನೆಪವೊಡ್ಡಿ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರವನ್ನು ಶೇ.12 ರಷ್ಟು ಏರಿಸಿ ವಾರ ಕಳೆದ ಬೆನ್ನಲ್ಲೇ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣದ ಟಿಕೆಟ್ ದರ ಸದ್ದಿಲ್ಲದೇ ಏರಿಕೆಯಾಗಿ ಪ್ರಯಾಣಿಕರ ಕೈ ಕಚ್ಚುವಂತೆ ಮಾಡಿದೆ.
ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ದರ ಏರಿಸಿದ ಹಿನ್ನೆಲೆಯಲ್ಲಿ ಖಾಸಗಿ ಬಸ್ ಮಾಲೀಕರು ಸಹ ಬಸ್‌ಗಳ ಸಂಚಾರಕ್ಕೆ ಬಳಸುವ ತೈಲ, ಆಯಿಲ್, ಗ್ರೀಸ್ ಜೊತೆಗೆ ಸರ್ಕಾರಕ್ಕೆ ಕಟ್ಟುವ ತೆರಿಗೆ, ಪ್ರಯಾಣಿಕರ ಸುರಕ್ಷತೆಗೆ ಪಾವತಿಸುವ ವಿಮೆ ಮೊತ್ತ ಹೆಚ್ಚಾಗಿದೆ ಎಂದು ಹೇಳಿ ಪ್ರಯಾಣ ದರವನ್ನು ಶೇ.5 ರಿಂದ 10 ರಷ್ಟು ಏರಿಸುವ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ.
ಸಮರ್ಥನೆ: ಸಾರಿಗೆ ಬಸ್ ಪ್ರಯಾಣ ದರಕ್ಕಿಂತ ಖಾಸಗಿ ಬಸ್ ದರ ದುಬಾರಿ ಅಲ್ಲ ಎಂದು ಜಿಲ್ಲೆಯ ಖಾಸಗಿ ಬಸ್ ಮಾಲೀಕರು ದರ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರೂ ಕೆಲವೆಡೆ ಸರ್ಕಾರಿ ಬಸ್ ಸಂಚಾರ ಇಲ್ಲದೇ ಖಾಸಗಿ ಬಸ್‌ಗಳನ್ನೇ ಅವಲಂಬಿಸಿರುವ ಪ್ರಯಾಣಿಕರು ಅನಿವಾರ್ಯವಾಗಿ ದರ ಏರಿಕೆಯನ್ನು ಪ್ರಶ್ನಿಸಲಾಗದೇ ಸಂಚರಿಸಬೇಕಿದೆ. ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ಖಾಸಗಿ ಪ್ರಯಾಣ ದರ ಈ ಹಿಂದೆ 50 ರಿಂದ 55 ಇತ್ತು. ಇದೀಗ ಕೆಲ ಖಾಸಗಿ ಬಸ್‌ಗಳು 60ಕ್ಕೆ ಏರಿಸಿದರೆ, ವೇಗದೂತ ಬಸ್‌ಗಳಲ್ಲಿ 65ಕ್ಕೆ ಏರಿಸಲಾಗಿದೆ. ಅದೇ ರೀತಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬೆಂಗಳೂರು ಸೇರಿದಂತೆ ದೂರದ ಊರುಗಳಿಗೆ ಸಂಚರಿಸುವ ಪ್ರಯಾಣ ದರವನ್ನು 5 ರಿಂದ 10 ರೂ.ನಷ್ಟು ಏರಿಕೆ ಮಾಡಲಾಗಿದೆ.
ಕರಪತ್ರ ಹಂಚಿ ಅರಿವು: ಖಾಸಗಿ ಬಸ್ ಮಾಲೀಕರ ಸಂಘ ವಿವಿಧ ತಾಲೂಕು ಕೇಂದ್ರಗಳಿಂದ ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಗೆ ಸಂಚರಿಸುವ ಮಾರ್ಗ ಮಧ್ಯದಲ್ಲಿ ಬರುವ ಊರುಗಳಿಗೆ ಏರಿಕೆಯಾಗಿರುವ ದರದ ಬಗ್ಗೆ ಕರಪತ್ರಗಳನ್ನು ಬಸ್‌ಗಳಲ್ಲಿ ಅಂಟಿಸಿ ಪ್ರಯಾಣಿಕರ ಗಮನ ಸೆಳೆಯಲಾಗುತ್ತಿದೆ. ದರ ಏರಿಕೆ ನಿರ್ವಾಹಕರ ಹಾಗೂ ಪ್ರಯಾಣಿಕರ ನಡುವೆ ಮಾತಿನ ವಾಗ್ವಾದಕ್ಕೂ ಕಾರಣವಾಗಿದ್ದು, ಕೆಲವು ಪ್ರಯಾಣಿಕರು ಬಸ್ ಮಾಲೀಕರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾರಿಗೆ ಬಸ್ ದರ ಶೇ.12ರಷ್ಟು ಏರಿಕೆಯಾಗಿದ್ದು, ನಾವು ಕನಿಷ್ಠ 5 ರಷ್ಟು ಮಾತ್ರ ಏರಿಕೆ ಮಾಡಿದ್ದೇವೆಂದು ಚಿಕ್ಕಬಳ್ಳಾಪುರದ ಖಾಸಗಿ ಬಸ್ ನಿರ್ವಾಹಕ ಮಂಜುನಾಥ ಉದಯವಾಣಿಗೆ ತಿಳಿಸಿದರು.
ವಿದ್ಯಾರ್ಥಿಗಳಿಗೆ ಶೇ.25 ರಿಯಾಯಿತಿ: ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರ ಏರಿಕೆಯಾದರೂ ಕೆಲವು ತಾಲೂಕುಗಳಲ್ಲಿ ವಿದ್ಯಾರ್ಥಿಗಳಿಗೆ ದರ ಏರಿಕೆ ಬಳಿಕ ಶೇ.25 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಗ್ರಾಮೀಣ ಭಾಗದಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳು, ರೈತಾಪಿ ಕೂಲಿ ಕಾರ್ಮಿಕರ ಮಕ್ಕಳು ಆಗಿರುವುದರಿಂದ ವಿದ್ಯಾರ್ಥಿಗಳಿಗೆ ಖಾಸಗಿ ಬಸ್ ಮಾಲೀಕರು ಉದಾರತೆ ತೋರಿ ಒಟ್ಟಾರೆ ಟಿಕೆಟ್ ದರದಲ್ಲಿ ಶೇ.25 ರಷ್ಟು ರಿಯಾಯಿತಿ ಘೋಷಿಸಿವೆ. ಉಳಿದಂತೆ ಪ್ರತಿ ನಿತ್ಯ ವಾಡಿಕೆಯಾಗಿ ಒಂದೇ ಬಸ್‌ನಲ್ಲಿ ದೂರದ ಊರುಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಂದ ನಿರ್ವಾಹಕರು ಮಾಮೂಲಿಯಾಗಿ ಹಿಂದಿನ ಪ್ರಯಾಣ ದರವನ್ನೇ ಪಡೆಯುತ್ತಿದ್ದಾರೆ.
ಕೆಲವು ಬಸ್‌ಗಳಲ್ಲಿ ದರ ಏರಿಕೆ ಇಲ್ಲ: ಕೆಲವು ಗ್ರಾಮೀಣ ಪ್ರದೇಶಗಳಿಗೆ ನಿತ್ಯ ಸಂಚರಿಸುವ ಖಾಸಗಿ ಬಸ್‌ಗಳ ಮಾಲೀಕರು ಇನ್ನೂ ಪ್ರಯಾಣ ದರ ಏರಿಕೆ ಮಾಡದೇ ಮೊದಲಿನಂತೆ ಟಿಕೆಟ್ ದರ ಮುಂದುವರಿಸಿದ್ದಾರೆ. ಟಿಕೆಟ್ ದರ ಏರಿಸಿದರೆ ಪ್ರಯಾಣಿಕರು ಲಗೇಟ್ ಆಟೋಗಳಲ್ಲಿ ಸಂಚರಿಸುತ್ತಾರೆಂಬ ಆತಂಕದಿಂದ ಕೆಲವು ತಾಲೂಕು ಕೇಂದ್ರಗಳಿಂದ ಗ್ರಾಮೀಣ ಭಾಗಕ್ಕೆ ತೆರಳುವ ಖಾಸಗಿ ಬಸ್‌ಗಳು ಟಿಕೆಟ್ ದರ ಏರಿಕೆಗೆ ಹಿಂದೆಮುಂದೆ ನೋಡುತ್ತಿವೆ.
ಚಿಕ್ಕಬಳ್ಳಾಪುರದಿಂದ ಗುಡಿಬಂಡೆಗೆ ಸಂಚರಿಸುವ ಖಾಸಗಿ ಬಸ್‌ನಲ್ಲಿ ಪ್ರಯಾಣ ದರ ಯಥಾಸ್ಥಿತಿ ಇದೆ. ಬೆಂಗಳೂರು ಸೇರಿದಂತೆ ದೂರದ ಕಡೆ ತೆರಳುವ ಖಾಸಗಿ ಬಸ್‌ಗಳು ಮಾತ್ರ ದರ ಏರಿಕೆ ಮಾಡಿವೆ. ನಾವು ಇನ್ನೂ ಏರಿಕೆ ಮಾಡಿಲ್ಲ. ನಮ್ಮ ಮಾಲೀಕರು ದರ ಏರಿಕೆ ಬಗ್ಗೆ ನಮಗೆ ಇನ್ನೂ ಯಾವುದೇ ಸೂಚನೆ ಕೊಟ್ಟಿಲ್ಲ ಎಂದು ಎಸ್‌ಎಲ್‌ವಿ ಖಾಸಗಿ ಬಸ್ ನಿರ್ವಾಹಕ ಹನುಮಂತು ಉದಯವಾಣಿಗೆ ತಿಳಿಸಿದರು.
ದರ ಏರಿಕೆಗೆ ಖಾಸಗಿ ಬಸ್ ಮಾಲೀಕರ ಸಮರ್ಥನೆ ಏನು?: ಈಗಾಗಲೇ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಪ್ರಯಾಣ ದರವನ್ನು ಶೇ.12 ರಷ್ಟು ಏರಿಕೆ ಮಾಡಿದೆ. ಹಲವು ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದರೂ ನಾವು ಪ್ರಯಾಣ ದರ ಏರಿಕೆ ಮಾಡಿಲ್ಲ. ಸದ್ಯ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ ಜೊತೆಗೆ ವಾರ್ಷಿಕವಾಗಿ ಪಾವತಿಸುವ ತೆರಿಗೆ, ವಿಮೆ ಹೆಚ್ಚಳವಾಗಿದೆ. ಅದೇ ರೀತಿ ಬಸ್ ನಿರ್ವಹಣೆಗೆ ಬಳಸುವ ಟೈರ್, ಆಯಿಲ್, ಗ್ರೀಸ್, ವಾಹನಗಳ ಬಿಡಿ ಭಾಗಗಳ ದರ ಹೆಚ್ಚಾಗಿದೆ. ಆದ್ದರಿಂದ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಚಿಂತಾಮಣಿ ಖಾಸಗಿ ಬಸ್ ಮಾಲೀಕರ ಸಂಘ ಪ್ರಯಾಣ ದರ ಏರಿಕೆಯನ್ನು ಸಮರ್ಥಿಸಿಕೊಂಡಿದೆ.
ಆರ್‌ಟಿಒ ಅಧಿಕಾರಿ ಹೇಳಿದ್ದೇನು?: ಕೆಎಸ್‌ಆರ್‌ಟಿಸಿ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರ ಏರಿಕೆ ಕುರಿತು ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆ ವಾಹನಗಳ ನಿರೀಕ್ಷಕ ಕಮಲ್ ಬಾಬು ಪ್ರತಿಕ್ರಿಯೆ ನೀಡಿ, ಸಹಜವಾಗಿ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆಯಾದಾಗ ಖಾಸಗಿ ಬಸ್‌ಗಳು ದರ ಏರಿಕೆ ಮಾಡುವುದು ಸಾಮಾನ್ಯ. ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಜಿಲ್ಲೆಯಲ್ಲಿ 200 ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ನಿತ್ಯ ಸಂಚರಿಸುತ್ತವೆ. ಆ ಪೈಕಿ ಚಿಂತಾಮಣಿ ತಾಲೂಕಿನಲ್ಲಿ ಹೆಚ್ಚಿನ ಖಾಸಗಿ ಬಸ್ ಸಂಚಾರ ಇದೆ ಎಂದರು. ಪ್ರಯಾಣ ದರ ಏರಿಸಲು ಯಾರ ಅನುಮತಿ ಬೇಕಿಲ್ಲ. ಆದರೆ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಸಿದಾಗ ಸಹಜವಾಗಿ ಖಾಸಗಿ ಬಸ್‌ಗಳು ದರ ಹೆಚ್ಚಿಸುತ್ತವೆ. ಸರ್ಕಾರದಷ್ಟು ದರ ಏರಿಕೆ ಮಾಡಲ್ಲ ಎಂದರು.
ಜಿಲ್ಲೆಯಲ್ಲಿ ನಿತ್ಯ 200 ಕ್ಕೂ ಹೆಚ್ಚು ಖಾಸಗಿ ಬಸ್ ಸಂಚಾರ: ಜಿಲ್ಲೆಯಲ್ಲಿ ಪ್ರತಿ ನಿತ್ಯ ಬರೋಬ್ಬರಿ 570 ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳು ಸಂಚರಿಸಿದರೆ, ಖಾಸಗಿ ವಲಯದ ಬಸ್‌ಗಳ ಸಂಖ್ಯೆ 200 ರ ಗಡಿ ದಾಟಿದೆ. ಆ ಪೈಕಿ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ ತಾಲೂಕು ಒಂದರಲ್ಲಿಯೇ 100 ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ನಿತ್ಯ ಸಂಚರಿಸಿದರೆ, ಉಳಿದಂತೆ ಇಡೀ ಜಿಲ್ಲೆಯಲ್ಲಿ 200 ರ ಮೇಲೆ ಸಂಚರಿಸುತ್ತವೆ. ಗ್ರಾಮೀಣ ಭಾಗದಲ್ಲಿ ಕಡಿಮೆ ಪ್ರಮಾಣದಲ್ಲಿ ಖಾಸಗಿ ಬಸ್ ಸಂಚಾರ ಇದ್ದು, ಬೆಂಗಳೂರು, ತಿರುಪತಿ ಹೀಗೆ ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ಬಸ್ ಸಂಚಾರ ಇದೆ.
ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆ ಆಗುತ್ತಿದ್ದಂತೆ ಖಾಸಗಿ ಬಸ್‌ಗಳು ಕೆಲವು ಮಾರ್ಗಗಳಲ್ಲಿ 5 ರಿಂದ 10 ರೂ. ವರೆಗೂ ದರ ಏರಿಕೆ ಮಾಡಿವೆ. ಕೆಎಸ್‌ಆರ್‌ಟಿಸಿ ಬಸ್‌ಗಿಂತ ಕಡಿಮೆ ದರ ಇರುವುದರಿಂದ ಖಾಸಗಿ ಬಸ್‌ನಲ್ಲೇ ಸಂಚರಿಸುತ್ತೇನೆ.
-ಆನಂದರೆಡ್ಡಿ, ಪ್ರಯಾಣಿಕ, ಚಿಕ್ಕಬಳ್ಳಾಪುರ
* ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.