ಕಾನೂನು ಹೋರಾಟಕ್ಕೆ ಮುಂದಾದ “ಕೋಟಿಗೊಬ್ಬ-3′
ಟೀಸರ್ ಡಿಲೀಟ್ ಹಿನ್ನೆಲೆಯಲ್ಲಿ ನಿರ್ಮಾಪಕ ಸೂರಪ್ಪ ಬಾಬು ಮಾತು
Team Udayavani, Mar 10, 2020, 7:04 AM IST
ಇತ್ತೀಚೆಗಷ್ಟೆ ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ “ಕೋಟಿಗೊಬ್ಬ-3′ ಚಿತ್ರದ ಟೀಸರ್ ಯು-ಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು. ಆರಂಭದಿಂದಲೂ ಸುದೀಪ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಯನ್ನು ಮೂಡಿಸಲು ಯಶಸ್ವಿಯಾಗಿದ್ದ “ಕೋಟಿಗೊಬ್ಬ-3′ ಚಿತ್ರದ ಟೀಸರ್, ಬಿಡುಗಡೆಯಾದ ಕೆಲ ಸಮಯದಲ್ಲೇ ಯು-ಟ್ಯೂಬ್‌ನಿಂದಲೇ ಡಿಲೀಟ್ ಆಗಿತ್ತು. ಆರಂಭದಲ್ಲಿ ಕೆಲವರು ಇದನ್ನು ತಾಂತ್ರಿಕ ಕಾರಣಗಳಿಂದ ಆಗಿರಬಹುದು ಎಂದು ಭಾವಿಸಿದ್ದರು.
ಕೊನೆಗೆ ನೋಡಿದಾಗ ಇದು ಉದ್ದೇಶ ಪೂರ್ವಕವಾಗಿಯೇ ಯು-ಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದೆ ಎಂಬ ಸಂಗತಿ ಬಹಿರಂಗವಾಗಿತ್ತು. ಈ ವಿಷಯ ಸಹಜವಾಗಿಯೇ “ಕೋಟಿಗೊಬ್ಬ-3′ ಚಿತ್ರತಂಡಕ್ಕೆ, ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ದಿಢೀರನೆ “ಕೋಟಿಗೊಬ್ಬ-3′ ಟೀಸರ್ ಯು-ಟ್ಯೂಬ್‌ನಲ್ಲಿ ಡಿಲೀಟ್ ಆಗಿರುವ ಬಗ್ಗೆಯೂ ಚಿತ್ರರಂಗದಲ್ಲಿ ಸಾಕಷ್ಟು ಅಂತೆ-ಕಂತೆ ಸುದ್ದಿಗಳು ಹರಿದಾಡುತ್ತಿದ್ದವು.
ಚಿತ್ರತಂಡ ಬಾಕಿ ಹಣಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಅಜಯ್ ಪಾಲ್ ಟೀಸರ್ ಡಿಲೀಟ್ ಮಾಡಿಸಿದ್ದಾರಂತೆ. ಪೋಲೆಂಡ್‌ನಲ್ಲಿ ಚಿತ್ರೀಕರಿಸಲಾದ ದೃಶ್ಯಗಳು ಅಜಯ್ ಪಾಲ್ ಮತ್ತು ಸಂಜಯ್ ಪಾಲ್ ಕಂಪೆನಿ ಹೆಸರಿನಲ್ಲಿದೆಯಂತೆ. ಬಾಕಿ ಹಣ ನೀಡದೆ ಟೀಸರ್ ರಿಲೀಸ್ ಮಾಡಲಾಗಿದೆ ಎನ್ನುವ ಕಾರಣಕ್ಕೆ ಆನಂದ್ ಆಡಿಯೋ ಯು-ಟ್ಯೂಬ್‌ನಲ್ಲಿದ್ದ ಟೀಸರ್ ಅನ್ನು ಡಿಲೀಟ್ ಮಾಡಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.
ಇದೆಲ್ಲದರ ಬಗ್ಗೆಯೂ ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ ನಿರ್ಮಾಪಕ ಸೂರಪ್ಪ ಬಾಬು, “ಕೋಟಿಗೊಬ್ಬ-3′ ಟೀಸರ್ ಡಿಲೀಟ್ ಹಿಂದಿನ ವೃತ್ತಾಂತವನ್ನು ತೆರೆದಿಟ್ಟಿದ್ದಾರೆ. “ನಾವು ಈ ಸಿನಿಮಾದಲ್ಲಿ ಪ್ರತಿಯೊಂದನ್ನು ಕಾನೂನಿನ ಚೌಕಟ್ಟಿನಲ್ಲೇ ಮಾಡಿದ್ದೇವೆ. ಆದರೆ ಮುಂಬೈ ಮೂಲದ ಅಜಯ್ ಪಾಲ್ ಮತ್ತು ಸಂಜಯ್ ಪಾಲ್ ಮತ್ತಿತರರಿಂದ ಸಿನಿಮಾಕ್ಕೆ ತೊಂದರೆಯಾಗುತ್ತಿದೆ. ಆರಂಭದಲ್ಲಿ ಮಾಡಿಕೊಂಡ ಒಪ್ಪಂದ ಪ್ರಕಾರ ಎಲ್ಲ ಹಣವನ್ನೂ ಈಗಾಗಲೇ ಪಾವತಿಸಲಾಗಿದೆ.
ಆದರೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿರುವುದರಿಂದ ಅದನ್ನು ನಾವು ಕೊಡಲು ಮುಂದಾಗಿರಲಿಲ್ಲ. ಈ ಬಗ್ಗೆ ಹೆಚ್ಚಿಗೆ ಹಣವನ್ನು ಕೊಡಬೇಕು ಎಂದು ಬ್ಲ್ಯಾಕ್ ಮೇಲ್ ಮಾಡುವಂತೆ, ಮುಂಬೈನಿಂದ ಅವರ ಹೆಸರಿನಲ್ಲಿ ಬೇರೆ ಬೇರೆ ಪೋನ್ ಕರೆಗಳು ಬರುತ್ತಿವೆ. ಇದಕ್ಕೆ ನಾವು ಕೂಡ ಕಾನೂನಿನ ಚೌಕಟ್ಟಿನಲ್ಲೇ ಉತ್ತರ ಕೊಡುತ್ತೇವೆ. ಈಗಾಗಲೇ ಈ ಸಂಬಂಧ ನಮ್ಮ ವಕೀಲರ ಮೂಲಕ ಮುಂಬೈ ಪೊಲೀಸ್ ಆಯುಕ್ತರಿಗೆ ದೂರನ್ನು ನೀಡಿದ್ದೇವೆ.
ವಾಸ್ತವ ಅಂಶಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಈಗಾಗಲೇ ಸಂಬಂಧಿಸಿದವರಿಗೆ ಕೊಟ್ಟಿದ್ದೇವೆ. ಆದಷ್ಟು ಬೇಗ ಟೀಸರ್ ಯು-ಟ್ಯೂಬ್‌ನಲ್ಲಿ ಮತ್ತೆ ಬರುತ್ತದೆ. ಇದಾದ ನಂತರ ಕಾನೂನು ಹೋರಾಟವನ್ನು ಮುಂದುವರೆಸಲಿದ್ದೇವೆ’ ಎಂದರು. ಈ ಹಿಂದೆ ಕೂಡ “ಕೋಟಿಗೊಬ್ಬ-3’ಚಿತ್ರದ ಚಿತ್ರೀಕರಣಕ್ಕಾಗಿ ಪೋಲೆಂಡ್ ನಲ್ಲಿ ಚಿತ್ರೀಕರಣಕ್ಕೆ ಹೋದ ಸಮಯದಲ್ಲೂ ಚಿತ್ರತಂಡಕ್ಕೆ ದೊಡ್ಡ ಸಮಸ್ಯೆ ಎದುರಾಗಿತ್ತು.
ಚಿತ್ರತಂಡ 50 ಲಕ್ಷ ಹಣಕೊಡಬೇಕು ಎಂದು ವೈಬ್ರೆಂಟ್ ಲಿಮಿಟೆಡ್ ಕಂಪೆನಿಯ ಮಾಲೀಕ ಅಜಯ್ ಪಾಲ್ ಮತ್ತು ಸಂಜಯ್ ಪಾಲ್ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪದ ಚಿತ್ರತಂಡ ಪೋಲೆಂಡ್‌ನಿಂದ ವಾಪಾಸ್ ಆಗಿತ್ತು. ಆದರೆ ಒಬ್ಬ ಅಕೌಂಟೆಂಟ್ ಅನ್ನು ಅಜಯ್ ಪಾಲ್ ಬಳಿ ಒತ್ತೆ ಇಟ್ಟುಕೊಂಡಿದ್ದರು. ಆ ನಂತರ ಕೇಂದ್ರ ಸಚಿವರ ನೆರವಿಂದ ಒತ್ತೆ ಇಟ್ಟಿದ್ದ ಅಕೌಂಟೆಂಟ್ ಅನ್ನು ವಾಪಾಸ್ ಭಾರತಕ್ಕೆ ಕರೆಸಿಕೊಳ್ಳಲಾಗಿತ್ತು. ಬಾಕಿ ಹಣ ಕೊಡುವವರೆಗೂ ಪೋಲೆಂಡ್‌ನಲ್ಲಿ ಚಿತ್ರೀಕರಿಸಲಾದ ದೃಶ್ಯಗಳನ್ನು ನೀಡುವುದಿಲ್ಲ ಎಂದು ಅಜಯ್ ಪಾಲ್ ಎಚ್ಚರಿಕೆ ಕೂಡ ನೀಡಿದ್ದಾರೆ ಎಂದು ಚಿತ್ರತಂಡ ಆರೋಪಿಸಿತ್ತು.
ಇನ್ನು ಯು-ಟ್ಯೂಬ್‌ನಲ್ಲಿ “ಕೋಟಿಗೊಬ್ಬ-3′ ಟೀಸರ್ ಡಿಲೀಟ್ ಆಗಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸುದೀಪ್ ಸೋಮವಾರದಿಂದ ಮತ್ತೆ ಟೀಸರ್ ಯು-ಟ್ಯೂಬ್‌ನಲ್ಲಿ ಲಭ್ಯವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಒಟ್ಟಾರೆ “ಕೋಟಿಗೊಬ್ಬ-3′ ತೆರೆಗೆ ಬರಲು ತಯಾರಾಗುತ್ತಿರುವ ಹೊತ್ತಿನಲ್ಲೇ ಈಗ ಮತ್ತೆ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ಹೋಗುತ್ತದೆ ಎಂಬುದು ಕಾದು ನೋಡಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.