“ಅಸಂಸದೀಯ ಮಾತು ಮತ್ತು ಆತ್ಮಸಾಕ್ಷಿ’ ಜನತೆ ಗಮನಿಸುತ್ತಿದ್ದಾರೆ
Team Udayavani, Mar 12, 2020, 6:40 AM IST
ವಿಧಾನಸಭೆಯ ಅಧ್ಯಕ್ಷ ಸ್ಥಾನದಲ್ಲಿ ಬಹಳಷ್ಟು ವರ್ಷಗಳ ಕಾಲ ಕುಳಿತು ಶಾಸಕರಿಗೆ ಮೌಲ್ಯ, ಸಿದ್ಧಾಂತ, ಆತ್ಮ ಸಾಕ್ಷಿ ಮೊದಲಾದವುಗಳ ಬಗ್ಗೆ ಪಾಠ ಹೇಳುತ್ತಿದ್ದವರೇ ಹೀಗೆ ಮಾಡಿದ್ದು ನಿಜವೆಂದಾದಲ್ಲಿ ಅವರನ್ನು ರಾಜ್ಯದ ಜನತೆ ಬೇರೆಯದ್ದೇ ರೀತಿಯಲ್ಲಿ ನೋಡುತ್ತಾರೆ.
ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಇಬ್ಬರು ನಾಯಕರ ನಡುವೆ ನಡೆದ ವಾಗ್ವಾದ ಇಡೀ ಅಧಿವೇಶನದ ಮೇಲೆ ಕಪ್ಪುಚುಕ್ಕೆ ಇಟ್ಟಂತಾಗಿದೆ. ಸಂವಿಧಾನದ ಕುರಿತಾಗಿ ಅತ್ಯಂತ ಗುಣಾತ್ಮಕ ಮತ್ತು ಗೌರವಯುತವಾಗಿ ನಡೆಯ ಬೇಕಾದ ಚರ್ಚೆ ವೈಯಕ್ತಿಕ ಪ್ರತಿಷ್ಠೆ ಮತ್ತು ರಾಜಕೀಯ ಮೇಲಾಟಕ್ಕೆ ವೇದಿಕೆಯಾದದ್ದು ಬಹುದೊಡ್ಡ ದುರಂತ. ಹಿಂದಿನ ಅಧಿವೇಶನದಲ್ಲಿ ನಡೆದ ನಿರ್ಧಾರಗಳ ಬಗ್ಗೆ ಈ ಅಧಿವೇಶನದಲ್ಲಿ ಪ್ರಸ್ತಾಪವಾದದ್ದು ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣವಾಯಿತು.
ಈ ಚರ್ಚೆ ಅಥವಾ ಪ್ರಸ್ತಾಪ ಅಲ್ಲಿಗೆ ಮುಗಿಯುತ್ತಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಚರ್ಚೆ ಸಂಸದೀಯ ಪದ ಬಳಕೆಯನ್ನು ಮೀರಿ ಹೊರಹೋಗಿರುವುದು ದುರಂತ. ಹಿಂದಿನ ಸರಕಾರದ ಅವಧಿಯಲ್ಲಿ, ಆಗ ಸಭಾಧ್ಯಕ್ಷರಾಗಿದ್ದ ರಮೇಶ್‌ಕುಮಾರ್ ಅವರು ಮಹಿಳೆಯರಿಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪದ ಬಳಕೆ ಮಾಡಿ ನಂತರ ವಿಷಾದ ವ್ಯಕ್ತಪಡಿಸಿದ ಘಟನೆ ನಡೆದಿತ್ತು. ನಂತರ ತುಂಬ ಎಚ್ಚರಿಕೆಯಿಂದ ಹಲವಾರು ಬಾರಿ ಸಂಸದೀಯ ಮೌಲ್ಯಗಳು, ನಡೆನುಡಿಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು.
ಆದರೆ ಸಂಸದೀಯ ಕಾನೂನಿನ ಬಗ್ಗೆ ಬಹಳಷ್ಟು ಅರಿವಿರುವ ಈ ಮಾಜಿ ಸಭಾಧ್ಯಕ್ಷರು ಈಗ ತೋರಿದ ವರ್ತನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇದು ಸಹಜವೂ ಕೂಡಾ. ಅವರು ಮತ್ತು ಸಚಿವ ಡಾ. ಸುಧಾಕರ್ ನಡುವೆ ಬಳಕೆಯಾದ ಏಕವಚನದ ಮಾತುಗಳು ಒಂದೆಡೆ ಯಾದರೆ, ಇನ್ನೊಂದೆಡೆ ಅವಾಚ್ಯ ಪದಬಳಕೆಯಾದದ್ದು (ಬಳಕೆಯಾಗಿದ್ದಲ್ಲಿ) ಅಧಿವೇಶನದ ಘನತೆಗೆ ತೀವ್ರವಾದ ಧಕ್ಕೆಯುಂಟುಮಾಡುತ್ತದೆ.
ಮಾಜಿ ಸಭಾಧ್ಯಕ್ಷ ರಮೇಶ್‌ಕುಮಾರ್ ಅವರು ಅವಾಚ್ಯ ಪದಬಳಕೆ ಮಾಡಿದ್ದು ನಿಜವೆಂದಾದಲ್ಲಿ ಅವರು ಆತ್ಮಸಾಕ್ಷಿಗನುಗುಣವಾಗಿ ತಮ್ಮ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುವುದು ಅನಿವಾರ್ಯವಾಗಬಹುದು. ಒಬ್ಬರು ಶಾಸಕರು ಅಂಥ ಪದ ಬಳಸಿದ್ದರೆ ಒಂದು ಹಂತದಲ್ಲಿ ಕ್ಷಮಿಸಿಬಿಡಬಹುದು. ಆದರೆ ವಿಧಾನಸಭೆಯ ಅಧ್ಯಕ್ಷ ಸ್ಥಾನದಲ್ಲಿ ಬಹಳಷ್ಟು ವರ್ಷಗಳ ಕಾಲ ಕುಳಿತು ಶಾಸಕರಿಗೆ ಮೌಲ್ಯ, ಸಿದ್ಧಾಂತ, ಆತ್ಮ ಸಾಕ್ಷಿ ಮೊದಲಾದವುಗಳ ಬಗ್ಗೆ ಪಾಠ ಹೇಳುತ್ತಿದ್ದವರೇ ಹೀಗೆ ಮಾಡಿದ್ದು ನಿಜವೆಂದಾದಲ್ಲಿ ಅವರನ್ನು ರಾಜ್ಯದ ಜನತೆ ಬೇರೆಯದ್ದೇ ರೀತಿಯಲ್ಲಿ ನೋಡುತ್ತಾರೆ.
ಈ ವಿಚಾರದಲ್ಲಿ ಡಾ. ಸುಧಾಕರ್ ಅವರ ವರ್ತನೆ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಸಭಾಧ್ಯಕ್ಷರು ತೆಗೆದುಕೊಂಡ ತೀರ್ಮಾನದ ಬಗ್ಗೆ ಮಾತನಾಡುವಾಗ ಸ್ವಲ್ಪ ಸಂಯಮದಿಂದ ವರ್ತಿಸಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಸಭಾಧ್ಯಕ್ಷ ಪೀಠದ ತೀರ್ಮಾನದ ಬಗ್ಗೆ ಈಗ ಚರ್ಚಿಸುವುದು ಸರಿಯೋ, ತಪ್ಪೋ ಎಂಬುದನ್ನು ನಿರ್ಧರಿಸುವುದು ಸಭಾಧ್ಯಕ್ಷರ ಪೀಠಕ್ಕೆ ಸೇರಿದ ಸಂಗತಿ. ದುರಂತವೆಂದರೆ ಸುಧಾಕರ್ ಮತ್ತು ರಮೇಶ್ ಕುಮಾರ್ ನಡುವೆ ವಿನಿಮಯವಾದ ಏಕವಚನ ಪದಪ್ರಯೋಗ, ಪ್ರತಿಷ್ಠೆಗಾಗಿ ವಿನಿಮಯವಾದ ವೈಯಕ್ತಿಕ ವಿಚಾರಗಳು ಸಾರ್ವಜನಿಕ ಚರ್ಚೆಯ ವಿಷಯವಾದವು.
ಅಸಂಸದೀಯ ಅಥವಾ ಅವಾಚ್ಯ ಪದಬಳಕೆ ರಮೇಶ್ ಕುಮಾರ್ ಮಾಡಿಲ್ಲ ಎಂದು ಕಾಂಗ್ರೆಸ್‌ನ ಇತರ ನಾಯಕರು ವಾದಿಸುತ್ತಿದ್ದಾರೆ. ಅಧಿವೇಶನದ ದಾಖಲೆಯಲ್ಲಿ ಸೇರಿಲ್ಲದಿರಬಹುದು. ಆದರೆ ರಮೇಶ್ ಕುಮಾರ್ ಸಭಾಧ್ಯಕ್ಷರಾಗಿ ಪೀಠಕ್ಕೆ ಘನತೆ ತಂದವರು. ಆತ್ಮಸಾಕ್ಷಿಗನುಗುಣವಾಗಿ ನಡೆಯಬೇಕೆಂದು ಪದೇ ಪದೇ ಹೇಳುತ್ತಿದ್ದವರು. ಅವಾಚ್ಯ ಪದಬಳಕೆಯಾಗಿದೆಯೋ ಇಲ್ಲವೋ ಎಂಬುದು ಅವರ ಆತ್ಮಸಾಕ್ಷಿಗೆ ತಿಳಿದಿದೆ. ರಾಜಕೀಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅವರು ಸ್ವತಂತ್ರರು. ಭಾವನಾತ್ಮಕ ವಿಚಾರಗಳು ಇಲ್ಲಿ ಯಾವುದೇ ಪಾತ್ರ ವಹಿಸುವುದಿಲ್ಲ.
ಪಕ್ಷದ ಹಿರಿಯ ನಾಯಕರು ಒತ್ತಡ ಹೇರಿದ್ದರು ಆದ್ದರಿಂದ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಾಗಿ ಹೇಳುವ ರಾಜಕಾರಣಿಗಳು ಬಹಳಷ್ಟು ಮಂದಿ ಇದ್ದಾರೆ. ಆದರೆ ಅವರ ಸಾಲಿಗೆ ಮೌಲ್ಯಾಧಾರಿತ ರಾಜಕೀಯ, ಸಾಕ್ಷಿಪ್ರಜ್ಞೆಯ, ಸಂಸದೀಯ ನಡವಳಿಕೆಗಳನ್ನು ಆಗಾಗ ನೆನಪಿಸುವ ವ್ಯಕ್ತಿಗಳು ಸೇರಬಾರದು. ಅವರು ಮುಂದಿನ ತಲೆಮಾರಿಗೆ ಮಾದರಿಯಾಗಿರಬೇಕು.
ನಾಡು ಕಂಡ ಅಪ್ರತಿಮ ಸಂಸದೀಯಪಟು ಹಾಗೂ ಸಂವಿಧಾನದ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವ ರಮೇಶ್ ಕುಮಾರ್ ಅವರು ಈ ಘಟನೆ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಬಗ್ಗೆ ಜನತಾ ಜನಾರ್ದನ ನಿರೀಕ್ಷೆಯಲ್ಲಿ ಇದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.