ಇಂದಜೆ…ಎನ್ನುವ ಮಧುರ ದನಿ


Team Udayavani, Mar 13, 2020, 5:30 AM IST

Panja-bhaskar

ಕರಾವಳಿಯ ದೇವಸ್ಥಾನಗಳ ಶುಭವಸರಗಳಲ್ಲಿ ವೇದಿಕೆಯ ಮೇಲೆ ವಿದ್ವಾನ್‌ ಪಂಜ ಭಾಸ್ಕರ ಭಟ್‌ ಅವರ ವಾಗ್ಝರಿಯನ್ನು ಕೇಳಿ ತಲೆದೂಗದವರಿಲ್ಲ. ಮೂರ್ತಿ-ಸ್ಥಾವರಗಳ ಕಲ್ಪನೆ, ತಂತ್ರ-ಮಂತ್ರಾದಿಗಳ ಅನುಷ್ಠಾನ, ಕರ್ಮಭಾಗ, ಆಚರಣಾತ್ಮಕ ವಿಧಿಗಳು- ಇತ್ಯಾದಿಗಳ ಅರ್ಥಸೂಕ್ಷ್ಮಗಳನ್ನು ಸಾಧಾರಣ ಆಸ್ತಿಕವರ್ಗಕ್ಕೆ ತಲುಪುವಂತೆ ಅನಾವರಣಗೊಳಿಸಬಲ್ಲವರು ಅವರು. ಆಗಮ-ಜ್ಯೋತಿಷ ಕ್ಷೇತ್ರದಲ್ಲಿ ನಿರಂತರ ಅಧ್ಯಯನ-ಸಂಶೋಧನ-ಪ್ರವಚನ-ಗಳ ಮೂಲಕ ಸಾಧನಾಶೀಲರಾಗಿ, ಕರ್ನಾಟಕದ ಧಾರ್ಮಿಕ ಪರಿಷತ್‌ನ ಸದಸ್ಯರಾಗಿಯೂ ಸಕ್ರಿಯರಾಗಿದ್ದವರು. ಉಡುಪಿ-ಮಂಗಳೂರು ಹೆದ್ದಾರಿಯಲ್ಲಿರುವ ಮುಕ್ಕ ಚೆಕ್‌ಪೋಸ್ಟ್‌ನಲ್ಲಿ ಇಳಿದು ಪಂಜ ಭಾಸ್ಕರ ಭಟ್ಟರ ನಿವಾಸ “ವಿಜಯ-ಪ್ರೀತಿ’ಗೆ ಹೋದರೆ ನಮ್ಮನ್ನು ಸ್ವಾಗತಿಸಿದವರು ಗೃಹಿಣಿ ಚಂದ್ರಿಕಾ ಭಟ್‌ ಅವರು. “ಈಗಷ್ಟೇ ಅನುಷ್ಠಾನ ಮುಗಿಸಿ, ಎಲ್ಲಿಗೋ ಹೊರಡುತ್ತಿದ್ದಾರೆ’ ಎಂದರು. ಅಷ್ಟರಲ್ಲಿ ಭಾಸ್ಕರ ಭಟ್ಟರು ನಮ್ಮ ಕುಶಲ ವಿಚಾರಿಸಿ, “ನೀನೇ ಮಾತನಾಡು’ ಎಂದು ಪತ್ನಿಗೆ ಸೂಚಿಸಿದರು. ವೈದಿಕ ಪರಂಪರೆ, ಗೋಪಾಲನ-ಕೃಷಿ ಸಂಸ್ಕೃತಿಯ ಮನೆಯ ಯಜಮಾನಿಯಾಗಿ ಚಂದ್ರಿಕಾ ಅವರ ಮಾತುಗಳನ್ನು ಕೇಳುತ್ತ ಸಮಯ ಹೋದದ್ದೇ ತಿಳಿಯಲಿಲ್ಲ…

ಎಲ್ಲರ ಬಾಲ್ಯದಂತೆ ನನ್ನ ಬಾಲ್ಯವೂ ಬಹಳ ಕಷ್ಟದ ಪರಿಸ್ಥಿತಿಯಲ್ಲಿಯೇ ಕಳೆಯಿತು. ಆದರೆ, ವಾತ್ಸಲ್ಯಕ್ಕೆ ಬಡತನವಿರಲಿಲ್ಲ. ಹಾಗಾಗಿ, ಅಪ್ಪ ನನ್ನನ್ನು ಕಾಲೇಜುವರೆಗೆ ಓದಿಸಿದರು. ಇಲ್ಲೇ ಪಕ್ಕದ ಊರಾದ ಪಡುಬಿದ್ರಿಯಲ್ಲಿ ನಾನು ಹುಟ್ಟಿ ಬೆಳೆದವಳು. ಹಾಗಾಗಿ, ಮದುವೆಯಾದಾಗ ತವರು ಮನೆಯಿಂದ ಬಹಳ ದೂರ ಬರುವ ಪ್ರಮೇಯವೇನೂ ಬರಲಿಲ್ಲ.

ನಾನು ಶಾಲೆಯ ದಿನಗಳಲ್ಲಿ ಕ್ರೀಡಾಪಟು ಎಂದರೆ ನಂಬುತ್ತೀರಾ! ಒಂಬತ್ತನೆಯ ತರಗತಿಯಲ್ಲಿ ಆಲ್‌ರೌಂಡರ್‌ ಎನಿಸಿಕೊಂಡಿದ್ದೆ. ರನ್ನಿಂಗ್‌, ಕೊಕ್ಕೊ, ತ್ರೋಬಾಲ್‌… ಎಲ್ಲ ಆಟಗಳೂ ನನಗೆ ಇಷ್ಟ. ಆಟದ ಆ ದಿನಗಳು ಎಷ್ಟು ಮುಕ್ತವಾಗಿದ್ದವು. ಆದರೆ, ಕಾಲೇಜಿಗೆ ಹೋದಾಗ ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಅವಕಾಶಗಳು ಬಂದರೂ, ದೂರದೂರಿಗೆ ಪ್ರಯಾಣಿಸುವುದಕ್ಕೆ ಆಗ ಅಷ್ಟೊಂದು ಪ್ರೋತ್ಸಾಹ ಇರಲಿಲ್ಲ. ಆಟವಾಡುವುದರಲ್ಲಿ ಹುಷಾರಿದ್ದರೂ ನಾನು ಬಹಳ ಸಪೂರ ಇದ್ದುದರಿಂದ ಪಿಟಿ ಟೀಚರ್‌ ಕೂಡ ನನ್ನನ್ನು ಹೆಚ್ಚು ಒತ್ತಾಯಿಸಲಿಲ್ಲ. ಬಿಎ ತನಕ ಓದಿದೆ. “ಮಗಳು ಓದುವುದರಲ್ಲಿಯೂ ಹುಶಾರಿದ್ದಾಳೆ. ಮನೆ ಮತ್ತು ಕೃಷಿಯ ಕೆಲಸಗಳ‌ಲ್ಲಿಯೂ ಚುರುಕಿದ್ದಾಳೆ. ಶಿಕ್ಷಣ ಮುಂದುವರೆಸುವುದಾ, ಅಥವಾ ಮದುವೆ ಮಾಡುವುದಾ’ ಎಂಬ ಜಿಜ್ಞಾಸೆ ಅಪ್ಪನಿಗಾಯಿತು. ಆಗ ಇವರ ಬಳಿ ಜಾತಕ ಕೊಟ್ಟು, ಮುಂದಿನ ಭವಿಷ್ಯ ಹೇಗಿದೆ ಎಂದು ನೋಡುವಂತೆ ಹೇಳಿದರು. ಇವರು ಜಾತಕ ನೋಡಿ, ಅದರಲ್ಲಿ ಕಂಡು ಬಂದ ವಿಚಾರಗಳನ್ನು ಅಪ್ಪನಿಗೆ ತಿಳಿಸಿದ್ದರು.

ಅದಾಗಿ ಕೆಲ ಸಮಯದಲ್ಲಿ ಮತ್ತೆ ಅಪ್ಪನನ್ನು ಭೇಟಿಯಾದ ಇವರು, “ಅದೇ ಜಾತಕವನ್ನು ಒಮ್ಮೆ ಕೊಡಬಹುದಾ?’ ಎಂದು ಕೇಳಿ ಮತ್ತೆ ಪಡೆದರು. ಹಾಗೆ 1988ರಲ್ಲಿ ನಮ್ಮಿಬ್ಬರ ಮದುವೆಯಾಯಿತು. ಪಕ್ಷಿಕೆರೆಯ ಬಳಿ ಇರುವ ಪಂಜದಲ್ಲಿ ಕೂಡುಕುಟುಂಬದ ಸೊಸೆಯಾಗಿ ನಾನು ಹೋದಾಗ ನನಗೆ 19 ವರ್ಷ. ಅತ್ತೆ ಜಾಜಿಯವರು, ಮಾವ ಗಣಪತಿ ಭಟ್‌ ಅವರ ಮಾರ್ಗದರ್ಶನದಲ್ಲಿ ನನಗೆ ವೈದಿಕ ಮನೆಯ ಆಚಾರ-ವಿಚಾರಗಳನ್ನು ಕಲಿಯುವುದು ಸ್ವಲ್ಪವೂ ಕಷ್ಟವಾಗಲಿಲ್ಲ. ಅತ್ತೆಯವರಂತೂ ಅಡುಗೆ ಮನೆಯ ಉಸ್ತುವಾರಿಯನ್ನೇ ನನಗೆ ವಹಿಸಿಬಿಟ್ಟಿದ್ದರು. ಅಪ್ಪ ಕೃಷ್ಣರಾಜ ಆಚಾರ್ಯ ಕೂಡ ಪೌರೋಹಿತ್ಯ ಮಾಡುತ್ತಿದ್ದುದರಿಂದ ನನಗೆ ಅವೆಲ್ಲ ಹೊಸತಾಗಿರಲಿಲ್ಲ. ಇತ್ತೀಚೆಗೆ ಕೆಲ ವರ್ಷಗಳ ಹಿಂದೆ ಮುಕ್ಕದಲ್ಲಿ ನಾವು ಮನೆ ಕಟ್ಟಿಕೊಂಡೆವು.

ಮಾವನವರಂತೂ ಕೃಷಿಯನ್ನು ತುಂಬ ಇಷ್ಟಪಡುತ್ತಿದ್ದವರು. ಭತ್ತದ ಕೃಷಿಯ ಎಲ್ಲ ಕೆಲಸವನ್ನು ಅವರು ಪ್ರೀತಿಯಿಂದ ಮಾಡುತ್ತಿದ್ದವರು. ತವರುಮನೆಯಲ್ಲಿ ಭತ್ತದ ಕೊಯ್ಲು, ನೇಜಿ ನಾಟಿ ಕೆಲಸಗಳನ್ನು ಮಾಡಿದ ಅನುಭವ ನನಗಿತ್ತು. ಆದರೆ, ಅತ್ತೆಮಾವ ನನಗೆ ಆ ಕೆಲಸಗಳನ್ನು ಮಾಡಲು ಬಿಡಲಿಲ್ಲ. ಆದ್ದರಿಂದ ಅಡುಗೆ ಕೆಲಸವನ್ನೇ ಮುತುವರ್ಜಿಯಿಂದ ಮಾಡುತ್ತಿದ್ದೆ. ಇವರಿಗೆ ಮನೆ ಊಟ ಎಂದರೆ ತುಂಬ ಇಷ್ಟ.

ನಾನು ಮನೆಯಲ್ಲಿ ನಂದಿನಿ ಮತ್ತು ಗೌರಿ ಎಂಬೆರಡು ದನ ಸಾಕಿದ್ದೇನೆ. ಅವುಗಳ ಆರೈಕೆಯೇ ಸಮಾಧಾನ ಕೊಡುತ್ತದೆ. ಹಿಂದಿನ ಕಾಲದಲ್ಲಿ ಕಾಡಿನಲ್ಲಿ ಮೇಯುತ್ತ ಬಹಳ ಆರಾಮವಾಗಿದ್ದ ದನಗಳ ಮೂತ್ರ ಮತ್ತು ಹಾಲನ್ನು ವೈದಿಕ ಕೆಲಸಗಳಿಗೆ ಬಳಸುತ್ತಿದ್ದರಂತೆ. ಕಾರ್ಯಕ್ರಮಗಳು ನಿರಂತರವಾಗಿದ್ದಾಗ ಇವರು ಮಾತಿಗೆ ಸಿಗುವುದೇ ಅಪರೂಪ. ಆದರೆ, ಸಾಮಾನ್ಯವಾಗಿ ಬ್ರಹ್ಮಕಲಶಗಳ ಸಂದರ್ಭದಲ್ಲಿ ಇವರು ದ್ರವ್ಯಗಳ ಪರಿಶುದ್ಧತೆಯ ಬಗ್ಗೆ ಹೇಳುವುದನ್ನು ಕೇಳಿಸಿಕೊಂಡಿದ್ದೇನೆ. ದೇವಸ್ಥಾನದ ಪ್ರವೇಶ ದ್ವಾರದ ದಕ್ಷಿಣ ದಿಕ್ಕಿನಲ್ಲಿ ನಿಕ್ಷೇಪ ಮಾಡುವ ಗರ್ಭಪಾತ್ರದಲ್ಲಿ ಇರಿಸುವ ವಸ್ತುಗಳನ್ನು ಊರಿನ ಜನರು ಭಕ್ತಿಯಿಂದ ಸಂಗ್ರಹಿಸುವ ಕ್ರಮ, ಬ್ರಹ್ಮಕಲಶದ ಸಂದರ್ಭದಲ್ಲಿ ಊರಿನವರ ಭಾವನಾತ್ಮಕ ಸಹಭಾಗಿತ್ವ ಮುಂತಾದ ವಿಚಾರಗಳು ಮಾತಿಗೆ ಬರುತ್ತವೆ. ನಮ್ಮ ಹಿರಿಯರು ರೂಪಿಸಿದ ಆಚರಣೆಗಳೆಲ್ಲ ಭಾವನಾಪ್ರಧಾನವಾದುದು. ಆದ್ದರಿಂದಲೇ ಜಪಕ್ಕೆ ಹೆಚ್ಚು ಮಹತ್ವ. ಜಪ, ಧ್ಯಾನದ ಬಲವಿದ್ದಾಗ ಆಚರಣೆಗಳಿಗೆ ಮಹತ್ವ ದೊರೆಯುವುದು. ಆದರೆ ಇತ್ತೀಚೆಗೆ ವ್ಯವಹಾರ ಪ್ರಧಾನವಾಗಿ, ಎಷ್ಟೋ ಉತ್ತಮ ವಿಚಾರಗಳು ನಮ್ಮ ಹೊಸ ತಲೆಮಾರಿಗೆ ತಿಳಿಯದೇ ಹೋಗುತ್ತಿವೆ ಎನ್ನುತ್ತಾರೆ.

ಇವರು ವೈದಿಕರಾಗಿ ಎಲ್ಲ ಅನುಷ್ಠಾನಗಳನ್ನೂ ಕಟ್ಟುನಿಟ್ಟಾಗಿ ಮಾಡುವವರು. ಹೊರಗಿನ ಆಹಾರವನ್ನು ತಿನ್ನುವವರಲ್ಲ. ಮನೆಯಲ್ಲಿ ಎಷ್ಟು ವೈವಿಧ್ಯ ಸಾಧ್ಯವೋ, ಅಷ್ಟು ವೈವಿಧ್ಯಮಯವಾಗಿ ಅಡುಗೆ ಮಾಡಲು ಪ್ರಯತ್ನಿಸುತ್ತೇನೆ. ಅವರು ಇಷ್ಟಪಟ್ಟು ತಿನ್ನುತ್ತಾರೆ ಎಂದ ಮೇಲೆ ನನಗೂ ಅವುಗಳನ್ನು ತಯಾರಿಸುವುದು ಮತ್ತಷ್ಟು ಇಷ್ಟವೇ. ಮಕ್ಕಳು ವಿಜಯಲಕ್ಷ್ಮಿ ಮತ್ತು ಮಗ ಶ್ರೀವತ್ಸ ಕೂಡ ನನ್ನ ಅಡುಗೆಯನ್ನು ಮೆಚ್ಚಿಕೊಳ್ಳುತ್ತಾರೆ. ಮಗಳಿಗೆ ಮದುವೆಯಾಗಿದೆ. ಅಳಿಯ ನೇಪಾಲದ ಪಶುಪತಿನಾಥ ದೇವಸ್ಥಾನದಲ್ಲಿ ಅರ್ಚಕನಾಗಿದ್ದಾನೆ. ನಾವೂ ಹಲವಾರು ಬಾರಿ ನೇಪಾಲಕ್ಕೆ ಹೋಗಿ ಅಲ್ಲಿನ ವೈಭವಯುತ ದೇವಸ್ಥಾನಗಳನ್ನು, ಬೌದ್ಧರ ವಿಹಾರಗಳನ್ನು ನೋಡಿದ್ದೇವೆ. ಅದರ ಹೊರತಾಗಿ ದೂರದ ಪ್ರಯಾಣಗಳು ಬಹಳ ಕಡಿಮೆ.

ಪ್ರತೀ ಕ್ಷಣವೂ “ಇಂದಜೆ… ಇಂದಜೆ…’ ಎಂದು ಕರೆಯುತ್ತ ಮನೆಯಲ್ಲಿದ್ದರೆ ಅದುವೇ ನನಗೆ ಇಷ್ಟ. ನಾನೆಲ್ಲಾದರೂ ಪ್ರಯಾಣ ಹೊರಡುವುದಾದರೆ ಇವರೇನೂ ಅಭ್ಯಂತರ ಮಾಡುವುದಿಲ್ಲ. ಆದರೆ, ನನಗೆ ಇವರ ಜೊತೆಗೇ ಹೋಗಬೇಕು ಎನ್ನುವ ಆಸೆ. ಹಾಗಾಗಿ ಪ್ರತೀ ವರ್ಷ ಎಲ್ಲಾದರೂ ಪ್ರವಾಸ ಹೋಗೋಣ ಎಂದು ಒತ್ತಾಯಿಸುತ್ತೇನೆ. ಅವರಂತೂ ಯಾವ ವಿಷಯಕ್ಕೂ ಆಕ್ಷೇಪಿಸುವವರಲ್ಲ. ಆದರೆ, ನೇರಾನೇರ ಮಾತನಾಡುತ್ತಾರೆ. ಫ‌ಕ್ಕನೇ ಸಿಟ್ಟು ಬಂದುಬಿಡುತ್ತದೆ.

ಮಕ್ಕಳೆಲ್ಲ ದೊಡ್ಡವರಾದ ಮೇಲೆ, ಈಗಲಾದರೂ ಒಟ್ಟಾಗಿ ಪ್ರವಾಸ ಹೋಗೋಣ ಎಂದು ನಾನು ಒತ್ತಾಯಿಸುತ್ತಿದ್ದೆ. ಹಾಗೆ ಇವರು ಕಾಶಿ, ಬದರಿ, ತಿರುಪತಿ ಮುಂತಾದೆಡೆಗಳಿಗೆ ಕರೆದೊಯ್ದಿದ್ದಾರೆ.

ನಮ್ಮ ಮನೆಯ ಹೆಸರು “ವಿಜಯಪ್ರೀತಿ’. ಇವರು ಚಿಕ್ಕಂದಿನಲ್ಲಿ ಕೇರಳದ “ಅನಂತಶಯನ’ದಲ್ಲಿ ವೇದ, ಆಗಮ ಮುಂತಾಗಿ ಹೆಚ್ಚಿನ ಶಿಕ್ಷಣ ಪಡೆಯುತ್ತಿದ್ದಾಗ, ಬಡತನದಿಂದಾಗಿ ಅರ್ಧದಲ್ಲಿಯೇ ಕಲಿಕೆ ನಿಲ್ಲಿಸಬೇಕಾಗಿ ಬಂತು. ಆಗ ಪಂಜದವರೇ ಆದ ರತ್ನಾ ಮತ್ತು ಅವರ ಪತಿ ಬಾಬುಶೆಟ್ಟಿ ಅವರು ಆಪದಾºಂಧವರಂತೆ ನೆರವಾದವರು. ಇವರ ಶಿಕ್ಷಣದ ಜವಾಬ್ದಾರಿಯನ್ನೆಲ್ಲ ಹೊತ್ತುಕೊಂಡಿದ್ದರು. ಅವರ ಮಗಳ ಹೆಸರು ವಿಜಯಲಕ್ಷ್ಮಿ. ಅದೇ ಹೆಸರನ್ನು ನಮ್ಮ ಮಗಳಿಗೂ ಇಟ್ಟಿದ್ದೇವೆ. ಅವರ ಇನ್ನೊಬ್ಬ ಮಗಳ‌ ಹೆಸರು ಪ್ರೀತಿ. ಹಾಗಾಗಿ ವಿಜಯಪ್ರೀತಿ ಎಂಬ ಹೆಸರನ್ನು ನಮ್ಮ ಮನೆಗೆ ಇಟ್ಟಿದ್ದೇವೆ.

ಶಿಬರೂರು ಹಯಗ್ರೀವ ತಂತ್ರಿಗಳ ಮನೆಯಲ್ಲಿ ಅಂತೇವಾಸಿಯಾಗಿ ಇವರು ವಿದ್ಯಾಭ್ಯಾಸ ಮುಂದುವರಿಸಿದರು. ಶಿಷ್ಯರೆಂದರೆ ಪಾಠಕ್ಕಾಗಿ ಬರುವವರು. ಅಂತೇವಾಸಿಯೆಂದರೆ ಗುರುಗಳ ಮನೆಯಲ್ಲಿಯೇ ಇದ್ದುಕೊಂಡು ಅಶನ, ವಸನ, ವಿದ್ಯೆಯನ್ನು ಪಡೆಯುವುದು. ಗುರುಗಳು ತಂತ್ರಸಮುಚ್ಛಯ ಗ್ರಂಥದ ಒಳತಿರುಳನ್ನು ಬಲ್ಲ ಪ್ರಕಾಂಡ ಪಂಡಿತರಾಗಿದ್ದರು. ಅವರ ಮಾರ್ಗದರ್ಶನದ ಮೇರೆಗೆ ಅನಂತಶಯನಕ್ಕೆ ಹೋಗಿ ಹೆಚ್ಚಿನ ವಿದ್ಯೆ ಕಲಿಯುವುದು ಸಾಧ್ಯವಾಯಿತು. ಆ ಮೂಲಕ ಕೇರಳದ ಅನೇಕ ಸಾಧಕ ತಂತ್ರಿಗಳನ್ನು ಭೇಟಿ ಮಾಡುವುದು, ಸ್ನೇಹ ಪಡೆಯುವುದು ಸಾಧ್ಯವಾಯಿತು ಎಂದು ಆಗಾಗ ಹೇಳುತ್ತಾರೆ. ದರಿದ್ರಾಣಾಂ ತಪೋಬಲಂ ಎಂಬುದು ಇವರ ಗುರುಗಳ ನುಡಿಯೂ ಹೌದು. ಮಾರ್ಗದರ್ಶನವೂ ಹೌದು. ಯಾವ ಸಂಪನ್ಮೂಲವೂ ಇಲ್ಲದಿದ್ದರೂ, ಜಪ ಮಾಡುವುದು, ಶುದ್ಧಾಹಾರ ಸೇವಿಸುವುದು ಮುಂತಾದುವುಗಳಲ್ಲಿ ಅವರು ರಾಜಿ ಮಾಡಿಕೊಳ್ಳುವುದಿಲ್ಲ. ಅಷ್ಟೆ„ಶ್ವರ್ಯಾದಿ ಸಿದ್ಧೀನಾಂ ಜಪಯೇವಃ ಹಿ ಕಾರಣಂ ಎಂದು ಗುರುಗಳು ಹೇಳಿದ ಮಾತನ್ನು ನನಗೆ ಆಗಾಗ ಹೇಳಿದ್ದಾರೆ.

ನಾವೆಲ್ಲ ಚಿಕ್ಕಂದಿನಲ್ಲಿ ಇದ್ದಾಗ ವೈದಿಕ ಕಾರ್ಯಕ್ರಮಗಳು ಈಗಿನಂತೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರಲಿಲ್ಲ. ಆದರೆ, ಇಂದು ಧಾರ್ಮಿಕ ಕಾರ್ಯಕ್ರಮಗಳು ವೈಭವದಿಂದ ನಡೆಯುತ್ತವೆ. ಜನರು ದೇವರತ್ತ ಮುಖ ಮಾಡುವುದು ಇವರಿಗೆ ಒಳಿತಿನ ವಿಷಯವೆಂದೇ ಕಾಣುತ್ತದೆ. ಆದರೆ, ಕೆಲವೊಮ್ಮೆ ಕೇವಲ ಆಚರಣೆಗೂ, ವೈಭವಕ್ಕೂ ಸೀಮಿತವಾದ ಭಕ್ತಿಯ ಬಗ್ಗೆ ಇವರು ಬೇಸರದ ಮಾತುಗಳನ್ನು ಹೇಳುತ್ತಾರೆ.
ಆಗಮ ಶಾಸ್ತ್ರದಲ್ಲಿ ಅವರ ವಿದ್ವತ್‌ನ ಬಗ್ಗೆ ಜನರಿಗೆ ಬಹಳ ಗೌರವವಿದೆ. ಹಿಂದೆಲ್ಲ ಆಗಮ, ಜ್ಯೋತಿಷವನ್ನು ಅಧ್ಯಯನ ಮಾಡುತ್ತಿದ್ದವರು, ಸಮಯ ಸಿಕ್ಕಾಗ ನಿರ್ದಿಷ್ಟ ದೇವಸ್ಥಾನಗಳಿಗೆ ತೆರಳಿ, ತಿಂಗಳುಗಟ್ಟಲೆ ಜಪ ಮಾಡುತ್ತ, ವಿದ್ಯೆಯನ್ನು ಅನ್ವಯ ಮಾಡುವುದಕ್ಕೆ ಬೇಕಾದ ಸಿದ್ಧಿಯನ್ನು ಪಡೆದುಕೊಳ್ಳುತ್ತಿದ್ದರಂತೆ. ಈಗಿನ ಕಲಿಕೆಯು ಮೇಲುಮೇಲಿನದ್ದಾಗಿದೆ ಎನ್ನುತ್ತಾರೆ.
ಬಿಡುವಿನ ದಿನಗಳಲ್ಲಿ ಇವರು ಕೆಲವು ವಿಚಾರಗಳನ್ನೆಲ್ಲ ಹಂಚಿಕೊಳ್ಳುವುದುಂಟು. ಅಂಥ ಮಾತುಗಳಲ್ಲಿ ಲಭ್ಯವಾದ ಜ್ಞಾನವನ್ನು ನಾನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತ ಇರುತ್ತೇನೆ.

ಪುಸ್ತಕಗಳ ಅಧ್ಯಯನ, ನಿರಂತರ ಓಡಾಟ, ಪಟ್ಟು ಬಿಡದೇ ಅನುಸರಿಸುವ ದೈನಂದಿನ ಅನುಷ್ಠಾನಗಳು ಅವರ ಸ್ವಭಾವವನ್ನೇ ಹೇಳುತ್ತವೆ. ಅವರು ಬಡತನದಲ್ಲಿಯೇ ವಿದ್ಯೆ ಕಲಿತವರು. ಹಾಗಾಗಿ ಕೃತಜ್ಞತಾಭಾವ ಎನ್ನುವುದು ಅವರ ಧ್ವನಿಯಲ್ಲಿ ಸದಾ ಅಡಗಿದೆ. ಅದೇ ವೇಳೆಗೆ ಕಲಿತ ವಿದ್ಯೆಯ ಬಗ್ಗೆ ಅವರಿಗೆ ಅಪಾರ ಗೌರವವಿದೆ. ಅವರೊಡನೆ ಬಾಳುವೆ ಮಾಡುತ್ತ ನನ್ನ ತಿಳಿವಳಿಕೆ ವಿಸ್ತರಿಸಿದೆ.
– ಪಂಜ ಚಂದ್ರಿಕಾ ಭಟ್‌

ಚಂದ್ರಿಕಾ ಭಾಸ್ಕರ ಭಟ್‌

ಫೊಟೊಗಳು : ವಿಪಿ, ಉಡುಪಿ

ಟಾಪ್ ನ್ಯೂಸ್

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.