![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
Team Udayavani, Mar 13, 2020, 4:04 PM IST
ಮೈಸೂರು: ಸರ್ಕಾರದ ಸಹಾಯ ಬೇಡದೆ, ಜನರ ಬೆಂಬಲ ಪಡೆದು ನಾಟಕಗಳನ್ನು ರೂಪಿಸಬೇಕು ಎಂದು ಚಲನಚಿತ್ರ ನಿರ್ದೇಶಕ ಬಿ. ಸುರೇಶ್ ಹೇಳಿದರು.
ಅಭಿಯಂತರರು ರಂಗ ತಂಡದ ವತಿಯಿಂದ ಕಲಾಮಂದಿರದ ಕಿರು ರಂಗ ಮಂದಿರ ವೇದಿಕೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಂಗ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರ ಬೆಂಬಲ ಮುಖ್ಯ: ರಂಗ ಚಳವಳಿಗಳು ಶಾಶ್ವತವಾಗಿ ಉಳಿಯಬೇಕಾದರೆ ಅವು, ಜನರ ಬೆಂಬಲದಿಂದ ರೂಪುಗೊಳ್ಳಬೇಕು. ಸರ್ಕಾರ ದಿಂದ ಹಣ ಮತ್ತು ಬೆಂಬಲ ಪಡೆದರೆ ಆಳುವವರನ್ನು ಪ್ರಶ್ನಿಸಲು ಸಾಧ್ಯವಿರುವುದಿಲ್ಲ ಎಂದರು.
ಟಿ.ವಿ.ವೀಕ್ಷಣೆಯಿಂದ ದೂರವಿರಬೇಕು: ಸುಳ್ಳನ್ನೇ ಸತ್ಯವನ್ನಾಗಿ ಬಿಂಬಿಸುವ ಕಾಲದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ನಾಟಕವನ್ನು ಪ್ರತಿಭಟನೆಯ ಅಸ್ತ್ರವಾಗಿ ಬಳಸುವ ತುರ್ತು ಅಗತ್ಯವಿದೆ. ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಜಾಲತಾಣಗಳು ಸುಳ್ಳನ್ನೇ ಸತ್ಯ ಎಂದು ಬಿಂಬಿಸಲು ಹೊರಟಿವೆ. ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕಾದರೆ ನಾವು ಟಿ.ವಿ.ವೀಕ್ಷಣೆಯಿಂದ ದೂರವಿರಬೇಕು ಎಂದು ಹೇಳಿದರು.
ಬಹುದೊಡ್ಡ ಜವಾಬ್ದಾರಿ ಇದೆ: ಇಂದು ರಂಗಭೂಮಿ ಕಟ್ಟಿ ಬೆಳೆಸುವವರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ರಂಗಭೂಮಿ ಮೂಲಕ ಜನರಿಗೆ ಸತ್ಯ ಯಾವುದು, ಸುಳ್ಳು ಯಾವುದು ಎಂಬ ಬಗ್ಗೆ ಮನವರಿಕೆ ಮಾಡಿ ಕೊಡುವ ಮೂಲಕ ಸಮಾಜವನ್ನು ಸದಾಶ ಯದತ್ತ ಕೊಂಡೊಯ್ಯಬೇಕಿದೆ ಎಂದರು. ಲೇವಡಿ: ಟಿ.ವಿ. ಮಾಧ್ಯಮ ಸುಳ್ಳು ಹೇಳುವುದರಲ್ಲಿ ನಿರತವಾಗಿದ್ದರೆ, ಕೆಲವು ಪತ್ರಿಕೆಗಳು ಆಳುವ ಸರ್ಕಾರದ ಮುಖ ವಾಣಿಯಾಗಿ ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ಧಾರವಾಹಿಗಳು ಸರಕು ಮಾರಾಟ ಮಾಡುವ ವೇದಿಕೆಯಾಗಿವೆ ಎಂದು ಲೇವಡಿ ಮಾಡಿದರು.
ಯಾವುದು ಸತ್ಯ, ಸುಳ್ಳು ತಿಳಿಯಬೇಕು: ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಮಾತನಾಡಿ, ಎಲ್ಲಾ ಪತ್ರಿಕೆಗಳು ಹಾಗೂ ಮೀಡಿಯಾಗಳು ಕೇಂದ್ರ ಸರ್ಕಾರದ ಪರವಾಗಿವೆ ಎಂಬುದು ಸುಳ್ಳು. ತುಂಬಾ ಪತ್ರಿಕೆಗಳು ಮತ್ತು ಟಿ.ವಿ.ಗಳು ಕೇಂದ್ರ ಸರ್ಕಾರದ ವಿರುದ್ಧ ಸುಳ್ಳನ್ನು ಹೇಳುತ್ತಿವೆ. ನಾವು ಮಾತನಾಡುವ ಸತ್ಯ ಯಾವುದು, ಸುಳ್ಳು ಯಾವುದು ಎಂಬುದನ್ನು ತಿಳಿಯ ಬೇಕಾಗಿದೆ. ಇಂದು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯನ್ನು ಕೀಳಾಗಿ ತೇಜೋವಧೆ ಮಾಡಲಾಗುತ್ತಿದೆ. ಪತ್ರಿಕೆಗಳಲ್ಲಿತೇಜೋವಧೆಯಾದರೆ ಮಾನನಷ್ಟ ಮೊಕದ್ದಮೆ ದಾಖಲಿಸ ಬಹುದು. ಸಾಮಾಜಿಕ ಜಾಲತಾಣದಲ್ಲಿ ಯಾರನ್ನು ಹೊಣೆಗಾರರನ್ನಾಗಿ ಮಾಡುವುದು ಎಂದರು. ರಂಗಭೂಮಿ ಮನುಷ್ಯರನ್ನು ಬೆಸೆಯುವ ಕೆಲಸ ಮಾಡಬೇಕು. ಜನತೆಗೆ ಸರಿ, ತಪ್ಪು ಯಾವುದು ಎಂಬುದನ್ನು ತೋರಿಸಿಕೊಡುವ ಅಗತ್ಯವಿದೆ ಎಂದು ಹೇಳಿದರು.
ನಂತರ ಶಿವಮೊಗ್ಗದ ಹೊಂಗಿರಣ ತಂಡದಿಂದ ಹೂವು ನಾಟಕ ಪ್ರದರ್ಶನ ನಡೆಯಿತು. ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸದಸ್ಯ ತೋ. ನಂಜುಂಡಸ್ವಾಮಿ, ಅಭಿಯಂತರರು ರಂಗ ತಂಡದ ಸುರೇಶ್ ಬಾಬು ಇತರರು ಇದ್ದರು.
You seem to have an Ad Blocker on.
To continue reading, please turn it off or whitelist Udayavani.