ಕೊರೊನಾ ಸುಳ್ಳು ಸುದ್ದಿ ಹರಡಿದ್ರೆ ಕಠಿಣ ಕ್ರಮ;ಡಿಸಿ ಎಚ್ಚರಿಕೆ
Team Udayavani, Mar 15, 2020, 4:17 PM IST
ಹಾವೇರಿ: ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಸುಳ್ಳು ಸುದ್ದಿ ಹರಡಿ ಭಯಪಡಿಸಿದರೆ ಅಂಥವರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಎಚ್ಚರಿಸಿದರು.
ಕೊರೊನಾ ಮುಂಜಾಗ್ರತೆ ಕುರಿತಂತೆ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರು ಹಾಗೂ ವಿದೇಶದಿಂದ ಹಿಂತಿರುಗಿದವರ ಮೇಲೆ ನಿಗಾ ವಹಿಸಲಾಗಿದೆ. ಕೊರೊನಾ ಬಗ್ಗೆ ಭಯಬೇಡ. ಕೊರೊನಾ ಹರಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ ಎಂದರು. ಜಿಲ್ಲೆಯಲ್ಲಿ ಒಂದುವಾರದ ಅವ ಧಿಗೆ ಜಿಲ್ಲೆಯಾದ್ಯಂತ ಸರ್ಕಾರದ ಮಾರ್ಗಸೂಚಿಯಂತೆ ಮಾಲ್ ಗಳು, ಚಿತ್ರಮಂದಿರಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್, ವಸ್ತು ಪ್ರದರ್ಶನ, ಕ್ರೀಡಾಕೂಟ್, ಮೆರಥಾನ್, ಸಂಗೀತ ಸಂಜೆ ಹಾಗೂ ಹೆಚ್ಚು ಜನ ಸೇರುವ ಮದುವೆ, ಧಾರ್ಮಿಕ ಸಮಾರಂಭ, ಜಾತ್ರೆಗಳನ್ನು ರದ್ದುಪಡಿಸಿ ಆದೇಶಿಸಲಾಗಿದೆ.
ಮದುವೆ ಕಾರ್ಯಕ್ರಮಗಳಿಗೆ ಯಾವುದೇ ನಿರ್ಬಂಧವಿಲ್ಲ, ಆದರೆ, ಹೆಚ್ಚು ಜನ ಸೇರಿದಂತೆ ಸಂಖ್ಯೆಗಳನ್ನು ನಿರ್ಬಂಧಿಸಿ ಮದುವೆ ಕಾರ್ಯಕ್ರಮಗಳನ್ನು ಮಾಡಬಹುದು. ಸ್ವಿಮಿಂಗ್, ಜಿಮ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ತಿಳಿಸಿದರು.
ಒಂದರಿಂದ ಆರನೇ ತರಗತಿ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 7ರಿಂದ 9ನೇ ತರಗತಿ ಪರೀಕ್ಷೆಗಳನ್ನು ಮಾ. 23ರೊಳಗೆ ಮುಗಿಸಬೇಕು. 7ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಗತಿಗಳನ್ನು ಸ್ಥಗಿತಗೊಳಿಸಿ ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ಕ್ರಮವಹಿಸಲು ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ. ಎಸ್ ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಿಗೆ ಯಾವುದೇ ತೊಂದರೆ ಇಲ್ಲ. ಎಲ್ಲ ಪಠ್ಯಕ್ರಮದ ಶಾಲೆಗಳು ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಎಲ್ಲ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಹಾವೇರಿ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಘಟಕದಲ್ಲಿ 249102 ಸಂಖ್ಯೆಯ ಸಹಾಯವಾಣಿ ಸ್ಥಾಪಿಸಲಾಗಿದೆ. ಸಾರ್ವಜನಿಕರು ಕೊರೊನಾ ಕುರಿತಂತೆ ಮಾಹಿತಿಯನ್ನು ವಿನಿಮಿಯ ಮಾಡಿಕೊಳ್ಳಬಹುದು. ಅನಗತ್ಯವಾದ ಪ್ರಯಾಣಗಳನ್ನು ಸಾಧ್ಯವಾದಷ್ಟು ಮುಂದೂಡುವಂತೆ ಮನವಿ ಮಾಡಿಕೊಂಡರು.
ಹೆಚ್ಚಿನ ದರಕ್ಕೆ ಮಾರಿದರೆ ಕ್ರಮ: ಮಾಸ್ಕ್ ಗಳ ಕೊರತೆ ಕುರಿತಂತೆ ಪರಿಶೀಲನೆ ಮಾಡಲಾಗುವುದು. ಹೆಚ್ಚಿನ ದರದಲ್ಲಿ ಮಾಸ್ಕ್ ಗಳ ಮಾರಾಟ ಮಾಡಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು. ಆರೋಗ್ಯವಂತರು ಮಾಸ್ಕ್ ಧರಿಸುವ ಅಗತ್ಯವಿಲ್ಲ. ಆಸ್ಪತ್ರೆಯಲ್ಲಿ ಕೆಲಸಮಾಡುವರು ಮಾತ್ರ ಮಾಸ್ಕ್ ಧರಿಸಬೇಕು ಎಂದು ತಿಳಿಸಿದರು.
ರೋಗನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಈ ರೋಗ ಹರಡುತ್ತದೆ. ಕಾಲಕಾಲಕ್ಕೆ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಹೆಚ್ಚು ಜನ ಇರುವೆಡೆ ಸೇರಬಾರದು. ಸಾಧ್ಯವಾದಷ್ಟು
ಪ್ರವಾಸ, ವಿದೇಶಿ ಪ್ರವಾಸದಿಂದ ದೂರ ಉಳಿಯಬೇಕು. ಜನದಟ್ಟಣೆಯಿಂದ ದೂರ ಉಳಿಯುವಂತೆ ಮನವಿ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ನಾಗರಾಜ ನಾಯಕ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ರಾಜ್ಯ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಸಹಾಯಕ ವಿಭಾಗೀಯ ನಿಯಂತ್ರಣಾಧಿ ಕಾರಿ ಮುಜುಂದಾರ, ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ| ಜಗದೀಶ ಪಾಟೀಲ, ಡಾ| ಸಂತೋಷ್ ಹಾಲುಂಡಿ ಹಾಗೂ ಇತರೆ ಅಧಿಕಾರಿಗಳು ಮಾಧ್ಯಮಗೋಷ್ಠಿಯಲ್ಲಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.