ಸಾರಿಗೆ ಸಿಬ್ಬಂದಿ ವಿತರಣೆಗೂ ಮಾಸ್ಕ್ ಇಲ್ಲ
Team Udayavani, Mar 16, 2020, 10:43 AM IST
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಕೊರೊನಾ ಸೋಂಕು ತಮ್ಮ ಸಿಬ್ಬಂದಿಗೆ ಸೋಕದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಾಲನಾ ಸಿಬ್ಬಂದಿಗೆ (ಚಾಲಕ, ನಿವಾರ್ಹಕರು) ಸಂಸ್ಥೆಯಿಂದಲೇ ಮಾಸ್ಕ್ ವಿತರಿಸಲು ಮುಂದಾಗಿದೆಯಾದರೂ ಬೇಡಿಕೆಗೆ ತಕ್ಕಂತೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದಂತಾಗಿದೆ. ಹೀಗಾಗಿ ಅಧಿಕಾರಿಗಳು ಮೆಡಿಕಲ್ ಶಾಪ್, ಸಗಟು ವ್ಯಾಪಾರಿಗಳ ಅಂಗಡಿಗಳಿಗೆ ಅಲೆಯುವಂತಾಗಿದೆ.
ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ಕುರಿತು ಸರ್ಕಾರ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಂತೆ ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಪ್ರಯಾಣಿಕರ ನಡುವೆ ಇರುವ ಚಾಲಕ ಹಾಗೂ ನಿರ್ವಾಹಕರಿಗೆ ಮಾಸ್ಕ್ ನೀಡುವ ನಿರ್ಧಾರ ಕೈಗೊಂಡರು. ಈ ಕುರಿತು ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನಿರ್ದೇಶನನೀಡಿ ಗುಣಮಟ್ಟದ ಮಾಸ್ಕ್ ಖರೀದಿಸಿ ಚಾಲನಾ ಸಿಬ್ಬಂದಿಗೆ ವಿತರಿಸುವಂತೆ ಸೂಚಿಸಿದ್ದರು. ಆದರೆ ಮಾರುಕಟ್ಟೆಯಲ್ಲಿ ಇವರ ಬೇಡಿಕೆಗೆ ತಕ್ಕಂತೆ ಮಾಸ್ಕ್ ಲಭ್ಯತೆ ಇಲ್ಲದಂತಾಗಿದೆ. ಸಂಸ್ಥೆ ವ್ಯಾಪ್ತಿಯ 9 ವಿಭಾಗಗಳಲ್ಲಿ ಸುಮಾರು 16,000 ಚಾಲನಾ ಸಿಬ್ಬಂದಿ ಇದ್ದಾರೆ. ಇಷ್ಟೊಂದು ಮಾಸ್ಕ್ ಗಳನ್ನು ಕೇಂದ್ರ ಕಚೇರಿಯಿಂದ ಒದಗಿಸುವುದು ಕಷ್ಟ ಎನ್ನುವ ಕಾರಣಕ್ಕೆ ವಿಭಾಗದ ವ್ಯಾಪ್ತಿಯಲ್ಲಿ ಖರೀದಿಸಿ ವಿತರಿಸುವಂತೆ ಸೂಚಿಸಲಾಗಿತ್ತು. ಒಂದು ವಿಭಾಗಕ್ಕೆಸುಮಾರು 2000 ಮಾಸ್ಕ್ಗಳು ಬೇಕಾಗುತ್ತಿವೆ. ಇಷ್ಟೊಂದು ಪ್ರಮಾಣದ ಮಾಸ್ಕ್ಗಳು ದೊರೆಯ ದಂತಾಗಿದ್ದು, ಅಧಿಕಾರಿಗಳು ಔಷಧಿ ಅಂಗಡಿ, ಸಗಟು ವ್ಯಾಪಾರಿಗಳ ಬಳಿ ಅಲೆದಾಡುತ್ತಿದ್ದರೂ ಬೇಡಿಕೆಯಿದ್ದಷ್ಟು ಸಿಗುತ್ತಿಲ್ಲ. ಹೆಚ್ಚಿನ ಹಣ ನೀಡಲು ಸಿದ್ಧವಿದ್ದರೂ 5-10 ಮಾಸ್ಕ್ ಮಾತ್ರ ನೀಡುವುದಾಗಿ ಹೇಳುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ.
ಎಲ್ಲ ಸಿಬ್ಬಂದಿಗೆ ವಿತರಿಸುವಷ್ಟು ಮಾಸ್ಕ್ ಗಳು ದೊರೆಯದ ಕಾರಣ ಪ್ರಮುಖವಾಗಿ ಕಲಬುರಗಿ, ಬೆಂಗಳೂರು, ಹೈದ್ರಾಬಾದ್ ನಗರಗಳಿಗೆ ತೆರಳುವ ಚಾಲಕರು ಹಾಗೂ ನಿರ್ವಾಹಕರಿಗಾದರೂ ಕಡ್ಡಾಯವಾಗಿ ನೀಡಲೇಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಕಡಿಮೆ ಪ್ರಮಾಣದ ಮಾಸ್ಕ್ಗೆ ಬೇಡಿಕೆ ಸಲ್ಲಿಸಿ ಎರಡ್ಮೂರು ದಿನಗಳಾದರೂ ಇನ್ನೂ ದೊರೆತಿಲ್ಲ ಎನ್ನುತ್ತಾರೆ ಕೆಲ ವಿಭಾಗೀಯ ನಿಯಂತ್ರಣಾಧಿಕಾರಿಗಳು. ಹೆಚ್ಚಿನ ಪ್ರಮಾಣದಲ್ಲಿ ಮಾಸ್ಕ್ ಗಳು ದೊರೆಯದ ಕಾರಣ ನೀವೇ ಉತ್ತಮ ಗುಣಮಟ್ಟದ ಮಾಸ್ಕ್ ಖರೀದಿಸಿ ಬಳಸುವಂತೆ ಸಿಬ್ಬಂದಿಗೆ ಸೂಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಯಾನಿಟೈಸರ್‌ಗೂ ಬೇಡಿಕೆ: ಸಿಬ್ಬಂದಿಯ ಮಾಸ್ಕ್ ನೀಡಿದ ಪ್ರಾಮುಖ್ಯತೆ ಬಸ್‌ನ ಸ್ವತ್ಛತೆಗೂ ನೀಡಲಾಗಿದೆ. ಬಸ್‌ನ ಒಳಗಡೆ ಸ್ಯಾನಿಟೈಸರ್ ಹಾಗೂ ಇತರೆ ರಾಸಾಯನಿಕ ಬಳಸಿ ಸ್ವಚ್ಛಗೊಳಿಸಲು ಕೇಂದ್ರ ಕಚೇರಿಯ ನಿರ್ದೇಶನವಿದೆ. ಆದರೆ ಮಾರುಕಟ್ಟೆಯಲ್ಲಿ ಮಾಸ್ಕ್ನಷ್ಟೇ ಸ್ಯಾನಿಟೈಸರ್ ಕೊರತೆ ಕೂಡ ಕಾಡುತ್ತಿದೆ. ಬೇಡಿಕೆಯಷ್ಟು ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ. ಈಗಾಗಲೇ ಮೊದಲ ಹಂತದಲ್ಲಿ ಒಂದಿಷ್ಟು ದ್ರಾವಣ ಖರೀದಿಸಿ ಬಳಸಲಾಗುತ್ತಿದೆ.
ಹೀಗಾಗಿ ಅನಿವಾರ್ಯವಾಗಿ ಫಿನಾಯಲ್ ಹಾಗೂ ಡೆಟಾಲ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಅನಿವಾರ್ಯತೆ ಬಂದಿದೆ. ಬೆಂಗಳೂರು, ಕಲಬುರಗಿ, ಹೈದರಾಬಾದ್ ಸೇರಿದಂತೆ ಇತರೆ ಪ್ರಮುಖ ನಗರಗಳಿಗೆ ಹೊರಡುವ ಬಸ್‌ಗಳ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ವಿಪತ್ತು ನಿರ್ವಹಣಾ ತಂಡ: ಕೊರೊನಾ ವೈರಸ್ ಕುರಿತು ಚಾಲನಾ ಸಿಬ್ಬಂದಿಗೆ ಡಿಪೋ ಹಂತದಲ್ಲಿ ಜಾಗೃತಿ ಮೂಡಿಸುವುದು, ಘಟಕ ಹಾಗೂ ಬಸ್ ನಿಲ್ದಾಣಗಳಲ್ಲಿ ಸ್ವತ್ಛತೆ, ಪ್ರಯಾಣಿಕರಿಗೆ ಧ್ವನಿ ಸಂದೇಶಗಳ ಮೂಲಕ ಜಾಗೃತಿ ಮೂಡಿಸುವುದು. ಚಾಲನಾ ಸಿಬ್ಬಂದಿಯ ಆರೋಗ್ಯದ ಮೇಲೆ ನಿಗಾ ವಹಿಸುವ ಕಾರ್ಯಕ್ಕಾಗಿ ವಿಪತ್ತು ನಿರ್ವಹಣಾ ತಂಡ ರಚಿಸಲಾಗಿದೆ.
ಮಾಸ್ಕ್ ಬಲು ದುಬಾರಿ : ಒಂದೆಡೆ ಮಾಸ್ಕ್ಗಳು ಬೇಡಿಕೆಗೆ ತಕ್ಕಂತೆ ದೊರೆಯುತ್ತಿಲ್ಲ. ಇನ್ನೊಂದೆಡೆ ಒಂದಿಷ್ಟು ಮಾಸ್ಕ್ ಸಿಕ್ಕರೂ ಒಂದು ದಿನಕ್ಕೆ ಮಾತ್ರ ಬಳಸಬಹುದಾದ ತ್ರೀ ಲೇಯರ್ (ಸರ್ಜಿಕಲ್) ಮಾಸ್ಕ್ 18-25 ರೂ.ಗೆ ದೊರೆಯುತ್ತಿವೆ. ಮುಂದಿನ ಒಂದು ವಾರಗಳ ಕಾಲ ಬೇಕಾಗುವಷ್ಟು ಮಾಸ್ಕ್ ದೊರೆಯುವುದಿಲ್ಲ. ಮರು ಬಳಕೆ ಮಾಡಬಹುದಾದ ಮಾಸ್ಕ್ ಖರೀದಿ ಮಾಡಬೇಕು ಎನ್ನುವುದಾದರೆ ಇದು ಕೂಡ ಬಲು ದುಬಾರಿಯಾಗಿದೆ. 100 ರೂ. ವರೆಗೆ ದೊರೆತರೆ ಇದನ್ನೇ ಖರೀದಿ ಮಾಡಲು ಸಿದ್ಧರಿದ್ದರೂ ಇವು ಕೂಡ ದೊರೆಯುತ್ತಿಲ್ಲ. ಈಗಾಗಲೇ ಸೋಂಕು ಪತ್ತೆಯಾದ ನಗರಗಳಿಗೆ ಹೊರಡುವ ಚಾಲನಾ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಬಳಸುತ್ತಿದ್ದಾರೆ.
ಸಿಬ್ಬಂದಿ ಆರೋಗ್ಯದ ದೃಷ್ಟಿಯಿಂದ ವ್ಯವಸ್ಥಾಪಕ ನಿರ್ದೇಶಕರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ನಿರ್ದೇಶನ ನೀಡಿದ್ದರು. ವಿಭಾಗ ವ್ಯಾಪ್ತಿಯಲ್ಲಿ ಮಾಸ್ಕ್ ಖರೀದಿ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಬೇಡಿಕೆಯಿದ್ದಷ್ಟು ಮಾಸ್ಕ್ಗಳು ದೊರೆಯುತ್ತಿಲ್ಲ. ಕೆಲ ನಗರಗಳನ್ನು ಗುರುತಿಸಿ ಅಲ್ಲಿಗೆ ತೆರಳುವ ಚಾಲಕರ ಹಾಗೂ ನಿರ್ವಾಹಕರಿಗೆ ಮಾಸ್ಕ್ ನೀಡುವ ಕುರಿತು ಹೆಚ್ಚಿನ ಆದ್ಯತೆ ನೀಡಲಾಗಿದೆ. –ಸಂತೋಷಕುಮಾರ, ಮುಖ್ಯ ಸಂಚಾರ ವ್ಯವಸ್ಥಾಪಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.