36 ಅಲ್ಲ 63!
ತಕ್ಕಡಿಯ ಆ ಬದಿ, ಈ ಬದಿಯಲಿ ನಿಂತು
Team Udayavani, Mar 18, 2020, 5:05 AM IST
ಕೆಲವು ಜಾಹೀರಾತುಗಳಲ್ಲಿ ತೋರಿಸುತ್ತಾರಲ್ಲ; ಮೊದಲು-ನಂತರ ಅಂತ ಎರಡು ಫೋಟೊಗಳನ್ನು. ನನ್ನದು ಸ್ವಲ್ಪ ಅದೇ ಕಥೆ. ನನ್ನ ಹಳೆಯ ಫೋಟೊಗಳನ್ನು ನೋಡಿದವರ್ಯಾರೂ, ಈಗಿನ ರೂಪವನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ದಪ್ಪಗಾಗಬೇಕು ಅಂತ ಮೊದಲು ತಿಂತಿದ್ದ ಆಹಾರಕ್ಕೂ, ಸಣ್ಣಗಾಗಲು ಈಗ ಮಾಡ್ತಿರೋ ಡಯಟ್‌ಗೂ ಅಜಗಜದಷ್ಟು ಅಂತರ.
ಅಂದು…
ಬಾಲ್ಯದಿಂದಲೂ ನನ್ನದು ಸ್ವಲ್ಪ ಸಪೂರ (ತೆಳ್ಳಗಿನ) ದೇಹ ಪ್ರಕೃತಿ. ಚಿಕ್ಕಂದಿನಲ್ಲಿ ಅಕ್ಕ ಮತ್ತು ತಮ್ಮ ನನ್ನನ್ನು ಸಪುಲ್ಮಾಯಿ ಎಂದು ಛೇಡಿಸುತ್ತಿದ್ದರು. ಕಾಲೇಜು ಮೆಟ್ಟಿಲು ಹತ್ತಿದರೂ, ನನ್ನನ್ನು ಏಳನೇ ಅಥವಾ ಎಂಟನೇ ಕ್ಲಾಸಾ? ಅಂತ ಕೇಳುತ್ತಿದ್ದರು. ಮದುವೆ ನಿಶ್ಚಯವಾಗುವಾಗ ನಮ್ಮನೆಯವರು ಕೂಡಾ, “ಹುಡುಗಿ ತುಂಬಾ ಸಪೂರ ಅಲ್ವಾ?’ ಎಂದಿದ್ದರಂತೆ. ಆಗ ನಾನು, “ಒಂದಲ್ಲ ಒಂದು ದಿನ ನಾನು ದಪ್ಪ ಆಗೇ ಆಗುತ್ತೇನೆ’ ಎಂದಿದ್ದಕ್ಕೆ, “ನೀನು ದಪ್ಪ ಆಗಬೇಕಾದರೆ ನಿನಗೆ ಜೇಡಿಮಣ್ಣು ಲೇಪಿಸಬೇಕು’ ಎಂದು ಹೇಳಿ ನಕ್ಕಿದ್ದರು. “ನಾನೇನು ಗಣಪತಿಯಾ? ಜೇಡಿಮಣ್ಣು ಲೇಪಿಸಲು’ ಎಂದು ನಾನು ಸಿಟ್ಟಾಗಿದ್ದೆ. ಅಳಿಯನಾಗುವವನ ಆ ಮಾತು ಕೇಳಿ ನಮ್ಮಮ್ಮ ಪಣ ತೊಟ್ಟರು, “ಮದುವೆ ಸಮಯದೊಳಗೆ ಮಗಳನ್ನು ದಪ್ಪ ಮಾಡಿ ತೋರಿಸುತ್ತೇನೆ’ ಅಂತ.
ನಮ್ಮ ನಿಶ್ಚಿತಾರ್ಥ ಮತ್ತು ಮದುವೆಯ ನಡುವೆ ಒಂದೂವರೆ ವರ್ಷದಷ್ಟು ಅಂತರವಿತ್ತು. ಆಗ ನನ್ನ ತೂಕ ಮೂವತ್ತಾರು ಕೆ.ಜಿ! ಅಮ್ಮ ಅಂದಿನಿಂದಲೇ ತಮ್ಮ ಪ್ರಯೋಗ ಶುರು ಮಾಡಿಯೇ ಬಿಟ್ಟರು. ಮೊದಲಿಗೆ ನನ್ನ ಪ್ರಾಣಪ್ರಿಯವಾದ ಅಮ್ಮನ ಕೈಯ ರುಚಿಯ ಫಿಲ್ಟರ್ ಕಾಫಿಗೆ ಬಂತು ಸಂಚಕಾರ. ಯಾರೋ ಪುಣ್ಯಾತ್ಮರು ಹೇಳಿದರಂತೆ, ಕಾಫಿ ಕುಡಿದರೆ ಸಣ್ಣಗಾಗುತ್ತಾರೆ ಎಂದು. ಬೆಳಗ್ಗೆ ಮತ್ತು ರಾತ್ರಿ ದೊಡ್ಡ ಲೋಟದಲ್ಲಿ ಆಕಳ ಹಾಲು, ಅದೂ ಕಡಿಮೆ ಅಂದರೆ ಅರ್ಧ ಲೀಟರ್ ಆಗಬಹುದು. ಮಧ್ಯಾಹ್ನಕ್ಕೆ ಗಟ್ಟಿ ಮೊಸರು, ರಾತ್ರಿ ಗಂಜಿಗೆ ಆಕಳ ಬೆಣ್ಣೆ ಕಾಯಿಸಿ ಮನೆಯಲ್ಲೇ ತಯಾರಿಸಿದ ತುಪ್ಪ. ಈ ಎಲ್ಲ ವಸ್ತುಗಳು ನನ್ನ ಪ್ರೀತಿಯದ್ದಾದ ಕಾರಣ ಬದುಕಿದೆ. ಇಲ್ಲದಿದ್ದರೆ ನನ್ನ ಪಾಡು ದೇವರಿಗೇ ಪ್ರೀತಿ. ಸಾಲದ್ದಕ್ಕೆ ಯಾರೋ ಹೇಳಿದರೆಂದು (ಬಿಟ್ಟಿ ಸಲಹೆ ಕೊಡುವ ಜನರಿಗೇನು ಬರಗಾಲವೇ ಈ ಪ್ರಪಂಚದಲ್ಲಿ?) ರಾತ್ರಿ ನೀರಿನಲ್ಲಿ ಬಾದಾಮಿ ನೆನೆ ಹಾಕಿ, ಬೆಳಗ್ಗೆ ಸಿಪ್ಪೆ ತೆಗೆದು, ಅದನ್ನು ಕುಟ್ಟಿ ಹಾಲಲ್ಲಿ ಹಾಕಿ ಕೊಡುತ್ತಿದ್ದರು. ಬೇರೆ ಯಾರಿಗಾದರೂ ಈ ಪರಿ ಉಪಚಾರ ಮಾಡಿದ್ದರೆ ಅವರು ಕಡಿಮೆ ಅಂದರೆ ಹತ್ತು ಕೆ.ಜಿ. ತೂಕ ಏರುತ್ತಿದ್ದರೇನೋ. ಆದರೆ ನಾನು, ಸಣಕಲು ಕಡ್ಡಿ. ಜಪ್ಪಯ್ಯ ಅಂದರೂ ಒಂದು ಸುತ್ತೂ ತೋರ (ದಪ್ಪ) ಆಗಲಿಲ್ಲ, ಒಂದು ಕೆ.ಜಿ ತೂಕನೂ ಏರಲಿಲ್ಲ. ಅಮ್ಮನ ಪ್ರಯತ್ನವೆಲ್ಲ ನೀರಲ್ಲಿ ಹೋಮ ಮಾಡಿದ ಹಾಗೇ ಆಯಿತು.
ಮದುವೆಯಾಯಿತು, ಎರಡು ಮಕ್ಕಳಾದರು, ಕಾಲಚಕ್ರ ಉರುಳಿತು, ವರ್ಷಗಳ ಮೇಲೆ ವರ್ಷಗಳು ಕಳೆದವು. ಆಗ, ಅಮ್ಮ ಮಾಡಿದ ಉಪಚಾರಗಳೆಲ್ಲಾ ಒಂದೊಂದಾಗಿ ಪ್ರಭಾವ ಬೀರಲು ಶುರು ಮಾಡಿದವು. ನಾನು ಬಲೂನಿನ ಹಾಗೇ ಉಬ್ಬಲು ಶುರು ಮಾಡಿದೆ!
ಇಂದು…
ಬೇಕು ಎಂದಾಗ ಏರದ ತೂಕ ಬೇಡವೆಂದರೂ ಏರಲು ಶುರುವಾಯಿತು. ತೂಕದ ಕಡ್ಡಿ ತಿರುಗಿ ನಿಂತು ಅರವತ್ಮೂರು ತೋರಿಸಿತು. ಒಂದು ದಿನ ನಾನು ಇವರ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದೆ, ಬೈಕ್ ಯಾಕೋ ಕೊಂಯ್ ಎಂದು ಶಬ್ದ ಮಾಡುತ್ತಿತ್ತು. “ಏನ್ರೀ ಅದು ಶಬ್ದ?’ ಎಂದೆ. “ಅದು ಬೈಕ್ ಅಳ್ತಾ ಇದೆ, ನನ್ನ ಕೈಯಲ್ಲಿ ಎಳೀಲಿಕ್ಕೆ ಆಗುವುದಿಲ್ಲ ಹಿಂದೆ ಭಾರ ಜಾಸ್ತಿಯಾಗಿದೆ ಎಂದು’ ಅಂತ ಎನ್ನಬೇಕೆ! ಎಲಾ ಇವರ, ವರ್ಷಗಳ ಹಿಂದೆ ಜೇಡಿಮಣ್ಣು ಲೇಪಿಸಬೇಕು ಅಂದವರ ಬಾಯಿಂದ ಇಂಥ ಮಾತೇ? ಆಗ ನನಗೆ ನಾನೇ ಪ್ರತಿಜ್ಞೆ ಮಾಡಿದೆ. ಏನಾದರೂ ಆಗಲಿ, ನಾನು ಸಪೂರ ಆಗಿ ಇವರಿಗೆ ತೋರಿಸಲೇಬೇಕು ಎಂದು. ಅವತ್ತು ಅಮ್ಮನ ಪಣ, ಈಗ ಮಗಳದ್ದು.
ಮರುದಿನದಿಂದಲೇ ಶುರುವಾಯಿತು ನನ್ನ ಡಯಟ್. ರಾತ್ರಿ ಅನ್ನದ ಬದಲು ಚಪಾತಿ ತಿಂತೀನಿ ಅಂದೆ. ಉಳಿದ ಮೂವರೂ ಕೈಯೆತ್ತಿದರು, “ನನಗೂ ಚಪಾತಿ’ ಎಂದು. ನನಗೆ ಡಯಟ್, ನಿಮಗೇನು? ಎಂದು ಬಾಯಿ ಬಿಡಲಾಗುತ್ತದೆಯೇ. ಯಾಕಂದ್ರೆ, ಸಪೂರ ಆಗ್ತಿನಿ ಅಂತ ಮೌನ ಪ್ರತಿಜ್ಞೆ ಮಾಡಿದ್ದನ್ನು ಯಾರಿಗೂ ಹೇಳಿರಲಿಲ್ಲ. ತೆಪ್ಪಗೆ ನಾಲ್ಕೂ ಮಂದಿಗೆ ಚಪಾತಿ ಮಾಡಲು ಆರಂಭಿಸಿದೆ. ಶುರುವಾಯಿತು ರಾಗ, ಬೆಳಗ್ಗೆ ಅನ್ನಕ್ಕೆ ಮಾಡಿದ ಸಾರು, ಹುಳಿ ಇದಕ್ಕೆ ಸೇರುವುದಿಲ್ಲ ಎಂದು. ಸರಿ ಮತ್ತೆ ಶುರು ನನ್ನ ಗುದ್ದಾಟ, ಚಪಾತಿಗೆ ಆಗುವಂಥ ಪಲ್ಯ, ಚಪಾತಿ ಎಲ್ಲಾ ಮಾಡಿ ಹಸಿವು ಜಾಸ್ತಿಯಾಯಿತೋ ಏನೋ ಎರಡರ ಬದಲು ಮೂರು ಚಪಾತಿ ತಿನ್ನತೊಡಗಿದೆ. ತೂಕ ಇಳಿಯಲಿಲ್ಲ.
ಮತ್ತೆ ಶುರು ಇನ್ನೊಂದು ಪ್ರಯೋಗ, ವಾಕಿಂಗ್ ಹೋಗುವುದು. ಒಬ್ಬಳೇ ಹೋಗಲು ಬೇಜಾರು ಎಂದು ಪಾಪದ ಮಗಳನ್ನು ಜೊತೆಯಲ್ಲಿ ಎಳೆದುಕೊಂಡು ಹೊರಟೆ. ಸಿಟಿಗೆ ಹೋದರೆ ಮೂರು ನಾಲ್ಕು ಕಿ.ಮೀ. ನಡೆದೇ ಹೋಗುವುದು, ಮತ್ತೆ ಇವರ ಕೈಯಲ್ಲಿ ಬೈಸಿಕೊಳ್ಳುವುದು. “ಎಷ್ಟು ಕಂಜೂಸ್ತನ ಮಾಡ್ತೀಯಾ? ರಿಕ್ಷಾದಲ್ಲಿ ಹೋಗಲಿಕ್ಕೆ ಏನು?’ ಎಂದು. ನನ್ನ ಎಲ್ಲಾ ಪ್ರಯತ್ನಗಳು ಹೊಳೆಯಲ್ಲಿ ಹುಣಿಸೆಹಣ್ಣು ಕಿವುಚಿದ ಹಾಗೇ ಆಯಿತು.
ನಾವು ಶಾಲೆಯಲ್ಲಿರುವಾಗ ಓದಿದ್ದ ಕೆ.ಎಸ್.ನರಸಿಂಹಸ್ವಾಮಿಯವರ ಪದ್ಯ ನೆನಪಿಗೆ ಬಂತು, “ಚಳಿಗಾಲ ಬಂದಾಗ ಎಷ್ಟು ಚಳಿ ಎಂದರು, ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆಂದರು’ ಅಂತೇನೋ. ಅದೇ ತರಹ ಸಪೂರ ಇದ್ದರೆ ಸಣಕಲು ಕಡ್ಡಿ ಅಂತಾರೆ, ದಪ್ಪಗಾದರೆ ಡುಮ್ಮಿ ಅಂತಾರೆ. ಈ ಜನರನ್ನು ಮೆಚ್ಚಿಸಲು ಬ್ರಹ್ಮನಿಂದಲೂ ಸಾಧ್ಯವಿಲ್ಲ. ಇನ್ನು ನನ್ನಿಂದಾಗುತ್ತದೆಯೇ ಎಂದು ಸಪೂರ ಆಗುವ ಪ್ರಯತ್ನ ಕೈಬಿಟ್ಟೆ.
ನನ್ನ ಪ್ರಾಣಪ್ರಿಯವಾದ ಹಾಲು, ಮೊಸರು, ಬೆಣ್ಣೆ, ತುಪ್ಪಗಳನ್ನು ಪುನಃ ತಿನ್ನಲು ಪ್ರಾರಂಭಿಸಿದೆ. ಆದರೆ, ಸಿಟಿಗೆ ಮಾತ್ರ ನಡೆದುಕೊಂಡೇ ಹೋಗುತ್ತೇನೆ. ನಿಜಕ್ಕೂ ನಾನು ಕಂಜೂಸಾ? ಅಂತ ಪ್ರಶ್ನೆ ಎದ್ದಾಗ, ನಾಲ್ಕು ನಾಲ್ಕು ಹೆಜ್ಜೆಯ ಅಂತರದಲ್ಲಿರುವ ಅಂಗಡಿಗಳ ಮುಂದೆಲ್ಲ ನಿಲ್ಲಿಸಿ ನನಗಾಗಿ ಕಾಯಲು ರಿಕ್ಷಾದವರೇನು ನನ್ನ ಸಂಬಂಧಿಕರಲ್ಲವಲ್ಲ ಅಂತ ಸಮಾಧಾನ ಮಾಡಿಕೊಳ್ಳುತ್ತೇನೆ. ನೀವೇ ಹೇಳಿ, ಭಗವಂತನ ಇಚ್ಛೆಯಿಲ್ಲದಿದ್ದರೆ ನಾವೆಷ್ಟೇ ಪ್ರಯತ್ನಿಸಿದರೂ ಯಾವುದೇ ಕಾರ್ಯ ಸಾಧ್ಯವಿಲ್ಲ ತಾನೇ?
– ಅನಿತಾ ಪೈ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.