ಸ್ವರ್ಗದಲ್ಲಿ ಮದುವೆ
ಹಿಂದಿನ ವಿವಾಹವೂ ಇಂದಿನ ವೈಭೋಗವೂ...
Team Udayavani, Mar 18, 2020, 6:00 AM IST
ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂಬ ನಂಬಿಕೆ ಹಿಂದಿನವರದ್ದು. ಸ್ವರ್ಗಕ್ಕೇ ಕಿಚ್ಚು ಹಚ್ಚುವಷ್ಟು ಅದ್ಧೂರಿಯಾಗಿ ಮದುವೆ ನಡೆಯಬೇಕೆಂಬ ಬಯಕೆ ಇಂದಿನವರದ್ದು. ಊರಿನವರೆಲ್ಲಾ ಒಟ್ಟಾಗಿ ಸೇರಿ ಮದುವೆ ನಡೆಸಿ ಕೊಡುತ್ತಿದ್ದುದು ಆ ಕಾಲದ ಹಿರಿಮೆಯಾದರೆ, ಹಪ್ಪಳ- ಸಂಡಿಗೆ ಮಾಡುವುದನ್ನೂ ಕೇಟರಿಂಗ್‌ನವರಿಗೆ ವಹಿಸಿಕೊಡುವುದು ಈ ಕಾಲದ ಮಹಿಮೆ…
ಹತ್ತಿರದ ಬಂಧುವೊಬ್ಬರ ಮಗಳ ಮದುವೆ ನಿಶ್ಚಯವಾಗಿತ್ತು. ಅವರು ಎದುರು ಸಿಕ್ಕಾಗ, “ಮದುವೆಗೆ ಎಲ್ಲ ಸಿದ್ಧತೆಗಳಾಯ್ತಾ? ಏನಾದ್ರೂ ನನ್ನಿಂದ ಸಹಾಯ ಬೇಕಾ?’ ಎಂದು ಕೇಳಿದೆ. “ಹೂನ್ರೀ, ಇಷ್ಟು ದಿನ ಅದೇ ರಾಮಾಯಣ. ಚಿನ್ನದ ಬೆಲೆ ನೋಡಿದ್ರೆ ಆಕಾಶಕ್ಕೆ ಹೋಗಿದೆ. ಅಂದುಕೊಂಡಷ್ಟು ಒಡವೆ ಹೆಂಗೋ ಖರೀದಿಸಾಯ್ತು.
ಪ್ರಿವೆಡ್ಡಿಂಗ್ ಶೂಟ್ ಕೂಡಾ ಆಯಿತು. ಇವಳಿಗೆ ಡೆಸ್ಟಿನೇಷನ್ ವೆಡ್ಡಿಂಗ್ ಬೇಕು ಅಂತಿತ್ತು . ದುಡ್ಡೇನು ಸ್ವಲ್ಪ ಖರ್ಚಾಗುತ್ತಾ? ಈಗಲೇ ಮದುವೆ ಒಟ್ಟು ಖರ್ಚು ಇಪ್ಪತ್ತೈದು ಲಕ್ಷ ದಾಟುತ್ತೆ. ದುಡ್ಡು ಹೊಂದಿಸೋದು ಎಷ್ಟು ಕಷ್ಟ ಅಂತ ಮಾಡೋರಿಗೇ ಗೊತ್ತು. ಹೆಂಗೋ ಅವಳನ್ನು ಒಪ್ಪಿಸಿ ಹದಿನೈದು ದಿನ ಅಲೆದ ಮೇಲೆ ಅಂತೂ ಇಂತೂ ಒಂದೊಳ್ಳೆ ಛತ್ರ ಸಿಕು¤. ಕೇಟರರ್ಸ್ ಸ್ವಲ್ಪ ದುಬಾರಿ. ಆದರೆ ಚಾಟ್ಸ್ ಚೆನ್ನಾಗಿ ಮಾಡ್ತಾರೆ .. ಒಳ್ಳೆ ಹೆಸರಿದೆ ಅವರಿಗೆ. ಜೊತೆಗೆ ಬ್ರೈಡಲ್ ಮೇಕ್‌ಅಪ್, ಫೋಟೋ, ವಿಡಿಯೋದ್ದಂತೂ ಮಗಳಿಗೆ ಬೇಕಾದವರೇ ಆಗಬೇಕಿತ್ತು. ಛತ್ರ, ವಿಡಿಯೋದವರು, ಕೇಟರರ್, ಬ್ಯೂಟಿ ಸ್ಪಾ ಇವರೆಲ್ಲರ ಡೇಟ್ ಅಡ್ಜಸ್ಟ್ ಆಗಬೇಕು ನೋಡಿ. ಫ್ಲವರ್ ಡೆಕೋರೇಷನ್ ಬುಕ್ಕಿಂಗ್, ರಿಟರ್ನ್ ಗಿಫr… ಎಲ್ಲ ಆಯಿತು. ಉಂಡೆ ಚಕ್ಕುಲಿಗೂ ಆರ್ಡರ್ ಕೊಟ್ವಿ. ಸೀರೆ ಅವಳೇ ಡಿಸೈನ್ ಮಾಡಿದ್ದು . ಹೆಚ್ಚು ಕಡಿಮೆ ಎಲ್ಲಾ ಆದ ಹಾಗೆ…’
ಆಕೆ ಪಟಪಟನೆ ಆದ ಕೆಲಸಗಳ ಲಿಸ್ಟ್ ಒಪ್ಪಿಸುತ್ತಿದ್ದರೆ, ಇವುಗಳಲ್ಲಿ ನಾನು ಸಹಾಯ ಮಾಡುವಂಥದ್ದೇನಾದರೂ ಇದೆಯಾ ಎಂದು ಯೋಚಿಸಿ ನನ್ನ ದಡ್ಡತನಕ್ಕೆ ನಾನೇ ನಾಚಿಕೊಂಡೆ.
ಅದು ಊರ ಮದುವೆ
ಕಾಲ ಬದಲಾಗಿದೆ.. ಎಲ್ಲವೂ ಬದಲಾಗುತ್ತಿರುವ ಕಾಲದಲ್ಲಿ ಮದುವೆಯ ರೂಪುರೇಷೆ ಕೂಡಾ ಬದಲಾಗಿದೆ. ನಾನು ಬಾಲ್ಯದಲ್ಲಿ ಕಂಡ ಹಿಂದಿನ ಮದುವೆಗಳ ಸ್ವರೂಪವೇ ಬೇರೆ ಇತ್ತು. ಆಗೆಲ್ಲಾ ಒಂದು ಕುಟುಂಬದ ಮಗಳಿಗೋ, ಮಗನಿಗೋ ಮದುವೆ ಗೊತ್ತಾಗುತ್ತಿದ್ದಂತೆ ಸಂಭ್ರಮ ಶುರುವಾಗುತ್ತಿತ್ತು. ಊರಿನಲ್ಲಿ ಕ್ಷಣಾರ್ಧದಲ್ಲಿ ಸುದ್ದಿ ಹರಡುತ್ತಿತ್ತು. ಹೊರಗೆ ಯಾರಾದರೂ ಕಂಡರೆ ಸಾಕು; “ನಿಮ್ಮೆಲ್ಲರ ಸಹಕಾರ ಬೇಕು. ಹೆಂಗೆ ಮಾಡಿ ಮುಗಿಸುವುದೋ..’ ಅನ್ನೋ ಆತಂಕದ ಇವರ ಸ್ವರವೂ, “ನಾವೆÇÉಾ ಇದೀವಲ್ಲ. ಏನಾಗಬೇಕು ಹೇಳಿ. ಹೂವೆತ್ತಿದ ಹಾಗೆ ಮದುವೆಯಾಗುತ್ತೆ. ನೀವೇನೂ ಆತಂಕ ಪಡಬೇಡಿ’ ಎಂಬ ಅವರ ಭರವಸೆಯ ಸ್ವರವೂ ಕೇಳಿಬರುವುದು ಸಾಮಾನ್ಯವಾಗಿತ್ತು.
ಮದುವೆಗೆ ಬೇಕಾದ ಜವಳಿಯೂ ಸೀಮಿತವೇ. ಹುಡುಗಿಗೆ ನಾಲ್ಕೈದು ಬ್ಲೌಸ್ ಹೊಲೆಸಿಟ್ಟರೆ ಬೇಕಾದಷ್ಟಾಯಿತು. ಮಿಕ್ಕವರಿಗೆ ಸಡಗರಕ್ಕೊಂದು ಬಟ್ಟೆ. ಕಿವಿಯೋಲೆ, ತಾಳಿ, ಗುಂಡು, ಕೋವಿ, ಇನ್ನೂ ಅನುಕೂಲವಿದ್ದವರಾದರೆ ಸರ-ಬಳೆ. ಅಲ್ಲಿಗೆ ಅವೆರಡರ ಸಿದ್ಧತೆ ಮುಗಿದಂತೆ. ಕೇವಲ ಮದುವೆ ನಿಶ್ಚಯವಾದ ಮನೆಯವರಷ್ಟೇ ಅಲ್ಲ, ಸುತ್ತಲಿನ ಹತ್ತಾರು ಮನೆಗಳವರೂ ಮದುವೆಗೆ ಸಿದ್ಧರಾಗುತ್ತಿದ್ದರು. ಛತ್ರ ಫಳಗುಟ್ಟುವಂತೆ ಹೊಳೆಯಬೇಕೆಂದಿರಲಿಲ್ಲ. ಜಾಗದ ಅನುಕೂಲವಿದ್ದು ಮನೆಯÇÉೇ ಮದುವೆಯೆಂದಾದರೆ ಮನೆಯ ಸುತ್ತ ಮುತ್ತ ಜಾಗ ಸ್ವತ್ಛ ಗೊಳಿಸುವ ಕೆಲಸದ ಮೇಲ್ವಿಚಾರಣೆಗೆ ಮನೆ ಮಂದಿಯೇ ನಿಲ್ಲ ಬೇಕಿಲ್ಲ.
ಬೇಗ ಬೇಗ ಕೆಲಸ ಮುಗಿಸಿ ಇವರ ಮನೆಗೆ ಹಪ್ಪಳ, ಸಂಡಿಗೆಯ ಕೆಲಸಕ್ಕೆ ಓಡೋಡಿ ಬರುವುದು, ಉಂಡೆ-ಚಕ್ಕುಲಿಗಳ ತಯಾರಿ, ಬೇರೆ ಊರಿನ ಹತ್ತಿರದವರಿಗೆ ಮದುವೆ ಪತ್ರಿಕೆ ಕಳಿಸಲು ವಿಳಾಸ ಬರೆಯುವ ಜವಾಬ್ದಾರಿ ಒಬ್ಬರಿಗೆ, ಚಪ್ಪರಕ್ಕೆ ಬೇಕಾದ ತೆಂಗಿನಗರಿ, ಕಂಬಗಳನ್ನು ತಂದು ಚಪ್ಪರ ಕಟ್ಟುವವವರು, ಮಾವಿನ ಸೊಪ್ಪುಗಳಿಂದ ಸಿಂಗರಿಸುವವರು, ಮನೆಯ ಸುಣ್ಣ ಬಣ್ಣ ಹೊಡೆಸಿದ ಮೇಲೆ ಸಾರಣೆ-ಕಾರಣೆಯ ಸಡಗರ ನೋಡನೋಡುತ್ತಿದ್ದಂತೆಯೇ ಮದುವೆಮನೆ ಗಲಗಲ ನಗುತ್ತಿತ್ತು. ಯಾರೋ ಮಾಡಿದ ಗೆಜ್ಜೆವಸ್ತ್ರ, ಮತ್ಯಾರೋ ಕಟ್ಟಿದ ಮಲ್ಲಿಗೆ ದಂಡೆ..ಪಕ್ಕದ ಮನೆಯವರ ಒಡವೆ… ಅದು ಊರಿನ ಮದುವೆಯಂತೆ ಭಾಸ.
ಮದುಮಗಳು ಮನೆ ಮಗಳು
ನಾಂದಿಯಾದ ಮೇಲೆ ವಧುವರರೂ, ಅವರ ಅಪ್ಪ ಅಮ್ಮಂದಿರೂ ಹೊರಗೆ ಹೊರಡುವಂತಿರಲಿಲ್ಲ. ಅವರಿಗೆ ಹೊರಗಿನ ಕೆಲಸಗಳ ಯೋಚನೆ ಬರದಂತೆ ಸುತ್ತಮುತ್ತಲಿನವರು ನೆರವಾಗುತ್ತಿದ್ದರು. ಇದ್ದುದರಲ್ಲೇ ಹೊಸಬಟ್ಟೆಯುಟ್ಟು ತಲೆಗೆ ಹೂ ಮುಡಿದು ಅರಿಸಿನ ಕುಂಕುಮದ ಬಟ್ಟಲು ಹಿಡಿದು ಮನೆಮನೆಗೆ ಹೋಗಿ ಕರೆಯುವ ಹೆಣ್ಣು ಮಕ್ಕಳ ಸಡಗರ ಕಣ್ತುಂಬಿಕೊಳ್ಳುವಂತಿತ್ತು. ಮದುವೆಯ ದಿನ ಬೆಳಗಿನ ಜಾವದಲ್ಲಿ ಎಣ್ಣೆಯೊತ್ತುವ ಶಾಸ್ತ್ರ, ಹುಡುಗಿಗೆ ನೀರು ಹಾಕುವ ಹುಕಿ ಎಲ್ಲರಿಗೂ.. ಎರೆದ ಕೂದಲನ್ನು ಒಣಗಿಸುತ್ತಾ ಕೂರಲೂ ಸಮಯವಿಲ್ಲ.. ಥಂಡಿಯಾಗದ ಹಾಗೆ ಕೂದಲಿನ ಪಸೆ ಒರೆಸಿ ಅಳ್ಳಕವಾಗಿ ಜಡೆ ಹೆಣೆದು ಬಿಳಿಯ ಪತ್ತಲ ಉಡಿಸಿ, ಮೇಲಸೆರಗು ಹಾಕಿ, ಹೂ ಮೂಡಿಸಿ, ಬಾಸಿಂಗ ಕಟ್ಟಿ ಗೌರಿ ಪೂಜೆಗೆ ಕೂರಿಸಿದರೆ ಪೂಜೆ ಮುಗಿಯುವವರೆಗೂ ಅವಳು ಯಾವ ಕಾರಣಕ್ಕೂ ಬೇರೆಯ ಕಡೆ ತಿರುಗಿ ನೋಡುವಂತಿಲ್ಲ ..
ಕಾಶೀಯಾತ್ರೆಗೆ ಹೊರಟ ಮದುಮಗನನ್ನು ತಡೆಯಲು ಅಲಂಕೃತ ಛತ್ರಿ, ಕೋಲು, ದಿಬ್ಬಣ ಎದುರುಗೊಳ್ಳುವ ಸಡಗರ. ಈ ಯಾವುದರಲ್ಲೂ ಸಂಪ್ರದಾಯ, ಆಚರಣೆ ಕಿಂಚಿತ್ತೂ ಲೋಪವಾಗುವಂತಿರಲಿಲ್ಲ. ಧಾರೆಯ ಮಂಟಪದಲ್ಲಿ ಜೀರಿಗೆ ಬೆಲ್ಲ ಅಂಟಿಕೊಳ್ಳುವುದೆಂದು ತಲೆ ಕೆಡಿಸಿಕೊಳ್ಳುವವರಿಲ್ಲ.. ಕೆನ್ನೆಗೆ ಹಚ್ಚಿದ ಅರಿಸಿನ, ಹಣೆಯ ಮೇಲೆ ಹತ್ತಾರು ಜನ ಇಟ್ಟ ಕುಂಕುಮ ತುಂಬಿ ಹೋದರೂ ಅದನ್ನು ಅಂದು ಒರೆಸಿ ಸರಿ ಮಾಡುವಂತಿಲ್ಲ. ಅಲ್ಲಿ ಹೊರನೋಟದ ಬಗ್ಗೆ ಕೊಂಚವೂ ಗಮನವಿಲ್ಲ. ಏನಿದ್ದರೂ ಆಚರಣೆಗಳು ನಿರ್ವಿಘ್ನವಾಗಿ ಸಾಂಗವಾಗಿ ನಡೆಯಬೇಕು ಅಷ್ಟೇ. ಅಂದು ಅಲ್ಲಿ ಅವಳು ವಿಧಿವತ್ತಾಗಿ ಅವನ ಬಾಳು ಬೆಳಗುವ ಕನ್ಯೆ.. ಅವನು ಅವಳನ್ನು ಕಾಯೇನ ವಾಚಾ ಮನಸಾ ಮೀರದವ.
ಊಟ-ನೋಟ ಎಲ್ಲಾ ಸಿಂಪಲ್
ಊಟದಲ್ಲೂ ಇರಬೇಕಾದ ತಿನಿಸುಗಳಿರಬೇಕಷ್ಟೇ ವಿನಃ ಏನೇನೊ ಬಗೆಬಗೆಯ ಅಡುಗೆ ಮಾಡಿಸಿ ಬೀಗುವ ಮನೋಭಾವ ಹಿಂದೆ ಇರಲಿಲ್ಲ. ತುಂಬಾ ಶ್ರೀಮಂತರ ಮನೆಗಳಲ್ಲಷ್ಟೇ ಊಟದಲ್ಲಿ ವ್ಯತ್ಯಾಸವಿರುತ್ತಿತ್ತೇ ವಿನಃ, ಮಿಕ್ಕವರ ಮದುವೆಗಳಲ್ಲಿ ಅಂಥ ಹೇಳಿಕೊಳ್ಳುವ ವ್ಯತ್ಯಾಸವಿರುತ್ತಿರಲಿಲ್ಲ. ಭೂಮದೂಟಕ್ಕೆ ಮಾಡಿಸುವ ತಿಂಡಿಗಳು ಎಲ್ಲರ ಮನೆಯ ಮದುವೆಗಳಲ್ಲೂ ಅದದೇ. ಫೋಟೋ- ವಿಡಿಯೋಗಳ ಗದ್ದಲವಿಲ್ಲ. ಇದ್ದರೂ, ಅವರೂ ಇವರ ಆಚರಣೆಗಳಿಗೆ ಬೆಲೆ ಕೊಟ್ಟು ತಮ್ಮ ಕೆಲಸವನ್ನು ಪೂರೈಸಿಕೊಡುತ್ತಿದ್ದರು. ಹೆಣ್ಣೊಪ್ಪಿಸುವಾಗ , ಮನೆತುಂಬಿಸಿ ಕೊಳ್ಳುವಾಗ ಆಚರಣೆಗೆ ಮಾತ್ರ ಮಹತ್ವ ಎಂಬಲ್ಲಿಗೆ ಒಂದು ಮದುವೆ ಹೂವೆತ್ತಿದ ಹಾಗೆ ಮುಗಿದು ಹೋಗಿ, ಸಮಾಧಾನದ ನಿಟ್ಟುಸಿರು ಎಲ್ಲರದೂ ಆಗುತ್ತಿತ್ತು.
ಹಿಂದೆ, ಅಂದರೆ ಎರಡು-ಮೂರು ದಶಕಗಳ ಹಿಂದೆ ನಡೆಯುತ್ತಿದ್ದ ಮದುವೆಗಳಿಗೂ, ಈ ನಡೆಯುವ ಮದುವೆಗಳಿಗೂ ವ್ಯತ್ಯಾಸವೇನಿರಬಹುದು? ಎರಡೂ ಕಡೆ ಇರುವುದು ಸಡಗರವೇ. ಒಂದರಲ್ಲಿ ಬಿಡುವು ಹೇರಳವಾಗಿದ್ದು ಜನರ ಸಹಕಾರದೊಡನೆ ಮದುವೆ ಮಾಡಿ ಮುಗಿಸುವ ಕ್ರಮವಾದರೆ, ಮತ್ತೂಂದರಲ್ಲಿ ಎಲ್ಲವನ್ನೂ ದುಡ್ಡಿನ ಅನುಕೂಲದಿಂದ, ಬದಲಾದ ಕಾಲಮಾನಕ್ಕೆ ತಕ್ಕಂತೆ ಮದುವೆ ಮಾಡುವ ಹಂಬಲ. ಈಗಿನ ದಿನಗಳಲ್ಲಿ, ವಿಡಿಯೋದವರಿಗಾಗಿಯೇ ಮದುವೆ ಮಾಡುತಿದ್ದಾರೇನೋ ಎಂಬ ಸಂಶಯ ಬರುವಷ್ಟರ ಮಟ್ಟಿಗೆ ಅವರಿಗೆ ಪ್ರಾಮುಖ್ಯತೆ. ಹಪ್ಪಳ ಸಂಡಿಗೆಯನ್ನೂ ಕೇಟರರ್ಸ್‌ನವರು ನೋಡಿಕೊಳ್ಳುತ್ತಾರೆ. ಹೊರಗಿನ ಆದ್ಯತೆಗಳು ಬದಲಾದಂತೆ ಮದುವೆಯ ಆದ್ಯತೆಗಳೂ ಬದಲಾಗಿವೆ. ಅದೊಂದು ಸ್ಟೇಟಸ್ ತೋರಿಸಿಕೊಳ್ಳುವ ಕ್ರಿಯೆಯಷ್ಟೇ ಆಗಿರದೆ, ಸಂಭ್ರಮಿಸುವ ಹೊಸ ರೀತಿಯೂ ಆಗಿದೆ. ಯಾವುದೇ ರೀತಿಯ ಮದುವೆ ನಡೆದರೂ ಬಂಧಗಳು ಗಟ್ಟಿಯಾಗಿ ಉಳಿಯಲಿ, ಧಾವಂತಕ್ಕೆ , ತೋರುಗಾಣಿಕೆಗೆ ದಾಂಪತ್ಯ ಬಲಿಯಾಗದಿರಲಿ.
ಮಾಲಿನಿ ಗುರುಪ್ರಸನ್ನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಟವರ್ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್ ದಾವೆ: ಸಂಸದ ಕೋಟ
Mangaluru: ಅಡಿಕೆ ಕ್ಯಾನ್ಸರ್ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.