ಇಬ್ಬರಿಗೆ ಕೊರೊನಾ ವೈರಸ್ ಶಂಕೆ: ಮಿಮ್ಸ್‌ನಲ್ಲಿ ಚಿಕಿತ್ಸೆ
Team Udayavani, Mar 18, 2020, 3:00 AM IST
ಮಂಡ್ಯ: ಇಬ್ಬರಿಗೆ ಕೊರೊನಾ ವೈರಸ್ ಲಕ್ಷಣಗಳಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದ್ದು, ಮಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ನಾಗಮಂಗಲ ತಾಲೂಕಿನ 50 ವರ್ಷದ ಮಹಿಳೆ ಹಾಗೂ ಶ್ರೀರಂಗಪಟ್ಟಣದ ವ್ಯಕ್ತಿಯೊಬ್ಬರು ಜ್ವರ, ಗಂಟಲು ಕೆರೆತ, ಕೆಮ್ಮು, ಶೀತದಿಂದ ಬಳಲುತ್ತಿದ್ದಾರೆ. ಈ ಇಬ್ಬರ ಗಂಟಲು ಹಾಗೂ ಮೂಗಿನ ದ್ರಾವಣ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ನಾಗಮಂಗಲ ಪಟ್ಟಣ ನಿವಾಸಿ ಮಹಿಳೆ ಫೆ.15ರಂದು ಬೆಂಗಳೂರು ಏರ್‌ಪೋರ್ಟ್ ಮೂಲಕ ಸೌದಿ ಅರೇಬಿಯಾದ ಜಿದ್ದಾ ಏರ್‌ಪೋರ್ಟ್‌ಗೆ ಹೋಗಿ ಅಲ್ಲಿಂದ ಮೆಕ್ಕಾಗೆ ಹೋಗಿದ್ದರು. ಪ್ರವಾಸ ಮುಗಿಸಿ ಮಾ.1ರಂದು ಬೆಳಗ್ಗೆ 7.30ಕ್ಕೆ ಬೆಂಗಳೂರಿಗೆ ವಾಪಸಾದ ನಂತರ ಟಾಟಾ ಸುಮೋ ವಾಹನದ ಮೂಲಕ ನಾಗಮಂಗಲದ ತಮ್ಮ ಮನೆ ಸೇರಿಕೊಂಡಿದ್ದರು.
ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ, ಸರ್ವೇಲೆನ್ಸ್ ಅಧಿಕಾರಿಗಳು ನಡೆಸಿದ ಪರಿಶೀಲನೆಯಂತೆ ಮೆಕ್ಕಾದಿಂದ ಆಗಮಿಸಿದ ಬಳಿಕ ಮಹಿಳೆ ಜ್ವರ, ಗಂಟಲು ಕೆರೆತದಿಂದ ಬಳಲುತ್ತಿದ್ದರು. ಕೇಂದ್ರ ಸರ್ಕಾರದ ನಿಯಮಾವಳಿಗಳನ್ವಯ ಅವರನ್ನು ಮಿಮ್ಸ್‌ನ ಐಸೋಲೇಷನ್ ವಾರ್ಡ್‌ನಲ್ಲಿಟ್ಟು ಚಿಕಿತ್ಸೆ ಕೊಡಲಾಗುತ್ತಿದೆ. ಆ ಮಹಿಳೆ ಸಂಪೂರ್ಣ ಆರೋಗ್ಯದಿಂದ ಇದ್ದು ಎಲ್ಲರಂತೆ ಕೆಲಸ ಮಾಡುತ್ತಿದ್ದಾರೆ. ಗಂಟಲು ಹಾಗೂ ಮೂಗಿನ ದ್ರಾವಕ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಸಿದ್ಧಿಕಿಗೂ ಇವರಿಗೂ ಸಂಬಂಧವಿಲ್ಲ: ಕಲಬುರಗಿಯಲ್ಲಿ ಕೊರೊನಾ ವೈರಸ್‌ನಿಂದ ಮೃತಪಟ್ಟ ಮಹಮದ್ ಸಿದ್ಧಿಕಿ ಹಾಗೂ ಈ ಮಹಿಳೆ ರಕ್ತ ಸಂಬಂಧಿಗಳೂ ಅಲ್ಲ, ಒಂದೇ ವಿಮಾನದಲ್ಲಿ ಬಂದವರೂ ಅಲ್ಲ ಹಾಗೂ ಯಾವುದೇ ಸಂದರ್ಭದಲ್ಲೂ ಮಹಮದ್ ಸಿದ್ಧಿಕಿ ಜೊತೆ ಸಂಪರ್ಕಕ್ಕೆ ಬಂದಿಲ್ಲ ಎಂದು ವಿಮಾನ ಟಿಕೆಟ್‌ಗಳನ್ನೊಳಗೊಂಡ ದಾಖಲೆ ಸಹಿತ ಮಾಹಿತಿ ನೀಡಿದರು.
ಮಹಮದ್ ಸಿದ್ಧಿಕಿ ಜ.29ರಂದು ಜಿದ್ದಾ ಏರ್‌ಪೋರ್ಟ್‌ಗೆ ತೆರಳಿ ಮತ್ತೆ ಫೆ.29ಕ್ಕೆ ಹೈದರಾಬಾದ್ ಏರ್‌ಪೋರ್ಟ್‌ಗೆ ಬಂದಿಳಿದಿದ್ದಾರೆ. ಅವರೊಂದಿಗೆ ಎಲ್ಲಿಯೂ ಈ ಮಹಿಳೆ ಪ್ರಯಾಣ ಮಾಡಿಲ್ಲ. ಅಲ್ಲದೆ, ಇದೇ ಮಹಿಳೆಯೊಂದಿಗೆ ಸೌದಿ ಅರೇಬಿಯಾದಿಂದ ಆರು ಜನರು ವಾಪಸಾಗಿದ್ದಾರೆ. ಆದರೆ, ಎಲ್ಲರೂ ಆರೋಗ್ಯವಾಗಿದ್ದಾರೆ. ಅವರಿಗೆ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ ಎಂದು ಹೇಳಿದರು.
ಶ್ರೀರಂಗಪಟ್ಟಣದ ವ್ಯಕ್ತಿಗೆ ಶಂಕೆ: ಶ್ರೀರಂಗಪಟ್ಟಣ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಕೂಡ ಕೊರೊನಾ ವೈರಸ್ ಲಕ್ಷಣಗಳಿಂದ ಬಳಲುತ್ತಿರುವುದು ಗಮನಕ್ಕೆ ಬಂದಿದೆ. ಅವರು ಥೈಲ್ಯಾಂಡ್ ಮೂಲಕ ಆಸ್ಟ್ರೇಲಿಯಾದ ಮೆಲ್ಬೋರ್ನ್ಗೆ ಎರಡು ತಿಂಗಳ ತರಬೇತಿಗೆ ಹೋಗಿ ಮಾ.1ರಂದು ಬೆಂಗಳೂರಿಗೆ ವಾಪಸಾಗಿದ್ದರು. ಆ ಸಂದರ್ಭದಲ್ಲಿ ಅವರನ್ನು ಸ್ಕ್ರೀನಿಂಗ್ ಮಾಡಲಾಗಿತ್ತು. ಮನೆಗೆ ಆಗಮಿಸಿದ್ದ ಅವರಿಗೆ ಕಳೆದ ಮೂರ್‍ನಾಲ್ಕು ದಿನಗಳಿಂದ ಕೆಮ್ಮು ಹೆಚ್ಚಾಗಿದ್ದು, ಉಸಿರಾಟಕ್ಕೂ ಕಷ್ಟವಾಗಿದೆ. ಈತನ ದ್ರಾವಕ ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಒಂದು ಪ್ರಕರಣವೂ ದೃಢಪಟ್ಟಿಲ್ಲ: ಇದುವರೆಗೆ ಜಿಲ್ಲೆಯಲ್ಲಿ ಕೊರೊನಾ ವೈರಸ್‌ಗೆ ಸಂಬಂಧಿಸಿದ ಒಂದೇ ಒಂದು ಪ್ರಕರಣವೂ ಪತ್ತೆಯಾಗಿಲ್ಲ. ವಿದೇಶಗಳಿಂದ ಇಲ್ಲಿಯವರೆಗೆ 30 ಜನರು ಜಿಲ್ಲೆಗೆ ಆಗಮಿಸಿದ್ದಾರೆ. ಕಾಲಾನುಕಾಲಕ್ಕೆ ಎಲ್ಲರಿಂದಲೂ ವರದಿ ತರಿಸಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಇಲಾಖೆ ಸಾಕಷ್ಟು ಪ್ರಮಾಣದಲ್ಲಿ ಔಷಧವನ್ನು ದಾಸ್ತಾನು ಮಾಡಿಕೊಂಡಿದೆ. ಸಾರ್ವಜನಿಕರ ಚಿಕಿತ್ಸೆಗೆ ಅನುಕೂಲವಾಗುವಂತಹ ಎಲ್ಲಾ ಸೌಕರ್ಯಗಳನ್ನು ಜಿಲ್ಲಾಡಳಿತ ಒದಗಿಸಲು ಸಿದ್ಧವಿದ್ದು, ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಿಂದ ಹಣ ಬಳಸಿಕೊಳ್ಳುವುದಕ್ಕೆ ಸರ್ಕಾರ ಸೂಚಿಸಿದ್ದು, ಚಿಕಿತ್ಸೆಗೆ ಅನುಕೂಲವಾಗುವಂತೆ ಯಾವುದೇ ಸಲಕರಣೆಗಳನ್ನು ದೊರಕಿಸಿಕೊಡಲು ಸಿದ್ಧರಿರುವುದಾಗಿ ತಿಳಿಸಿದರು.
ಔಷಧಗಳ ದಾಸ್ತಾನು: ಮಂಡ್ಯದ ಮಿಮ್ಸ್, ಬಿ.ಜಿ.ನಗರದ ಆದಿ ಚುಂಚನಗಿರಿ ಆಸ್ಪತ್ರೆ, ಕೆ.ಎಂ.ದೊಡ್ಡಿಯ ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ವ್ಯವಸ್ಥೆ ಮಾಡಿರುವುದಲ್ಲದೆ, ತಾಲೂಕು ಆಸ್ಪತ್ರೆಗಳಲ್ಲೂ ಐಸೋಲೇಷನ್ ವಾರ್ಡ್ ತೆರೆಯಲಾಗಿದೆ. ಸೋಂಕಿನ ಲಕ್ಷಣಗಳಿರುವ ವ್ಯಕ್ತಿಗಳು ಕಂಡುಬಂದರೆ ಟ್ಯಾಮಿಫೂ ಔಷಧಗಳನ್ನು ದಾಸ್ತಾನು ಮಾಡಿ ನೀಡಲಾಗುತ್ತಿದೆ ಎಂದು ಹೇಳಿದರು.
ಜ್ವರ, ಶೀತ, ಕೆಮ್ಮು, ನೆಗಡಿಯಿಂದ ಬಳಲುತ್ತಿರುವವರು ಇದ್ದರೆ ಕೂಡಲೇ ಸಮೀಪದ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಿ. ಸಾರ್ವಜನಿಕರ ಮಾಹಿತಿಗಾಗಿ ಆರೋಗ್ಯ ಇಲಾಖೆಯ ಸಹಾಯವಾಣಿ 104, ಜಿಲ್ಲಾಡಳಿತ ಸಹಾಯವಾಣಿ 1077 ಹಾಗೂ ಪೊಲೀಸ್ ಸಹಾಯವಾಣಿ 100 ಸಂಖ್ಯೆಗೆ ಸಂಪರ್ಕಿಸಬಹುದು. ತಮಿಳುನಾಡು, ಕೇರಳ, ಆಂದ್ರ ಪ್ರದೇಶದಿಂತ ಬಂದವರು ತಪಾಸಣೆ ಮಾಡಿಸಿಕೊಳ್ಳಬೇಕು. ವಿದೇಶಗಳಿಂದ ಬಂದವರು ಮಾಹಿತಿ ಕೊಡದಿದ್ದರೆ ತಕ್ಷಣವೇ ಮಾಹಿತಿ ನೀಡುವಂತೆ ಹೇಳಿದರು. ಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಪಿ.ಮಂಚೇಗೌಡ, ಸರ್ವೇಕ್ಷಣಾಧಿಕಾರಿ ಬಾಲಕೃಷ್ಣ ಹಾಗೂ ವಾರ್ತಾಧಿಕಾರಿ ಹರೀಶ್ ಮತ್ತಿತರರಿದ್ದರು.
ಖಾಸಗಿ ಶಾಲೆಗಳಿಗೆ ರಜೆ ಕೊಡದಿದ್ದರೆ ಕ್ರಮ: ಕೊರೊನಾ ವೈರಸ್ ಹರಡುವ ಭೀತಿಯಿಂದ ರಾಜ್ಯಸರ್ಕಾರದ ಆದೇಶದಂತೆ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಇದರ ನಡುವೆಯೂ ಕೆಲವು ಖಾಸಗಿ ಶಾಲೆಗಳು ಮಕ್ಕಳನ್ನು ಶಾಲೆಗೆ ಕರೆಸಿಕೊಂಡು ಪಾಠಪ್ರವಚನದಲ್ಲಿ ತೊಡಗಿರುವುದು ಕಂಡು ಬಂದಿದೆ. ಶಾಲೆಗಳನ್ನು ಬಂದ್ ಮಾಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಎಚ್ಚರಿಕೆ ನೀಡಿರುವುದಾಗಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸ್ಪಷ್ಟಪಡಿಸಿದರು.
ಮಾಸ್ಕ್, ಸ್ಯಾನಿಟೈಜರ್ ಅವಶ್ಯಕತೆ ಇಲ್ಲ!: ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಹಾಗೂ ಪಾರಾಮೆಡಿಕಲ್ ಸಿಬ್ಬಂದಿಗೆ ಮಾಸ್ಕ್ ಅವಶ್ಯಕತೆ ಇದೆಯೇ ಹೊರತು ಸಾಮಾನ್ಯ ಜನರಿಗೆ ಅದರ ಅವಶ್ಯಕತೆ ಇಲ್ಲ. ಮಾಮೂಲಿ ಮಾಸ್ಕ್ ಧರಿಸುವುದರಿಂದ ಯಾವುದೇ ಪ್ರಯೋಜನವೂ ಇಲ್ಲ. ತ್ರೀ-ಲೇಯರ್ ಇರುವ ಮಾಸ್ಕ್ ಇದ್ದರಷ್ಟೇ ಪ್ರಯೋಜನ. ಇನ್ನು ಶುಚಿತ್ವ ಕಾಪಾಡುವುದಕ್ಕೆ ಮನೆಯಲ್ಲಿ ಬಳಸುವ ಸೋಪುಗಳೇ ಸಾಕು. ಅದಕ್ಕಾಗಿ ಸ್ಯಾನಿಟೈಜರ್ ಬಳಸುವ ಅಗತ್ಯವಿಲ್ಲ. ಸಾಮಾನ್ಯ ಸೋಪುಗಳಲ್ಲೇ ರೋಗಾಣುಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಸ್ ತಿಳಿಸಿದರು.
ಜಾತ್ರೆ, ಹಬ್ಬ, ಮದುವೆ ಸರಳವಾಗಿರಲಿ!: ಗ್ರಾಮಾಂತರ ಪ್ರದೇಶಗಳಲ್ಲಿ ನಡೆಸಲಾಗುವ ಜಾತ್ರೆ, ಹಬ್ಬಗಳನ್ನು ಎಲ್ಲರೂ ಸರಳವಾಗಿ ಆಚರಿಸುವುದರಿಂದ ಯಾವುದೇ ತೊಂದರೆ ಇಲ್ಲ. ಗುಂಪುಗೂಡದೆ ಮನೆ ಮನೆಗಳಲ್ಲೇ ಹಬ್ಬ ಆಚರಿಸುವುದು ಉತ್ತಮ. ಯಾರೂ ಪ್ರತಿಷ್ಠೆಗೆ ಬಿದ್ದು ಜಾತ್ರೆ, ಹಬ್ಬಗಳನ್ನು ಆಚರಿಸಬಾರದು. ಸದ್ಯದ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಎಲ್ಲರೂ ಸಹಕಾರ ನೀಡಬೇಕು. ಮದುವೆ ಸಮಾರಂಭಗಳನ್ನೂ ನೂರಕ್ಕಿಂತ ಕಡಿಮೆ ಜನರನ್ನು ಆಹ್ವಾನಿಸಿ ಸರಳವಾಗಿ ಆಚರಿಸುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಸಲಹೆ ನೀಡಿದರು.
ಹಕ್ಕಿಜ್ವರದ ಭೀತಿ ಇಲ್ಲ: ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲಿಯೂ ಹಕ್ಕಿಜ್ವರದ ಭೀತಿ ಕಂಡುಬಂದಿಲ್ಲ. ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ರಂಗನತಿಟ್ಟು ಪಕ್ಷಿಧಾಮಕ್ಕೆ ತೆರಳಿ ಹಕ್ಕಿಗಳ ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಮೈಸೂರಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದರಿಂದ ಅಲ್ಲಿ ಕೋಳಿ ಮಾರಾಟವನ್ನು ನಿಷೇಧಿಸಲಾಗಿದೆ. ಅದಕ್ಕಾಗಿ ಮೈಸೂರಿನಿಂದ ಕೋಳಿಗಳನ್ನು ಇಲ್ಲಿಗೆ ಪೂರೈಸದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ತಿಳಿಸಿದರು.
ಜಿಲ್ಲೆಯ ಯಾವ ಭಾಗದಲ್ಲೂ ಹಕ್ಕಿಜ್ವರದ ಬಗ್ಗೆ ಆತಂಕವಿಲ್ಲ. ಯಾವುದೇ ಕೋಳಿಫಾರಂಗಳಲ್ಲೂ ಕೋಳಿಗಳು ಸತ್ತಿರುವ ಬಗ್ಗೆ ಇದುವರೆಗೂ ವರದಿಯಾಗಿಲ್ಲ, ಅಂತಹ ರೋಗಲಕ್ಷಣಗಳೂ ಕಂಡುಬಂದಿಲ್ಲ. ಹಾಗಾಗಿ ಹಕ್ಕಿಜ್ವರದ ಬಗ್ಗೆ ಯಾರಿಗೂ ಭಯ ಬೇಡ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Maddur; ಕೆಲಸದ ಒತ್ತಡ: ಎಂಜಿನಿಯರ್ ಆತ್ಮಹ*ತ್ಯೆ
Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.