“ಯಕ್ಷಗಾನ ಮೇಳದಲ್ಲಿ ಪ್ರಧಾನ ಭಾಗವತ ಅಂದ್ರೆ ಶಾಲೆಗೆ ಹೆಡ್‌ಮಾಸ್ಟರ್ ಇದ್ದಾಗೆ’
Team Udayavani, Mar 19, 2020, 5:52 AM IST
ಬಡಗುತಿಟ್ಟಿನ ಹಿರಿಯ ಸಾಂಪ್ರದಾಯಿಕ ಶೈಲಿಯ ಭಾಗವತ ಹಾಗೂ ನೂರಾರು ಯಶಸ್ವಿ ಕಲಾವಿದರನ್ನು ಸೃಷ್ಟಿಸಿದ ಗುರುಗಳು ಕೆ.ಪಿ. ಹೆಗಡೆಯವರು. ಇವರು ಬಡಗಿನ ಹಲವಾರು ಬಯಲಾಟ ಹಾಗೂ ಡೇರೆ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಕಳೆದ ಐದು ವರ್ಷಗಳಿಂದ ಯಕ್ಷರಂಗದಿಂದ ನಿವೃತ್ತಿ ಹೊಂದಿರುವ ಇವರು ಪ್ರಸ್ತುತ ತೆಕ್ಕಟ್ಟೆ ಯಶಸ್ವಿ ಕಲಾವೃಂದದ ಮೂಲಕ ಯಕ್ಷಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುದಿನ ಪ್ರತಿಭಾ ಸಿರಿಗೆ ಇವರನ್ನು ಸಂದರ್ಶಿಸಿದ್ದಾರೆ ರಾಜೇಶ್ ಗಾಣಿಗ ಅಚ್ಲಾಡಿ.
ಬಡುಗುತಿಟ್ಟಿನ ಯಕ್ಷರಂಗದಲ್ಲಿ ಕೆ.ಪಿ. ಹೆಗಡೆ ಎಂದೇ ಪ್ರಸಿದ್ಧರಾದ ಕೃಷ್ಣಪರಮೇಶ್ವರ ಹೆಗಡೆ 03-07-1959ರಲ್ಲಿ ಶಿರಸಿ ಸಿದ್ಧಾಪುರದ ಗೋಳೊYàಡಿನಲ್ಲಿ ಪರಮೇಶ್ವರ ಹೆಗಡೆ ಹಾಗೂ ತುಂಗಮ್ಮ ದಂಪತಿಯ ಪುತ್ರನಾಗಿ ಜನಿಸಿದವರು. ಆರಂಭದಲ್ಲಿ ಹೊಸತೋಟ ಮಂಜುನಾಥ ಭಾಗವತರಲ್ಲಿ ಯಕ್ಷಗಾನದ ಪ್ರಾಥಮಿಕ ಶಿಕ್ಷಣವನ್ನು ಪಡೆದು ಅನಂತರ 1977-78ರಲ್ಲಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರಕ್ಕೆ ಸೇರ್ಪಡೆಗೊಂಡು ಗುರುಗಳಾದ ನಾರಾಯಣ ಉಪ್ಪೂರರ ಮೂಲಕ ಕಲೆಯನ್ನು ಹಂತ-ಹಂತವಾಗಿ ಕರಗತಮಾಡಿಕೊಂಡರು.
1980ರಲ್ಲಿ ಮಂದಾರ್ತಿ ಮೇಳದ ಮೂಲಕ ಯಕ್ಷವೃತ್ತಿಯನ್ನು ಆರಂಭಿಸಿದ ಇವರು ಮುಲ್ಕಿ, ಹಿರೇಮಹಾಲಿಂಗೇಶ್ವರ ಕೋಟ, ಶಿರಿಸಿ, ಪಂಚಲಿಂಗೇಶ್ವರ, ಸಾಲಿಗ್ರಾಮ, ಪೆರ್ಡೂರು, ಕುಮಟ, ಕಮಲಶಿಲೆ, ಮಂದಾರ್ತಿ ಮೇಳಗಳಲ್ಲಿ 35ವರ್ಷ ಯಶಸ್ವಿ ಸೇವೆ ಸಲ್ಲಿಸಿದ್ದಾರೆ ಹಾಗೂ 22ವರ್ಷ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ, ಐದು ವರ್ಷ ಮಂದಾರ್ತಿಯಲ್ಲಿ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ತೆಕ್ಕಟ್ಟೆ ಯಶಸ್ವಿ ಕಲಾವೃಂದದಲ್ಲಿ ಗುರುಗಳಾಗಿದ್ದಾರೆ. ಇಂದು ಯಕ್ಷರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ನೂರಾರು ಯುವ ಕಲಾವಿದರು ಇವರ ಶಿಷ್ಯರಾಗಿದ್ದಾರೆ. ಲಲಿತಾ ಹೆಗಡೆಯವರನ್ನು ಪತ್ನಿಯಾಗಿ ಪಡೆದ ಇವರು, ಪುತ್ರ ವಿನಯ್ ಹಾಗೂ ಪುತ್ರಿ ಸಹನಾಳೊಂದಿಗೆ ಕೋಟದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇವರ ಯಕ್ಷಸೇವೆಯನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಜತೆಗೆ ಹಲವಾರು ಸಂಘ-ಸಂಸ್ಥೆಗಳ ಗೌರವ ದೊರೆತಿದೆ.
ಯಕ್ಷಗಾನ ಕ್ಷೇತ್ರವನ್ನು ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿರಾ? ಅಥವಾ ಅನಿವಾರ್ಯವಾಯಿತಾ?
ಇಲ್ಲ, ಯಕ್ಷಗಾನ ನನಗೆ ಬಾಲ್ಯದಿಂದಲೂ ಆಸಕ್ತಿಯ ಕ್ಷೇತ್ರ. ನನ್ನ ಚಿಕ್ಕಪ್ಪ, ಸಹೋದರ ಮಾವ ಮುಂತಾದವರಿಗೆ ಈ ಬಗ್ಗೆ ಸಾಕಷ್ಟು ಆಸಕ್ತಿ ಇತ್ತು. ಆದ್ದರಿಂದ ನಾನೊಬ್ಬ ಉತ್ತಮ ಕಲಾವಿದನಾಗಬೇಕು ಎನ್ನುವ ಹಂಬಲ ಬಾಲ್ಯದಿಂದಲೂ ಇತ್ತು.
ಯಕ್ಷಗಾನ ಕ್ಷೇತ್ರ ನಿಮ್ಮ ಆರಂಭದ ದಿನದಲ್ಲಿ ಹೇಗಿತ್ತು?
ನಾನು 1979-80ರಲ್ಲಿ ಮಂದಾರ್ತಿ ಮೇಳದ ಮೂಲಕ ಯಕ್ಷಪಯಣವನ್ನು ಆರಂಭಿಸಿದೆ. ಆಗ ಕಲಾವಿದ, ಕಲೆ ತುಂಬಾ ಬಡವಾಗಿತ್ತು. ಪ್ರತಿದಿನ ಪ್ರದರ್ಶನಕ್ಕಾಗಿ 10-15ಮೈಲು ಕಾಲ್ನಡಿಗೆಯಲ್ಲಿ ತರೆಳುತ್ತಿದ್ದೆವು. ಒಮ್ಮೊಮ್ಮೆ ಆಟವಾಡಿಸುವ ಜಾಗ ತಲುಪುವಾಗ ಮಧ್ಯಾಹ್ನ 12ಗಂಟೆ ಆಗುತಿತ್ತು, ಊಟ 4-5ಗಂಟೆಗೆ. ಪ್ರಧಾನ ಭಾಗವತರ ಆಣತಿಯಂತೆ ಪ್ರತಿಯೊಂದು ನಡೆಯುತಿತ್ತು.
ಇಂದು ಯಕ್ಷಗಾನ ಕ್ಷೇತ್ರ ಹೇಗಿದೆ?
ಯಕ್ಷಗಾನ ಕ್ಷೇತ್ರ ತುಂಬಾ ಶ್ರೀಮಂತವಾಗಿ ಬೆಳೆದಿದೆ. ಆದರೆ ಸಾಂಪ್ರದಾಯದ ವಿಚಾರದಲ್ಲಿ ಸಾಕಷ್ಟು ಸೋತಿದೆ. ಇಂದು ಕಲಾವಿದರಿಗೆ ಸಾಫ್ಟ್ ವೇರ್ ಸಂಸ್ಥೆಗಳಲ್ಲಿ ಸಿಗುವಂತಹ ಗೌರವಗಳು ಸಿಗುತ್ತಿವೆ. ಆದರೆ ಕಲೆಗೆ ಗೌರವ ನೀಡುವಲ್ಲಿ ಸೋಲುತ್ತಿದ್ದೇವೆ.
ಯಕ್ಷಗಾನದಲ್ಲಿ ಸಂಪ್ರದಾಯ ಪಾಲನೆ ಬಗ್ಗೆ ಏನು ಹೇಳುತ್ತೀರಿ ?
ಯಕ್ಷಗಾನ ಕಲೆಗೆ ಸಂಪ್ರದಾಯ ಎನ್ನುವಂತದ್ದು ಜೀವಾಳವಾಗಿದೆ. ಸಂಪ್ರದಾಯ ಮರೆಯಾದರೆ ಕಲೆಯ ನೈಜ ಸತ್ವ ಮರೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಂಪ್ರದಾಯವನ್ನು ಉಳಿಸಿ-ಬೆಳೆಸಲು ಕೊಡುಗೆ ನೀಡಬೇಕು.
ನಿಮ್ಮ ಪ್ರಕಾರ ಓರ್ವ ಶ್ರೇಷ್ಠ ಪ್ರಧಾನ ಭಾಗವತ ಹೇಗಿರಬೇಕು ?
ಯಕ್ಷಗಾನ ಮೇಳದಲ್ಲಿ ಭಾಗವತನ ಪಾತ್ರ ಹೇಗಿರಬೇಕೆಂದರೆ ಶಾಲೆಯಲ್ಲಿ ಹೆಡ್ ಮೇಸ್ಟರ್ ಇದ್ದಾಗೆ ಇರಬೇಕು. ಮುಖ್ಯ ಶಿಕ್ಷಕನಾದವ ಯಾವ ರೀತಿ ಶಾಲೆಗೆ ಬೇಗ ಬಂದು ಶಿಕ್ಷಕರ ಹಾಜರಾತಿ ಪಡೆದು, ಅವರಿಗೆ ಕೆಲಸ ಹಂಚಿಕೆ ಮಾಡಿ, ಸರಿತಪ್ಪು ಗಳನ್ನು ಮಾರ್ಗದರ್ಶನ ಮಾಡುತ್ತಾನೋ ಅದೇ ರೀತಿ ಮೇಳದ ಪ್ರಧಾನ ಭಾಗವತನಾದವನು ಚೌಕಿಗೆ ಬೇಗ ಬಂದು ಪ್ರಸಂಗ ನಿರ್ಣಯ ಮಾಡಿ, ಕಲಾವಿದರಿಗೆ ವೇಷಗಳನ್ನು ಹಂಚಿಹಾಕಿ, ಪ್ರಸಂಗದ ನಡೆಯನ್ನು ಅವರಿಗೆ ಹೇಳಿಕೊಟ್ಟು, ತಪ್ಪುಗಳನ್ನು ತಿದ್ದಿ ಪ್ರದರ್ಶನ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು.
ಇಂದಿನ ಯುವ ಭಾಗವತರ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಯುವ ಭಾಗವತರಲ್ಲಿ ಹಲವರಿಗೆ ಉತ್ತಮ ಸ್ವರಭಾರವಿದೆ ಹಾಗೂ ಆಧುನಿಕ ಧ್ವನಿವರ್ಧಕಗಳು ಕೂಡ ಅವರಿಗೆ ಅನುಕೂಲವಾಗಿವೆ. ಆದರೆ ಯಾವ ರೀತಿ ಪ್ರದರ್ಶನವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು, ಯಾವ ರಾಗವನ್ನು ಯಾವ ಸಂದರ್ಭ ಬಳಸಬೇಕು ಎನ್ನುವ ಪರಿಕಲ್ಪನೆಯೇ ಇಲ್ಲವಾಗಿದೆ. ಯಾಕೆಂದರೆ ಈಗಿನ ಬಹುತೇಕ ಭಾಗವತರು ರಾತ್ರಿ 10-11ಗಂಟೆಗೆ ಮೋಹನ ರಾಗವನ್ನು ಬಳಸಿ ಪದ್ಯ ಹೇಳುತ್ತಾರೆ. ನಿಜವಾಗಿಯೂ ಈ ರಾಗವನ್ನು ಬೆಳಗ್ಗಿನ ಜಾವದಲ್ಲಿ ಬಳಸಿದರೆ ಮಾತ್ರ ಇಂಪಾಗಿರುತ್ತದೆ.
ಭಾಗವತಿಕೆ ಕ್ಷೇತ್ರವನ್ನು ಆಯ್ದುಕೊಳ್ಳುವ ಯುವಕರಿಗೆ ನಿಮ್ಮ ಕಿವಿಮಾತು ಏನು?
ಭಾಗವತನಾಗಿ ರಂಗವೇರುವ ಮೊದಲು ಕಲಿಕೆಯನ್ನು ಮಾಡಿಕೊಳ್ಳಿ. ತಾಳಗಳು, ಸಭಾಲಕ್ಷಣ ಹಾಗೂ ಪ್ರಸಂಗದ ನಡೆಯನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಳ್ಳಿ.ಆದಷ್ಟು ಪ್ರದರ್ಶನಗಳನ್ನು ನೋಡುವ ಹವ್ಯಾಸ ಬೆಳೆಸಿಕೊಳ್ಳಿ
ಹೊಸ ಪ್ರಸಂಗಗಳ ಬಗ್ಗೆ ಏನು
ಹೇಳುತ್ತೀರಿ ?
ವೈಯಕ್ತಿಕವಾಗಿ ನನಗೆ ಹೊಸಪ್ರಸಂಗಗಳ ಬಗ್ಗೆ ಆಸಕ್ತಿ ಇಲ್ಲ. ಆದರೆ ಮೇಳದಲ್ಲಿದ್ದಾಗ ಅನಿವಾರ್ಯವಾಗಿ ಆಡಿಸಿದ್ದೇನೆ. ಇಂದಿನ ಕಾಲಘಟ್ಟಕ್ಕೆ ಈ ಪ್ರಸಂಗಗಳು ಅನಿವಾರ್ಯ. ಆದರೆ ಹೊಸಪ್ರಸಂಗವನ್ನು ಪೌರಾಣಿಕ ಪ್ರಸಂಗದ ರೀತಿಯಲ್ಲಿ, ಅದೇ ನಡೆಯಲ್ಲಿ ಆಡಿಸಬಹುದು ಎನ್ನುವುದನ್ನು ಭಾಗ್ಯಭಾರತಿ ಮುಂತಾದ ಪ್ರಸಂಗಗಳ ಮೂಲಕ ತೋರಿಸಿಕೊಟ್ಟಿದ್ದೇನೆ. ಪ್ರತಿಯೊಂದು ಹೊಸಪ್ರಸಂಗವನ್ನು ಹಳೆಪ್ರಸಂಗದ ರೀತಿ ಆಡಿಸಬಹುದು.
ನಿವೃತ್ತಿಯ ಅನಂತರ ಕಲಾವಿದ ಯಾವ ರೀತಿ ಜೀವನ ನಡೆಸಬೇಕು?
ಒಳ್ಳೆಯ ಪ್ರಶ್ನೆ ಕೇಳಿದ್ದೀರಿ.ಇಂದು ಬಹುತೇಕ ಕಲಾವಿದರು ನಿವೃತ್ತಿಯ ಅನಂತರ ತಮ್ಮ ಜವಬ್ದಾರಿ ಮುಗಿಯಿತು ಎಂದು ಭಾವಿಸ್ತುತಾರೆ. ಆದರೆ ನಿವೃತ್ತಿ ಅನಂತರ ನಾವು ಕಲಿತ ವಿಚಾರ, ಭಾಗವತಿಕೆ ಮುಂತಾದವುಗಳನ್ನು ಸಂಪ್ರದಾಯಬದ್ಧವಾಗಿ ಒಂದಷ್ಟು ಮಂದಿಗೆ ಹೇಳಿಕೊಡುವ ಮೂಲಕ ಯಕ್ಷಗಾನಕಲೆಯನ್ನು ಉಳಿಸಿ ಬೆಳೆಸಲು ಕೊಡುಗೆ ನೀಡಬಹುದು ಹಾಗೂ ನಮ್ಮ ಕಾಲದ ಅನಂತರವೂ ಈ ಕ್ಷೇತ್ರಕ್ಕೆ ನಾವು ನೀಡಿದ ಕೊಡುಗೆಯನ್ನು ಸ್ಮರಿಸುವ ಜನಾಂಗವನ್ನು ಉಳಿಸಬಹುದು.
ನಿಮ್ಮ ಮೆಚ್ಚಿನ ಕಲಾವಿದರು ಯಾರು
ತುಂಬಾ ಜನ ಕಲಾವಿದರು ಇದ್ದಾರೆ. ಅದರಲ್ಲಿ ಚಿಟ್ಟಾಣಿ, ಕೆರೆಮನೆ ಶಂಭುಹೆಗಡೆ, ಗೋಪಾ ಲ ಆಚಾರ್ಯ, ಐರೋಡಿ ಗೋವಿಂದಪ್ಪ ಹೀಗೆ ಹಲವು ಮಂದಿ ಮೆಚ್ಚಿನ ಕಲಾವಿದರಿದ್ದಾರೆ.
ಈ ಕ್ಷೇತ್ರಕ್ಕೆ ಬಂದ ಬಗ್ಗೆ ತೃಪ್ತಿ ಇದೆಯಾ ?
ತೃಪ್ತಿ ಇಲ್ಲ, ಸಮಾಧಾನ ಇದೆ. ಏಕೆಂದರೆ ಬಡಗಿನ ಹೆಚ್ಚಿನ ಡೇರೆ, ಬಯಲಾಟ ಮೇಳದಲ್ಲಿ ಕೆಲಸ ಮಾಡಿ ದ್ದೇನೆ.. ಗುರುವಾಗಿ ಒಂದಷ್ಟು ಮಂದಿಗೆ ವಿಧ್ಯೆ ಹೇಳಿದ್ದೇನೆ. ಹೀಗಾಗಿ ತುಂಬಾ ಸಮಾಧಾನ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.