ಕೋವಿಡ್-19 ಸಂಕಷ್ಟ: ನಾವು ಸ್ವಸ್ಥವಾಗಿದ್ದರೆ, ಜಗತ್ತೂ ಸ್ವಸ್ಥ

ಪ್ರಧಾನಿ ಸಂದೇಶದ ಪೂರ್ಣ ಪಾಠ

Team Udayavani, Mar 20, 2020, 7:00 AM IST

ಕೋವಿಡ್-19 ಸಂಕಷ್ಟ: ನಾವು ಸ್ವಸ್ಥವಾಗಿದ್ದರೆ, ಜಗತ್ತೂ ಸ್ವಸ್ಥ

ನಿಮಗೆ ಏನೂ ಆಗುವುದಿಲ್ಲ, ನೀವು ಸರಿಯಾಗಿಯೇ ಇದ್ದೀರಿ ಎಂದು ಭಾವಿಸಿ ಮಾರುಕಟ್ಟೆಯಲ್ಲೋ ರಸ್ತೆಯಲ್ಲೋ ಅಡ್ಡಾಡುತ್ತಾ ಕೊರೊನಾದಿಂದ ಬಚಾವಾಗಬಹುದು ಎಂದು ಭಾವಿಸಲೇಬೇಡಿ. ಈ ಯೋಚನೆ ತಪ್ಪು. ಹೀಗೆ ಮಾಡಿದರೆ ನೀವು ನಿಮಗಷ್ಟೇ ಅಲ್ಲದೇ ನಿಮ್ಮ ಪ್ರೀತಿಪಾತ್ರರಿಗೆ ಹಾಗೂ ಪರಿವಾರದವರಿಗೂ ಅನ್ಯಾಯ ಮಾಡುತ್ತೀರಿ.

ನಮಸ್ಕಾರ. ನನ್ನ ಪ್ರೀತಿಯ ದೇಶವಾಸಿಗಳೇ… ಇಡೀ ಜಗತ್ತು ಈಗ ಅತ್ಯಂತ ಬಿಕ್ಕಟ್ಟಿನ ಸಮಯವನ್ನು ಎದುರಿಸುತ್ತಿದೆ. ಸಾಮಾನ್ಯವಾಗಿ ಪ್ರಾಕೃತಿಕ ಸಂಕಷ್ಟ ಎದುರಾದಾಗಲೆಲ್ಲ ಅದು ಕೇವಲ ಕೆಲವು ದೇಶಗಳಿಗೋ ಅಥವಾ ರಾಜ್ಯಗಳಿಗೋ ಸೀಮಿತವಾಗಿರುತ್ತವೆ. ಆದರೆ ಈ ಬಾರಿಯ ಬಿಕ್ಕಟ್ಟು ಹೇಗಿದೆಯೆಂದರೆ, ಅದು ಜಗತ್ತಿನಾದ್ಯಂತ ಇಡೀ ಮಾನವ ಕುಲವನ್ನೇ ಸಂಕಷ್ಟಕ್ಕೆ ತಳ್ಳಿಬಿಟ್ಟಿದೆ.

ಕೋವಿಡ್-19 ರೋಗದಿಂದ ಇಂದು ಎಷ್ಟೊಂದು ದೇಶಗಳ ಮೇಲೆ ಪರಿಣಾಮವಾಗಿದೆಯೆಂದರೆ, ಈ ಪ್ರಮಾಣದ ಪರಿಣಾಮ ಮೊದಲ ವಿಶ್ವ ಯುದ್ಧವಾದಾಗ ಮತ್ತು 2ನೇ ವಿಶ್ವಯುದ್ಧವಾದಾಗಲೂ ಇಷ್ಟೊಂದು ದೇಶಗಳ ಮೇಲೆ ಆಗಿರಲಿಲ್ಲ.

ಕಳೆದ ಎರಡು ತಿಂಗಳಿಂದ ನಾವು ಪ್ರಪಂಚದೆಲ್ಲೆಡೆಯಿಂದ ಹರಿದುಬರುತ್ತಿರುವ ಕೋವಿಡ್-19 ವೈರಸ್‌ಗೆ ಸಂಬಂಧಿಸಿದ ಕಳವಳಕಾರಿ ಸುದ್ದಿಗಳನ್ನು ಕೇಳುತ್ತಿದ್ದೇವೆ, ನೋಡುತ್ತಿದ್ದೇವೆ. ಈ ಎರಡು ತಿಂಗಳಲ್ಲಿ ದೇಶದ 130 ಕೋಟಿ ನಾಗರಿಕರು ಈ ಜಾಗತಿಕ ಮಹಾಮಾರಿಯನ್ನು ಅಚಲವಾಗಿ ನಿಂತು ಎದುರಿಸಿದ್ದಾರೆ. ದೇಶವಾಸಿಗಳೆಲ್ಲರೂ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವಲ್ಲಿ ಪೂರ್ಣ ಪ್ರಯತ್ನವನ್ನೂ ಮಾಡಿದ್ದಾರೆ.

ಆದರೆ, ಕಳೆದ ಕೆಲವು ದಿನಗಳಿಂದ, ಒಂದು ರೀತಿಯ ವಾತಾವರಣ ನಿರ್ಮಾಣವಾಗಿದೆ. ನಾವು ಸಂಕಷ್ಟದಿಂದ ಬಚಾವಾಗಿದ್ದೇವೇನೋ ಎಂಬಂಥ ವಾತಾವರಣವದು. ಏನೂ ಆಗಿಯೇ ಇಲ್ಲ, ಎಲ್ಲವೂ ಸರಿಯಾಗಿಯೇ ಇದೆ ಎಂದು ನಿಮಗೆ ಅನಿಸುತ್ತಿರಬಹುದು. ಆದರೆ ಕೊರೊನಾ ಎಂಬ ಈ ಜಾಗತಿಕ ಪಿಡುಗಿನಿಂದ ನಾವು ಬಿಡುಗಡೆಯಾಗಿದ್ದೇವೆ, ಬಚಾವಾಗಿಬಿಟ್ಟಿದ್ದೇವೆ ಎಂಬ ಯೋಚನೆ ಖಂಡಿತ ಸರಿಯಲ್ಲ. ಪ್ರತಿಯೊಬ್ಬ ಭಾರತವಾಸಿಯೂ ಎಚ್ಚರಿಕೆಯಿಂದಿರುವುದು ಮುನ್ನೆಚ್ಚರಿಕೆ ವಹಿಸುವುದುತೀರಾ ಆವಶ್ಯಕ.

ಗೆಳೆಯರೇ, ನಾನು ಯಾವಾಗ ಏನು ಕೇಳಿದ್ದೇನೋ ಅದನ್ನೆಲ್ಲ ನೀವು ಕೊಟ್ಟಿದ್ದೀರಿ. ದೇಶವಾಸಿಗಳು ಎಂದಿಗೂ ನನ್ನನ್ನು ನಿರಾಶೆಗೊಳಿಸಿಲ್ಲ. ಹೀಗಾಗಿ ನಾನು ಪ್ರತಿಯೊಬ್ಬ ದೇಶವಾಸಿಗಳಲ್ಲೂ ಏನೋ ಕೇಳಲು ಬಂದಿದ್ದೇನೆ. ನನಗೆ… ನಿಮ್ಮ ಮುಂದಿನ ಕೆಲವು ವಾರಗಳು ಬೇಕು. ನನಗೆ ನಿಮ್ಮ ಮುಂದಿನ ಕೆಲವು ಸಮಯ ಕೊಡಿ.

ನನ್ನ ಪ್ರೀತಿಯ ದೇಶವಾಸಿಗಳೇ… ಈವರೆಗೆ ವಿಜ್ಞಾನವೂ ಕೊರೊನಾ ಮಹಾಮಾರಿಯಿಂದ ಪಾರಾಗಲು ನಿಶ್ಚಿತ ಪರಿಹಾರವನ್ನು ಕಂಡುಕೊಂಡಿಲ್ಲ. ಈಗಲೂ ಇದಕ್ಕೆ ಲಸಿಕೆ ಸಿದ್ಧವಾಗಿಲ್ಲ. ಇಂಥ ಸಮಯದಲ್ಲಿ ಎಲ್ಲರಲ್ಲೂ ಚಿಂತೆ-ಕಳವಳ ಹೆಚ್ಚುವುದು ಸ್ವಾಭಾವಿಕವೇ ಆಗಿದೆ.

ಯಾವೆಲ್ಲಾ ದೇಶಗಳಲ್ಲಿ ಕೋವಿಡ್-19 ವೈರಸ್‌ನ ಪ್ರಭಾವ ಹೆಚ್ಚು ಕಾಣಿಸಿಕೊಂಡಿದೆಯೋ, ಅಲ್ಲಿನ ಅಧ್ಯಯನಗಳಿಂದ ಒಂದು ಸಂಗತಿಯಂತೂ ಸಾಬೀತಾಗಿದೆ. ಈ ದೇಶಗಳಲ್ಲಿ ಆರಂಭದ ಕೆಲವು ದಿನಗಳ ನಂತರ ರೋಗ ಹಠಾತ್ತನೆ ವಿಸ್ಫೋಟವಾಗಿದೆ. ಆ ದೇಶಗಳೆಲ್ಲೆಲ್ಲ ಕೋವಿಡ್-19 ಸೋಂಕಿತರ ಸಂಖ್ಯೆ ಅತ್ಯಂತ ವೇಗವಾಗಿ ಬೆಳೆದಿದೆ. ಭಾರತ ಸರ್ಕಾರವು ಈ ಜಾಗತಿಕ ಮಹಾಮಾರಿಯ ಹರಡುವಿಕೆಯ ಟ್ರ್ಯಾಕ್‌ ರೆಕಾರ್ಡ್‌ನ ಮೇಲೆ ಪೂರ್ತಿ ಗಮನ ನೆಟ್ಟಿದೆ. ಆದಾಗ್ಯೂ, ಇವೆಲ್ಲದರ ನಡುವೆಯೇ ಕೆಲವು ದೇಶಗಳು ಸೂಕ್ತ ನಿರ್ಧಾರಗಳನ್ನು ಕೈಗೊಂಡು, ತಮ್ಮ ಜನರನ್ನು ಹೆಚ್ಚು ಹೆಚ್ಚಾಗಿ ಏಕಾಂತದಲ್ಲಿರಿಸಿ ಪರಿಸ್ಥಿತಿಯನ್ನು ಸಂಭಾಳಿಸಿವೆ. ಇದರಲ್ಲಿ ನಾಗರಿಕರ ಭೂಮಿಕೆಯೂ(ಪಾತ್ರ) ಮಹತ್ವದ್ದಾಗಿದೆ.

ಕೋವಿಡ್-19 ಎದುರೊಡ್ಡುತ್ತಿರುವ ಬಿಕ್ಕಟ್ಟು ಸಾಮಾನ್ಯ ವಿಷಯವೇನಲ್ಲ. ಇಂದು ದೊಡ್ಡ ದೊಡ್ಡ ಅಭಿವೃದ್ಧಿ ಹೊಂದಿದ ದೇಶಗಳಲ್ಲೇ ಈ ಜಾಗತಿಕ ಮಹಾಮಾರಿಯ ವ್ಯಾಪಕ ಪರಿಣಾಮವನ್ನು ನಾವು ನೋಡುತ್ತಿದ್ದೇವೆ. ಹೀಗಾಗಿ, ಭಾರತದ ಮೇಲೆ ಇದರಿಂದ ಏನೂ ಪ್ರಭಾವ ಬೀಳುವುದಿಲ್ಲ ಎಂದು ಭಾವಿಸುವುದು ಖಂಡಿತ ತಪ್ಪು. ಇದಕ್ಕಾಗಿಯೇ, ಈ ಜಾಗತಿಕ ಮಹಾಮಾರಿಯನ್ನು ಎದುರಿಸಲು ಎರಡು ಮುಖ್ಯ ಸಂಗತಿಗಳನ್ನು ಪಾಲಿಸುವುದು ಅತ್ಯವಶ್ಯಕ. ಯಾವ ಸಂಗತಿಗಳವು? ಮೊದಲನೆಯದ್ದು “ಸಂಕಲ್ಪ’, ಎರಡನೆಯದ್ದು “ಸಂಯಮ’.

ಇಂದು 130 ಕೋಟಿ ದೇಶವಾಸಿಗಳು ಸಂಕಲ್ಪ ತೊಡಬೇಕು. “ಈ ಮಹಾಮಾರಿಯನ್ನು ತಡೆಯಲು ಒಬ್ಬ ನಾಗರಿಕರಾಗಿ ನಾವು ನಮ್ಮ ಕರ್ತವ್ಯಗಳ ಪಾಲನೆ ಮಾಡುತ್ತೇವೆ. ಕೇಂದ್ರ-ರಾಜ್ಯ ಸರಕಾರಗಳು ನೀಡುವ ಸಲಹೆ ಮತ್ತು ನಿರ್ದೇಶನಗಳನ್ನು ಪೂರ್ತಿಯಾಗಿ ಪಾಲಿಸುತ್ತೇವೆ’ ಎಂದು ಇಂದು ನಾವೆಲ್ಲ ಸಂಕಲ್ಪ ತೊಡಬೇಕಿದೆ. ರೋಗಕ್ಕೆ ತುತ್ತಾಗದಂಥ ಸ್ವಯಂ-ರಕ್ಷಣೆಯ ಜತೆಗೆ, ಇನ್ನೊಬ್ಬರಿಗೂ ಈ ಸೋಂಕು ಹರಡದಂತೆ ರಕ್ಷಿಸುತ್ತೇವೆ ಎಂದೂ ಸಂಕಲ್ಪ ಮಾಡೋಣ. ಗೆಳೆಯರೇ, ಈ ರೀತಿಯ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಒಂದೇ ಮಂತ್ರ ಕೆಲಸ ಮಾಡುತ್ತದೆ: “ನಾವು ಸ್ವಸ್ಥರಾಗಿದ್ದರೆ, ಜಗತ್ತೂ ಸ್ವಸ್ಥ’.

ಸದ್ಯಕ್ಕೆ ಈ ರೋಗಕ್ಕೆ ಯಾವುದೇ ಔಷಧವಿಲ್ಲವಾದ್ದರಿಂದ ನಾವು ಖುದ್ದು ಆರೋಗ್ಯವಂತರಾಗಿರುವುದು ಮೊಟ್ಟ ಮೊದಲ ಆವಶ್ಯಕತೆ. ಈ ರೋಗದಿಂದ ಬಚಾವಾಗಲು ಪಾಲಿಸಬೇಕಾದ ಎರಡನೇ ಸಂಗತಿ ಅಥವಾ 2ನೇ ಅನಿವಾರ್ಯ ಎಂದರೆ “ಸಂಯಮ’. ಗುಂಪುಗಳಿಂದ ದೂರವಿರುವ ಹಾಗೂ ಮನೆಯಿಂದ ಹೊರಗೆ ಅಡ್ಡಾಡದಿರುವಂಥ ಸಂಯಮವನ್ನು ನಾವು ಪಾಲಿಸಬೇಕು. ಇತ್ತೀಚೆಗೆ, ಯಾವುದನ್ನು “ಸೋಶಿಯಲ್‌ ಡಿಸ್ಟೆನ್ಸಿಂಗ್‌’ ಎಂದು ಹೇಳಲಾಗುತ್ತಿದೆಯೋ, ಕೊರೊನಾ ರೋಗದ ಸಮಯದಲ್ಲಿ ಆ ಸೋಶಿಯಲ್‌ ಡಿಸ್ಟೆನ್ಸಿಂಗ್‌ (ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ) ಅತ್ಯಂತ ಆವಶ್ಯಕವಾಗಿದೆ. ಅದು ಪರಿಣಾಮಕಾರಿಯೂ ಹೌದು. ನಮ್ಮ ಸಂಕಲ್ಪ ಹಾಗೂ ಸಂಯಮ ಈ ಜಾಗತಿಕ ಮಹಾಮಾರಿಯ ಪ್ರಭಾವವನ್ನು ತಗ್ಗಿಸುವಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸಲಿದೆ. ನಿಮಗೆ ಏನೂ ಆಗುವುದಿಲ್ಲ, ನೀವು ಸರಿಯಾಗಿಯೇ ಇದ್ದೀರಿ ಎಂದು ಭಾವಿಸಿ ಮಾರುಕಟ್ಟೆಯಲ್ಲೋ, ರಸ್ತೆಯಲ್ಲೋ ಹಾಯಾಗಿ ಅಡ್ಡಾಡುತ್ತಾ ಕೊರೊನಾದಿಂದ ಬಚಾವಾಗಬಹುದು ಎಂದು ಭಾವಿಸಲೇಬೇಡಿ. ಈ ಯೋಚನೆ ತಪ್ಪು. ಹೀಗೆ ಮಾಡಿದರೆ ನೀವು ನಿಮಗಷ್ಟೇ ಅಲ್ಲದೇ, ನಿಮ್ಮ ಪ್ರೀತಿಪಾತ್ರರಿಗೆ ಹಾಗೂ ಪರಿವಾರದವರಿಗೂ ಅನ್ಯಾಯ ಮಾಡುತ್ತೀರಿ.

ಮನೆಯಲ್ಲೇ ಇರಿ
ಹೀಗಾಗಿ, ಮುಂಬರುವ ಕೆಲವು ವಾರಗಳವರೆಗೆ, ತೀರಾ ಅತ್ಯಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ. ನಿಮ್ಮ ಕೆಲಸವು ಬ್ಯುಸಿನೆಸ್‌ಗೆ ಸಂಬಂಧಿಸಿದ್ದೇ ಆಗಿರಲಿ ಅಥವಾ ಆಫೀಸಿಗೆ ಸಂಬಂಧಿಸಿದ್ದೇ ಆಗಿರಲಿ, ಸಾಧ್ಯವಾದಷ್ಟೂ ಮನೆಯಿಂದಲೇ ಕೆಲಸ ಮಾಡಿ. ಇನ್ನೊಂದೆಡೆ. ಸರ್ಕಾರಿ ಸೇವೆಗಳಲ್ಲಿ ಇರುವವರು, ಆಸ್ಪತ್ರೆಗಳಲ್ಲಿರುವವರು, ಜನಪ್ರತಿನಿಧಿಗಳು, ಮೀಡಿಯಾದವರ ಸಕ್ರಿಯತೆ ಅವಶ್ಯಕವೇ ಹೌದು. ಆದರೆ ಉಳಿದ ಸಾರ್ವಜನಿಕರು ಕಾರ್ಯಕ್ರಮಗಳಿಂದ, ಗುಂಪುಗಳಿಂದ ದೂರವೇ ಇರಿ. ಮತ್ತೂಂದು ಕೋರಿಕೆಯೆಂದರೆ, ನಿಮ್ಮ ಕುಟುಂಬದಲ್ಲಿ ಹಿರಿಯ ನಾಗರಿಕರಿದ್ದರೆ ಅಂದರೆ, 60-65 ವರ್ಷ ಮೇಲ್ಪಟ್ಟವರು ಇದ್ದರೆ, ಅವರು ಮನೆಯಿಂದ ಹೊರಗೆ ಹೋಗದಿರಲಿ.

ಬಹುಶಃ ಈಗಿನ ಪೀಳಿಗೆಗೆ, ಹಿಂದೆಲ್ಲ ಏನಾಗುತ್ತಿತ್ತು ಎಂಬುದು ತಿಳಿದಿರಲಿಕ್ಕಿಲ್ಲ. ನನ್ನದೇ ವಿಷಯ ಹೇಳುತ್ತೇನೆ ಕೇಳಿ. ನನ್ನ ಬಾಲ್ಯದ ಸಮಯವದು. ಆಗೆಲ್ಲ ಯುದ್ಧದ‌ ಸ್ಥಿತಿ ಏರ್ಪಟ್ಟಿತೆಂದರೆ, ಹಳ್ಳಿ ಹಳ್ಳಿಗಳನ್ನೂ ಬ್ಲ್ಯಾಕ್‌ಔಟ್‌ ಮಾಡಲಾಗುತ್ತಿತ್ತು! ಮನೆಯ ಗಾಜುಗಳ ಮೇಲೆ ಕಾಗದ ಹಚ್ಚಲಾಗುತ್ತಿತ್ತು, ಲೈಟುಗಳನ್ನು ಬಂದ್‌ ಮಾಡಲಾಗುತ್ತಿತ್ತು…!

ಯುದ್ಧ ಇಲ್ಲವೆಂದರೂ ಕೂಡ, ನಗರಪಾಲಿಕೆಗಳು, ಸ್ಥಳೀಯ ಆಡಳಿತಗಳು “ಜನರಿಗೆ ಅಭ್ಯಾಸವಾಗಲಿ, ಅವರು ಜಾಗರೂಕರಾಗಿರಲಿ’ ಎಂಬ ಕಾರಣಕ್ಕೆ ಬ್ಲ್ಯಾಕ್‌ಔಟ್‌ನ ಡ್ರಿಲ್‌ಗಳನ್ನೂ ಆಗಾಗ ಮಾಡಿಸುತ್ತಿದ್ದರು.  ಇದೇ ಕಾರಣಕ್ಕಾಗಿ, ಇಂದು ಪ್ರತಿಯೊಬ್ಬ ದೇಶವಾಸಿಗೂ ನಾನು ಮತ್ತೂಂದು ವಿಷಯಕ್ಕೆ ಬೆಂಬಲ ಕೋರುತ್ತೇನೆ. ಏನು ಈ ವಿಷಯ? ಅದೇ “ಜನತಾ ಕರ್ಫ್ಯೂ’. ಜನತಾ ಕರ್ಫ್ಯೂ ಅಂದರೆ, ಜನರಿಗಾಗಿ, ಜನರೇ ಸ್ವತಃ ಜಾರಿಗೊಳಿಸಿದ ಕರ್ಫ್ಯೂ. ಈ ರವಿವಾರ, ಅಂದರೆ ಮಾರ್ಚ್‌ 22ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದೇಶವಾಸಿಗಳೆಲ್ಲ “ಜನತಾ ಕರ್ಫ್ಯೂ’ ಪಾಲಿಸಬೇಕು. ಈ ಕರ್ಫ್ಯೂ ಸಮಯದಲ್ಲಿ ಯಾರೂ ಮನೆಯಿಂದ ಹೊರಗೆ ಬರಬಾರದು. ತೀರಾ ಆವಶ್ಯಕ ಸೇವೆ ಕ್ಷೇತ್ರದಲ್ಲಿರುವವರು ಹೋಗಲೇಬೇಕು ಬಿಡಿ, ಏಕೆಂದರೆ ಅವರಿಗೆ ಒಂದು ದಾಯಿತ್ವ (ಹೊಣೆಗಾರಿಕೆ ಇರುತ್ತದೆ). ಆದರೆ ಉಳಿದ ಸಾರ್ವಜನಿಕರು, ಮನೆಯಿಂದ ಹೊರಗೆ ಬರಬೇಡಿ. 22ನೇ ತಾರೀಕಿನಂದು ನಮ್ಮೆಲ್ಲರ ಈ ಪ್ರಯತ್ನವು ದೇಶದ ಹಿತದೃಷ್ಟಿಯಿಂದ “ಸಂಕಲ್ಪ ಪಾಲನೆಯ ವಿಷಯದಲ್ಲಿ’ ಬಲಿಷ್ಠ ಪ್ರತೀಕವಾಗಲಿದೆ. ಜನತಾ ಕರ್ಫ್ಯೂನ ಯಶಸ್ಸು, ಅದರ ಅನುಭವ, ಮುಂಬರುವ ಸವಾಲುಗಳಿಗೆ ನಮ್ಮನ್ನು ಸಜ್ಜುಗೊಳಿಸುತ್ತದೆ. ದೇಶದ ಪ್ರತಿಯೊಂದು ರಾಜ್ಯ ಸರಕಾರವೂ ಕೂಡ ಈ ಕರ್ಫ್ಯೂ ಪಾಲನೆ ಮಾಡಿಸುವಲ್ಲಿ ಮುಂದಾಗಲಿ, ನೇತೃತ್ವ ವಹಿಸಿಕೊಳ್ಳಲಿ ಎಂದು ಆಗ್ರಹಿಸುತ್ತೇನೆ.

ನಮ್ಮ ದೇಶದಲ್ಲಿ ಅನೇಕ ಸಂಘಟನೆಗಳಿವೆ. ಎನ್‌ಸಿಸಿ, ಎನ್‌ಎಸ್‌ಎಸ್‌, ಯುವ ಸಂಘಟನೆಗಳು, ನಾಗರಿಕ ಸಂಘಟನೆಗಳು, ಕ್ರೀಡಾ ಸಂಘಟನೆಗಳು, ಧಾರ್ಮಿಕ-ಸಾಮಾಜಿಕ ಸಂಘಟನೆಗಳೆಲ್ಲವಕ್ಕೂ ನನ್ನ ಅನುರೋಧನೆ ಇದು- “ನೀವೆಲ್ಲ ಈಗಿನಿಂದ ಆರಂಭಿಸಿ ರವಿವಾರದವರೆಗೆ ಈ ಜನತಾ ಕರ್ಫ್ಯೂನ ಸಂದೇಶವನ್ನು ಜನರಿಗೆ ತಲುಪಿಸಿ, ಜಾಗೃತಿ ಮೂಡಿಸಿ. ನೀವು ಇನ್ನೊಂದು ಕೆಲಸವನ್ನೂ ಮಾಡಬಹುದು. ಪ್ರತಿದಿನ 10 ಜನ ಹೊಸಬರಿಗೆ ಫೋನ್‌ ಮಾಡಿ ಕೋವಿಡ್-19 ವಿಷಯದಲ್ಲಿ ಅವರು ಪಾಲಿಸಬೇಕಾದ ಕ್ರಮಗಳ ಬಗ್ಗೆ ತಿಳಿವಳಿಕೆ ಮೂಡಿಸಿ. ಈ ಜನತಾ ಕರ್ಫ್ಯೂ ಒಂದು ರೀತಿಯಲ್ಲಿ ಭಾರತೀಯರಿಗೆ ಪರೀಕ್ಷೆಯೇ ಆಗಲಿದೆ. ಕೋವಿಡ್-19 ದಂಥ ಜಾಗತಿಕ ರೋಗದ ವಿರುದ್ಧದ ಹೋರಾಟಕ್ಕೆ ಭಾರತ ಎಷ್ಟು ತಯಾರಿದೆ ಎಂದು ನೋಡುವ, ಪರೀಕ್ಷಿಸುವ ಸಮಯವಿದು!

ಕಳೆದ 2 ತಿಂಗಳಿಂದ ಲಕ್ಷಾಂತರ ಜನರು ಆಸ್ಪತ್ರೆಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ, ಕಚೇರಿಗಳಲ್ಲಿ, ನಗರಗಳ ಬೀದಿಗಳಲ್ಲಿ ದಿನರಾತ್ರಿ ಲೆಕ್ಕಿಸದೇ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ವೈದ್ಯರಿರಲಿ, ನರ್ಸ್‌ಗಳಿರಲಿ, ಆಸ್ಪತ್ರೆಗಳ ಸಿಬಂದಿಗಳಿರಲಿ, ಸ್ವತ್ಛತಾ ಕಾರ್ಯ ಮಾಡುವ ನಮ್ಮ ಸಹೋದರ-ಸಹೋದರಿಯರೇ ಇರಲಿ, ವಿಮಾನ ನಿಲ್ದಾಣದ ಸಿಬಂದಿಯಾಗಿರಲಿ, ಸರಕಾರಿ ಕೆಲಸಗಾರರು, ಪೊಲೀಸರು, ಮಾಧ್ಯಮದವರು, ರೈಲ್ವೇ, ಬಸ್‌ ಆಟೋರಿಕ್ಷಾ ಚಾಲಕರೇ ಇರಲಿ, ಹೋಂ ಡೆಲಿವರಿ ಮಾಡುವ ಜನರೇ ಇರಲಿ…ಇವರೆಲ್ಲ ತಮ್ಮ ಬಗ್ಗೆ ಚಿಂತೆ ಮಾಡದೇ ಇನ್ನೊಬ್ಬರ ಸೇವೆಯಲ್ಲಿ ತೊಡಗಿದ್ದಾರೆ. ಈಗಿನ ಈ ಪರಿಸ್ಥಿತಿಯಲ್ಲಿ , ಅವರ ಈ ಸೇವೆಯನ್ನು “ಸಾಮಾನ್ಯ’ ಎಂದು ಕರೆಯಲು ಸಾಧ್ಯವೇ ಇಲ್ಲ. ಸೋಂಕಿಗೆ ತುತ್ತಾಗುವ ಅಪಾಯವನ್ನು ಎದುರಿಸುತ್ತ‌ಲೇ ಇವರು ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಜನರ ಸೇವೆ ಮಾಡಲು ಪ್ರಯಾಸಪಡುತ್ತಿದ್ದಾರೆ. ಇವರು ರಾಷ್ಟ್ರರಕ್ಷಕರಂತೆ ಕೊರೊನಾ ಮಹಾಮಾರಿ ಮತ್ತು ನಮ್ಮ ನಡುವೆ ಒಂದು ಶಕ್ತಿಯಾಗಿ ನಿಂತಿದ್ದಾರೆ! ದೇಶವು ಇಂದು ಇಂಥ ಎಲ್ಲ ವ್ಯಕ್ತಿಗಳು, ಸಂಘಟನೆಗಳಿಗೆ ಕೃತಜ್ಞವಾಗಿದೆ. ರವಿವಾರದಂದು, ನಾವೆಲ್ಲರೂ ಇಂಥ ಪರಿಶ್ರಮಿಗಳಿಗೆ ಧನ್ಯವಾದ ಅರ್ಪಿಸಬೇಕೆಂದು ನಾನು ಬಯಸುತ್ತೇನೆ. ಧನ್ಯವಾದ ಅರ್ಪಿಸುವುದೂ ಕೂಡ ದೇಶದ ಪ್ರತಿಯೊಬ್ಬ ವ್ಯಕ್ತಿಯನ್ನೂ ಬೆಸೆಯಬಲ್ಲದು. ರವಿವಾರದಂದು, ಸಂಜೆ ಸರಿಯಾಗಿ 5 ಗಂಟೆಗೆ ನಾವು ನಮ್ಮ ಮನೆಯ ಬಾಗಿಲಲ್ಲೋ ಅಥವಾ ಕಿಟಿಕಿಯ ಮುಂದೆಯೋ, ಬಾಲ್ಕನಿಯಲ್ಲೋ ನಿಂತು 5 ನಿಮಿಷಗಳ ವರೆಗೆ ಇಂಥ ಜನರಿಗೆ ಕೃತಜ್ಞತೆ ಸಲ್ಲಿಸೋಣ. ಹೇಗೆ ಸಲ್ಲಿಸಬಹುದು? ಚಪ್ಪಾಳೆ ತಟ್ಟಿಯೋ, ಗಂಟೆ ಬಾರಿಸಿಯೋ…ಒಟ್ಟಲ್ಲಿ ನಾವು ಅವರ ಶ್ರಮಕ್ಕೆ ಧನ್ಯವಾದ ಹೇಳ್ಳೋಣ, ಆ ಮೂಲಕ ಅವರನ್ನು ಹುರಿದುಂಬಿಸೋಣ, ಸೆಲ್ಯೂಟ್‌ ಮಾಡೋಣ.

ರಾಜ್ಯ ಸರಕಾರಗಳಿಗೂ ನಾನು ಕೇಳುವುದೇನೆಂದರೆ, ರವಿವಾರ ಸಂಜೆ 5 ಗಂಟೆಗೆ ಸೈರನ್‌ ಸದ್ದಿನ ಮೂಲಕ ಈ ಸೂಚನೆಯನ್ನು ಜನರಿಗೆ ತಲುಪಿಸಿ. “ಸೇವಾ ಪರಮೋ ಧರ್ಮ’ ಎಂಬ ನಮ್ಮ ಸಂಸ್ಕಾರವನ್ನು ನಂಬುವ ಇಂಥ ದೇಶವಾಸಿಗಳಿಗೆ ನಾವು ಪೂರ್ಣ ಶ್ರದ್ಧೆಯೊಂದಿಗೆ ಕೃತಜ್ಞತೆ ಸಲ್ಲಿಸಬೇಕಿದೆ.

ರೊಟೀನ್‌ ಚೆಕಪ್‌ ಬೇಡ
ಗೆಳೆಯರೇ, ಬಿಕ್ಕಟ್ಟಿನ ಈ ಸಮಯದಲ್ಲಿ ನೀವು ಇನ್ನೊಂದು ವಿಷಯವನ್ನೂ ನೆನಪಿಡಬೇಕು. ನಮ್ಮ ಆವಶ್ಯಕ ಸೇವೆಗಳ ಮೇಲೆ, ಆಸ್ಪತ್ರೆಗಳ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಡಿ. ನಮ್ಮ ವೈದ್ಯರಿಗೆ, ಪ್ಯಾರಾಮೆಡಿಕ್‌ ಸಿಬಂದಿಗೆ ತಮ್ಮ ಗಮನವನ್ನು ಈ ಮಹಾಮಾರಿಯ ವಿರುದ್ಧದ ಹೋರಾಟಕ್ಕೆ ಮೀಸಲಿಡಲು ಸಾಧ್ಯವಾಗಬೇಕು. ಅವರು ಆ ಹೋರಾಟಕ್ಕೆ ಆದ್ಯತೆ ನೀಡುವಂತಾಗಲಿ. ಈ ಕಾರಣಕ್ಕಾಗಿಯೇ ನಾನು ಕೇಳಿಕೊಳ್ಳುವುದೆಂದರೆ, ರೊಟೀನ್‌ ಚೆಕಪ್‌ಗಾಗಿ ಆಸ್ಪತ್ರೆಗೆ ಹೋಗುವ ಅಭ್ಯಾಸ ನಮಗಿದ್ದರೆ, ಸ್ವಲ್ಪ ದಿನ ಸುಮ್ಮನಿರೋಣ. ತೀರಾ ಅಗತ್ಯ ಎದುರಾದರೆ, ನಿಮ್ಮ ಪರಿಚಿತ ವೈದ್ಯರಿಗೋ, ಕುಟುಂಬ ವೈದ್ಯರಿಗೋ ಅಥವಾ ನಿಮ್ಮ ಬಂಧುಬಳಗದಲ್ಲೇ ಇರುವ ಯಾರಾದರೂ ವೈದ್ಯರಿಗೆ ಫೋನ್‌ನಲ್ಲೇ ಆವಶ್ಯಕ ಸಲಹೆ ಪಡೆಯಿರಿ. ಒಂದು ವೇಳೆ, ನೀವೇನಾದರೂ “ಎಲೆಕ್ಟಿವ್‌ ಸರ್ಜರಿ’ ಆರಿಸಿಕೊಂಡಿದ್ದರೆ(ಅತೀ ಅವಶ್ಯಕವಲ್ಲದ ಸರ್ಜರಿ)ಆ ದಿನಾಂಕವನ್ನೂ ಒಂದು ಅಥವಾ ಎರಡು ತಿಂಗಳಮಟ್ಟಿಗೆ ಮುಂದೂಡಿ.

ಗೆಳೆಯರೇ, ಜಾಗತಿಕ ಮಹಾಮಾರಿಯು ಅರ್ಥವ್ಯವಸ್ಥೆಯ ಮೇಲೂ ವ್ಯಾಪಕ ಪರಿಣಾಮ ಬೀರುತ್ತಿದೆ. ಕೋವಿಡ್-19 ದಿಂದಾಗಿ ಉದ್ಭವವಾಗುತ್ತಿರುವ ಆರ್ಥಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಸರಕಾರವು ವಿತ್ತ ಸಚಿವರ ನೇತೃತ್ವದಲ್ಲಿ “”ಕೋವಿಡ್‌-19 ಎಕನಾಮಿಕ್‌ ರೆಸ್ಪಾನ್ಸ್‌ ಟಾಸ್ಕ್ ಫೋರ್ಸ್‌” ರಚನೆಯ ನಿರ್ಧಾರ ಕೈಗೊಂಡಿದೆ. ಈ ಟಾಸ್ಕ್ಫೋರ್ಸ್‌, ಸಂಬಂಧಿಸಿದ ಎಲ್ಲ ಪಾಲುದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರಿಂದ ಫೀಡ್‌ಬ್ಯಾಕ್‌ ಪಡೆಯುತ್ತಾ, ಪರಿಸ್ಥಿತಿಯ ಮೌಲ್ಯಮಾಪನ ಮಾಡುತ್ತಾ, ನಿರ್ಧಾರಗಳನ್ನು ಕೈಗೊಳ್ಳಲಿದೆ. ಆರ್ಥಿಕ ಕಷ್ಟಗಳನ್ನು ಕಡಿಮೆ ಮಾಡಲು ಎಷ್ಟೇ ಹೆಜ್ಜೆ ಇಡಬೇಕಿದ್ದರೂ ಎಂಥದ್ದೇ ಕ್ರಮವಿದ್ದರೂ ಅದು ಪರಿಣಾಮಕಾರಿಯಾಗಿ ಅನುಷ್ಠಾನವಾಗುವುದನ್ನು ಈ ಟಾಸ್ಕ್ಫೋರ್ಸ್‌ ಮುಂದಿನ ದಿನಗಳಲ್ಲಿ ಖಾತರಿಪಡಿಸಲಿದೆ.

ಕೆಲಸಗಾರರ ಸಂಬಳ ಕಡಿತ ಮಾಡಬೇಡಿ
ಈ ಮಹಾಮಾರಿಯು ದೇಶದ ಮಧ್ಯಮ ವರ್ಗ, ನಿಮ್ನ ಮಧ್ಯಮ ವರ್ಗ ಮತ್ತು ಬಡವರ ಆರ್ಥಿಕ ಹಿತಕ್ಕೆ ಆಳವಾದ ಹಾನಿ ಮಾಡಿದೆ. ಸಂಕಷ್ಟದ ಈ ಸಮಯದಲ್ಲಿ ದೇಶದ ವ್ಯಾಪಾರ ಜಗತ್ತಿಗೆ, ಉನ್ನತ ವರ್ಗಗಳಿಗೂ ನನ್ನ ಆಗ್ರಹವೇನೆಂದರೆ, ಸಾಧ್ಯವಾದರೆ ನೀವು ಯಾರೆಲ್ಲರಿಂದ ಸೇವೆಗಳನ್ನು ಪಡೆಯುತ್ತೀರೋ, ಅವರ ಆರ್ಥಿಕ ಹಿತಗಳನ್ನು ಕಾಪಾಡಿ. ಮುಂದಿನ ಕೆಲವು ದಿನಗಳಲ್ಲಿ ಇವರಿಗೆ ಕಚೇರಿಗೆ ಬರಲು ಸಾಧ್ಯವಾಗದೆ ಇರಬಹುದು, ನಿಮ್ಮ ಮನೆ ಕೆಲಸಕ್ಕೆ ಬರಲು ಆಗದಿರಬಹುದು. ಹೀಗಾದಾಗ ಅವರ ಸಂಬಳವನ್ನು ಕಡಿತಗೊಳಿಸದಿರಿ. ಪೂರ್ಣ ಮಾನವೀಯತೆಯೊಂದಿಗೆ, ಸಂವೇದನಾಶೀಲತೆಯೊಂದಿಗೆ ವರ್ತಿಸಿ, ನಿರ್ಧಾರ ಕೈಗೊಳ್ಳಿ. ನೆನಪಿಡಿ. ಇವರಿಗೂ ತಮ್ಮ ಸಂಸಾರ ನಡೆಸಬೇಕಿರುತ್ತದೆ, ಕುಟುಂಬ ಸದಸ್ಯರನ್ನು ರೋಗದಿಂದ ಬಚಾವು ಮಾಡುವ ಒತ್ತಡವಿರುತ್ತದೆ.

ಅಗತ್ಯ ವಸ್ತುಗಳ ಪೇರಿಸಿಡಬೇಡಿ
ನಾನು ದೇಶವಾಸಿಗಳಿಗೆ ಆಶ್ವಾಸನೆ ನೀಡುತ್ತೇನೆ. ದೇಶದಲ್ಲಿ ಹಾಲು, ಆಹಾರ, ಔಷಧ, ಜೀವನಾವಶ್ಯಕ ವಸ್ತುಗಳ ಅಭಾವ ಉಂಟಾಗದಂತೆ ನಾವು ಕ್ರಮಗಳನ್ನು ಕೈಗೊಳ್ಳುತ್ತೇವೆ. ಅವುಗಳ ಪೂರೈಕೆಯನ್ನು ಎಂದಿಗೂ ನಿಲ್ಲಿಸುವುದಿಲ್ಲ. ಇದಕ್ಕಾಗಿ ಎಲ್ಲ ದೇಶವಾಸಿಗಳಿಗೂ ನನ್ನ ಆಗ್ರಹವೆಂದರೆ, ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಮುಂದಾಗಬೇಡಿ. ಮೊದಲು ಯಾವ ರೀತಿ ಖರೀದಿಸುತ್ತಿದ್ದಿರೋ ಈಗಲೂ ಹಾಗೆಯೇ ಖರೀದಿಸಿ. ಪ್ಯಾನಿಕ್‌ ಬಯಿಂಗ್‌ (ಗಾಬರಿಯಾಗಿ ಖರೀದಿ) ಖಂಡಿತ ಸರಿಯಲ್ಲ. ಹಾಗೆ ಮಾಡಲೇಬೇಡಿ.

ಗೆಳೆಯರೇ, ಕಳೆದ ತಿಂಗಳಿಂದ ದೇಶದ ಪ್ರತಿಯೊಬ್ಬ ನಾಗರಿಕನೂ ದೇಶಕ್ಕೆದುರಾಗಿರುವ ಈ ಸಂಕಷ್ಟವನ್ನು ತನ್ನ ಸಂಕಷ್ಟವೆಂದೇ ಭಾವಿಸಿದ್ದಾನೆ. ಭಾರತಕ್ಕಾಗಿ, ಸಮಾಜದ ಹಿತರಕ್ಷಣೆಗಾಗಿ ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಮುಂದಿನ ಸಮಯದಲ್ಲೂ ನಾವೆಲ್ಲರೂ ನಮ್ಮ ಕರ್ತವ್ಯಗಳನ್ನು, ಜವಾಬ್ದಾರಿಯನ್ನು ಇದೇ ರೀತಿಯೇ ನಿರ್ವಹಿಸಲಿದ್ದೇವೆ ಎಂಬ ಭರವಸೆ ನನಗಿದೆ.

ಹಾಂ, ಒಂದು ಮಾತನ್ನಂತೂ ನಾನು ಒಪ್ಪಿಕೊಳ್ಳುತ್ತೇನೆ. ಇಂಥ ಸಮಯದಲ್ಲಿ ಕೆಲವು ಕಷ್ಟಗಳು ಬರುತ್ತವೆ. ಅನುಮಾನ, ವದಂತಿಗಳ ವಾತಾವರಣವೂ ಸೃಷ್ಟಿಯಾಗುತ್ತದೆ. ನಮ್ಮ ಅಪೇಕ್ಷೆಗಳೂ ಪೂರ್ತಿಯಾಗುವುದಿಲ್ಲ. ಆದರೂ ಈ ಸಂಕಷ್ಟ ಎಷ್ಟು ದೊಡ್ಡದಿದೆಯೆಂದರೆ, ಒಂದು ದೇಶಕ್ಕೆ ಇನ್ನೊಂದು ದೇಶದ ಸಹಾಯ ಮಾಡಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ, ದೇಶವಾಸಿಗಳು ದೃಢ ಸಂಕಲ್ಪದೊಂದಿಗೆ ಈ ಕಷ್ಟಗಳನ್ನು ಎದುರಿಸುವ ಆವಶ್ಯಕತೆ ಇದೆ.

ಕೆಲವೇ ದಿನಗಳಲ್ಲಿ ನವರಾತ್ರಿಯ ಪರ್ವ ಬರಲಿದೆ. ನವರಾತ್ರಿಯು ಶಕ್ತಿ ಉಪಾಸನೆಯ ಪರ್ವ. ಭಾರತವು ತನ್ನ ಪೂರ್ಣ ಶಕ್ತಿಯೊಂದಿಗೆ, ಸಂಕಲ್ಪ-ಸಂಯಮದ ಪಾಲನೆ ಮಾಡುತ್ತಾ ಮುನ್ನಡೆಯಲಿ ಎಂದು ನಾನು ಆಶಿಸುತ್ತೇನೆ. ಬನ್ನಿ ನಾವೂ ಉಳಿಯೋಣ, ದೇಶವನ್ನೂ ಉಳಿಸೋಣ ಹಾಗೂ ಜಗತ್ತನ್ನೂ ರಕ್ಷಿಸೋಣ.
ಅನಂತಾನಂತ ವಂದನೆಗಳು…

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

23-mandya

Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.