ಕ್ಷಯ ಪರೀಕ್ಷೆ – ಪತ್ತೆಗೆ ಸಿಬಿ ನ್ಯಾಟ್ (ಜೀನ್ ಎಕ್ಸ್‌ಪರ್ಟ್)
Team Udayavani, Mar 22, 2020, 4:45 AM IST
ನಮ್ಮ ದೇಶದಲ್ಲಿ ಕ್ಷಯ ರೋಗ (Tuberculosis) ವನ್ನು ಪತ್ತೆ ಮಾಡುವುದು (Diagnosis) ಮತ್ತು ಸೂಕ್ತ ಚಿಕಿತ್ಸೆ ನೀಡುವುದು ಇನ್ನೂ ದೊಡ್ಡ ಸವಾಲಾಗಿಯೇ ಉಳಿದಿದೆ. ರೋಗಕಾರಕ ಕ್ರಿಮಿ ಮೈಕ್ರೊಬ್ಯಾಕ್ಟೀರಿಯಂ ಟ್ಯುಬರ್‌ಕ್ಯುಲೋಸಿಸ್ (Mycobacterium Tuberculosis) ಬಗ್ಗೆ ಶತಮಾನಗಳಿಂದಲೂ ಅರಿವಿದ್ದರೂ; 4-5 ದಶಕಗಳಿಂದ ಚಿಕಿತ್ಸೆಗೆ ಬೇಕಾದ ಔಷಧಗಳು ಬಳಕೆಯಲ್ಲಿದ್ದರೂ ರೋಗದ ನಿಖರವಾದ ಪತ್ತೆ ಮತ್ತು ಸರಿಯಾದ ಚಿಕಿತ್ಸೆ ಸಂಪೂರ್ಣವಾಗಿ ಸಿಗದೆ, ಪಡೆದುಕೊಳ್ಳದೆ ಪ್ರತೀ ವರ್ಷ ದೇಶದಲ್ಲಿ ಸುಮಾರು 4.5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ.
ಕ್ಷಯ ರೋಗದ ಪತ್ತೆಗೆ ಇತ್ತೀಚಿನ ವರೆಗೆ ನಮ್ಮ ದೇಶದಲ್ಲಿ ಸೂಕ್ಷ್ಮ ದರ್ಶಕ (Microscopy)ದ ಮೂಲಕ ಕಫ ಪರೀಕ್ಷೆ ಮತ್ತು ಎದೆಗೂಡಿನ ಕ್ಷ-ಕಿರಣವೇ ಮುಖ್ಯವಾದ ಸಾಧನಗಳಾಗಿದ್ದವು. ಸೂಕ್ಷ್ಮದರ್ಶಕದ ಮೂಲಕ ಮಾಡುವ ಕಫ ಪರೀಕ್ಷೆ ಫಲಿತಾಂಶ ಶೇ.50-60 ಮಾತ್ರ ನಿಖರವಾಗಿರುವುದರಿಂದ ಶೇ.40-50 ರೋಗಿಗಳ ರೋಗ ಪತ್ತೆಯಾಗದಿರುವ ಸಾಧ್ಯತೆಗಳಿವೆ. ಆದ್ದರಿಂದ ಕಫ ಪರೀಕ್ಷೆ ಕನಿಷ್ಟ ಎರಡು ಬಾರಿ ಮಾಡುವ ಅಗತ್ಯ ಇದೆ. ಕೇವಲ ಎದೆಗೂಡಿನ ಕ್ಷ-ಕಿರಣದಿಂದ ಮಾತ್ರ ಕ್ಷಯ ರೋಗವನ್ನು ಪತ್ತೆ ಮಾಡುವುದು ಕಷ್ಟಕರ. ರೋಗ ಪತ್ತೆಗೆ ಯಾವುದೇ ನಿಖರ ರಕ್ತ ಪರೀಕ್ಷೆಗಳಿಲ್ಲ. ಇದಕ್ಕೆ ವಿರುದ್ಧವಾಗಿ ಸರಕಾರ ಇತ್ತೀಚೆಗೆ ಕ್ಷಯ ರೋಗವನ್ನು ಕೇವಲ ರಕ್ತ ಪರೀಕ್ಷೆ (IgG/IgM ELISA) ಆಧಾರದಲ್ಲಿ ಮಾಡುವುದನ್ನು ನಿಷೇಧಿಸಿದೆ.
ಈ ಹಿನ್ನೆಲೆಯಲ್ಲಿ ಸರಕಾರ ದೇಶಾದ್ಯಂತ CBNAAT (Catridge Based Nucleic Acid Amplification Test) ಎಂಬ ಕ್ಷಯ ರೋಗವನ್ನು ಪತ್ತೆ ಮಾಡಬಲ್ಲ ಆಧುನಿಕ ಉಪಕರಣವನ್ನು ಪ್ರತೀ ಜಿಲ್ಲೆಗಳಲ್ಲಿ ನಿಯೋಜಿಸಿದೆ. ಇದೊಂದು ಮಾಲೆಕ್ಯುಲಾರ್ (Molecular) ವಿಧಾನದಿಂದ ರೋಗಾಣುಗಳನ್ನು ತೀಕ್ಷ್ಣವಾಗಿ ನಿಖರವಾಗಿ ಪತ್ತೆ ಮಾಡಬಲ್ಲ ಸಾಧನವಾಗಿದ್ದು, ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನಂತೆ ಬಳಕೆಯಲ್ಲಿದೆ. ಈ ಉಪಕರಣದಿಂದ ಮುಖ್ಯವಾಗಿ ರೋಗಿಯ ಕಫದಲ್ಲಿರುವ ಅಥವಾ ಕ್ಷಯ ರೋಗಕ್ಕೆ ತುತ್ತಾದ ದೇಹದ ಭಾಗಗಳಿಂದ ಅಂಗಾಂಶ ಮಾದರಿ- Lymph nodes, Fluid samples, CSF, Ascitic, Synovil fluid ಅಥವಾ Gastric Aspirateಗಳಿಂದ ರೋಗವಿರುವುದನ್ನು ಕೆಲವೇ ತಾಸುಗಳಲ್ಲಿ ಖಚಿತಪಡಿಸಿಕೊಳ್ಳಬಹುದು. ಸಾಮಾನ್ಯವಾಗಿ ಸೂಕ್ಷ್ಮ ದರ್ಶಕ ವಿಧಾನದ ಕಫ ಪರೀಕ್ಷೆಯಲ್ಲಿ ರೋಗಾಣುಗಳು ಕಂಡು ಬರಬೇಕಾದರೆ 1 ಮಿ.ಲೀ. ಕಫದಲ್ಲಿ ಸುಮಾರು 5,000-10,000 ರೋಗಾಣುಗಳಿರುವುದು ಅಗತ್ಯವಾದರೆ ಸಿಬಿ ನ್ಯಾಟ್ ಉಪಕರಣದಲ್ಲಿ 1 ಮಿ.ಲೀ. ಕಫದ ಮಾದರಿಯಲ್ಲಿ ಕೇವಲ 50-150 ರೋಗಾಣುಗಳಿದ್ದರೂ ರೋಗವಿರುವುದನ್ನು ಪತ್ತೆ ಹಚ್ಚಬಲ್ಲದು. ಈ ಉಪಕರಣದ ಮತ್ತೂಂದು ವಿಶೇಷತೆಯೆಂದರೆ ಕಫ ಅಥವಾ ಇತರ ಮಾದರಿಗಳಲ್ಲಿ ರೋಗಾಣುಗಳಿರುವುದನ್ನು ನಿಖರವಾಗಿ ಪತ್ತೆ ಮಾಡುವುದಲ್ಲದೆ ಕ್ಷಯ ರೋಗದ ಚಿಕಿತ್ಸೆಗೆ ಬೇಕಾದ ಮುಖ್ಯವಾದ ಔಷಧ ರಿಫಾಂಪಿಸಿನ್ (Rifampicin) ರೋಗಾಣುಗಳಿಗೆ ಪರಿಣಾಮಕಾರಿಯೇ (Sensitive) ಅಥವಾ ಈಗಾಗಲೇ ಅವುಗಳು ಒಗ್ಗಿಕೊಂಡಿವೆಯೇ (Resistance) ಎಂಬುದನ್ನು ಕೂಡ ತಿಳಿಯಲು ಸಾಧ್ಯವಾಗುತ್ತದೆ.
ಯಾವುದೇ ಸೂಕ್ಷ್ಮ ದರ್ಶಕ (Microscopy) ವಿಧಾನದಿಂದ ಪತ್ತೆಯಾದ ಕ್ಷಯ ರೋಗಿಗಳಲ್ಲಿ ಕೆಲವು ರೋಗಿಗಳು ಅದಾಗಲೇ ಔಷಧ ನಿರೋಧಕ ಕ್ಷಯ ರೋಗಿಗಳಾಗುವ ಸಾಧ್ಯತೆಯಿರುವುದರಿಂದ (Drug resistance Tuberculosis) ಅಂತಹ ಕ್ಷಯ ರೋಗಿಗಳಿಗೆ ಸಾಮಾನ್ಯವಾಗಿ ನೀಡುವ ಆರು ತಿಂಗಳಿನ CAT-I ಚಿಕಿತ್ಸೆ ಫಲಕಾರಿಯಾಗದೇ ಇರಬಹುದು. ಆದ್ದರಿಂದ ಇತ್ತೀಚಿನ ಸರಕಾರದ ಆದೇಶ Universal DST ಪ್ರಕಾರ ಯಾವುದೇ ವೈದ್ಯರು ಕ್ಷಯ ರೋಗಿಗೆ ಚಿಕಿತ್ಸೆ ನೀಡುವ ಮೊದಲು ಚಿಕಿತ್ಸೆಗೆ ಸಾಮಾನ್ಯವಾಗಿ ಬಳಸುವ HREZ ಔಷಧಗಳಲ್ಲಿ ಕನಿಷ್ಟ Rifampicin ಮತ್ತು INHಗಳಿಗೆ ರೋಗಿಯ ರೋಗಾಣುಗಳು ಪರಿಣಾಮಕಾರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ವೈದ್ಯರು ಯಾವುದೇ ಕ್ಷಯ ರೋಗಿಗೆ ಚಿಕಿತ್ಸೆ ನೀಡುವ ಮೊದಲು ಅದನ್ನು ಖಚಿತಪಡಿಸಿಕೊಳ್ಳಲು CBNAAT ಮತ್ತು LPA ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿ ರೋಗಿಯ ಕಫ ಅಥವಾ ಇತರ ಅಂಗಾಂಶಗಳ ಎರಡು ಮಾದರಿಗಳನ್ನು ಜಿಲ್ಲಾ ಕೇಂದ್ರಗಳಲ್ಲಿರುವ ಸಿಬಿ ನ್ಯಾಟ್ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಬೇಕು. ಮಾದರಿಗಳನ್ನು ಪರೀಕ್ಷೆಗಾಗಿ ಜಿಲ್ಲಾ ಕೇಂದ್ರಕ್ಕೆ ಕಳುಹಿಸುವ ವಿವರಗಳಿಗಾಗಿ ಸಮೀಪದ ಸರಕಾರಿ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳನ್ನು ಸಂಪರ್ಕಿಸಬಹುದು.
ಸಿಬಿ ನ್ಯಾಟ್ ಪರೀಕ್ಷೆಯು ಖಚಿತವಾಗಿ ಕ್ಷಯ ರೋಗ ಇದೆ ಅಥವಾ ಇಲ್ಲ ಎಂದು ವರದಿ ನೀಡುವುದಲ್ಲದೆ ರೋಗವಿದ್ದರೆ ಆ ರೋಗಾಣು ರಿಫಾಂಪಿಸಿನ್‌ಗೆ ಸಂವೇದನಶೀಲವಾಗಿದೆ ಎನ್ನುವ ವರದಿಯನ್ನು ಕೆಲವೇ ತಾಸುಗಳಲ್ಲಿ ನೀಡಬಲ್ಲದು. ಆ ಜಿಲ್ಲಾ ಕೇಂದ್ರದಿಂದ ರೋಗಿಯ ಇನ್ನೊಂದು ಮಾದರಿಯನ್ನು INH Sensitive ಪರೀಕ್ಷೆಗಾಗಿ ಎಲ್‌ಪಿಎ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ರೋಗಿಯಲ್ಲಿರುವ ರೋಗಾಣುಗಳು ಐಎನ್‌ಎಚ್‌ಗೆ ಸಂವೇದಶೀಲವಾಗಿವೆ ಅಥವಾ ಇಲ್ಲ ಎನ್ನುವುದನ್ನು ವರದಿ ಮಾಡುತ್ತದೆ. ಈ ಎರಡೂ ಪರೀಕ್ಷೆಗಳಲ್ಲಿ ರೋಗಿಯ ರೋಗಾಣುಗಳು ರಿಫಾಂಪಿಸಿನ್ ಮತ್ತು ಐಎನ್‌ಎಚ್‌ಗೆ ಪರಿಣಾಮಕಾರಿ ಎಂದು ಕಂಡುಬಂದಲ್ಲಿ ಮಾತ್ರ ಸಿಎಟಿ-1 ಚಿಕಿತ್ಸೆಯಾದ 2 ತಿಂಗಳು HREZ ಸಂಯೋಜಿತ ಔಷಧಗಳನ್ನು ಮತ್ತು ಅನಂತರ 4 ತಿಂಗಳು HRE ಸಂಯೋಜಿತ ಔಷಧಗಳನ್ನು ಆ ರೋಗಿಗೆ ನೀಡಬೇಕಾಗುತ್ತದೆ.
ಈ ಪರೀಕ್ಷೆಗಳಲ್ಲಿ ರಿಫಾಂಪಿಸಿನ್ ಮತ್ತು ಐಎನ್‌ಎಚ್‌ಔಷಧಗಳಿಗೆ ಪ್ರತಿರೋಧ ಕಂಡುಬಂದಲ್ಲಿ ಅದನ್ನು ಪ್ರತಿರೋಧಿತ ಕ್ಷಯ ರೋಗವೆಂದು ಪರಿಗಣಿಸಿ ಅದಕ್ಕೆ ಸೂಕ್ತ ಇತರೆ ಪರೀಕ್ಷೆಗಳನ್ನು (LPA II, Culture) ಮಾಡಿ ನಿಗದಿತ ಬೇರೆ ಚಿಕಿತ್ಸೆಯನ್ನು ನೀಡಬೇಕಾಗುವುದು. ಈ ಎಲ್ಲ ಪರೀಕ್ಷೆಗಳು, ಚಿಕಿತ್ಸೆಗೆ ಸಂಬಂಧಪಟ್ಟ ಔಷಧಗಳು ಯಾವುದೇ ರೋಗಿಗಳಿಗೆ ಉಚಿತವಾಗಿ ನೀಡಲಾಗುವುದು. ಅಲ್ಲದೇ ರೋಗಿಗೆ ಚಿಕಿತ್ಸೆ ಮುಗಿಯುವವರೆಗೆ ಮಾಸಿಕ ರೂ.500 ಭತ್ತೆ ನೀಡಲಾಗುವುದು. ಪ್ರತೀ ವೈದ್ಯರು ತಾವು ಪತ್ತೆ ಮಾಡಿದ ಕ್ಷಯ ರೋಗಿಯ ವಿವರಗಳನ್ನು ಕ್ಷಯ ರೋಗ ನಿರ್ಮೂಲನಾಧಿಕಾರಿಗಳಿಗೆ ಕಡ್ಡಾಯವಾಗಿ ವರದಿ ಮಾಡಬೇಕಾಗುತ್ತದೆ. ಯಾವುದೇ ವ್ಯಕ್ತಿಯಲ್ಲಿ ಕ್ಷಯ ರೋಗ ಪತ್ತೆಯಾದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಇತರ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿರುವುದರಿಂದ ಪತ್ತೆಯಾದ ಕ್ಷಯ ರೋಗಿಗಳ ವಿವರಗಳನ್ನು ಅಧಿಕಾರಿಗಳಿಗೆ ವರದಿ ಮಾಡದೇ ಇರುವುದು ಈಗ ಶಿಕ್ಷಾರ್ಹ ಕ್ರಮವೆಂದು ಪರಿಗಣಿಸಲಾಗಿದೆ. ಹಾಗೂ ಕ್ಷಯ ರೋಗವನ್ನು ವರದಿ ಮಾಡಿದ ಯಾವುದೇ ವೈದ್ಯರುಗಳಿಗೆ ಪ್ರೋತ್ಸಾಹ ಧನವನ್ನು ಸಹ ನೀಡಲಾಗುತ್ತದೆ.
ಎಚ್‌ಐವಿ ಸೋಂಕು ಹೊಂದಿರುವವರಿಗೆ, ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ, ಈಗಾಗಲೇ ಒಂದು ಸಲ ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆದವರು, ಕ್ಷ-ಕಿರಣದಲ್ಲಿ ಕ್ಷಯ ರೋಗದ ಲಕ್ಷಣಗಳು ಕಂಡುಬಂದಲ್ಲಿ, ಆರೋಗ್ಯ ಕಾರ್ಯಕರ್ತರಿಗೆ, ಮಧುಮೇಹ ರೋಗದಿಂದ ಬಳಲುತ್ತಿರುವವರು, ಸ್ಟಿರಾಯ್ಡ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರು, ಗರ್ಭಿಣಿ ಮಹಿಳೆಯರಲ್ಲಿ ಯಾವುದೇ ವೈದ್ಯರು ಕ್ಷಯ ರೋಗ ಇರುವುದನ್ನು ಶಂಕಿಸಿದರೆ ಅಂತವರಿಗೆ ನೇರವಾಗಿ CBNAAT & LPA ಪರೀಕ್ಷೆ ಮಾಡುವುದು ಕಡ್ಡಾಯವಾಗಿದೆ.
ಈಗ ಸದ್ಯದಲ್ಲಿಯೇ ದೇಶದಲ್ಲಿಯೇ ತಯಾರಾದ CBNAAT ಯಂತ್ರದ ಸಣ್ಣ ಮಾದರಿಯ True NAT ಯಂತ್ರಗಳು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸಹ ಕಾಣಿಸಿಕೊಳ್ಳಲಿವೆ. ಇದರಿಂದಾಗಿ ಪ್ರತೀ ವೈದ್ಯರು ಕ್ಷಯ ಪರೀಕ್ಷೆಗಾಗಿ ಮಾದರಿಗಳನ್ನು ಜಿಲ್ಲಾ ಕೇಂದ್ರಗಳಿಗೆ ಕಳುಹಿಸುವ ಅಗತ್ಯ ಕಡಿಮೆಯಾಗಿ ರೋಗ ಪತ್ತೆ ಕಾರ್ಯ ಇನ್ನಷ್ಟು ಸುಲಭವಾಗಬಹುದು.
ಡಾ| ಅಶ್ವಿನಿ ಕುಮಾರ್ ಗೋಪಾಡಿ,
ಅಡಿಶನಲ್ ಪ್ರೊಫೆಸರ್ , ಕಮ್ಯೂನಿಟಿ ಮೆಡಿಸಿನ್, ಕೆಎಂಸಿ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.