ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ
Team Udayavani, Mar 22, 2020, 5:10 AM IST
ಮಂಗಳೂರಿನ ನೀರಿನ ಸಮಸ್ಯೆ ನಿವಾರಣೆಗಾಗಿ ವೆಂಟೆಡ್ ಡ್ಯಾಂ ನಿರ್ಮಾಣ ಮಾಡಲಾಗಿತ್ತು. ಈ ಡ್ಯಾಂ ನಲ್ಲಿ ಸುಮಾರು 7 ಮೀ. ನೀರು ಸಂಗ್ರಹಿಸುವುದರಿಂದಾಗಿ ಬೇಸಗೆಯಲ್ಲಿ ಒದಗುವ ನೀರಿನ ಸಮಸ್ಯೆ ನಿವಾರಣೆಗೆ ಪರಿಹಾರ ಹುಡುಕುವ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ ಈ ಯೋಜನೆಯ ವಿಳಂಬದಿಂದಾಗಿ ಆದ ಬೆಳವಣಿಗೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.
ಮಂಗಳೂರು ನಗರಕ್ಕೆ ತುಂಬೆ ವೆಂಟೆಡ್ ಡ್ಯಾಂ ಏಕೈಕ ಕುಡಿಯುವ ನೀರಿನ ಮೂಲ. ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ನೂತನ ವೆಂಟೆಡ್ ನಿರ್ಮಾಣ ಮಾಡಲಾಗಿತ್ತು. 7 ಮೀ. ನೀರು ನಿಲ್ಲಿಸಿ ಮಂಗಳೂರಿಗೆ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ರೂಪಿಸುವುದು ಇದರ ಉದ್ದೇಶವಾಗಿತ್ತು. ಆದರೆ ಇದೀಗ ಸರಕಾರದ ವಿಳಂಬ ಧೋರಣೆಯಿಂದಾಗಿ ಈ ಉದ್ದೇಶ ನೇಪಥ್ಯಕ್ಕೆ ಸರಿಯುತ್ತಿದೆ.
ಮಂಗಳೂರಿಗೆ ಕಳೆದ ತಿಂಗಳು ಆಗಮಿಸಿದ್ದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ತುಂಬೆ ವೆಂಟೆಡ್ ಡ್ಯಾಂಗೆ ಭೇಟಿ ನೀಡಿ ಪರಿಶೀಲಿಸಿ 6 ಮೀಟರ್‌ನಷ್ಟೇ ನೀರು ನಿಲ್ಲಿಸುವಂತೆ ಹಾಗೂ ಬೇಸಗೆಯಲ್ಲಿ ನೀರಿನ ಸಮಸ್ಯೆ ಕಾಡಿದರೆ ಇದನ್ನು ರೇಷನಿಂಗ್ ಮೂಲಕ ನಿಭಾಯಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಈ ಮೂಲಕ 7 ಮೀಟರ್ ನಿಲ್ಲಿಸುವ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.
ನೀರಿನ ಮೂಲ ಇರುವಾಗ ರೇಷನಿಂಗ್ ಮೂಲಕ ನಗರದ ಜನತೆಯನ್ನು ಸಂಕಷ್ಟಕ್ಕೀಡು ಮಾಡುವುದು ಸಾಧುವಲ್ಲ . ಸರಕಾರ ಕೂಡಲೇ 7 ಮೀ. ನೀರು ನಿಲ್ಲಿಸುವ ಪ್ರಸ್ತಾವನೆಯನ್ನು ಪರಿಗಣಿಸಿ ಅದಕ್ಕೆ ಪೂರಕ ಪ್ರಕ್ರಿಯೆಗಳನ್ನು ಆದ್ಯತೆ ನೆಲೆಯಲ್ಲಿಗೊಳ್ಳುವುದು ಅಗತ್ಯ. 7 ಮೀಟರ್ ನೀರು ನಿಲುಗಡೆಯಿಂದ ಮುಳುಗಡೆಯಾಗುವ ಭೂಸ್ವಾಧೀನಕ್ಕೆ ಪರಿಹಾರ ನೀಡಲು 130 ಕೋ.ರೂ. ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು ಬಜೆಟ್‌ನಲ್ಲಿ ಅನುದಾನ ಮೀಸಲಿರಿಸುವ ಭರವಸೆಯೂ ಲಭಿಸಿತ್ತು. ಆದರೆ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಅನುದಾನ ಲಭಿಸಿಲ್ಲ. ಸರಕಾರ ಇದನ್ನು ಆದ್ಯತೆ ನೆಲೆಯಲ್ಲಿ ಪರಿಗಣಿಸಿ ಅವಶ್ಯ ಅನುದಾನವನ್ನು ಕೂಡ ಕೂಡಲೇ ಬಿಡುಗಡೆ ಒದಗಿಸಬೇಕು. 7 ಮೀಟರ್ ನೀರು ನಿಲುಗಡೆಯಿಂದ ಒಟ್ಟು 344 ಎಕ್ರೆ ಜಾಗ ಮುಳುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಭೂಮಿ ಕಳೆದುಕೊಳ್ಳುವವರಿಗೆ ಕೂಡಲೇ ಪರಿಹಾರ ಲಭಿಸುವ ನಿಟ್ಟಿನಲ್ಲೂ ಕ್ರಮವಹಿಸುವುದು ಅಗತ್ಯ.
7 ಮೀಟರ್ ನೀರಿನಿಂದ 3 ತಿಂಗಳು ಪೂರೈಕೆ ಸಾಧ್ಯ
7 ಮೀಟರ್ ಎತ್ತರಕ್ಕೆ ನೀರು ನಿಲ್ಲಿಸಿದರೆ 14.73 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗಿ 85 ದಿನಗಳವರೆಗೆ ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡಬಹುದಾಗಿದೆ. ಮುಂಗಾರು ಸಾಮಾನ್ಯವಾಗಿ ಮೇ ಅಂತ್ಯಕ್ಕೆ ಅಥವಾ ಜೂನ್ ಮೊದಲ ವಾರಕ್ಕೆ ಪ್ರಾರಂಭವಾಗುತ್ತದೆ. ಆದರೆ ಈ ನಡುವೆ ಚಂಡಮಾರುತ ಬಂದರೆ ಸುಮಾರು 15 ದಿನಗಳವರೆಗೆ ಮುಂಗಾರು ವಿಳಂಬವಾದ ನಿದರ್ಶನಗಳಿವೆ. ವಾಡಿಕೆಯಂತೆ ಮುಂಗಾರು ಪ್ರಾರಂಭವಾದರೂ ಸುಮಾರು 15 ದಿನಗಳ ಅವಧಿಗೆ ಮಂಗಳೂರಿಗೆ ಕುಡಿಯುವ ನೀರು ಸಮಸ್ಯೆ ಇರುತ್ತದೆ.
ಪ್ರಸ್ತುತ ತುಂಬೆ ವೆಂಟೆಡ್‌ಡ್ಯಾಂನಿಂದ ಮಂಗಳೂರು ಮಹಾನಗರದ ಜತೆಗೆ ಉಳ್ಳಾಲ, ಮೂಲ್ಕಿ ಪುರಸಭೆಗಳಿಗೂ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಇದಲ್ಲದೇ ನೇತ್ರಾವತಿ ನದಿಮೂಲವನ್ನು ಆಧಾರ ವಾಗಿಟ್ಟುಕೊಂಡು ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಕಾರ್ಯಾರಂಭ ಮಾಡಿವೆ. ಇದನೆಲ್ಲಾ ಗಮನದಲ್ಲಿಟ್ಟುಕೊಂಡು ತುಂಬೆಯಲ್ಲಿ 7 ಮೀಟರ್ ನಿಲ್ಲಿಸಲು ಕ್ರಮಗಳನ್ನು ಕೈಗೊಳ್ಳುವುದು ಮಂಗಳೂರು ನಗರ ಎದುರಿಸುತ್ತಿರುವ ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಪೂರಕವಾಗಬಹುದು.
ವಾಸ್ತವ ಚಿತ್ರಣ
ಮಂಗಳೂರಿಗೆ ದಿನಂಪ್ರತಿ 160 ಎಂಎಲ್‌ಡಿ ನೀರು ಸರಬರಾಜಾಗುತ್ತಿದೆ. ಈ ಪ್ರಮಾಣವನ್ನು ಲೆಕ್ಕಹಾಕಿ 4 ಮೀ. ಎತ್ತರಕ್ಕೆ ನಿಲ್ಲಿಸಿದರೆ 5.21 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹ ಮಾಡಬಹುದಾಗಿದ್ದು 23 ದಿನಗಳವರೆಗೆ ನಗರಕ್ಕೆ ನೀರು ಪೂರೈಕೆ ಮಾಡಬಹುದಾಗಿದೆ. 4.50 ಮೀ.ಎತ್ತರಕ್ಕೆ ಸಂಗ್ರಹಿಸಿದರೆ 6.40 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗುತ್ತದೆ. 30 ದಿನಗಳವರೆಗೆ ಪೂರೈಕೆ ಮಾಡಬಹುದಾಗಿದೆ. 5 ಮೀ. ಎತ್ತರಕ್ಕೆ ನೀರು ನಿಲ್ಲಿಸಿದರೆ 7.71 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗುತ್ತದೆ. ಇದು 40 ದಿನಗಳವರೆಗೆ ಸಾಕಾಗುತ್ತದೆ. 5.50 ಮೀ. ಎತ್ತರಕ್ಕೆ ಸಂಗ್ರಹ ಮಾಡಿದರೆ 9.17 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗುತ್ತದೆ. ಇದರಿಂದ 48 ದಿನಗಳವರೆಗೆ ನೀರು ಪೂರೈಕೆ ಮಾಡಬಹುದು. 6 ಮೀ. ಎತ್ತರಕ್ಕೆ ನಿಲ್ಲಿಸಿದರೆ 10.83 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ದಾಸ್ತಾನು ಆಗಿ 55 ದಿನಗಳವರೆಗೆ ಪೂರೈಕೆ ಮಾಡಬಹುದಾಗಿದೆ. ಅಂದರೆ ಈಗ ಸಂಗ್ರಹ ಮಾಡುವ ನೀರಿನಿಂದ ಬೇಸಗೆಯಲ್ಲಿ ಸುಮಾರು 2 ತಿಂಗಳವರೆಗೆ ಮಾತ್ರ ಮಂಗಳೂರಿಗೆ ಪೂರೈಸಲು ಸಾಧ್ಯವಿದೆ.
ಕಳೆದ ವರ್ಷ ಮಾರ್ಚ್ ತಿಂಗಳ ಮಧ್ಯಭಾಗದಿಂದಲೇ ತುಂಬೆ ವೆಂಟೆಡ್‌ಡ್ಯಾಂನ ನೀರು ಸಂಗ್ರಹದಲ್ಲಿ ಕುಸಿತ ಕಂಡುಬಂದಿತ್ತು. ಡ್ಯಾಂನಲ್ಲಿ ನೀರಿನ ಪ್ರಮಾಣದಲ್ಲಿ ದಿನಂಪ್ರತಿ ಇಳಿಕೆ ಆರಂಭಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಕೊರತೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಕಳೆದ ವರ್ಷ ಎಪ್ರಿಲ್ ಮಧ್ಯಭಾಗದಿಂದಲೇ ನೀರು ರೇಷನಿಂಗ್ ಜಾರಿ ಮಾಡಿ ವಾರದಲ್ಲಿ ಎರಡು ದಿನ ನೀರು ಸ್ಥಗಿತ ಮತ್ತು ನಾಲ್ಕು ದಿನ ನೀರು ಸರಬರಾಜು ಸೂತ್ರವನ್ನು ರೂಪಿಸಲಾಗಿತ್ತು.
ಮಂಗಳೂರು ನಗರಕ್ಕೆ ಕಳೆದ ಬೇಸಗೆಯಲ್ಲಿ ಕಾಡಿದ್ದ ತೀವ್ರ ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ ಈ ಬಾರಿ ವೆಂಟೆಡ್‌ಡ್ಯಾಂನಲ್ಲಿ 6.5 ಮೀ.ಎತ್ತರಕ್ಕೆ ನೀರು ನಿಲ್ಲಿಸಲು ನಿರ್ಧರಿಸಲಾಗಿತ್ತು. ಅರ್ಧ ಮೀಟರ್‌ನಷ್ಟು ಹೆಚ್ಚು ನೀರು ನಿಲ್ಲಿಸುವುದರಿಂದ ಮುಳುಗಡೆಯಾಗುವ ಜಮೀನಿನ ಬಗ್ಗೆ ಸರ್ವೆ ಕಾರ್ಯ ಕೂಡ ನಡೆದಿತ್ತು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರು 6 ಮೀಟರ್‌ನಷ್ಟೆ ನೀರು ನಿಲ್ಲಿಸುವಂತೆ ನೀಡಿರುವ ಸೂಚನೆಯಿಂದ ಇದನ್ನು ಸ್ಥಗಿತಗೊಳಿಸಲಾಗಿದೆ.
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.